'ಕೊನೆಗೆ ಫಿಲಾಸಫಿಕಲ್‌ ಆಗಿ ಎರಡು ಸಾಲು ಹೇಳಿದರು. ಈ ಸಾಲಿನಲ್ಲಿ ಸುದೀಪ್‌ ದಕ್ಕಿದರೆ ಸಂತೋಷ'!

By Kannadaprabha NewsFirst Published Jul 8, 2022, 9:25 AM IST
Highlights

ಸುದೀಪ್‌ ನಟನೆಯ ಬಹು ನಿರೀಕ್ಷಿತ ವಿಕ್ರಾಂತ್‌ ರೋಣ ಸಿನಿಮಾ ಜುಲೈ 28ರಂದು ಬಿಡುಗಡೆಯಾಗುತ್ತಿದೆ. ಈ ಕುರಿತಾಗಿ ಸುದೀಪ್‌ ಜತೆ ನಡೆಸಿದ ಮಾತುಕತೆ ಇಲ್ಲಿದೆ.

ಸುದೀಪ್‌ ಅವರ ಜೊತೆ ಮಾತನಾಡುವುದು ಸುಲಭ ಮತ್ತು ಕಷ್ಟ. ಅವರು ಕ್ಷಣಕ್ಷಣಕ್ಕೂ ನಟನಾಗಿ, ನಿರ್ದೇಶಕನಾಗಿ, ಫಿಲಾಸಫರ್‌ ಆಗಿ, ಬೇಕರ್‌ ಆಗಿ, ಹಿರಿಯನಾಗಿ, ಕಥೆ ಹೇಳುವವರಾಗಿ, ಕಥೆ ಕೇಳುವವರಾಗಿ, ತಿಳಿದವರಾಗಿ, ನಿರ್ಲಿಪ್ತರಾಗಿ ಹೀಗೆ ನಾನಾ ಪಾತ್ರಗಳಿಗೆ ಬದಲಾಗುತ್ತಾ ಇರುತ್ತಾರೆ. ಅವರು ಮಾತನಾಡಿದ್ದನ್ನು ಹೆಕ್ಕುವುದು ಕೂಡ ಸವಾಲಿನ ಕೆಲಸ.

ವಿಕ್ರಾಂತ್‌ ರೋಣ ತಿಂಗಳಾಂತ್ಯ ಜುಲೈ 28ರಂದು ಬಿಡುಗಡೆಯಾಗುತ್ತಿದೆ. ಆ ಸಿನಿಮಾ ಕುರಿತು ಮಾತನಾಡಲು ಸುದೀಪ್‌ ತಮ್ಮ ಮನೆಯ ಚಂದದ ಟೆರೇಸಿನಲ್ಲಿ ಕುಳಿತಿದ್ದರು. ಅವರಿಗೆ ಪ್ರಶ್ನೆಗಳನ್ನು ಕೇಳುವುದು ಸುಲಭ. ಆದರೆ ಉತ್ತರ ಸುಲಭದ್ದಾಗಿರುವುದಿಲ್ಲ. ಈ ಸಲ ಅವರು ದೊಡ್ಡ ಕನಸಿಟ್ಟುಕೊಂಡು ಮಾತಿಗೆ ಕುಳಿತಿದ್ದರು.

ಕೆರೆಬಿಯನ್‌ ಹುಡುಗರ ಮೈಯಲ್ಲೂ ರಾರಾ ರಕ್ಕಮ್ಮ! ವಿಡಿಯೋ ವೈರಲ್

‘ವಿಕ್ರಾಂತ್‌ ರೋಣ ಕತೆ ನನಗೆ ಮೊದಲು ಹೇಳಿದ್ದು ಪ್ರಿಯಾ. ಈ ಕತೆ ನೀನು ಮಾಡಬೇಕು ಎಂದರು. ನಾನು ಕೂತು ಕತೆ ಕೇಳಿದೆ. ಎಕ್ಸೈಟ್‌ ಆದೆ. ಪ್ರತಿಯೊಂದು ಕತೆಗೂ ಒಂದು ಉದ್ದೇಶ ಇರುತ್ತದೆ. ಈ ಕತೆಯ ಉದ್ದೇಶ ಬಹಳ ಇಷ್ಟವಾಯಿತು. ಸಿನಿಮಾ ಮಾಡೋಣ ಎಂದುಕೊಂಡೆ. ನನಗಿಂತ ಮೊದಲು ಜಾಕ್‌ ಮಂಜುನಾಥ್‌ ಕತೆ ಕೇಳಿದ್ದರು. ಮಾಡ್ತೀಯಾ ಎಂದೆ. ಅವನು ಸಣ್ಣ ಸಿನಿಮಾ ಮಾಡುವ ಆಲೋಚನೆಯಲ್ಲಿದ್ದ. ಆದರೆ ಈ ಬಾರಿ ನನಗೆ ಸ್ವಲ್ಪ ದೊಡ್ಡ ಕನಸು ಕಾಣೋ ಆಸೆ ಹುಟ್ಟಿತ್ತು. ಇಂಡಿಯಾನಾ ಜೋನ್ಸ್‌, ಟಾರ್ಜಾನ್‌, ಜುಮಾಂಜಿ ಥರದ ಸಿನಿಮಾಗಳನ್ನು ಇಷ್ಟಪಟ್ಟವನು ನಾನು. ಹೊಸ ಜಗತ್ತು ಸೃಷ್ಟಿಸುವ ಅವಕಾಶ ಇಲ್ಲಿತ್ತು. ದೊಡ್ಡದು ಮಾಡೋಣ ಅಂತಲೇ ಹೇಳಿದೆ. ಎಲ್ಲರೂ ಒಪ್ಪಿಕೊಂಡರು. ಒಂದು ಸಣ್ಣ ಯೋಚನೆಯಾಗಿ ಹುಟ್ಟಿದ್ದು ಇಷ್ಟುದೊಡ್ಡದಾಗಿ ಬೆಳೆದಿದೆ’ ಎಂದಾಗ ಸುದೀಪ್‌ ಒಬ್ಬ ವಿಷನರಿ ಥರ ಕಾಣಿಸುತ್ತಾರೆ.

ವಿಕ್ರಾಂತ್‌ ರೋಣ ಎಂದಾಗ ಅವರು ಪುಟ್ಟಮಗುವಿನಷ್ಟೇ ಖುಷಿ ಮತ್ತು ಎಕ್ಸೈಟ್‌ ಆಗುತ್ತಾರೆ. ಇಡೀ ದೇಶ ಸುತ್ತಿ ಸಿನಿಮಾ ಬಗ್ಗೆ ಹೇಳುತ್ತೇನೆ ಅನ್ನುತ್ತಾರೆ. ಸಿನಿಮಾವನ್ನು ತಮ್ಮ ಮಗಳಿಗೆ ಹೋಲಿಸುತ್ತಾರೆ. ‘ಈ ಸಿನಿಮಾ ನನ್ನ ಮಗಳ ಹಾಗೆ. ನಾನು ಮಗಳ ಬಗ್ಗೆ ತಿಳಿಸುವುದಕ್ಕೆ ಎಲ್ಲಾ ಕಡೆ ಹೋಗುತ್ತಿದ್ದೇನೆ. ಇಷ್ಟಪಟ್ಟು ಮಾಡಿದ ಸಿನಿಮಾ ಇದು. ಈ ಕತೆಯನ್ನು ಬೇರೆ ಭಾಗದವರಿಗೂ ಹೇಳುವ ಆಸೆ ಇದೆ. ಈ ಸಿನಿಮಾಗೆ ಏನೇನು ಬೇಕೋ ಎಲ್ಲವನ್ನೂ ಕೊಟ್ಟಿದ್ದೇವೆ. ಈಗ ಈ ಸಿನಿಮಾ ಬಗ್ಗೆ ಹೇಳುವವರು ಬೇಕು. ನಮ್ಮ ಸಿನಿಮಾದಲ್ಲಿ ನನ್ನ ಬಿಟ್ಟರೆ ಎಲ್ಲರೂ ಹೊಸಬರು. ನಾನು ಮುಂದೆ ನಿಲ್ಲಬೇಕು, ಅದು ನನ್ನ ಜವಾಬ್ದಾರಿ ಕೂಡ. ನನ್ನನ್ನು ಅನೇಕ ಹಿರಿಯರು ಆಶೀರ್ವದಿಸಿದ್ದಾರೆ. ಈಗ ನಾನು ಹಿರಿಯರಿಗೆ, ಹೊಸಬರಿಗೆ ಕೊಡೆ ಥರ ಕೆಲಸ ಮಾಡಬೇಕು. ಮಳೆ, ಧೂಳು ಬೀಳದಂತೆ ಕಾಯಬೇಕು’ ಎನ್ನುವಾಗ ಸುದೀಪ್‌ ಅವರಲ್ಲಿ ಜವಾಬ್ದಾರಿಯುತ ನಾಯಕ ಕಾಣಿಸುತ್ತಾರೆ.

ಕೊನೆಗೆ ಫಿಲಾಸಫಿಕಲ್‌ ಆಗಿ ಎರಡು ಸಾಲು ಹೇಳಿದರು. ಈ ಸಾಲಿನಲ್ಲಿ ಸುದೀಪ್‌ ದಕ್ಕಿದರೆ ಸಂತೋಷ.

‘ನನಗೆ ಬೇರೆ ಯಾರೂ ಕತೆ ಬರೆಯದೇ ಇದ್ದಾಗ ನನಗೆ ನಾನೇ ಕತೆ ಬರೆದೆ. ನಿರ್ದೇಶನ ಮಾಡಿದೆ. ಅವರಿವರು ಬಿಟ್ಟಕತೆ ನನಗೆ ಬರುತ್ತಿತ್ತು. ಹಾಗಾಗಿ ಬದುಕುವುದಕ್ಕೋಸ್ಕರ, ಉಳಿಯುವುದಕ್ಕೋಸ್ಕರ ನಿರ್ದೇಶನ ಮಾಡಿದೆ. ನಾವು ಗೆಲುವನ್ನು ನಿಭಾಯಿಸಬೇಕಿಲ್ಲ. ಸೋಲನ್ನು ನಿಭಾಯಿಸಬೇಕು. ಅದು ನನಗೆ ಗೊತ್ತಿದೆ. ಸಾಕಷ್ಟುಸೋಲುಗಳನ್ನು ನೋಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಸಿನಿಮಾವನ್ನು ಪ್ರೀತಿಸುತ್ತೇನೆ. ಸಿನಿಮಾ ಬಿಟ್ಟರೆ ನನಗೆ ಬೇರೆ ಐಡೆಂಟಿಟಿಯೇ ಇಲ್ಲ. ಆ ಸಿನಿಮಾಗೆ ಏನು ಅರ್ಹತೆ ಇದೆಯೋ ಅದಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗುತ್ತದೆ. ಪ್ರಕೃತಿಯೇ ಅದನ್ನು ನಿರ್ಧರಿಸುತ್ತದೆ. ನಾವು ಕಾಯುತ್ತೇವೆ.’

ರಾ..ರಾ.. ರಕ್ಕಮ್ಮ ಹಾಡಿಗೆ ವಂಶಿಕಾ ಸಖತ್ ಡ್ಯಾನ್ಸ್

ವಿಕ್ರಾಂತ್‌ ರೋಣ ಕುರಿತು 10 ಮಾತುಗಳು:

1. ವಿಕ್ರಾಂತ್‌ ರೋಣ ಕತೆ ನನಗೆ ಹೊಸತು. ಈ ಚಿತ್ರದ ಪಾತ್ರಕ್ಕೆ ನಾನೇ ಭಿನ್ನ ಬಾಡಿ ಲ್ಯಾಂಗ್ವೇಜ್‌ ಮಾಡಿಕೊಂಡೆ. ಕಾಸ್ಟೂ್ಯಮ್‌ ಸಿದ್ಧಗೊಳಿಸಿದೆ. ನಮ್ಮ ಸಿನಿಮಾ ಹೀರೋ, ಫೈಟು ಇತ್ಯಾದಿಗಳ ಜೊತೆಗೆ ತಂದೆ, ಮಗಳ ಕತೆ. ಥ್ರಿಲ್ಲರ್‌ ಹೊದಿಕೆಯಲ್ಲಿರುವ ಭಾವನಾತ್ಮಕ ಕತೆ.

2. ಸಿನಿಮಾ ಇಂಟರ್ವಲ್‌ ಹೊತ್ತಿಗೆ ತೀವ್ರತೆ ಪಡೆದುಕೊಳ್ಳುತ್ತದೆ. ಅಲ್ಲಿಂದ ಪ್ರೇಕ್ಷಕ ವಿಕ್ರಾಂತ್‌ ರೋಣನ ಜರ್ನಿಯಲ್ಲಿ ಪಾಲುದಾರನಾಗುತ್ತಾನೆ. ಕಟ್ಟಕಡೆಗೆ ಮನೆಗೆ ಹೋಗುವಾಗ ವಿಕ್ರಾಂತ್‌ ರೋಣನನ್ನು ಹೃದಯದಲ್ಲಿಟ್ಟುಕೊಂಡು ಹೋಗುತ್ತಾನೆ.

3. ಅನೇಕ ಸಿನಿಮಾಗಳು 3ಡಿ ಮಾಡಿದ ಕಾರಣಕ್ಕಾಗಿಯೇ ಗೆದ್ದಿವೆ. ಈ ಕತೆಯನ್ನು 3ಡಿ ಮೂಲಕ ನೋಡುವುದು ಚೆಂದ. ಒಂದು ಕಾಡಿನ ಕತೆಯನ್ನು ಆ ಕಾಡಿನಲ್ಲಿ ಬೀಳುವ ಮಳೆಯ ಸದ್ದು, ಬೀಸುವ ಗಾಳಿ ಎಲ್ಲಾ ಅನುಭವದೊಂದಿಗೆ ಜೊತೆಗೆ ಕರೆದೊಯ್ದು ಕತೆ ಹೇಳುವ ಉದ್ದೇಶ ನಮ್ಮದು.

4. ನನಗೆ ಪ್ರೀಮಿಯರ್‌ ಶೋಗಳಲ್ಲಿ ನಂಬಿಕೆ ಇಲ್ಲ. ಕೆಲವರಿಗೆ ಸಿನಿಮಾ ತೋರಿಸುವ ಆಸೆ ಇದೆ. ರವಿಚಂದ್ರನ್‌ ಸರ್‌ಗೆ, ಸಲ್ಮಾನ್‌ ಖಾನ್‌ ಅವರಿಗೆ ಸಿನಿಮಾ ಪೂರ್ತಿ ಸಿದ್ಧವಾದ ತಕ್ಷಣ ತೋರಿಸುತ್ತೇನೆ.

5. ಪತ್ನಿ ಪ್ರಿಯಾ ಮತ್ತು ಮಗಳು ಈ ಸಿನಿಮಾದ ರಫ್‌ ವರ್ಷನ್‌ ನೋಡಿದ್ದಾರೆ. ಡಬ್ಬಿಂಗ್‌ ಆಗದ, ಸಿಜಿ ಕೆಲಸ ನಡೆಯದ ವಿಡಿಯೋ ಫäಟೇಜ್‌ ಅದು. ಅದನ್ನು ನೋಡಿಯೇ ಎಂಜಾಯ್‌ ಮಾಡಿದ್ದಾರೆ.

6. ಸಿನಿಮಾವನ್ನು ನಮ್ಮ ಭಾಷೆಗಳ ಜೊತೆಗೆ ಅರೇಬಿಕ್‌, ಜರ್ಮನ್‌, ಸ್ಪಾ್ಯನಿಷ್‌, ಮ್ಯಾಂಡರಿನ್‌ ಭಾಷೆಗಳಲ್ಲಿ ಡಬ್‌ ಮಾಡಲಾಗುತ್ತಿದೆ. ಹಾಡುಗಳು ಮಾತ್ರ ಕನ್ನಡದಲ್ಲಿ ಇರುತ್ತದೆ. ಅಲ್ಲೆಲ್ಲಾ ಭಾರತೀಯ ಹಾಡುಗಳನ್ನು ಜನ ಎಂಜಾಯ್‌ ಮಾಡುತ್ತಾರೆ.

7. ನನ್ನ ಲೈಫಲ್ಲಿ ಮಾಡಿರೋ ಸಿನಿಮಾಗಳಲ್ಲಿ ಪಾರ್ಚ್‌ 2 ಮಾಡಬಹುದಾದ ಸಿನಿಮಾಗಳೆಂದರೆ ವಿಷ್ಣುವರ್ಧನ ಮತ್ತು ವಿಕ್ರಾಂತ್‌ ರೋಣ. ವಿಕ್ರಾಂತ್‌ ರೋಣ ಭಾಗ 2ಕ್ಕೆ ಒಳ್ಳೆಯ ಎಳೆ ರೆಡಿ ಮಾಡಿದ್ದಾರೆ ಅನೂಪ್‌ ಭಂಡಾರಿ. ಆದರೆ ಸದ್ಯ ಅದರ ಬಗ್ಗೆ ಯೋಚನೆ ಇಲ್ಲ.

8. ಸಿನಿಮಾ ಟ್ರೇಲರ್‌ ಕುರಿತು ಅಮಿತಾಬ್‌ ಅವರಿಗೆ ಮೆಸೇಜ್‌ ಮಾಡಿದ್ದೆ. ಅವರು ತಕ್ಷಣ ಟ್ವೀಟ್‌ ಮಾಡಿದರು. ರಾಮ್‌ಚರಣ್‌ ನಾನು ಥ್ಯಾಂಕ್ಸ್‌ ಹೇಳುತ್ತೇನೆ ಎಂಬ ಕಾರಣಕ್ಕೆ ಫೋನ್‌ ರಿಸೀವ್‌ ಮಾಡಲೇ ಇಲ್ಲ. ಅಣ್ಣಾ ನಿಮಗೆ ಏನು ಬೇಕಾದರೂ ಮಾಡುತ್ತೇನೆ ಎನ್ನುತ್ತಾರೆ. ಧನುಷ್‌ ಕೂಡ ಹಾಗೇ. ಮಲಯಾಳಂನಲ್ಲಿ ಮೋಹನ್‌ಲಾಲ್‌ ಅವರು ಟ್ವೀಟ್‌ ಮಾಡಿದರು. ಅವರೆಲ್ಲ ನನ್ನ ಪ್ರೀತಿಸುತ್ತಾರೆ. ಇದು ನಾನು ಇಷ್ಟುವರ್ಷಗಳಲ್ಲಿ ಗಳಿಸಿದ ಸಂಪಾದನೆ.

9. ನನ್ನ ಮತ್ತು ನಿರ್ಮಾಪಕ ಜಾಕ್‌ ಮಂಜು ಮಧ್ಯೆ ಒಂದು ಲೆಕ್ಕ ಇದೆ. ಆ ಲೆಕ್ಕ ನನಗೆ ಗೊತ್ತಿಲ್ಲ. ಆದರೆ ಅವರಿಗೆ ಗೊತ್ತಿದೆ. ಅವರು ನನ್ನ ಗೆಳೆಯ, ಸಹೋದರ ಎಲ್ಲವೂ. ನನ್ನ ಅಕ್ಕಪಕ್ಕ ಇರುವವರು ನನ್ನನ್ನು ಪ್ರೊಟೆಕ್ಟ್ ಮಾಡುತ್ತಿರುತ್ತಾರೆ. ಅವರಿಂದಲೇ ನಾನು ಸೇಫ್‌ ಆಗಿದ್ದೇನೆ. ಮಂಜು ಅವರಲ್ಲಿ ಒಬ್ಬ. ಈ ಸಿನಿಮಾ ಮುಗಿಸುವಷ್ಟರಲ್ಲಿ ನನ್ನ ಕಣ್ಣಲ್ಲಿ ತುಂಬಾ ದೊಡ್ಡವನಾಗಿಬಿಟ್ಟ.

10. ಅನೂಪ್‌ ಭಂಡಾರಿ ತುಂಬಾ ಒಳ್ಳೆಯ ವ್ಯಕ್ತಿ. ಕನಸುಗಾರ. ಇವತ್ತು ಹೇಳಿದ ಒಂದು ವಿಚಾರ ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಎನ್ನುತ್ತಾರೆ. ಮರುದಿನ ಕಲಿತುಕೊಂಡು ಬಂದಿರುತ್ತಾರೆ. ಒಳ್ಳೆಯ ಟೀಮ್‌ ಜೊತೆ ಕೆಲಸ ಮಾಡಿದ ಖುಷಿ ಇದೆ.

click me!