ಕ್ಯಾನ್ಸರ್ ಪೀಡಿತ ತಾಯಿಯೊಬ್ಬಳು ತನ್ನ ಮಗನಿಗೆ ಸಾಯುವ ಮೊದಲು ಬರೆದ ಕಡೆಯ ಪತ್ರ ನೆಟ್ಟಿಗರ ಮನ ಕಲಕಿದೆ. ಈ ಪತ್ರದಲ್ಲಿ ತಾಯಿ ಮಗನ ಅತ್ಯುತ್ತಮ ಸ್ವಭಾವವನ್ನು ಮೆಚ್ಚಿ ಬರೆದಿದ್ದಾರೆ.
ಇತ್ತೀಚೆಗೆ ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ತನ್ನ ತಾಯಿ ಕ್ಯಾನ್ಸರ್‌ನಿಂದ ಸಾಯುವ ಮೊದಲು ಬರೆದಿದ್ದ ಹೃದಯಸ್ಪರ್ಶಿ ಪತ್ರವನ್ನು ಹಂಚಿಕೊಂಡಿದ್ದಾರೆ. ಈ ಪತ್ರದಲ್ಲಿ ತಾಯಿಯು ಮಗನಿಗೆ ಚಿಕಿತ್ಸೆ ಸಮಯದಲ್ಲಿ ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾಳೆ.
ಮ್ಯಾಟ್ ಗಾಲ್ಡ್ ಎಂಬ ವ್ಯಕ್ತಿ ತಾಯಿಯು ಕಡೆಯದಾಗಿ ತನಗಾಗಿ ಬಿಟ್ಟು ಹೋದ ಪತ್ರವನ್ನು ಹಂಚಿಕೊಂಡಿದ್ದು, 'ಅಮ್ಮ ಕ್ಯಾನ್ಸರ್‌ನಿಂದ ನಿಧನರಾದ ನಂತರ ನಾನು ಕಂಡುಕೊಂಡ ಒಂದು ಪತ್ರ ' ಎಂದು ಶೀರ್ಷಿಕೆ ಬರೆದಿದ್ದಾರೆ.
ಜೊತೆಗೆ, ನಾನು ಆಕೆಯನ್ನು ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತೇನೆ. ಆಕೆಯ ಈ ಪತ್ರ ನನ್ನನ್ನು ಅಳುವಂತೆ ಮಾಡುತ್ತದೆ. ಆದರೆ ನನ್ನ ಮುಖದ ಮೇಲೆ ನಗುವಿನೊಂದಿಗೆ ನಾನು ಅಳುತ್ತೇನೆ. ಈಗ ಸಮಯವು ಕಷ್ಟಕರವಾಗಿದೆ. ಏಕೆಂದರೆ ನನ್ನ ತಂದೆ ಕೂಡಾ ಈಗ ಕ್ಯಾನ್ಸರ್‌ನಿಂದಾಗಿ ಐಸಿಯುನಲ್ಲಿದ್ದಾರೆ. ನೀವು ಯಾರನ್ನಾದರೂ ಎಷ್ಟು ಪ್ರೀತಿಸುತ್ತೀರಿ ಮತ್ತು ಅವರು ನಿಮಗೆ ಎಷ್ಟು ಅರ್ಥವಾಗಿದ್ದಾರೆ ಎಂಬುದನ್ನು ನೀವು ಇಷ್ಟಪಡುವವರಿಗೆ ಹೇಳಲು ಮರೆಯದಿರಿ.' ಎಂದು ಮ್ಯಾಟ್ ಬರೆದಿದ್ದಾರೆ.
ತಾಯಿಯು ತಮ್ಮ ಪತ್ರದಲ್ಲಿ,'ನೀನು ಒಂದು ದಿನ ಇದನ್ನು ಕಂಡುಕೊಳ್ಳುವ ಭರವಸೆಯಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ನಿನಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ!' ಎಂದು ಬರೆದಿದ್ದಾರೆ.
ಮುಂದುವರಿದು, 'ನನಗೆ ಅಗತ್ಯವಿರುವಾಗ ನೀನು ಯಾವಾಗಲೂ ನನ್ನೊಂದಿಗೆ ಇರುತ್ತಿದ್ದಿ. ನಿನಗೆ ಯಾವುದೇ ಆದಾಯವಿರುವುದಿಲ್ಲ ಎಂದು ತಿಳಿದೂ ನನ್ನನ್ನು ಚಿಕಿತ್ಸೆ ಸಮಯದಲ್ಲಿ ನೋಡಿಕೊಳ್ಳಲು ನೀನು ನಿನ್ನ ಕೆಲಸವನ್ನು ತೊರೆದಿದ್ದೀ. ಎಂತಹ ಅದ್ಭುತವಾದ ಕೆಲಸ ನಿನ್ನದು. ಅದಕ್ಕೆ ಧನ್ಯವಾದಗಳು,' ತಾಯಿ ಪತ್ರದಲ್ಲಿ ಬರೆದಿದ್ದಾರೆ.
'ನಾನು ಯಾವಾಗಲೂ ನಿನ್ನನ್ನು ಗಮನಿಸುತ್ತಿರುತ್ತೇನೆ. ನಾನು ಸಾಯುವ ಭಯಕ್ಕಿಂತ ಹೆಚ್ಚಾಗಿ ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ನಾನು ಯಾವಾಗಲೂ ಹೆದರುತ್ತಿದ್ದೆ. ನೀನು ಎಂದೆಂದಿಗೂ ಅತ್ಯುತ್ತಮ ಮಗ' ಎಂದು ಆಕೆ ಮಗನಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಅವರು ತಮ್ಮ ಪತ್ರದಲ್ಲಿ ಅವರ ವಿಶೇಷ ಬಂಧದ ಬಗ್ಗೆ ಮಾತನಾಡುತ್ತಾ, ಮಗನೊಂದಿಗೆ ಕಳೆದ ಸಮಯ ಅವರ ಜೀವನದ ಅತ್ಯುತ್ತಮ ಸಮಯಗಳಲ್ಲಿ ಒಂದಾಗಿದೆ ಎಂದು ವಿವರಿಸಿದ್ದಾರೆ.
ಮ್ಯಾಟ್ ಗಾಲ್ಡ್ ಅವರ ಈ ಪೋಸ್ಟ್ 54,000ಕ್ಕೂ ಹೆಚ್ಚು ಲೈಕ್ ಸಂಗ್ರಹಿಸಿದೆ. ಕಾಮೆಂಟ್‌ಗಳ ವಿಭಾಗದಲ್ಲಿ, ಬಳಕೆದಾರರು ಮ್ಯಾಟ್ ತಮ್ಮ ತಾಯಿಯನ್ನು ಕಡೆಗಾಲದಲ್ಲಿ ನೋಡಿಕೊಂಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
'ನಿಮ್ಮ ತಾಯಿಗೆ ಅಗತ್ಯವಿರುವ ಸಮಯದಲ್ಲಿ ಅವರೊಂದಿಗಿದ್ದ ನೀವು ಎಂತಹ ಅದ್ಭುತ ವ್ಯಕ್ತಿ' ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಮ್ಯಾಟ್‌ಗೆ ಸಮಾಧಾನ ಹೇಳುತ್ತಾ, 'ಎಂಥ ಅದ್ಭುತ ತಾಯಿ. ನಿಮ್ಮ ನಷ್ಟಕ್ಕೆ ನಾನು ವಿಷಾದಿಸುತ್ತೇನೆ. ಆದರೆ ನಿಮ್ಮ ಹೃದಯದಲ್ಲಿ ಅವರ ಬಗ್ಗೆ ಪ್ರೀತಿ ಇರುವವರೆಗೂ ಅವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ. ತಾಯಿ ಮತ್ತು ಮಗನ ಸಂಬಂಧವು ಎಂದಿಗೂ ಮರೆಯಾಗುವುದಿಲ್ಲ ' ಎಂದಿದ್ದಾರೆ.
ಇಲ್ಲಿದೆ ಪತ್ರ