
ನವದೆಹಲಿ (ಜೂ.09) ಕಾಲ ಬದಲಾಗಿದೆ, ಪರಿಸ್ಥಿತಿಗಳು ಬದಲಾಗಿದೆ. ಇದೀಗ ವಿವಾಹ ಪೂರ್ವ ಲೈಂಗಿಕ ಸಂಬಂಧ, ಲೀವ್ ಇನ್ ರಿಲೇಶನ್‌ಶಿಪ್, ಪ್ರೀತಿ ಪ್ರೇಮ ಹೆಸರಲ್ಲಿ ದೈಹಿಕ ಸಂಪರ್ಕ ಹೊಸದೇನಲ್ಲ. ಬದಲಾದ ಪರಿಸ್ಥಿತಿಯಲ್ಲಿ ಇದೀಗ ಮದುವೆಗೂ ಮೊದಲೇ ನಡೆಸುವ ಲೈಂಗಿಕ ಸಂಪರ್ಕ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮದುವೆಗೂ ಮುಂಚಿನ ಲೈಂಗಿಕ ಸಂಬಂಧದಿಂದ ಅವರ ಚಾರಿತ್ರ್ಯ ಕೆಟ್ಟಾಗಿದೆ ಎಂದು ಬಿಂಬಿಸುವುದು, ಹಣೆಪಟ್ಟಿ ನೀಡುವುದು ಸರಿಯಲ್ಲ. ಇದೇ ಕಾರಣದಿಂದ ಉದ್ಯೋಗ ನಿರಾಕರಿಸುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿವಾಹಕ್ಕೂ ಮೊದಲಿನ ಲೈಂಗಿಕ ಸಂಬಂಧ ಈಗ ಸಾಮಾನ್ಯವಾಗಿದೆ. ಪರಸ್ಪರ ಒಪ್ಪಿಗೆಯಿಂದ ನಡೆಸಿದ ಸಂಬಂಧ ಕಾರಣದಿಂದ ವ್ಯಕ್ತಿಯ ನಡತೆಗೆ ಕೆಟ್ಟ ಸರ್ಟಿಫಿಕೇಟ್ ನೀಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್‌ನ ಮನೋಜ್ ಮಿಶ್ರಾ ಮತ್ತು ಮನ್‌ಮೋಹನ್ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ತೆಲಂಗಾಣದ ಯುವಕನೊಬ್ಬನ ಪ್ರಕರಣದ ಕುರಿತು ನೀಡಲಾಗಿದೆ. ತೆಲಂಗಾಣದ ಪೊಲೀಸ್ ನೇಮಕಾತಿಯಲ್ಲಿ ಪಾಸ್ ಆದ ಯುವಕನೊಬ್ಬನಿಗೆ ಸರ್ಕಾರ ನೇಮಕಾತಿ ತಡೆ ಹಿಡಿದಿತ್ತು. ಕಾರಣ ಈ ಯುವಕ ಮದುವೆಗೂ ಮೊದಲು ಯುವತಿಯೊಬ್ಬಳ ಜೊತೆ ದೈಹಿಕ ಸಂಪರ್ಕ ಹೊಂದಿದ್ದ, ಬಳಿಕ ಮದುವೆಯಾಗಿಲ್ಲ ಅನ್ನೋ ಕಾರಣಕ್ಕೆ ಯುವತಿ ದೂರು ನೀಡಿದ್ದಳು. ಯುವಕನ ವಿರುದ್ದ ಗಂಭೀರ ಆರೋಪ ಇದ್ದ ಕಾರಣ ತೆಲಂಗಾಣ ಸರ್ಕಾರ ಯುವಕನ ಪೊಲೀಸ್ ನೇಮಕಾತಿ ರದ್ದುಗೊಳಿಸಿತ್ತು.
ಪೊಲೀಸ್ ಇಲಾಖೆ ಅತ್ಯಂತ ಶಿಸ್ತಿನ ಇಲಾಖೆಯಾಗಿದೆ. ನೈತಿಕತೆ, ಚಾರಿತ್ರ್ಯ ಮೇಲೆ ಅನುಮಾನವಿದ್ದರೆ, ದೂರು ದಾಖಲಾಗಿದ್ದರೆ, ಸಾರ್ವಜನಿಕರಿಗೆ ನ್ಯಾಯ ಕೊಡಿಸುವಲ್ಲಿ ಸಮಸ್ಯೆಯಾಗಬಹುದು. ನ್ಯಾಯಕ್ಕಾಗಿ ಪೊಲೀಸರ ಬಳಿ ಬರುವ ಸಾರ್ವಜನಿಕರಿಗೆ ಪೊಲೀಸರ ಮೇಲಿನ ನಂಬಿಕೆ , ಭರವಸೆ ಕಡಿಮೆಯಾಗಬಹುದು. ಹೀಗಾಗಿ ನೇಮಕಾತಿ ಸಾಧ್ಯವಿಲ್ಲ ಎಂದು ತೆಲಂಗಾಣ ಸರ್ಕಾರ ಹೇಳಿತ್ತು. ತೆಲಂಗಾಣ ಸರ್ಕಾರದ ವಿರುದ್ದ ಯುವಕ ಹೈಕೋರ್ಟ್ ಮೆಟ್ಟಿಲೇರಿದ್ದ. ಹೈಕೋರ್ಟ್ ಕೂಡ ತೆಲಂಗಾಣ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಯುವಕ ಇದೀಗ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದಾನೆ. ವಿವಾಹಕ್ಕೂ ಮುಂಚಿನ ದೈಹಿಕ ಸಂಪರ್ಕ ಸಾಮಾನ್ಯವಾಗಿದೆ. ಪರಸ್ಪರ ಒಪ್ಪಿಗೆಯಿಂದ ನಡೆಸುವ ದೈಹಿಕ ಸಂಪರ್ಕ ತಡೆಯಲು ಭಾರತದಲ್ಲಿ ಕಾನೂನಿಲ್ಲ. ನ್ಯಾಯಾಲದಲ್ಲಿ ರಾಜಿ ಪಂಚಾಯಿತಿ ಮಾಡಲಾಗಿದೆ. ನ್ಯಾಯಲಯದಲ್ಲಿ ಯುವಕನ ವಿರುದ್ದ ಯುವತಿ ಸಾಕ್ಷಿ ನುಡಿಯಲು ನಿರಾಕರಿಸಿದ್ದಾಳೆ. ಹೀಗಿರುವಾಗ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಸ್ಥಿತಿಗೆ ತಕ್ಕಂತೆ ಯೋಚಿಸಬೇಕು. ಆತನ ಚಾರಿತ್ರ್ಯವನ್ನು ದೈಹಿಕ ಸಂಪರ್ಕ ಕಾರಣದಿಂದ ಅಳೆಯಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.