
ಮುಸ್ಲಿಂ ಮಹಿಳೆಯರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ದೊಡ್ಡ ತೀರ್ಪು ನೀಡಿದೆ. ಖುಲಾ ಕೇಳಿದ್ರೆ ಗಂಡ ಒಪ್ಪಲೇಬೇಕು ಅಂತ ಹೇಳಿದೆ. ಮುಸ್ಲಿಂ ಸಮಾಜದಲ್ಲಿ ಹೆಂಡತಿಯೇ ವಿಚ್ಛೇದನ ಕೇಳೋದಕ್ಕೆ ಖುಲಾ ಅಂತಾರೆ. ಗಂಡನ ಒಪ್ಪಿಗೆ ಇಲ್ಲದೆಯೂ ಮುಸ್ಲಿಂ ಮಹಿಳೆ ಖುಲಾ ಕೇಳಬಹುದು ಅಂತ ಹೈಕೋರ್ಟ್ ಹೇಳಿದೆ. ಒಬ್ಬ ಮಹಿಳೆ ಕಿರುಕುಳದಿಂದಾಗಿ ವಿಚ್ಛೇದನ ಕೇಳಿದ್ದ ಪ್ರಕರಣದ ವಿಚಾರಣೆ ವೇಳೆ ಈ ತೀರ್ಪು ಬಂದಿದೆ.
ಮುಫ್ತಿ ಕೊಟ್ಟ ಖುಲಾವನ್ನು ಆಕೆಯ ಗಂಡ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸಿದ್ದನು. ಗಂಡನ ಅಕ್ಷೇಪಗಳ ಹೊರತಾಗಿಯೂ, ಖುಲಾಗೆ ಕೌಟುಂಬಿಕ ನ್ಯಾಯಾಲಯ ಎತ್ತಿ ಹಿಡಿದಿತ್ತು. ಈ ಕುರಿತು ಮಹಿಳೆಯ ಗಂಡ ಹೈಕೋರ್ಟ್‌ಗೆ ಮೇಲ್ಮನಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ತೆಲಂಗಾಣ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಹೆಂಡತಿ ಖುಲಾಗೆ ಗಂಡ ಒಪ್ಪಿಕೊಳ್ಳಬೇಕು ಎಂಬ ಆದೇಶವನ್ನು ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಮಧುಸೂದನ್ ರಾವ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. 'ಮುಸ್ಲಿಂ ಮಹಿಳೆಗೆ ಖುಲಾ ಪಡೆಯುವ ಹಕ್ಕಿದೆ ಮತ್ತು ಇದಕ್ಕೆ ಗಂಡನ ಅನುಮತಿ ಅಗತ್ಯವಿಲ್ಲ' ಎಂದು ನ್ಯಾಯಪೀಠ ಹೇಳಿದೆ.
ಖುಲಾ ಎಂದರೇನು, ಯಾವಾಗ ಪಡೆಯಬಹುದು?
ಖುಲಾ ಎಂದರೆ ಅರೇಬಿಕ್ ಭಾಷೆಯಲ್ಲಿ ಬಿಟ್ಟುಬಿಡುವುದು ಅಂತ ಅರ್ಥ. ಇದು ಮದುವೆ ಮುರಿಯುವ ಒಂದು ವಿಧಾನ. ಮುಸ್ಲಿಂ ಮಹಿಳೆ ಮದುವೆ ಮುಂದುವರಿಸಲು ಇಷ್ಟಪಡದಿದ್ದಾಗ ಖುಲಾ ಪಡೆಯುತ್ತಾಳೆ. ಮುಫ್ತಿಯನ್ನ ಸಂಪರ್ಕಿಸಿ, ಖಾಸಗಿಯಾಗಿ ವಿಚಾರವನ್ನ ಬಗೆಹರಿಸಿಕೊಳ್ಳಬಹುದು. ಖುಲಾ ಪ್ರಕ್ರಿಯೆಯ ಮೂಲಕ ಮಹಿಳೆ ತನ್ನ ಗಂಡನಿಗೆ ಮೆಹರ್ ಹಿಂದಿರುಗಿಸುವ ಮೂಲಕ ಅಥವಾ ತನ್ನ ಕೆಲವು ಹಕ್ಕುಗಳನ್ನು ತ್ಯಜಿಸುವ ಮೂಲಕ ವಿಚ್ಛೇದನ ಪಡೆಯುತ್ತಾಳೆ. ವಿಚ್ಛೇದನ ಪಡೆಯುವುದು ಮಹಿಳೆಯ ಕಾನೂನುಬದ್ಧ ಹಕ್ಕು. ದುರುಪಯೋಗ ಅಥವಾ ನಿರ್ಲಕ್ಷ್ಯ ಅಥವಾ ಗಂಡನ ಜೊತೆ ಹೊಂದಾಣಿಕೆ ಆಗದಿದ್ದರೆ ಮಹಿಳೆ ಖುಲಾ ಮೂಲಕ ವಿಚ್ಛೇದನ ಪಡೆಯಬಹುದು.
2012ರಲ್ಲಿ ಮದುವೆಯಾಗಿದ್ದ ದಂಪತಿ, ಹೆಂಡತಿ ಖುಲಾ ಕೇಳಿದ್ದಳು
ಹೈಕೋರ್ಟ್ ತೀರ್ಪು ನೀಡಿರುವ ಮುಸ್ಲಿಂ ದಂಪತಿ 2012 ರಲ್ಲಿ ಮದುವೆಯಾಗಿದ್ದರು. ಮದುವೆಯಾದಾಗಿನಿಂದ ಒಟ್ಟಿಗೆ ವಾಸಿಸುತ್ತಿದ್ದರು. ನಂತರ, ಪತ್ನಿ ಗಂಡನ ಮೇಲೆ ಕಿರುಕುಳದ ಆರೋಪ ಹೊರಿಸಿ ಖುಲಾ ನಾಮಾ ಆರಂಭಿಸಿದಳು. ಗಂಡ 3 ಬಾರಿ ಸಂಧಾನಕ್ಕೆ ಹಾಜರಾಗಲಿಲ್ಲ. ಮುಫ್ತಿಯಿಂದ ಮಹಿಳೆಗೆ ಖುಲಾ ಸಿಕ್ಕಾಗ, ಗಂಡ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಶ್ನಿಸಿದನು. ಮುಸ್ಲಿಂ ಪರ್ಸನಲ್ ಲಾ ಪ್ರಕಾರ ನ್ಯಾಯಾಲಯದ ಹಸ್ತಕ್ಷೇಪವಿಲ್ಲದೆಯೇ ವಿಚ್ಛೇದನ ಪಡೆಯಬಹುದು ಎಂದು ಮಹಿಳಾ ವಕೀಲರು ವಾದಿಸಿದರು. ವಿಚ್ಛೇದನ ಆದೇಶ ನೀಡುವ ಅಧಿಕಾರ ಕಾಜಿ ಅಥವಾ ನ್ಯಾಯಾಲಯಕ್ಕೆ ಮಾತ್ರ ಇದೆ ಎಂದು ಗಂಡನ ವಕೀಲರು ವಾದಿಸಿದರು. ನ್ಯಾಯಾಲಯವು ಅವರ ಪತ್ನಿ ಪಡೆದ 'ಖುಲಾ'ವನ್ನು ಒಪ್ಪಿಕೊಂಡಿತು. ನಂತರ ಆ ವ್ಯಕ್ತಿ ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದನು. ಇದೀಗ ಹೈಕೋರ್ಟ್‌ನಲ್ಲಿಯೂ ಖುಲಾ ಒಪ್ಪಿಕೊಳ್ಳಲು ಗಂಡನಿಗೆ ಸೂಚಿಸಿದೆ.
ಮುಸ್ಲಿಂ ಸಮುದಾಯದಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆ. ಇತ್ತೀಚಿನ ವರ್ಷಗಳವರೆಗೆ ವಿವಾಹ ಸಂಪ್ರದಾಯದಲ್ಲಿ ಗಂಡಸು ತ್ರಿವಳಿ ತಲಾಖ್ ಹೇಳುವ ಮೂಲಕ ಹೆಂಡತಿಯನ್ನು ದೂರ ಮಾಡುವ ಪದ್ದತಿಗೆ ಕೇಂದ್ರ ಸರ್ಕಾರ ತಿಲಾಂಜಲಿ ಹಾಡಿದೆ. ಆದರೆ, ಇದೀಗ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಡಿವೋರ್ಸ್ (ಖುಲಾ) ನೀಡಲು ಅವಕಾಶವಿದೆ. ವಿವಾಹಿತ ಮಹಿಳೆಯು ತನ್ನ ಮುಸ್ಲಿಂ ಗಂಡನಿಗೆ ಖುಲಾ ನೀಡಲು ಕೇಳಿದರೆ ಒಪ್ಪಿಕೊಳ್ಳಲೇಬೇಕು ಎಂದು ತೆಲಂಗಾಣ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.