#Feelfree: ಹಳೆ ಬಾಯ್‌ಫ್ರೆಂಡ್ ಜತೆ ಸೆಕ್ಸ್: ಪತಿಗೆ ಹೇಳಲೇ, ಬಿಡಲೇ?

By Suvarna NewsFirst Published Jan 23, 2021, 4:19 PM IST
Highlights

ದಾಂಪತ್ಯದಲ್ಲಿ ಸುಖವಿದೆ. ಆದರೂ ಹಳೆಯ ಗೆಳೆಯನ ಜೊತೆ ದೈಹಿಕ ಸಂಪರ್ಕ ಬೆಳೆದಿದೆ. ಈಗ ಪಾಪಪ್ರಜ್ಞೆ ಕಾಡುತ್ತಿದೆ. ಪತಿಗೆ ಈ ವಿಚಾರ ಹೇಳುವುದೋ, ಬಿಡುವುದೋ?

ಪ್ರಶ್ನೆ: ನನಗೀಗ ಮೂವತ್ತು ವರ್ಷ. ಮದುವೆಯಾಗಿ ಎರಡು ವರ್ಷವಾಗಿದೆ. ನಾಲ್ಕು ವರ್ಷಗಳ ಹಿಂದೆ ನನಗೊಬ್ಬ ಗೆಳೆಯನಿದ್ದ. ಭಾವನಾತ್ಮಕವಾಗಿ ನನಗೆ ತುಂಬಾ ಹತ್ತಿರವೂ ಆಗಿದ್ದ. ನಂತರ ಆತ ವಿದೇಶಕ್ಕೆ ಹೋದ ಹಾಗೂ ನಾನು ಇಲ್ಲೇ ಉಳಿದೆ. ನನಗೆ ಇಲ್ಲಿಯೇ ಒಳ್ಳೆಯ ಗಂಡನ್ನು ನೋಡಿ ಮದುವೆ ಮಾಡಿದರು. ಪಾರ್ಟ್‌ಟೈಮ್ ಜಾಬ್‌ ಮಾಡುತ್ತಿದ್ದೇನೆ. ನನ್ನ ಗಂಡ ಉದ್ಯಮಿ, ತುಂಬಾ ಒಳ್ಳೆಯ ವ್ಯಕ್ತಿ. ಚೆನ್ನಾಗಿ ನೋಡಿಕೊಳ್ಳುತ್ತಾರೆ, ಪ್ರೀತಿಸುತ್ತಾರೆ. ಲೈಂಗಿಕವಾಗಿಯೂ ನನಗೆ ಏನೂ ಕೊರತೆ ಇಲ್ಲ. ಹಾಗಿದ್ದಾಗ. ಒಂದು ವರ್ಷದ ಹಿಂದೆ ನನ್ನ ಹಳೆಯ ಗೆಳೆಯ ವಿದೇಶದಿಂದ ಮರಳಿ ಬಂದ. ಆಕಸ್ಮಿಕವಾಗಿ ನಮ್ಮ ಮರು ಭೇಟಿ ಆಯಿತು. ನನ್ನ ಪತಿ ಊರಿನಲ್ಲಿ ಇಲ್ಲದ ಒಂದು ದಿನ ನಮ್ಮ ಮನೆಗೂ ಬಂದ. ಹಾಗೇ ಹಳೆಯ ದಿನಗಳ ಬಗ್ಗೆ ಮಾತನಾಡುತ್ತಾ ಮತ್ತೆ ಹತ್ತಿರವಾದೆವು. ಒಂದು ಹಂತದಲ್ಲಿ ದೈಹಿಕ ಸಂಪರ್ಕವೂ ನಡೆದು ಹೋಯಿತು. ಇದು ಘಟಿಸಿದ ನಂತರ ನನಗೆ ಪಶ್ಚಾತ್ತಾಪವಾಯಿತು. ಆತ ನಂತರವೂ ನನ್ನೊಡನೆ ಸೆಕ್ಸ್ ಮಾಡಲು ಪ್ರಯತ್ನಿಸಿದ. ಆದರೂ ನಾನು ಆತನನ್ನು ದೂರ ಇಟ್ಟೆ. ಹತ್ತಿರ ಬಿಟ್ಟುಕೊಳ್ಳಲಿಲ್ಲ. ಹಾಗೂ ನಮ್ಮ ಸಂಪರ್ಕ ಮುಗಿದ ಮಾತು ಎಂದು ತಿಳಿಸಿದೆ. ಅಂದಿನಿಂದ, ನನ್ನ ಗಂಡನಿಗೆ ನಾನು ವಂಚನೆ ಮಾಡಿದೆ ಎಂಬ ಭಾವನೆ ನನ್ನೊಳಗೆ ಕೊರೆಯುತ್ತಲೇ ಇದೆ. ಈ ವಿಚಾರವನ್ನು ಪತಿಗೆ ಹೇಳಬೇಕು ಎಂದು ಎಷ್ಟೋ ಪ್ರಯತ್ನಿಸಿದ್ದೇನೆ. ಆದರೆ ಸಾದ್ಯವಾಗಲೇ ಇಲ್ಲ. ಅವರು ನನ್ನನ್ನು ದೂರ ಮಾಡಬಹುದು ಎಂಬ ಭಯ ಇಲ್ಲ. ಆದರೆ ನೊಂದುಕೊಳ್ಳಬಹುದು ಎಂಬ ವಿಚಾರ ನನ್ನನ್ನು ಕಾಡುತ್ತಿದೆ. ಅವರಿಗೆ ಹೇಳಿ ಹಗುರಾಗಲೇ? ಹೇಳದೆ ನಾನೇ ನವೆಯಲೇ? ಏನು ಮಾಡಲಿ?



ಉತ್ತರ: ನಿಮ್ಮ ಸಮಸ್ಯೆ ಸಂಕೀರ್ಣವಾಗಿದೆ. ನಾನು ಒಬ್ಬ ಕೌನ್ಸಿಲರ್‌ನ ಜಾಗದಲ್ಲಿ ನಿಂತು, ಪ್ರಶ್ನೆಗಳನ್ನು ಹಾಕಿ ಅಥವಾ ವಿವಿಧ ಸನ್ನಿವೇಶಗಳನ್ನು ನಿಮ್ಮ ಮುಂದೆ ತಂದು ನಿಲ್ಲಿಸಿ, ಏನಾದರೆ ಏನಾಗಬಹುದು ಎಂಬ ಚಿತ್ರಣ ನೀಡಬಹುದು ಅಷ್ಟೇ ಹೊರತು, ಹೀಗೆಯೇ ಮಾಡಿ ಎಂಬ ಇದಮಿತ್ಥಂ ಎಂಬ ತೀರ್ಮಾನ ಕೊಡುವುದು ಕಷ್ಟ. ಬಹುಶಃ ಹಾಗೆ ನಿಖರವಾದ ಒಂದು ಪರಿಹಾರ ಈ ಸಮಸ್ಯೆಗೆ ಇರಲಿಕ್ಕೂ ಇಲ್ಲ.
ಆದರೆ ನೀವು ಒಂದು ಒಳ್ಳೆಯ ಕೆಲಸ ಮಾಡಿದ್ದೀರಿ. ಅದೇನು ಎಂದರೆ ಹಳೆಯ ಗೆಳೆಯನನ್ನು ಸಂಪೂರ್ಣವಾಗಿ ದೂರ ಇಟ್ಟಿರುವುದು. ಆದರೆ ಆ ಒಂದು ಸಲ ನಿಮ್ಮಲ್ಲಿ ಸೆಕ್ಸ್ ಘಟಿಸಿತಲ್ಲಾ? ಅದಕ್ಕೆ ಕಾರಣವೇನು? ಮನಶ್ಶಾಸ್ತ್ರಜ್ಞರು ಇದನ್ನು ಪಾಪಪ್ರಜ್ಞೆಯ ಸೆಕ್ಸ್ ಎನ್ನುತ್ತಾರೆ. ಕೆಲವೊಮ್ಮೆ ಡೈವೋರ್ಸ್ ಮಾಡಿ ದೂರವಾದ ಗಂಡ ಹೆಂಡತಿಯ ನಡುವೆ ಸಹ ಇಂಥ ಸೆಕ್ಸ್ ನಡೆಯುವುದುಂಟು. ಅದು ಹಿಂದಿನ ದಿನಗಳ ಮಧುರ ನೆನಪು, ಆತನಿಂದ ತಾನು ಪಡೆದ ಒಲವಿನ ನೆನಪುಗಳು, ಆತನಿಗೆ ತಾನು ಪ್ರತಿಯಾಗಿ ಏನನ್ನೂ ಕೊಡಲಿಲ್ಲ ಎಂಬ ಗಿಲ್ಟ್‌ನಿಂದಾಗಿ ಹೀಗಾಗುತ್ತದೆ ಎನ್ನುತ್ತಾರೆ. ಈ ಗಿಲ್ಟ್ ನಿಮ್ಮನ್ನು ಒಂದು ಮಾಡಿದೆ. ಇನ್ನು ಅದರಿಂದ ನೀವು ಮುಕ್ತರಾಗಿದ್ದೀರಿ. ಇನ್ನು ನಿಮ್ಮ ಹಳೆಯ ಗೆಳಯನಿಗೂ ನಿಮಗೂ ಯಾವ ಸಂಬಂಧವೂ ಇಲ್ಲ. ಅದನ್ನು ಮರೆತುಬಿಡಿ.



ಆದರೆ ಒಂದು ಪಾಪಪ್ರಜ್ಞೆಯಿಂದ ದೂರವಾಗಲು ಹೋಗಿ ಇನ್ನೊಂದು ಪಾಪಪ್ರಜ್ಞೆಯನ್ನು ಮೈಮೇಲೆ ಎಳೆದುಕೊಂಡಿದ್ದೀರಿ. ಹಳೆಯ ಗೆಳೆಯನನ್ನು ದೂರ ಮಾಡಲು ಹೋಗಿ ಅವನ ಜೊತೆಗೇ ಸೆಕ್ಸ್ ಮಾಡಿ ಗಂಡನಿಗೆ ವಂಚಿಸಿದ ಭಾವನೆಯನ್ನು ಹೊತ್ತು ಕೊಂಡಿದ್ದೀರಿ. ಈಗ ಅದನ್ನು ಪತಿಗೆ ಹೇಳಬೇಕೋ ಎಂಬುದು ನಿಮ್ಮನ್ನು ಕಾಡುತ್ತಿದೆ. ಈ ಸಮಸ್ಯೆಗೆ ಒಂದು ಉತ್ತರ ಇದೆ-
 


ನಿಮ್ಮ ಪತಿ ಲೈಂಗಿಕ ಸಂಬಂಧವನ್ನು, ಯಾವುದೇ ಸಂಬಂಧಗಳನ್ನು ಹೇಗೆ ಕಾಣುತ್ತಾರೆ ಎಂಬುದನ್ನು ಒಮ್ಮೆ ಪರಿಶೀಲಿಸಿ. ತಮಗೆ ಈ ಹಿಂದೆ ವಂಚನೆ ಮಾಡಿದ ಸಂಬಂಧಿಕರನ್ನು ಅವರು ಆ ನಂತರ ಹೇಗೆ ನೋಡುತ್ತಿದ್ದಾರೆ. ಅವರ ಜೊತೆ ಸಿಟ್ಟು ಇಟ್ಟುಕೊಂಡಿದ್ದಾರೆಯೇ. ಪ್ರತೀಕಾರದ ಭಾವನೆ ಇದೆಯೇ ಅಥವಾ ಕ್ಷಮಿಸಿದ್ದಾರೆಯೇ? ದಾಂಪತ್ಯದಂಥ ಸೂಕ್ಷ್ಮ ಸಂಬಂಧಗಳಲ್ಲಿ ಉಂಟಾಗುವ ವಂಚನೆಯನ್ನು ತಾಳಿಕೊಳ್ಳಬಲ್ಲ ಸೂಕ್ಷ್ಮತೆ ಅವರಲ್ಲಿ ಇದೆಯೇ? ನಿಮ್ಮ ಪಶ್ಚಾತ್ತಾಪವನ್ನು ಗುರುತಿಸುವಷ್ಟು ಅವರು ಪ್ರಬುದ್ಧರಾಗಿದ್ದಾರೆಯೇ? ಹಾಗಿದ್ದರೆ, ನೀವು ನಡೆದ ಘಟನೆಯನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳಬಹುದು. ನಿಮಗಾಗಿರುವ ಪಶ್ಚಾತ್ತಾಪ ಹಾಗೂ ಕ್ಷಮೆಯನ್ನೂ ಹೇಳಿ, ದಾಂಪತ್ಯದ ಕುರಿತ ಬದ್ಧತೆಯನ್ನು ಖಚಿತಪಡಿಸಬಹುದು. ಇದು ನಿಮ್ಮ ಹಾಗೂ ಗಂಡನ ಸಂಬಂಧದ ಪ್ರಬುದ್ಧತೆಯ ಮೇಲೆ ನಿಂತಿದೆ. ಆಗ ನೀವೂ ನಿಮ್ಮ ಪಾಪಪ್ರಜ್ಞೆಯಿಂದ ಮುಕ್ತರಾಗಬಹುದು.

ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ ಋಣಾತ್ಮಕ ಎಂದಾದರೆ ನೀವು ಅದನ್ನು ಹೇಳದೆ ಇರುವುದೇ ಲೇಸು. ಇದರಿಂದ ನಿಮ್ಮ ದಾಂಪತ್ಯ ಉಳಿಯುತ್ತದೆ. ಎರಡೂ ಸನ್ನಿವೇಶಗಳಲ್ಲೂ ನಿಮ್ಮ ಸುಖೀ ದಾಂಪತ್ಯವನ್ನು ಉಳಿಸಿಕೊಳ್ಳುವುದೇ ಮುಖ್ಯ ಗುರಿ ಆಗಿರಲಿ. ದಾಂಪತ್ಯ ಬಲಿಕೊಟ್ಟು ಸತ್ಯವನ್ನು ಬಹಿರಂಗಪಡಿಸುವ ಹಠ ಬೇಡ. ನೆಮ್ಮದಿ ಇರಲಿ.

#Feelfree: ಮೊದಲ ರಾತ್ರಿಯೇ ಕೊನೆಯ ರಾತ್ರಿ ಅಗಬಾರದು ಎಂದಿದ್ದರೆ...!

click me!