
ಇಲ್ಲಿ ಬರುವ ಪಾತ್ರ ಹಾಗೂ ಕತೆ ಕಾಲ್ಪನಿಕ, ಹೋಲಿಕೆ ಇದ್ದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ
ಹೆಸರು ರಶ್ಮಿ (ಬದಲಿಸಲಾಗಿದೆ). ಓದಿದ್ದು Ahmedabad IIM. ಚೇತನ್ ಭಗತ್ ಕಾದಂಬರಿ ಟು ಸ್ಟೇಟ್ಸ್ ಓದಿದ್ದು ತಲೆಗೇರಿತ್ತು. ಓದುವಾಗಲೇ ಎಲ್ಲರಿಗೂ ಇರುವಂತೆ ನನಗೂ ಒಬ್ಬನೊಂದಿಗೆ ಅಫೇರ್ ಇತ್ತು. ಬೇರೆ ಬೇರೆ ರಾಜ್ಯದವರು. ಒಂದೇ ಮನೆಯಲ್ಲಿ ಮನೆಯವರಿಗೆ ಗೊತ್ತಾಗೋ ಹಾಗೆಯೇ ಜೊತೆಗಿದ್ವಿ. ಪ್ರತಿಷ್ಠಿತ ಕಾಲೇಜಿನಲ್ಲಿ ಓದಿದ್ದು ಅಂದ ಮೇಲೆ ಕೆಲಸ ಸಿಗೋದು ಕಷ್ಟವೇನಲ್ಲ. ಕೈ ತುಂಬಾ ಸಂಬಳ ಬರೋ ಕೆಸಲವೇ ಇಬ್ಬರಿಗೂ ಬೇರೆ ಬೇರೆ ಕಂಪನಿಯಲ್ಲಿ ಸಿಕ್ಕಿತು. ಒಟ್ಟಿಗಿದ್ದವನೊಂದಿಗೇ ಮದುವೆಯೂ ನಿಶ್ಚಯವಾಗಿತ್ತು. ಎಲ್ಲವೂ ಬಿಂದಾಸ್ ಆಗಿಯೇ ಇತ್ತು. ಅದ್ಯಾವ ಘಳಿಗೆಯಲ್ಲಿ ಅವನು ಏನೋ ಬೇಡದ್ದು ಹೇಳಿ ಬಿಟ್ಟು. ನನ್ನ ಅಹಂಗೆ ಹರ್ಟ್ ಆಯಿತು. ಯಾಕೋ ಅವನ ಜೊತೆ ಬದುಕೋದು ಕಷ್ಟ ಅನಿಸಿಬಿಡ್ತು. ಕಳವಳಗೊಂಡೆ. ಖಿನ್ನತೆಗೊಳಗಾದೆ. ನನ್ನ ಆಫೀಸಿನಲ್ಲDಯೇ ಮ್ಯಾನೇಜರ್ ಆಗಿದ್ದವ ತುಸು ಕ್ಲೋಸ್ ಇದ್ದ. ಅವನ ಹತ್ತಿರ ನನ್ನ ನೋವನ್ನು ಹೇಳಿ ಕೊಳ್ಳುತ್ತಿದ್ದೆ. ಅವನೇ ಆತ್ಮೀಯನಾಗಿಬಿಟ್ಟ. ಸರಿ ಅವನನ್ನೇ ಮದುವೆಯಾಗೋದು ಅಂತ ನಿರ್ಧರಿಸಿಯೂ ಬಿಟ್ಟೆ. ಇನ್ನೇನು ಹಸೆಮಣೆ ಏರಬೇಕು ಅನ್ನುವಾಗ ಬಾಯ್‌ಫ್ರೆಂಡ್ ಮನೆಗೆ ನನ್ನಮ್ಮ, ಮತ್ತೆ ಫಿಯಾನ್ಸಿ ಜೊತೆ ಹೋಗಿದ್ದೆ. ಕಾರಣವಿಷ್ಟೇ, ನಮ್ಮಿಬ್ಬರ ಪ್ರೈವೇಸಿ ಫೋಟೋಸ್ ಅವನ ಫೋನ್‌ನಲ್ಲಿ ಸಾಕಷ್ಟಿದ್ದವು. ಎಲ್ಲವನ್ನೂ ಡಿಲೀಟ್ ಮಾಡಿ ಬಿಡಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳಬೇಕಿತ್ತು. ಅವನಿಗೂ ಬಹುಶಃ ನನ್ನ ಮೇಲಿನ್ನೂ ತುಸು ಪ್ರೀತಿ ಇತ್ತು. ನನ್ನ ಕಣ್ಣೆದುರೇ ಎಲ್ಲವನ್ನೂ ಡಿಲೀಟ್ ಮಾಡಿಬಿಟ್ಟ. ಮರಳುವಾಗ ಅವರಮ್ಮ ನನ್ನ ಗಂಡನಾಗುವವನಿಗೆ ಒಂದು ಮಾತು ಹೇಳಿದ್ರು, 'ಏನೋ ನನ್ನ ಮಗ ಸಣ್ಣದೊಂದು ತಪ್ಪು ಮಾತನಾಡಿದ ಎಂಬ ಕಾರಣಕ್ಕೆ ಇವಳು ಅವನನ್ನು ಬಿಡುತ್ತಿದ್ದಾಳೆ. ನಾವೆಲ್ಲರೂ ಅವಳನ್ನು ಒಪ್ಪಿ ಮದ್ವೆ ಮಾಡಲು ರೆಡಿ ಇದ್ವೆ. ನಾಳೆ ನೀವೂ ಅವಳಿಗೆ ಬೇಡವಾಗಬಹುದು, ಹುಷಾರು...' ಶೇಕ್ಸ್ ಪಿರಿಯರ್ ನ ಒಥೆಲೋ ರೀತಿ ನನ್ನ ಜೀವನದ ಕಥೆಯಲ್ಲಿಯೂ ತಿರುವು ಪಡೆಯಬಹುದು ಎಂಬ ಕಲ್ಪನೆ ನಂಗೆ ಆಗ ಇರಲಿಲ್ಲ. ಎಲ್ಲವೂ ಪೂರ್ವ ನಿರ್ಧರಿತ ಎನ್ನುವುದು ಇದಕ್ಕೆ ಅನ್ಸುತ್ತೆ.
ಆದರೆ, ಬದುಕಲ್ಲಿ ಎಲ್ಲವೂ ಸರಿ ದಾರಿಯಲ್ಲಿಯೇ ಸಾಗುತ್ತಿತ್ತು. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಅನುಸರಿಸಿಕೊಂಡು ಹೋಗ್ತಾ ಇದ್ವಿ. ಅಮ್ಮನಾಗುವ ಸಂದರ್ಭವೂ ಬಂತು. ಅದ್ಯಾವ ಜನ್ಮದ ಕರ್ಮವೋ ಅಥವಾ ಈ ಜನ್ಮದಲ್ಲಿಯೇ ನಾನು ಮಾಡಿದ ಕರ್ಮವೋ ಗೊತ್ತಿಲ್ಲ ಹುಟ್ಟಿದ ಮಗು ವಿಕಾರವಾಗಿತ್ತು. ಆರು ತಿಂಗಳಲ್ಲಿ ಹುಟ್ಟಿದ್ದ ಕಂದಮ್ಮ ಸತ್ತೇ ಹುಟ್ಟಿತ್ತು. ಗಂಡು ಮಗುವಿನ ಅಮ್ಮನಾಗೋ ಅದೃಷ್ಟ ಕೈ ತಪ್ಪಿತ್ತು. ಮನಸ್ಸಿಗೆ ನೋವಾಗಿತ್ತು. ಆದರಿನ್ನೂ ವಯಸ್ಸು ಚಿಕ್ಕದು. ಮತ್ತೆ ಮಗುವಾಗುತ್ತೆ ಬಿಡು, ಎಂಬ ಸಮಾಧಾನವಿತ್ತು. ಮೆಟರ್ನಿಟಿ ಲೀವ್‌ನಲ್ಲಿದ್ದೆ. ಗಂಡ ಆಫೀಸಿಗೆ ಹೋಗುತ್ತಿದ್ದ. ಆಗಲೇ, ಪಕ್ಕದ ಮನೆ ಹುಡುಗ ನನ್ನ ಬದುಕಲ್ಲಿ ಅದು ಹೇಗೆ ಎಂಟ್ರಿ ಆದ್ನೋ ಗೊತ್ತಿಲ್ಲ. ನನಗಿಂತ ಬಹಳ ಚಿಕ್ಕವನು. ಅವನ ಜೊತೆ ದೈಹಿಕ ಸಂಬಂಧ ಬೆಳೆಸಿಕೊಂಡೆ. ಗಂಡನಿಗೆ ವಂಚಿಸುತ್ತಿದ್ದೇನೆಂಬುದು ಗೊತ್ತಿತ್ತು. ಆದರೂ, ಅವನೊಟ್ಟಿಗಿನ ಸಂಗ ಖುಷಿ ಕೊಡುತ್ತಿತ್ತು.
ಕದ್ದು ಮುಚ್ಚಿ ಮಾಡುತ್ತಿದ್ದ ವ್ಯವಹಾರ ಗಂಡನಿಗೆ ಗೊತ್ತಾಗೋ ಚಾನ್ಸೇ ಇರಲಿಲ್ಲ. ಎಲ್ಲವೂ ಸರಿಯಾಗಿಯೇ ಇತ್ತು. ಗಂಡನಿಗೆ ಜರ್ಮನಿಯಲ್ಲಿ ಕೆಲಸ ಸಿಕ್ತು. ನಾನೂ ದೂರದ ದೇಶಕ್ಕೆ ಹಾರಿದೆ. ಹೊಸ ಲೈಫ್ ಆರಂಭಿಸಿದೆ.
ನಂಗೂ ಕೆಲಸ ಸಿಕ್ಕಿತು. ಗಂಡನ ಫ್ರೆಂಡ್ಸ್ ನನಗೂ ಕ್ಲೋಸ್ ಇದ್ದರು. ಹೀಗೆ ಒಮ್ಮೆ ಮಾತನಾಡುವಾಗ ನನ್ನ ಎಕ್ಸ್‌ಟ್ರಾ ಮ್ಯಾರಿಟಲ್ ಅಫೇರ್ ಬಗ್ಗೆ ಗಂಡನ ಆತ್ಮೀಯ ಫಾರಿನ್ ಫ್ರೆಂಡ್ ಜೊತೆ ಹೇಳಿಕೊಂಡು ಬಿಟ್ಟೆ. ಅವನು ಅಪ್ಸೆಟ್ ಆದ. ನೀನು ನಿನ್ನ ಗಂಡನಿಗೆ ಮೋಸ ಮಾಡ್ತಾ ಇದ್ದೀ. ನಾನವನಿಗೆ ಈ ವಿಷಯ ಹೇಳುತ್ತೇನೆ ಅಂದಿದ್ದಲ್ಲದೇ, ಹೇಳಿಯೂ ಬಿಟ್ಟ.
ಎಂಥ ಕೆಲಸ ಮಾಡಿದೆ? ಮಾಡಿದ ತಪ್ಪನ್ನು ಹೇಳೋ ಅಗತ್ಯವಿತ್ತಾ? ನನ್ನ ವಿಷ್ಯ ಗೊತ್ತಾಗಿಯೇ ಗಂಡ ಕೈ ಹಿಡಿದು ಬಾಳು ಕೊಟ್ಟಿದ್ದ. ಅಂಥವನು ನನ್ನೀ ವಂಚನೆಯನ್ನು ಒಪ್ಪುವುದಾದರೂ ಹೇಗೆ? ಬರೀ ಜಗಳ, ಕಂದಕ. ಮಾತಿಲ್ಲ, ಕಥೆಯಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಭಾರತಕ್ಕೆ ಮರಳುತ್ತಿದ್ದೇವೆ. ಆದರೆ, ಗಂಡನಿಗೆ ನನ್ನ ಜೊತೆ ಬದುಕೋದು ಕಷ್ಟವಾಗುತ್ತಿದೆ ಅಂತ ಅವನ ನಡೆಯಲ್ಲಿಯೇ ಗೊತ್ತಾಗುತ್ತಿದೆ. ಭಾರತಕ್ಕೆ ನನ್ನನ್ನೂ ಕರ್ಕೊಂಡು ಹೋಗ್ತಾನೋ, ಇಲ್ಲವೋ ಎಂಬ ಅಮುಮಾನ ನಂಗೀಗ. ಹೋದರೂ, ನನ್ನ ಜೊತೆ ಇರೋದು ಡೌಟೇ ಬಿಡಿ.
ತಪ್ಪು ಮಾಡಿದ್ದೇನೆ. ತಿದ್ದಿಕೊಳ್ಳಲು ಆಗೋದಿಲ್ಲ ಅಂತ ಗೊತ್ತು. ಆದರೂ, ಇನ್ಮುಂದೆಯಾದರೂ ಸರಿಯಾಗಿರುವೆ ಅಂತ ಮನಸ್ಸು ಹೇಳುತ್ತಿದೆ. ಗಂಡನಿಗೆ ವಂಚಿಸಿದ್ದು ಹೌದು. ನನ್ನ ಬಾಯ್‌ಫ್ರೆಂಡ್ ಅಮ್ಮ ಕೆಲವು ವರ್ಷಗಳ ಮುಂಚೆಯೇ ಊಹಿಸಿದಂತೆ ನಾನ್ಯಾಕೋ ನಡೆದು ಕೊಂಡನೋ ಗೊತ್ತಿಲ್ಲ. ಯಾವ ಬಾಯಲ್ಲಿ ನನ್ನನ್ನು ಕ್ಷಮಿಸೆಂದು ಕೇಳಲಿ? ಆದರೆ, ಮಗದೊಮ್ಮೆ ನನ್ನನ್ನು ಅವನು ಕ್ಷಮಿಸಲಿ ಎಂಬುವುದೇ ಮನದಾಸೆ. ಆಗುತ್ತಾ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.