
ಕೊಪ್ಪಳದ ದಂಪತಿಯ ವಿಚ್ಛೇದನ ಪ್ರಕರಣದಲ್ಲಿ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಅವರನ್ನು ಭೇಟಿಯಾಗಿ ಬರುವಂತೆ ಸೂಚಿಸಿದ್ದ ವೈರಲ್ ನ್ಯಾಯಾಲಯದ ವಿಡಿಯೋ ಹಾಗೂ ಅದರ ಕುರಿತ ಟೀಕೆಗಳಿಗೆ ನಿವೃತ್ತ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ತಾರ್ಕಿಕ ಉತ್ತರ ನೀಡಿದ್ದಾರೆ. ‘ಸುವರ್ಣ ನ್ಯೂಸ್ ಅವರ್ ಸ್ಪೆಷಲ್’ ಕಾರ್ಯಕ್ರಮದಲ್ಲಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ವಿಡಿಯೋಗಳನ್ನು ಕತ್ತರಿಸಿ ಹರಿಬಿಡುವ ಇಂದಿನ ಕಾಲದಲ್ಲಿ ತಮ್ಮ ನಿರ್ಧಾರದ ಹಿಂದಿನ ಕಾನೂನುಬದ್ಧ ಮತ್ತು ಮಾನವೀಯ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.
'ನ್ಯಾಯಾಧೀಶರಾಗಿ ತೀರ್ಪು ಕೊಡುವ ಬದಲು ಮಠಾಧೀಶರ ಬಳಿ ಕಳುಹಿಸಿದ್ದು ಎಷ್ಟು ಸರಿ?' ಎಂಬ ಟೀಕೆಗೆ ಉತ್ತರಿಸಿದ ದೀಕ್ಷಿತ್, "ಉದ್ದೇಶಪೂರ್ವಕವಾಗಿ ಟೀಕಿಸುವವರ ಜೊತೆ ಯುದ್ಧ ಸಾಧ್ಯವಿಲ್ಲ" ಎಂದು ದ.ರಾ. ಬೇಂದ್ರೆಯವರು ಚಂಪಾ ಅವರಿಗೆ ಹೇಳಿದ್ದ ‘ಕೋಣ ಮತ್ತು ಜಾಣನ ದಾರಿ’ ಉದಾಹರಣೆಯನ್ನು ಸ್ಮರಿಸಿದರು. ಪ್ರಾಮಾಣಿಕವಾಗಿ ಪ್ರಶ್ನಿಸುವವರಿಗೆ ಪ್ರತಿಕ್ರಿಯಿಸಿದ ಅವರು, “ನೀವು ಸಿವಿಲ್ ಪ್ರಕ್ರಿಯಾ ಸಂಹಿತೆಯ (CPC) ಸೆಕ್ಷನ್ 89 ಅನ್ನು ಓದಿದ್ದೀರಾ? ಪರ್ಯಾಯ ವ್ಯಾಜ್ಯ ಪರಿಹಾರ (ADR) ಅಡಿಯಲ್ಲಿ ಸಂಸ್ಥೆಗಳ ಮೂಲಕ ಸಂಧಾನಕ್ಕೆ ಕಾನೂನಿನಲ್ಲೇ ಅವಕಾಶವಿದೆ. ಕಾನೂನು ಅಧ್ಯಯನವಿಲ್ಲದೆ ಅಸಂವಿಧಾನಿಕ ಎಂದು ಟೀಕಿಸುವವರು ತಿಳಿಗೇಡಿಗಳು” ಎಂದರು. ಸ್ವಾಮಿ ವಿವೇಕಾನಂದರು ಹೇಳಿದಂತೆ ‘ಧರ್ಮ ಭಾರತದ ನಾಡಿ ಮಿಡಿತ’. ಆಸ್ಪತ್ರೆಯಲ್ಲಿ ಗುಣವಾಗದ ಕಾಯಿಲೆಗೆ ಹಳ್ಳಿ ಮದ್ದು ಪ್ರಯತ್ನಿಸಿ ಎಂದು ವೈದ್ಯರು ಸೂಚಿಸಿದರೆ ಅದು ತಪ್ಪಾಗುತ್ತದೆಯೇ ಎಂದು ಪ್ರಶ್ನಿಸಿದರು.
"ಸುಮಾರು 10–12 ವರ್ಷಗಳಿಂದ ಬಾಕಿ ಇದ್ದ ಈ ವಿಚ್ಛೇದನ ಪ್ರಕರಣವು 24ಕ್ಕೂ ಹೆಚ್ಚು ಬಾರಿ ವಿಚಾರಣೆಗೆ ಬಂದಿದ್ದರೂ ಇತ್ಯರ್ಥವಾಗಿರಲಿಲ್ಲ. ನಾನು ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಚರ್ಚಿಸಿದಾಗ, ದಂಪತಿಯಲ್ಲಿ ಒಬ್ಬರು ವಿಭೂತಿ ಹಚ್ಚಿಕೊಂಡಿರುವುದನ್ನು ಗಮನಿಸಿದೆವು. ಬಳಿಕ ದಂಪತಿಯ ಒಪ್ಪಿಗೆ ಕೇಳಿ, ನಿತ್ಯ ಸಾವಿರಾರು ವ್ಯಾಜ್ಯಗಳನ್ನು ಪ್ರಸಾದ-ಪ್ರಾರ್ಥನೆಯೊಂದಿಗೆ ಎರಡೇ ನಿಮಿಷದಲ್ಲಿ ಇತ್ಯರ್ಥಪಡಿಸುವ ತರಳಬಾಳು ಗುರುಗಳ ಬಳಿ ಹೋಗಲು ಸೂಚಿಸಿದೆವು. ಅದು ದೂರವಾಗುತ್ತದೆ ಎಂದಾಗ, ದಸರಾ ಉದ್ಘಾಟಿಸಿದ್ದ ಹಾಗೂ ನಿತ್ಯ 5,000–6,000 ಮಕ್ಕಳು ಮತ್ತು ಪೋಷಕರಿಗೆ ಎರಡು ಹೊತ್ತು ಅನ್ನ ನೀಡುವ ನಡೆದಾಡುವ ದೇವರಂತಿರುವ ಗವಿಸಿದ್ದೇಶ್ವರ ಸ್ವಾಮೀಜಿ ಬಳಿ ಕಳುಹಿಸಿದೆವು" ಎಂದು ನೆನಪಿಸಿಕೊಂಡರು. 24 ಬಾರಿ ಕೋರ್ಟ್ನಿಂದ ಬಗೆಹರಿಯದ ಕೇಸ್ ಅನ್ನು ಸ್ವಾಮೀಜಿ ಒಂದೇ ಭೇಟಿಯಲ್ಲಿ ಸರಿಪಡಿಸಿದರು. ನಂತರ ದಂಪತಿ ತಮಗೆ ಸಿಕ್ಕು 'ಸರ್, ನಾವು ಈಗ ಜೊತೆಗಿದ್ದೇವೆ' ಎಂದು ಸಂತಸ ಹಂಚಿಕೊಂಡಾಗ, 'ಇನ್ನೊಂದು ಮಗು ಮಾಡಿಕೊಳ್ಳಿ' ಎಂದು ಹಾಸ್ಯವಾಗಿ ಹಾರೈಸಿದ್ದಾಗಿ ದೀಕ್ಷಿತ್ ತಿಳಿಸಿದರು.
ಬರ್ಟ್ರಾಂಡ್ ರಸೆಲ್ (ಮ್ಯಾರೇಜ್ ಅಂಡ್ ಮೊರಲ್ಸ್), ಎರಿಕ್ ಫ್ರಾಮ್ (ಪ್ರೀತಿಸುವುದೆಂದರೆ), ವಾತ್ಸಾಯನ ಮತ್ತು ಜಯದೇವರ ಕೃತಿಗಳನ್ನು ಉಲ್ಲೇಖಿಸಿದ ಅವರು, ವಿವಾಹದಲ್ಲಿ ಪ್ರೇಮ-ಕಾಮ ಹಾಗೂ ದೈಹಿಕ-ಮಾನಸಿಕ ವಯೋಮಾನದ ಮಹತ್ವವನ್ನು ವಿವರಿಸಿದರು. “ವಿಚ್ಛೇದನ ಪ್ರಕರಣಗಳನ್ನು 10–15 ವರ್ಷ ಎಳೆದಾಡಿದರೆ ದಂಪತಿಯ ಯೌವನ ಹಾಳಾಗುತ್ತದೆ. ಸಾಧ್ಯವಾದರೆ ಅವರನ್ನು ಒಗ್ಗೂಡಿಸಬೇಕು; ಒಟ್ಟಿಗೆ ಬಾಳಲು ಸಾಧ್ಯವೇ ಇಲ್ಲದಿದ್ದರೆ ‘ಬೆಕ್ಕು-ನಾಯಿ’ ಜಗಳದ ಬದಲು ಬೇಗ ವಿಚ್ಛೇದನ (ಮೋಕ್ಷ) ನೀಡಿ ಹೊಸ ಜೀವನ ಕಟ್ಟಿಕೊಳ್ಳಲು ದಾರಿ ಮಾಡಿಕೊಡಬೇಕು” ಎಂದು ನ್ಯಾಯಮೂರ್ತಿ ದೀಕ್ಷಿತ್ ಅಭಿಪ್ರಾಯಪಟ್ಟರು.
ವಿಡಿಯೋ ನೋಡಲಿ ಇಲ್ಲಿರುವ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.