ಇಂದಿನ ದಿನಗಳಲ್ಲಿ ಶುದ್ಧ ಪ್ರೀತಿಯನ್ನು ಹುಡುಕಬೇಕಾಗಿದೆ. ಕಾಳಜಿ ತೋರುವ ಪತಿ ಬೇಕೆಂದು ಹುಡುಗಿಯರು ಬಯಸ್ತಾರೆ. ಆದ್ರೆ ಎಲ್ಲರಿಗೂ ಅಂಥ ಪತಿ ಸಿಗೋದು ಕಷ್ಟ. ಆ ವಿಷ್ಯದಲ್ಲಿ ಈ ಅಜ್ಜಿ ಅದೃಷ್ಟ ಮಾಡಿದ್ದಾಳೆ.
ಅಲ್ಪಾವಧಿ ರಿಲೇಶನ್ಶಿಪ್ ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಅವಶ್ಯಕತೆಗೆ ತಕ್ಕಂತೆ ಸಂಬಂಧ ಬೆಳೆಸಿ ದೂರವಾಗುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಯುವಜನತೆ ಹೊಸ ಹೊಸ ಹೆಸರಿನ ರಿಲೇಶನ್ಶಿಪ್ ಕಂಡುಕೊಳ್ತಿದ್ದಾರೆ. ಈ ಸಂಬಂಧಗಳು ಕೆಲವೇ ದಿನಗಳಲ್ಲಿ ಅಂತ್ಯಕಾಣುತ್ತವೆ. ಕೆಲವಂತೂ ಬರೀ ದೈಹಿಕ ಬಯಕೆ ತೀರಿಸುವಂತಹ ಸಂಬಂಧಗಳಾಗಿವೆ. ಈಗೀಗ ಕೆಲಸದ ಸಮಯದಲ್ಲಿ ಸಂಗಾತಿಗೆ ನೀಡಲು ಸೂಕ್ತ ಸಮಯ ಕೂಡ ಇರೋದಿಲ್ಲ. ಹಾಗೇ ಐಷಾರಾಮಿ ಜೀವನ ಬಯಸುವ ಜನರು, ಅದ್ರಲ್ಲಿ ಸ್ವಲ್ಪ ಏರುಪೇರಾದ್ರೂ ಸಂಬಂಧ ಮುರಿದುಕೊಂಡು ಹೋಗ್ತಾರೆ. ದೀರ್ಘ ರಿಲೇಶನ್ಶಿಪ್ ನಲ್ಲಿರುವ ಜೋಡಿ ಈಗ ಸಿಗೋದು ಬಹಳ ಕಷ್ಟ.
ಸಂಬಂಧ (Relationship) ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ. ಸಂಗಾತಿಯಿಂದ ಕೇವಲ ಸುಖವನ್ನು ಮಾತ್ರ ಬಯಸದ ಅನೇಕ ಜೋಡಿ ಈಗ್ಲೂ ನಮ್ಮೊಂದಿಗಿದ್ದಾರೆ. ವೃದ್ಧ ದಂಪತಿ ಮಧ್ಯೆ ಒಂದು ವಿಶೇಷ ಬಾಂಡಿಂಗ್ (Bonding) ಇರುತ್ತದೆ. ಪತಿಯ ಕಷ್ಟದಲ್ಲಿ ಪತ್ನಿ ಭಾಗಿಯಾದ್ರೆ, ಪತ್ನಿಗೆ ರಕ್ಷಣೆ ನೀಡುವ ಹೊಣೆ ಸದಾ ನನ್ನದು ಎಂದು ಭಾವಿಸ್ತಾರೆ ಪುರುಷರು. ಪತಿ – ಪತ್ನಿ ಕಷ್ಟಸುಖದಲ್ಲಿ ಭಾಗಿಯಾಗಿ, ಸದಾ ಅವರ ಜೊತೆಗಿರುವ ಅನೇಕ ವೃದ್ಧ ದಂಪತಿಯನ್ನು ನಾವು ನೋಡ್ಬಹುದು. ಸಾಮಾಜಿಕ ಜಾಲತಾಣ (Social Network) ದಲ್ಲಿ ಇತ್ತೀಚಿನ ದಿನಗಳಲ್ಲಿ ವೃದ್ಧ ದಂಪತಿಯ ಪ್ರೀತಿಯ ಕಥೆಗಳು ವೈರಲ್ ಆಗ್ತಿರುತ್ತವೆ. ಕೆಲ ದಿನಗಳ ಹಿಂದಷ್ಟೆ, ರೆಸ್ಟೋರೆಂಟ್ ಒಂದರಲ್ಲಿ ಬಿಯರ್ ಸೇವನೆ ಮಾಡ್ತಿದ್ದ ವೃದ್ಧ ದಂಪತಿ ವಿಡಿಯೋ ವೈರಲ್ ಆಗಿತ್ತು. ಸ್ಟೇಜ್ ಮೇಲೆ ಡಾನ್ಸ್ ಮಾಡ್ತಿರುವ, ಮೊಣಕಾಲೂರಿ ಸಂಗಾತಿಗೆ ಹೂ ನೀಡಿ, ಪ್ರಮೋಸ್ ಮಾಡಿದ ಹೀಗೆ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಈಗ ವೈರಲ್ ಆದ ವಿಡಿಯೋದಲ್ಲಿ ಏನಿದೆ? : ಜೆನ್ನಿಫರ್ ರೆಹಮಾನ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಅವನು ಅವಳನ್ನು ಸುರಕ್ಷಿತ ಬದಿಗೆ ಎಳೆದ ರೀತಿ ಎಂದು ಶೀರ್ಷಿಕೆ ಹಾಕಲಾಗಿದೆ. ವಿಡಿಯೋ ಮಧ್ಯದಲ್ಲಿ ನಾನಿಂದು ಸೆರೆ ಹಿಡಿದ ಅತ್ಯುತ್ತಮ ವಿಡಿಯೋ ಎಂದು ಬರೆದಿದ್ದಾರೆ. ವೈರಲ್ ವಿಡಿಯೋದಲ್ಲಿ ದಂಪತಿ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದಾರೆ. ಪತ್ನಿ ರಸ್ತೆ ಬದಿಯಲ್ಲಿ ನಡೆಯುತ್ತಿದ್ದರೆ ಪತಿ ಪಕ್ಕದಲ್ಲಿ ನಡೆಯುತ್ತಿದ್ದಾನೆ. ಪತ್ನಿಯ ಕೈ ಹಿಡಿದು ನಡೆಯುತ್ತಿದ್ದ ಪತಿ, ನಂತ್ರ ಆಕೆ ಹೆಗಲ ಮೇಲೆ ಕೈ ಹಾಕಿ ಆಕೆಯನ್ನು ನಿಧಾನವಾಗಿ ರಸ್ತೆಯ ಸುರಕ್ಷಿತ ಬದಿಗೆ ಕಳುಹಿಸಿ ತಾನು ರಸ್ತೆ ಪಕ್ಕದಲ್ಲಿ ನಡೆಯುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋಗೆ ಸಿಕ್ಕಿದೆ ಸಿಕ್ಕಾಪಟ್ಟೆ ಕಮೆಂಟ್ : ಈ ವಿಡಿಯೋವನ್ನು 6.9 ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಒಂದು ಮಿಲಿಯನ್‌ಗಿಂತಲೂ ಹೆಚ್ಚು ಲೈಕ್ಸ್ ಬಂದಿದೆ. ಅನೇಕರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಈ ಪ್ರೀತಿಯ ಜೋಡಿಯನ್ನು ಕೆಲವರು ಆದರ್ಶ ವ್ಯಕ್ತಿಗಳು ಎನ್ನುತ್ತಿದ್ದಾರೆ. ಕ್ಲಿಪ್ ಎಷ್ಟು ಸುಂದರವಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಕೆಲವರು ಈ ರೀತಿಯ ಸರಳ ಪ್ರೀತಿ ನೋಡ್ತಿರೋದು ಖುಷಿ ನೀಡಿದೆ ಎಂದು ಕಮೆಂಟ್ ಮಾಡಿದ್ದಾರೆ. ನಾನು ಯಾವಾಗಲೂ ಇವರನ್ನು ಭೇಟಿಯಾಗುತ್ತೇನೆ. ಅವರು ನಮ್ಮ ಕಚೇರಿಯ ಬಳಿ ವಾಸಿಸುತ್ತಿದ್ದಾರೆ. ಅಂಕಲ್ ತುಂಬಾ ಕಾಳಜಿ ವಹಿಸುತ್ತಾರೆ. ಅವರು, ಆಂಟಿಯನ್ನು ಯಾವಾಗಲೂ ಸಂಜೆಯ ವಾಕಿಂಗ್‌ಗೆ ಕರೆದೊಯ್ಯುತ್ತಾರೆ. ಶಾಪಿಂಗ್ ಗೆ ಹೋಗ್ತಾರೆ. ಅವರು ಆಂಟಿಗೆ ಹಣ್ಣಿನ ಚಾಕಲೇಟ್‌ಗಳನ್ನು ಖರೀದಿಸುತ್ತಾರೆ ಎಂದು ಇನ್ನೊಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದಾರೆ. ಅಜ್ಜನಿಗೆ ರಸ್ತೆಯಲ್ಲಿ ಹೇಗೆ ಹೋಗ್ಬೇಕು ಎನ್ನುವ ನಿಯಮ ತಿಳಿದಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.