
ಬೆಂಗಳೂರು (ಆ.16): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜಾಮೀನು ರದ್ದುಗೊಂಡು ಪುನಃ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಹಾಗೂ ಆತನ ಸ್ನೇಹಿತೆ ಪವಿತ್ರಾ ಗೌಡ ಅವರು ಜೈಲಿನೊಳಗೆ ಹೋಗುವ ಮುನ್ನ ಮಾಡಿದ ತಪಾಸಣೆ ಫೋಟೋ ರಿವೀಲ್ ಆಗಿದೆ. ಅದರಲ್ಲಿ ನಟ ದರ್ಶನ್‌ಗೆ ಬೋಳು ತಲೆ, ಸುಕ್ಕುಗಟ್ಟಿದ ಮುಖ ಹಾಗೂ ನೆರೆತು ಬಿಳಿಯಾಗಿರುವ ಗಡ್ಡ ಕಂಡುಬಂದಿದೆ. ಮತ್ತೊಂದೆಡೆ ಆತನ ಸ್ನೇಹಿತೆ ಪವಿತ್ರಾ ಗೌಡ ಮಾತ್ರ ಜೈಲಿನೊಳಗೆ ಹೋಗುತ್ತಿದ್ದರೂ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬಂತೆ ನಗುಮುಖದಲ್ಲಿರುವುದು ಕಂಡುಬಂದಿದೆ.
ನಟ ದರ್ಶನ್ ತೂಗುದೀಪ ಈ ಹಿಂದೆ ಜೈಲಿನಲ್ಲಿದ್ದಾಗಲೂ ವಿಗ್ ಧರಿಸಿಕೊಂಡಿದ್ದರು. ಆಗ ಪ್ರತಿಬಾರಿ ಅವರನ್ನು ಭೇಟಿಯಾಗಲು ಮನೆಯವರು ಜೈಲಿಗೆ ಹೋದಾಗ ವಿಗ್ ಹಾಕಿಕೊಂಡೇ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇದೀಗ ಜೈಲಿನೊಳಗೆ ಹೋಗುವ ಮುನ್ನ ನಟ ದರ್ಶನ್ ಅವರು ನಿಜ ಸ್ವರೂಪದಲ್ಲಿ ಹೇಗಿದ್ದಾರೆಯೋ ಅದೇ ರೀತಿಯಲ್ಲಿ ಫೋಟೋ ತೆಗೆದುಕೊಳ್ಳಲಾಗಿದೆ. ಆಗ ತಲೆ ಮೇಲೆ ಹಾಕಿದ್ದ ವಿಗ್ ಅನ್ನು ತೆಗೆಸಿ ನೈಸರ್ಗಿಕವಾಗಿ ಹೇಗೆ ಕಾಣಿಸುತ್ತಾರೆಯೋ ಅದೇ ರೀತಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಇದೇ ದರ್ಶನ್ ನಿಜ ಸ್ವರೂಪ ಎಂದು ಹೇಳಲಾಗುತ್ತಿದೆ.
ಇನ್ನು ನಟಿ ಪವಿತ್ರಾ ಗೌಡ ಅವರು, ಎಂತಹ ಕಷ್ಟದ ಕ್ಷಣಗಳು ಬಂದರೂ ಎದುರಿಸಲು ಸಿದ್ಧರೆಂಬಂತೆ ಹಸನ್ಮುಖರಾಗಿಯೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಜೈಲಿನ ಒಳಗೆ ಹೋಗುವಾಗಲೂ ಅವರು ಸೌಂದರ್ಯ ಕಾಳಜಿಯನ್ನು ಮರೆತಂತಿಲ್ಲ. ಈ ಹಿಂದೆ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಅವರನ್ನು ಪೊಲೀಸರು ತನಿಖೆಯ ಭಾಗವಾಗಿ ಮನೆ ಪರಿಶೀಲನೆಗೆ ಹೋಗಿದ್ದಾಗ ಮನೆಯಲ್ಲಿ ಮೇಕಪ್ ಮಾಡಿಕೊಂಡು ಹೊರಗೆ ಬಂದಿದ್ದರು. ಈ ವಿಚಾರವಾಗಿಯೂ ಅವರು ಟೀಕೆಗೆ ಗುರಿಯಾಗಿದ್ದರು. ಕೋರ್ಟ್ ಕೂಡ ಚೀಮಾರಿ ಹಾಕಿತ್ತು. ಒಟ್ಟಾರೆ ಎಲ್ಲಿಯೇ ಆಗಲಿ ತಮ್ಮ ಸೌಂದರ್ಯ ಪ್ರಜ್ಞೆಯನ್ನು ಎಂದಿಗೂ ಮರೆ ಮಾಚುವುದಿಲ್ಲ ಎಂಬುದು ಕಂಡುಬರುತ್ತಿದೆ.
ಜಾಮೀನು ರದ್ದತಿ ತೀರ್ಪು ಬರುವ ದಿನ ನರ್ವಸ್ ಆಗಿದ್ದ ಪವಿತ್ರಾ:
ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದತಿಯ ಕುರಿತಾದ ಸರ್ಕಾರದ ಅರ್ಜಿ ವಿಚಾರಣೆ ವೇಳೆ ಭಾರೀ ನರ್ವಸ್ ಆಗಿದ್ದರು. ಆದರೆ, ಭಾರೀ ಕುತೂಹಲ ಮೂಡಿಸಿದ್ದ ಪ್ರಕರಣ ಆಗಿದ್ದರಿಂದ ಬಹುತೇಕ ಟಿವಿ ಚಾನೆಲ್‌ಗಳ ಕ್ಯಾಮೆರಾಗಳು ಪವಿತ್ರಾ ಗೌಡ ಅವರ ಮನೆಯ ಮುಂದಿದ್ದವು. ಕ್ಯಾಮೆರಾ ನೋಡುತ್ತಿದ್ದಂತೆ ಸ್ವಲ್ಪ ಸಿಡಿಮಿಡಿಗೊಂಡಿದ್ದ ಪವಿತ್ರಾ ಗೌಡ, ತೀರ್ಪು ಬರುವ ಮುನ್ನವೇ ನಮ್ಮನೆ ಮುಂದೆ ಯಾಕೆ ನಿಂತಿದ್ದೀರಿ, ಆ ಕಡೆ ಹೋಗಿ ಎಂಬಂತೆ ಸನ್ನೆಯನ್ನೂ ಮಾಡಿದ್ದರು. ಆದರೆ, ಸುಪ್ರೀಂ ಕೋರ್ಟ್ ಯಾವಾಗ ಜಾಮೀನು ರದ್ದು ಮಾಡಿತೋ ಆಗ ಕ್ಷಣ ಮಾತ್ರದಲ್ಲಿ ಪೊಲೀಸರು ಬಂದು ಪವಿತ್ರಾ ಗೌಡ ಅವರನ್ನು ಬಂಧಿಸಿ ಕರೆದೊಯ್ದರು.
ಜಾಮೀನು ರದ್ದಾಗೋದು ದರ್ಶನ್‌ಗೆ ಗೊತ್ತಿತ್ತಾ?
ಹೈಕೋರ್ಟ್ ಆದೇಶವನ್ನು ವಜಾಗೊಳಿಸಿ, ರೇಣುಕಾಸ್ವಾಮಿ ಕೊಲೆ ಕೇಸಿನ 7 ಆರೋಪಿಗಳ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್ ತೀರ್ಪು ಬರುವ ಬಗ್ಗೆ ನಟ ದರ್ಶನ್‌ಗೆ ಮೊದಲೇ ಗೊತ್ತಿತ್ತು ಎಂಬಂತೆ ಕಾಣಿಸುತ್ತಿದೆ. ಕಾರಣ, ನಟ ದರ್ಶನ್ ಜಾಮೀನು ರದ್ದಾಗಿ ಜೈಲಿಗೆ ಹೋದ ಮೊದಲ ದಿನವೇ ಜೈಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಜೈಲೊಳಗೆ ಬಂದೆ ಎಂಬ ಬೇಸರವನ್ನು ಮರೆತು ಸಹಜ ಸ್ಥಿತಿಗೆ ಮರಳಿದ್ದಾರೆ. ಜೈಲಿನ ಸಿಬ್ಬಂದಿ ಹಾಗೂ ಇತರ ಸಹಚರರೊಂದಿಗೆ ಸಾಮಾನ್ಯವಾಗಿಯೇ ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿದ ನಟ ದರ್ಶನ್, ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದಾಗಲೇ, ಜಾಮೀನು ರದ್ದು ಮಾಡಬಹುದೆಂದು ಅರಿತಿದ್ದೆ. ಹಾಗಾಗಿ ಮಾನಸಿಕವಾಗಿ ಸಿದ್ಧನಾಗಿದ್ದೆ ಎಂದು ತಮ್ಮ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.