
ಕಿಂಗ್‌ಸ್ಟನ್ (ಆ.25): ವಿಶ್ವ ಅಥ್ಲೆಟಿಕ್ಸ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಓಟಗಾರ, ಜಮೈಕಾದ ಸ್ಪ್ರಿಂಟ್ ದಂತಕಥೆ ಉಸೇನ್ ಬೋಲ್ಟ್ (Usain Bolt) ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ 40ನೇ ಜನ್ಮದಿನದ ಸಂಭ್ರಮಾಚರಣೆಯ ವೇಳೆ, ತಮ್ಮ ದೀರ್ಘಕಾಲದ ಗೆಳತಿ ಹಾಗೂ ಮೂರು ಮಕ್ಕಳ ತಾಯಿ ಕಾಸಿ ಬೆನೆಟ್‌ಗೆ (Kasi Bennett) ಬೋಲ್ಟ್ ಎದುರು ಮದುವೆ ಪ್ರಸ್ತಾಪ ಇಟ್ಟಿದ್ದಾರೆ. ಜಮೈಕಾದ ಕಿಂಗ್‌ಸ್ಟನ್‌ನಲ್ಲಿರುವ 'ಒನ್ ಬೆಲ್‌ಮಾಂಟ್' (One Belmont) ರೆಸಾರ್ಟ್‌ನಲ್ಲಿ ಈ ಎಂಗೇಜ್‌ಮೆಂಟ್ ಸಂಭ್ರಮ ನಡೆದಿದ್ದು, ಅತ್ಯಂತ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದರು. ಈ ವಿಶೇಷ ಕ್ಷಣಕ್ಕಾಗಿ ಉಸೇನ್ ಬೋಲ್ಟ್, ಕಾಸಿ ಬೆನೆಟ್ ಅವರಿಗೆ ಬೃಹತ್ 5 ಕ್ಯಾರೆಟ್ ವಜ್ರದ ಉಂಗುರವನ್ನು ತೊಡಿಸಿದ್ದಾರೆ.
ತಮ್ಮ ಹುಟ್ಟುಹಬ್ಬದ ಸಂಭ್ರಮದ ವೇಳೆಯೇ ಕಾಸಿಗೆ ಅಚ್ಚರಿಯ ರೀತಿಯಲ್ಲಿ ಪ್ರಪೋಸ್ ಮಾಡಿದ ಬೋಲ್ಟ್, 'ನನ್ನನ್ನು ಈ ಪ್ರಪಂಚದಲ್ಲೇ ಅತ್ಯಂತ ಸಂತೋಷದಾಯಕ ಮನುಷ್ಯನನ್ನಾಗಿ ಮಾಡುತ್ತೀಯಾ? ನನ್ನನ್ನು ಮದುವೆಯಾಗುತ್ತೀಯಾ?' ಎಂದು ಪ್ರೀತಿಯಿಂದ ಕೇಳಿದ್ದಾರೆ.
ಈ ಪ್ರಪೋಸಲ್‌ಗೂ ಮುನ್ನ ಕಾಸಿ ಬೆನೆಟ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಉಸೇನ್ ಬೋಲ್ಟ್‌ಗೆ ಜನ್ಮದಿನದ ಶುಭಾಶಯ ಕೋರಿದ್ದರು. ಕುಟುಂಬ ಸಮೇತರಾಗಿರುವ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದ ಅವರು, 'ನನ್ನ ಪ್ರೀತಿಯ ಸಂಗಾತಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನ ಪ್ರೀತಿ, ನನ್ನ ಮನೆ ಹಾಗೂ ನನ್ನ ಸರ್ವಸ್ವವೂ ನೀವೇ' ಎಂದು ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ಆಪ್ತರ ಸಮ್ಮುಖದಲ್ಲಿ ಬೋಲ್ಟ್ ಮದುವೆಯ ಪ್ರಸ್ತಾಪ ಇಟ್ಟು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಜಮೈಕಾ ಮೂಲದ ಕಾಸಿ ಬೆನೆಟ್ ಖ್ಯಾತ ಫ್ಯಾಷನ್ ಇನ್ಫ್ಲುಯೆನ್ಸರ್ ಹಾಗೂ ಮಾಡೆಲ್ ಆಗಿದ್ದಾರೆ. ಇದರ ಜೊತೆಗೆ 'ಎಲಿವೇಟ್ ಮಾರ್ಕೆಟಿಂಗ್ ಹೌಸ್' (Elevate Marketing House) ಎಂಬ ಸಂಸ್ಥೆಯ ನಿರ್ದೇಶಕಿಯಾಗಿಯೂ ಉದ್ಯಮ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ವಿಶಿಷ್ಟ ಫ್ಯಾಷನ್ ಶೈಲಿ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಜಮೈಕಾದಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.
ಉಸೇನ್ ಬೋಲ್ಟ್ ಮತ್ತು ಕಾಸಿ ಬೆನೆಟ್ 2013 ರಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹಲವು ವರ್ಷಗಳ ಕಾಲ ತಮ್ಮ ಪ್ರೇಮ ವಿಷಯವನ್ನು ರಹಸ್ಯವಾಗಿಟ್ಟಿದ್ದ ಈ ಜೋಡಿ, 2016ರ ರಿಯೋ ಒಲಿಂಪಿಕ್ಸ್ ಮುಗಿದ ನಂತರ ಅಧಿಕೃತವಾಗಿ ಜಗತ್ತಿಗೆ ಸಾರಿದ್ದರು. ಸುದೀರ್ಘ ಅವಧಿಯ ಈ ಸುಂದರ ಬಂಧಕ್ಕೆ ಸಾಕ್ಷಿಯಾಗಿ ಈ ದಂಪತಿಗೆ ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್ (Olympia Lightning Bolt), ಥಂಡರ್ ಬೋಲ್ಟ್ (Thunder Bolt) ಮತ್ತು ಸೇಂಟ್ ಲಿಯೋ ಬೋಲ್ಟ್ (Saint Leo Bolt) ಎಂಬ ಮೂವರು ಮಕ್ಕಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.