
ಹವಾಮಾನ ವೈಪರೀತ್ಯದಿಂದಾಗಿ ಹಲವರು ಶೀತ, ನೆಗಡಿ, ಕೆಮ್ಮು, ಜ್ವರ ಎಂದು ಮಲಗಿದ್ದಾರೆ. ಇದರ ನಡುವೆಯೇ ಮತ್ತೆ ಕರೋನಾ ಅಬ್ಬರವೂ ಶುರುವಾಗಿದೆ. ಕರ್ನಾಟಕದಲ್ಲಿ 500 ಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಮಾಸ್ಕ್ ಧರಿಸಿ ಓಡಾಡಿದರೆ ಉತ್ತಮ ಎಂದು ಸರ್ಕಾರ ಕೂಡ ಇದಾಗಲೇ ಎಚ್ಚರಿಕೆ ಕೊಟ್ಟಿದೆ. ಇದರ ನಡುವೆಯೇ ನಟ, ಸಂಸದ ಜಗ್ಗೇಶ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇದರ ಹೊರತಾಗಿಯೂ ಸಾರ್ವಜನಿಕರಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಕಳೆದ ಏಳು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಜಗ್ಗೇಶ್ ಅವರು, ವಿಡಿಯೋ ಮೂಲಕ ಜನರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪ್ರೀತಿ ನಿಮ್ಮ ಮೇಲೆ ಹೆಚ್ಚಿದೆ. ಆದ್ದರಿಂದ ಒಂದು ಮಾತನ್ನು ಧೈರ್ಯವಾಗಿ ಹೇಳುತ್ತೇನೆ ಎಂದು ವಿಡಿಯೋ ಆರಂಭಿಸಿದ ಜಗ್ಗೇಶ್ ಅವರು, ‘ನನ್ನನ್ನು ಗೀತಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅಲ್ಲಿ ಸಾಕಷ್ಟು ಜನ ಭಾಗಿಯಾಗಿದ್ದರು. ತುಂಬಾ ಜನ ಪ್ರೀತಿಯಿಂದ ಫೋಟೊ ತೆಗೆಸಿಕೊಳ್ಳಲು ಬಂದರು. ಬೇಡ ಅಂದರೆ ಬೇಜಾರು ಮಾಡಿಕೊಳ್ಳುತ್ತಾರೆ, ಮಾಸ್ಕ್ ಹಾಕಿಕೊಂಡು ಫೋಟೊಕ್ಕೆ ಫೋಸು ನೀಡಿದರೆ ದುರಹಂಕಾರ ಅಂದುಕೊಳ್ಳುತ್ತಾರೆ ಎಂದು ಮಾಸ್ಕ್ ತೆಗೆದು ಮಾಮೂಲಿಯಾಗಿ ಫೋಟೊ ತೆಗೆಸಿಕೊಂಡೆ. ಯಾರೋ ಪುಣ್ಯಾತ್ಮರು ನನಗೆ ಅನಾರೋಗ್ಯ ಗಿಫ್ಟ್ ಕೊಟ್ಟಿದ್ದಾರೆ. ಇದಾಗಲೇ ಅನಾರೋಗ್ಯ ಉಂಟಾಗಿ ಏಳು ದಿನವಾಯ್ತು. ಹಾಸಿಗೆಯ ಮೇಲೆ ಇದ್ದೇನೆ. ಏಳಲು ಸಾಧ್ಯವಾಗುತ್ತಿಲ್ಲ' ಎನ್ನುತ್ತಲೇ ಆರೋಗ್ಯದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಜೊತೆಗೆ ಈ ರೀತಿ ಜ್ವರ, ಕೆಮ್ಮು ಬಂದಾಗ ಬೇರೆಯವರಿಗೂ ಇದನ್ನು ಅಂಟಿಸಲು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೊನೆಯ ಬಾರಿಗೆ ನಾನು ವಿದಾಯ ಹೇಳುತ್ತಿದ್ದೇನೆ ಎನ್ನುತ್ತಲೇ ಕಣ್ಣೀರಿಟ್ಟ ಅಮಿತಾಭ್ ಬಚ್ಚನ್: ಫ್ಯಾನ್ಸ್ ಗಲಿಬಿಲಿ
ದಯವಿಟ್ಟು ಎಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಯಾರೇ ಆಗಲಿ ಆರೋಗ್ಯ ಸರಿಯಿಲ್ಲದೇ ಇದ್ದರೆ ದಯವಿಟ್ಟು ಮನೆಯಲ್ಲಿ ಇರಿ, ದಯವಿಟ್ಟು ಜವಾಬ್ದಾರಿಯುತವಾಗಿ ವರ್ತಿಸಿ ಎಂದಿದ್ದಾರೆ ಜಗ್ಗೇಶ್. ‘ಜ್ವರ, ಕೆಮ್ಮು, ನಗೆಡಿ ಇಂಥಹುಗಳೇನಾದರೂ ಇದ್ದರೆ ದಯವಿಟ್ಟು ಮನೆಯಲ್ಲಿ ಇದ್ದು ಚಿಕಿತ್ಸೆ ಪಡೆದುಕೊಳ್ಳಿ, ಅನಾರೋಗ್ಯ ಇದ್ದರೂ ಸಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇತರರಿಗೂ ಅನಾರೋಗ್ಯವನ್ನು ಹರಡಬೇಡಿ. ಮಾಸ್ಕ್ ಹಾಕಿಕೊಳ್ಳಿ, ನಿಮ್ಮ ಆರೋಗ್ಯದ ಜೊತೆಗೆ ಬೇರೆಯವರ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿ’ ಎಂದು ತಿಳಿಸಿದ್ದಾರೆ.
ಅಂದಹಾಗೆ ಜಗ್ಗೇಶ್ ಅವರು ಸೋಷಿಯಲ್ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು ಆಗ್ಗಾಗ್ಗೆ ಕೆಲವೊಂದು ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ತಾವು ಅನಾರೋಗ್ಯಪೀಡಿತರಾಗಿದ್ದರೂ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಬೇಗ ಹುಷಾರಾಗಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ತುಂಬಾ ಸುಸ್ತಾಗಿರುವ ರೀತಿ ಕಾಣುತ್ತಿದ್ದೀರಿ, ರೆಸ್ಟ್ ಮಾಡಿ ಎಂದು ಕಾಳಜಿ ತೋರುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.