
ಬೆಂಗಳೂರು (ಜೂ.14): ನಟ ದರ್ಶನ್ ಗ್ಯಾಂಗ್‌ನಿಂದ ಹಲ್ಲೆಗೆ ಒಳಗಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ಕುರಿತು ವೈದ್ಯರು ಮೌಖಿಕ ವರದಿ ಸಲ್ಲಿಸಿದ್ದು, ಇದರಲ್ಲಿ ಆತನ ಸಾವಿಗೆ ತಲೆಗೆ ಬಿದ್ದು ಕಾರಣವಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಆತನ ಮರ್ಮಾಂಗ, ಎದೆ, ಕೈ-ಕಾಲು, ಕುತ್ತಿಗೆ ಹಾಗೂ ತಲೆಗೆ ಪೆಟ್ಟಾಗಿದೆ. ಮರ್ಮಾಂಗಕ್ಕೆ ಪ್ರಾಣಾಂತಿಕ ಪೆಟ್ಟು ಬಿದ್ದರೆ ನೋವಿನಿಂದ ಹೃದಯಾಘಾತವಾಗಿ ಸಾವನ್ನಪುತ್ತಾರೆ. ಆದರೆ ರೇಣುಕಾಸ್ವಾಮಿ ತಲೆಗೆ ಬಿದ್ದ ಪೆಟ್ಟು ಸಾವಿಗೆ ಕಾರಣವಾಗಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಗ್ಯಾಂಗ್ ಹಲ್ಲೆ ನಡೆಸಿದ್ದರು. ಆ ವೇಳೆ ಆತನ ತಲೆಗೆ ಬಲವಾಗಿ ಹೊಡೆದ ಕಾರಣ ಪೆಟ್ಟು ಬಿದ್ದಿದೆ. ಆದರೆ ತಲೆಗೆ ಗಾಯವಾದರೂ ರಕ್ತಸ್ರಾವವಾಗಿಲ್ಲ.
ದರ್ಶನ್ ಪ್ರಕರಣ: ರೇಣುಕಾಸ್ವಾಮಿ ಕೊಂದವರಿಗೆ ಶಿಕ್ಷೆ ಅಲ್ಲ, ದೊಡ್ಡ ಶಿಕ್ಷೆ ಆಗಬೇಕು, ಇಂದ್ರಜಿತ್ ಲಂಕೇಶ್
ಹೀಗಾಗಿ ತಲೆಯೊಳಗೆ ರಕ್ತ ಹೆಪ್ಪುಗಟ್ಟಿ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ಅಲ್ಲದೆ ಹಲ್ಲೆ ವೇಳೆ ಆರೋಪಿಗಳು ಬಲವಾಗಿ ತಳ್ಳಿದಾಗ ಹಿಂಭಾಗಕ್ಕೆ ಬಿದ್ದು ಆತ ಮೃತಟ್ಟಿರುವ ಸಾಧ್ಯತೆಗಳಿವೆ. ಇನ್ನು ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಸಲ್ಲಿಕೆಯಾದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಎಫ್‌ಎಸ್‌ಎಲ್ ತಜ್ಞರು ಪರಿಶೀಲಿಸಿದ ಸಾವಿಗೆ ನಿಖರ ಕಾರಣ ಸ್ಪಷ್ಟಪಡಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದರ್ಶನ್ ಇರುವ ಠಾಣೆ ಪೆಂಡಾಲ್ ಹಾಕಿ ಮರೆ: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಬಂಧಿತರಾಗಿರುವ ಚಿತ್ರ ನಟ ದರ್ಶನ್ ಸೇರಿದಂತೆ ಆರೋಪಿಗಳ ವಿಚಾರಣೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಡೆಯುತ್ತಿದೆ. ಆದರೆ ಠಾಣೆಯ ಸುತ್ತ ಶಾಮಿಯಾನ ಹಾಕಿ ಇಡೀ ಠಾಣೆಯ ಒಳಗೆ ಏನು ನಡೆಯುತ್ತಿದೆ ಎಂದು ಗೊತ್ತಾಗದಂತೆ ಮರೆಮಾಚಲಾಗಿದೆ. ಪೊಲೀಸರ ಈ ನಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 13 ಮಂದಿಯನ್ನು ಅನ್ನಪೂರ್ಣೇಶ್ವರಿ ನಗರದ ಠಾಣೆಯಲ್ಲಿಟ್ಟು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೀಗಾಗಿ ವಿಚಾರಣೆಗೆ ಅಡ್ಡಿಯಾಗಬಾರದು ಎಂಬ ‘ಸಬೂಬು’ ನೀಡಿ ಠಾಣೆ ಹೊರಗಡೆ ಶಾಮಿಯಾನ ಹಾಕಲಾಗಿದೆ ಹಾಗೂ ಠಾಣಾ ಕಟ್ಟಡ ಕಾಣದಂತೆ ಪೊಲೀಸರು ಮರೆಮಾಚಿದ್ದಾರೆ.
ಬಂಧನದ ದಿನ ಬರೀ ಜ್ಯೂಸ್ ಕುಡಿದ ದರ್ಶನ್: ಮಾನಸಿಕ ಒತ್ತಡದಲ್ಲಿದ್ದ ನಟ
ಸೂಕ್ಷ್ಮ ಪ್ರಕರಣ- ಡಿಸಿಪಿ ಸ್ಪಷ್ಟನೆ: ‘ಶಾಮಿಯಾನಾ ಮರೆಮಾಚಿರುವ ಹಿಂದೆ ಅನ್ಯ ಉದ್ದೇಶವಿದೆ. ಆರೋಪಿಗಳಿಗೆ ಠಾಣೆ ಒಳಗೆ ರಾಜಾತಿಥ್ಯ ನೀಡಲಾಗುತ್ತಿದೆ’ ಎಂದು ಕೆಲವರು ಆರೋಪಿಸಿದ್ದಾರೆ. ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಸ್ಪಷ್ಟನೆ ನೀಡಿ, ‘ರೇಣುಕಾಸ್ವಾಮಿ ಕೊಲೆ ಕೃತ್ಯವು ಎಲ್ಲ ಸಾಮಾನ್ಯ ಪ್ರಕರಣದಂತಲ್ಲ. ಈ ಪ್ರಕರಣದ ತನಿಖೆಗೆ ಸಾಕಷ್ಟು ಶ್ರಮ ವಹಿಸಲಾಗಿದೆ. ಹಲವು ಆಯಾಮಗಳಿಂದ ತನಿಖೆ ನಡೆದಿದ್ದು, ಪ್ರಕರಣದ ಪಾವಿತ್ರ್ಯತೆ ಕಾಪಾಡಬೇಕಿದೆ. ಹೀಗಾಗಿ ಕೆಲವು ಕ್ರಮ ವಹಿಸಲಾಗಿದೆ ಹೊರತೂ ಬೇರೆ ಉದ್ದೇಶವಿಲ್ಲ. ತನಿಖೆ ವಿಚಾರವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಮನವಿ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.