
ಜೀವನದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಕೆಲವೊಮ್ಮೆ ತಿಣಕಾಡಬೇಕಾಗುತ್ತದೆ. ಯಾವುದು ಸರಿ, ಯಾವುದು ತಪ್ಪು ಎಂದು ಗೋಜಾಗುವುದು ಹಲವು ಸಂದರ್ಭಗಳಲ್ಲಿ ಬರುತ್ತದೆ. ಹಾಗೆ ಮಾಡಿದರೆ ಹೇಗೆ, ಹೀಗೆ ಮಾಡಿದರೆ ಹೇಗೆ, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದೆಲ್ಲಾ ಗೋಜಲುಗಳು ಅದೆಷ್ಟೋ ಸಂದರ್ಭದಲ್ಲಿ ಬರುತ್ತವೆ. ಅಂಥವರಿಗಾಗಿಯೇ ಹೊಸ ಅಧ್ಯಯನವೊಂದು ಸೂಪರ್ ಟಿಪ್ಸ್ ಕೊಟ್ಟಿದೆ. ಸಾಮಾನ್ಯವಾಗಿ ಸಂಸಾರದಲ್ಲಿ ಅಂತಿಮ ನಿರ್ಧಾರ ಪತಿಯದ್ದೇ ಅಥವಾ ಪುರುಷರದ್ದೇ ಆಗಿರುತ್ತದೆ. ಪತಿ-ಪತ್ನಿ ಸರಿ ಸಮ ಎಂದು ಹೇಳಿದರೂ, ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಏನೇ ಹೇಳಿದರೂ ಬಹುತೇಕ ಮನೆಗಳಲ್ಲಿ ಪುರುಷರ ನಿರ್ಧಾರವೇ ಅಂತಿಮವಾಗಿರುತ್ತದೆ, ಇಲ್ಲದೇ ಹೋದರೆ ಪತ್ನಿಯಾದವಳು ಕೂಡ ಅಂತಿಮ ನಿರ್ಧಾರ ಮಾಡುವ ಹಕ್ಕನ್ನು ಪುರುಷರಿಗೇ ಬಿಡುವುದು ಇದೆ. ಇದೇ ಕಾರಣಕ್ಕೆ, ಜೀವನದಲ್ಲಿ ಗೋಜಲು ಉಂಟಾದಾಗ ಪುರುಷರು ಏನು ಮಾಡಬೇಕು ಎನ್ನುವುದನ್ನು ಈ ಅಧ್ಯಯನ ಹೇಳಿದೆ.
ಇದು ಹಲವರಿಗೆ ಕಷ್ಟವಾದರೂ, ಮತ್ತೆ ಕೆಲವು ಮನೆಗಳಲ್ಲಿ ಇದಾಗಲೇ ನಡೆಯುತ್ತಿರುವ ವಿಷಯವೇ ಇದಾಗಿದ್ದರೂ, ಅಧಿಕೃತವಾಗಿ ಇದೀಗ ಅಧ್ಯಯನದಿಂದ ಇದು ಹೊರಬಂದಿದೆ. ಅದೇನೆಂದರೆ, ಪುರುಷರು ಯಾವುದೇ ದೃಢ ಹಾಗೂ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಪೂರ್ವದಲ್ಲಿ, ಮಹಿಳೆಯರ ಸಲಹೆಗಳನ್ನು ಪಡೆದುಕೊಳ್ಳಬೇಕು ಎನ್ನುವುದು! ಸಂಶೋಧಕರು, ಸಾಕಷ್ಟು ಆಯಾಮಗಳಲ್ಲಿ ಈ ಅಧ್ಯಯನ ನಡೆಸಿದ್ದಾರೆ. ಅದರಿಂದ ಕಂಡುಬಂದಿರುವ ಅಂಶ ಏನೆಂದರೆ, ಮಹಿಳೆಯಿಂದ ಸಲಹೆಗಳನ್ನು ಪಡೆಯುವುದರಿಂದ ಉತ್ತಮ ರೀತಿಯಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ ಹಾಗೂ ಕಡಿಮೆ ತಪ್ಪುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಕಂಡುಹಿಡಿದಿದ್ದಾರೆ.
ಇದಕ್ಕೆ ಕಾರಣವನ್ನೂ ನೀಡಲಾಗಿದೆ. ಮಹಿಳೆಯರ ವಿಷಯಕ್ಕೆ ಬಂದಾಗ, ಅವರು ವ್ಯಾಪಕ ಶ್ರೇಣಿಯ ಅಂಶಗಳನ್ನು ಪರಿಗಣಿಸುತ್ತಾರೆ, ಸಹಯೋಗಕ್ಕೆ ಆದ್ಯತೆ ನೀಡುತ್ತಾರೆ. ಪುರುಷರಿಗಿಂತ ಹೆಚ್ಚು ಸಮತೋಲಿತ ದೃಷ್ಟಿಕೋನಗಳನ್ನು ನೀಡುತ್ತಾರೆ, ಇದು ಹೆಚ್ಚಿನ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಕುತೂಹಲಕಾರಿಯಾಗಿ, ಈ ಅಧ್ಯಯನವು ಅದು ಮಹಿಳೆಯರನ್ನು ತಾರ್ಕಿಕಕ್ಕಿಂತ ಹೆಚ್ಚು ಭಾವನಾತ್ಮಕವಾಗಿ ನೋಡಿದೆ. ಪುರುಷರು ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಹೆಚ್ಚು ಸವಾಲಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಸವಾಲು ಏನೇ ಇದ್ದರೂ, ಮಹಿಳೆಯರ ಸಲಹೆಯನ್ನು ತೆಗೆದುಕೊಳ್ಳುವುದರಿಂದ ದೀರ್ಘಾವಧಿಯ ಯಶಸ್ಸಿಗೆ ಮಾತ್ರವಲ್ಲ, ಮಾನಸಿಕ ಯೋಗಕ್ಷೇಮ ಮತ್ತು ಸಂತೋಷಕ್ಕೂ ಕಾರಣವಾಗಬಹುದು ಎಂದು ಅಧ್ಯಯನ ಒತ್ತಿ ಹೇಳಿದೆ.
ಕಳೆದ ಕೆಲವು ವರ್ಷಗಳಲ್ಲಿ ಮಹಿಳೆಯರು ತಾವಾಗಿಯೇ ಹೊರಬರಲು ಮತ್ತು ಕೆಲಸದ ಸ್ಥಳದಲ್ಲಿ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸಿಕೊಳ್ಳಲು ಪ್ರಾರಂಭಿಸಿರುವುದರಿಂದ ಬಹಳಷ್ಟು ಬದಲಾಗಿದ್ದರೂ, ಸಮಾಜದಲ್ಲಿ ಅವರ ಪಾತ್ರದ ವಿಷಯಕ್ಕೆ ಬಂದಾಗ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಬಹುದು. ಸಾಮಾನ್ಯವಾಗಿ ಪುರುಷ ಎಂದರೆ ಸಂಸಾರ ಸಾಗಿಸುವವನು, ಮನೆಯ ಆಧಾರಸ್ತಂಭ, ಹೊರಗೆ ದುಡಿದು ಬರುವವನು ಎನ್ನುವ ಕಲ್ಪನೆ ಇಂದಿಗೂ ಇರುವ ಕಾರಣ, ಹಲವರು ತಮ್ಮ ಜೀವನದಲ್ಲಿ ಮಹಿಳೆಯರ ಅಭಿಪ್ರಾಯವನ್ನು ನಿರಾಕರಿಸುತ್ತಾರೆ. ಅಂಥವರು ಇಂದಿನಿಂದಲೇ ಈ ಸಲಹೆಯನ್ನು ಪಾಲಿಸಿದರೆ ಯಶಸ್ಸು ಕಟ್ಟಿಟ್ಟದ್ದೇ ಎಂದಿದೆ ಅಧ್ಯಯನ. ಏನಾದರೂ ಸಲಹೆ ಕೊಡಲು ಬಂದರೆ ಮಹಿಳೆ ಮಾತನಾಡುವಾಗ ಎಚ್ಚರಿಕೆಯಿಂದ ಆಲಿಸಿ ಮತ್ತು ಅದನ್ನು ಅನುಸರಿಸಿ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.