
ಜುಲೈ 30 ಶುಕ್ರವಾರ 11 ಚಿತ್ರಗಳು ಪ್ರದರ್ಶನ ಕಂಡವು. ಸುಮಾರು 50 ಮಲ್ಟಿಪ್ಲೆಕ್ಸ್ ತೆರೆಗಳು ಹಾಗೂ 30 ಏಕಪರದೆಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭಗೊಂಡಿತು. ಬೆಳಗಿನ ಪ್ರದರ್ಶನದಿಂದ ಆರಂಭವಾದ ಚಿತ್ರಪ್ರದರ್ಶನದ ಪುನಾರಂಭವನ್ನು ಚಿತ್ರೋದ್ಯಮ ಸಂಭ್ರಮಿಸಿತು.
ಮಲ್ಟಿಪ್ಲೆಕ್ಸ್‌ನಲ್ಲಿ ದಿನವಹಿ ಮೂರು ಪ್ರದರ್ಶನಗಳು ನಡೆದವು. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಎರಡರಿಂದ ಮೂರು ಪ್ರದರ್ಶನಗಳು ಮಾತ್ರವೇ ಇದ್ದವು. ಪ್ರದರ್ಶನಗೊಂಡ ಚಿತ್ರಗಳಲ್ಲಿ ಹೊಸ ಸಿನಿಮಾ ಯಾವುದೂ ಇರಲಿಲ್ಲ. ಈಗಾಗಲೇ ತೆರೆಕಂಡು ಯಶಸ್ವಿಯಾಗಿದ್ದ ‘ರಾಬರ್ಟ್’, ‘ಯುವರತ್ನ’ ಮತ್ತು ‘ರಿವೈಂಡ್’ ಚಿತ್ರಗಳು ಪ್ರದರ್ಶನಗೊಂಡವು.
ಪರಭಾಷೆಯ ಹೊಸ ಚಿತ್ರಗಳು ಇಂದು ತೆರೆಕಂಡವು. ತೆಲುಗಿನ ‘ತಿಮ್ಮರಸು’ ಮತ್ತು ‘ತ್ರಯಂ’ ಜತೆಗೆ ಹಿಂದಿಯ ‘ಮುಂಬೈ ಸಾಗ’, ತಮಿಳಿನ ‘ಕರ್ಣನ್’, ಇಂಗ್ಲಿಷ್‌ನ ‘ಮಾರ್ಟಲ್ ಕಂಬ್ಯಾಟ್’, ‘ದಿ ಫಾದರ್’ ಮುಂತಾದ ಚಿತ್ರಗಳು ಪ್ರದರ್ಶನಗೊಂಡವು.
ಸಂಭ್ರಮದಿಂದ ಆರಂಭಗೊಂಡ ಬೆಂಗಳೂರಿನ ಚಿತ್ರಮಂದಿರಗಳಿಗೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬರಲಿಲ್ಲ. ಹೀಗಾಗಿ ಬಹುತೇಕ ಚಿತ್ರಮಂದಿರಗಳು ಪ್ರದರ್ಶನಗಳ ಸಂಖ್ಯೆಗಳು ಕಡಿತಗೊಳಿಸಿದವು. ಚಿತ್ರಪ್ರದರ್ಶನ ಆರಂಭವಾಗಿದೆ ಅನ್ನುವುದನ್ನು ಬಿಟ್ಟರೆ ಚಿತ್ರೋದ್ಯಮಕ್ಕೆ ಆಶಾದಾಯಕವಾದ ಪ್ರತಿಕ್ರಿಯೆ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಸಿಗಲಿಲ್ಲ.
ಜಿಲ್ಲಾವಾರು ಚಿತ್ರಣ
ಜಿಲ್ಲೆಯ ಹಲವು ಕೇಂದ್ರಗಳಲ್ಲಿ ಚಿತ್ರಮಂದಿರಗಳು ಪ್ರದರ್ಶನ ಆರಂಭಿಸಿವೆ. ವಿಜಯಪುರದ 15 ಚಿತ್ರಮಂದಿರಗಳ ಪೈಕಿ ಮೂರು ಚಿತ್ರಮಂದಿರಗಳಲ್ಲಿ ಹಳೆಯ ಸಿನಿಮಾಗಳು ಮರುಪ್ರದರ್ಶನ ಕಂಡವು. ಶಿವಮೊಗ್ಗೆಯ ಚಿತ್ರಮಂದಿರಗಳು ಬಾಗಿಲು ತೆರೆಯಲಿಲ್ಲ, ಮಲ್ಟಿಪ್ಲೆಕ್ಸ್‌ನ ಎರಡು ಪರದೆಯಲ್ಲಿ ಪ್ರದರ್ಶನ ನಡೆದಿದೆ.
ಚಿಕ್ಕಬಳ್ಳಾಪುರ, ಧಾರವಾಡಗಳಲ್ಲಿ ಎರಡು ಚಿತ್ರಮಂದಿರಗಳು ಆರಂಭವಾಗಿವೆ. ಮಂಗಳೂರಿನ ಒಂದು ಮಲ್ಟಿಪ್ಲೆಕ್ಸ್, ಬಾಗಲಕೋಟೆಯ ಮೂರು ಚಿತ್ರಮಂದಿರಗಳು, ಗದಗ, ಬನಹಟ್ಟಿ, ಮುಧೋಳ, ಬಾದಾಮಿಯಲ್ಲಿ ಒಂದೊಂದು ಚಿತ್ರಮಂದಿರ ಪ್ರದರ್ಶನ ಆರಂಭಿಸಿವೆ.
ನಿರಾಶಾದಾಯಕ ಆರಂಭ
ಜಿಲ್ಲಾಕೇಂದ್ರಗಳಲ್ಲಿ ಪ್ರೇಕ್ಷಕರ ಸಂಖ್ಯೆ ತೀರಾ ಕಡಿಮೆ ಇತ್ತು. ಯಾವ ಜಿಲ್ಲಾ ಕೇಂದ್ರದ ಚಿತ್ರಮಂದಿರಗಳಲ್ಲೂ ಐವತ್ತಕ್ಕಿಂತ ಹೆಚ್ಚು ಪ್ರೇಕ್ಷಕರು ಇರಲಿಲ್ಲ. ಮಿಕ್ಕಂತೆ ಕೊಡಗು, ಉಡುಪಿ, ಚಿಕ್ಕಮಗಳೂರು, ಕೊಪ್ಪಳ, ಬೀದರ್, ಹಾವೇರಿ, ಚಾಮರಾಜನಗರ, ತುಮಕೂರು, ಮಂಡ್ಯ, ರಾಮನಗರ ಮತ್ತು ಉತ್ತರ ಕನ್ನಡದ ಚಿತ್ರಮಂದಿರಗಳು ತೆರೆಯಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.