Republic Day : ಪಾಲಕರೇ…ಮಕ್ಕಳಲ್ಲಿ ದೇಶ ಪ್ರೇಮ ಹೆಚ್ಚಿಸಿ, ರಾಷ್ಟ್ರೀಯ ಹಬ್ಬದ ಮಹತ್ವ ತಿಳಿಸಿ

By Suvarna NewsFirst Published Jan 19, 2023, 4:58 PM IST
Highlights

ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಅಂದ್ರೆ ಏನು ಅಂತ ಮಕ್ಕಳನ್ನು ಕೇಳಿದ್ರೆ, ಶಾಲೆಗೆ ರಜೆ ಸಿಗುವ ದಿನ ಎನ್ನುತ್ತಾರೆ. ಪಾಲಕರು ಮತ್ತು ಕೆಲ ಖಾಸಗಿ ಶಾಲೆಗಳ ನಿರ್ಲಕ್ಷ್ಯದಿಂದ ಮಕ್ಕಳಿಗೆ ಇದ್ರ ಮಹತ್ವ ತಿಳಿಯುತ್ತಿಲ್ಲ. ಪಾಲಕರಾದವರು ಮಕ್ಕಳಿಗೆ ಇದ್ರ ಬಗ್ಗೆ ತಿಳಿ ಹೇಳಿದ್ರೆ ಮಾತ್ರ ಮುಂದೆ ಮಕ್ಕಳಲ್ಲಿ ದೇಶಭಕ್ತಿ ಮೂಡಲು ಸಾಧ್ಯ.
 

ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತ  ವು ಗಣರಾಜ್ಯವಾಗಿದ್ದು ಜನವರಿ 26, 1950 ರಂದು. ಅಂದಿನಿಂದ ಪ್ರತಿವರ್ಷವೂ ಈ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತಿದೆ. ಪ್ರಸಕ್ತ ವರ್ಷ ನಾವು 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಬ್ರಿಟೀಷರ ವಿರುದ್ಧ ಸುದೀರ್ಘವಾದ ಹೋರಾಟ, ಸ್ವಾತಂತ್ರ್ಯ ಸಂಗ್ರಾಮ ಹಾಗೂ ಲಕ್ಷಾಂತರ ಸ್ವಾತಂತ್ರ್ಯ  ಹೋರಾಟಗಾರರ ತ್ಯಾಗ, ಬಲಿದಾನಗಳ ನಂತರ 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ದೇಶ ಸ್ವತಂತ್ರವಾದರು ಕೂಡ ನಮಗೆ ನಮ್ಮದೇ ಆದ ಲಿಖಿತ ಸಂವಿಧಾನ ಇರಲಿಲ್ಲ. ನಂತರ ಡಾ. ಬಿ. ಆರ್ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆ ಆಗಿ ಪ್ರಜಾಪ್ರಭುತ್ವ ರಾಷ್ಟ್ರವಾಯಿತು.

ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಗಣರಾಜ್ಯೋತ್ಸವ (Republic Day) ಕ್ಕೆ ಮಹತ್ವ  ನೀಡುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಚಿಕ್ಕವರು, ದೊಡ್ಡವರು ಸೇರಿದಂತೆ ಅನೇಕರು ಈ ದಿನಕ್ಕೆ ಅಷ್ಟು ಮಹತ್ವ ನೀಡುತ್ತಿಲ್ಲ. ಹೋಳಿ ಹಬ್ಬ, ದೀಪಾವಳಿ, ಕ್ರಿಸ್ ಮಸ್, ಈದ್ ಮಿಲಾದ ಮುಂತಾದ ಹಬ್ಬ (Festival) ಗಳನ್ನು ಎಷ್ಟು ಸಂಭ್ರಮ ಸಡಗರ, ಭಕ್ತಿಯಿಂದ ಮಾಡುತ್ತೇವೆಯೋ ಹಾಗೆಯೇ ಗಣರಾಜ್ಯೋತ್ಸವವನ್ನು ಕೂಡ ಮಾಡಬೇಕು. ಚಿಕ್ಕವರಲ್ಲಿ ದೇಶ (Country) ಪ್ರೇಮದ ಕುರಿತು ಪ್ರೀತಿ, ಗೌರವವನ್ನು ಮೂಡಿಸಬೇಕಾದ್ದು ಪಾಲಕರು ಹಾಗೂ ಶಾಲೆಯ ಕರ್ತವ್ಯ. ಬಹುತೇಕ ಖಾಸಗಿ ಶಾಲೆಗಳಲ್ಲಿ ಗಣರಾಜ್ಯೋತ್ಸವದ ದಿನ ಶಾಲೆಗಳಿಗೆ ರಜೆ ನೀಡಲಾಗುತ್ತದೆ. ಯಾವುದೇ ಕಾರ್ಯಕ್ರಮವಿರೋದಿಲ್ಲ. ಇದ್ರಿಂದ ಗಣರಾಜ್ಯೋತ್ಸವ ಅಂದ್ರೆ ಶಾಲೆಗೆ ರಜೆ ಸಿಗುತ್ತೆ ಎನ್ನುವುದು ಬಿಟ್ರೆ ಮಕ್ಕಳಿಗೆ ಅದ್ರ ಬಗ್ಗೆ ವಿಶೇಷವಾಗಿ ಏನೂ ತಿಳಿದಿಲ್ಲ. ಚಿಕ್ಕ ಮಕ್ಕಳ ಮನಸ್ಸಿನಲ್ಲಿ ದೇಶ ಪ್ರೇಮದ ಕುರಿತು ಜಾಗೃತಿಯನ್ನು ಮೂಡಿಸಿದರೆ ಮುಂದೆ ಅವರು ಒಳ್ಳೆಯ ನಾಗರಿಕರಾಗಲು ಅನುಕೂಲವಾಗುತ್ತದೆ.

Republic Day 20 ರಿಂದ 10 ದಿನ ಲಾಲ್‌ಬಾಗಲ್ಲಿ ಪುಷ್ಪ ಪ್ರದರ್ಶನ

ಮಕ್ಕಳ ಮನಸ್ಸಿನಲ್ಲಿ ದೇಶಭಕ್ತಿ ಮೂಡಿಸಲು ಹೀಗೆ ಮಾಡಿ :

ಸ್ವಾಂತಂತ್ರ್ಯ ಸಂಗ್ರಾಮದ ಕಥೆಗಳನ್ನು ಹೇಳಿ : ಸಾಮಾನ್ಯವಾಗಿ ತಂದೆ ತಾಯಿಯರು ಮಕ್ಕಳಿಗೆ ಕಥೆ ಹೇಳಿ ಮಲಗಿಸುವ ಅಭ್ಯಾಸವಿರುತ್ತೆ. ಮಕ್ಕಳಿಗೆ ರಾಜ ರಾಣಿ, ಪ್ರಾಣಿಗಳ ಕಥೆಗಳನ್ನು ಹೇಳುವ ಬದಲು ಸ್ವಾತಂತ್ರ್ಯ ಸಂಗ್ರಾಮದ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ, ಚಂದ್ರಶೇಖರ ಆಜಾದ, ಭಗತ ಸಿಂಗ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಮುಂತಾದವರ ಜೀವನಗಾತೆಗಳನ್ನು ಹೇಳಬೇಕು. ಇದರಿಂದ ನಮ್ಮ ಮಕ್ಕಳಿಗೆ ಸ್ವತಂತ್ರ್ಯದ ಬಗ್ಗೆ ಅರಿವು ಮೂಡುತ್ತದೆ. ಅಂತಹ ಕಥೆಗಳಿಂದ ಅವರು  ಪ್ರೇರಿತರಾಗುತ್ತಾರೆ.

ರಾಷ್ಟ್ರೀಯ ದಿನವೂ ಹಬ್ಬವಾಗಲಿ : ನಾವು ಮನೆಗಳಲ್ಲಿ ನಮ್ಮ ಹಬ್ಬಗಳನ್ನು ಎಷ್ಟು ಉತ್ಸಾಹದಿಂದ ಮಾಡುತ್ತೇವೆಯೋ ಹಾಗೆ ಅಷ್ಟೇ ಉತ್ಸಾಹದಿಂದ ರಾಷ್ಟ್ರೀಯ ಹಬ್ಬವನ್ನು ಕೂಡ ಆಚರಿಸಬೇಕು. ಮನೆಯ ಹಿರಿಯರು ಉತ್ಸಾಹದಿಂದ ಇದ್ದಾಗ ಮಕ್ಕಳು ಕೂಡ ಅದನ್ನು ಅನುಸರಿಸುತ್ತಾರೆ. ಚಿಕ್ಕಂದಿನಲ್ಲಿ ನಡೆಯುವ ಇಂತಹ ಆಚರಣೆಗಳನ್ನು ಅವರು ದೊಡ್ಡವರಾದಮೇಲೂ ನಡೆಸುತ್ತಾರೆ.

ರಾಷ್ಟ್ರೀಯ ಹಬ್ಬಗಳಲ್ಲಿ ಸಕ್ರಿಯರಾಗಿ : ಶಾಲೆಗಳಲ್ಲಿ ಜನವರಿ 26 ಮತ್ತು ಆಗಸ್ಟ್ 15 ರಂದು ಕಾರ್ಯಕ್ರಮಗಳು ನಡೆದರೆ ಅದು ಕೇವಲ ಆ ಶಾಲೆ ಮತ್ತು ಕೆಲವು ಪೋಷಕರಿಗೆ ಮಾತ್ರ ಸೀಮಿತವಾಗಿರುತ್ತದೆ. ಶಾಲೆ ಮತ್ತು ಸಹಕಾರಿ ಸಂಘ ಮುಂತಾದೆಡೆ ನಡೆಯುವ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸುವುದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ದೇಶಪ್ರೇಮ ಬೆಳೆಸಿಕೊಳ್ಳಲು ಸಾಧ್ಯವೇ ಇಲ್ಲ. ಪಾಲಕರು ಕೂಡ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮಕ್ಕಳನ್ನು ಕೂಡ ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಬೇಕು. ಅಲ್ಲಿ ನಡೆಯುವ ಭಾಷಣ, ನಾಟಕ, ಹಾಡುಗಳು ಮಕ್ಕಳ ಮನಸ್ಸಿಗೆ ಹೆಚ್ಚಿನ ಪ್ರಭಾವ ಬೀರುತ್ತವೆ.

Republic Day parade Tableau: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆಗೂ ಅನುಮತಿ

ದೇಶಭಕ್ತಿ ಗೀತೆಗಳನ್ನು ಕಲಿಸಿ : ಮಕ್ಕಳು ಬಹಳ ಬೇಗ ಎಲ್ಲವನ್ನೂ ಕಲಿಯುತ್ತಾರೆ. ಮಕ್ಕಳಿಗೆ ಚಲನಚಿತ್ರದ ಹಾಡುಗಳ ಬದಲಾಗಿ ರಾಷ್ಟ್ರ ಗೀತೆ, ದೇಶಭಕ್ತಿಗೀತೆಗಳನ್ನು ಕಲಿಸಿ. ಹಾಗೆಯೇ ದೇಶ ಭಕ್ತಿಯನ್ನು ಸಾರುವ ಚಲನಚಿತ್ರಗಳನ್ನು ತೋರಿಸಿ. ಇದು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಅವರ ಭವಿಷ್ಯಕ್ಕೆ ನೆರವಾಗುತ್ತದೆ.

click me!