ಮದುವೆಯಾದ ಒಂದೇ ತಿಂಗಳಿಗೆ ಕೋಮಾಗೆ ಹೋದ ಸೊಸೆ, 17 ವರ್ಷದಿಂದ ಕಣ್ಣಿನಂತೆ ಕಾಯುತ್ತಿರುವ ಅತ್ತೆ!

Published : Oct 25, 2026, 11:21 PM IST
mother-in-law cares for paralyzed daughter-in-law

ಸಾರಾಂಶ

ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಭೀಕರ ಅಪಘಾತದಿಂದ ಕೋಮಾಗೆ ಜಾರಿದ ಸೊಸೆಯನ್ನು ಆಕೆಯ ಅತ್ತೆ ಕಳೆದ 17 ವರ್ಷಗಳಿಂದ ಸ್ವಂತ ಮಗಳಂತೆ ಆರೈಕೆ ಮಾಡುತ್ತಿದ್ದಾರೆ. ಅತ್ತೆಯ ನಿರಂತರ ಪ್ರೀತಿ ಮತ್ತು ಕಾಳಜಿಯ ಫಲವಾಗಿ ಕೋಮಾದಲ್ಲಿದ್ದ ಸೊಸೆಗೆ ಈಗ ಸ್ವಲ್ಪ ಪ್ರಜ್ಞೆ ಮರಳಿದ್ದು, ಆಕೆ ಸರಳ ಕೆಲಸಗಳನ್ನು ಮಾಡುವಷ್ಟು ಸುಧಾರಿಸಿದ್ದಾಳೆ.

ಸಾಮಾನ್ಯವಾಗಿ ಸಮಾಜದಲ್ಲಿ 'ಅತ್ತೆ-ಸೊಸೆ' ಎಂದರೆ ಜಗಳ, ಭಿನ್ನಾಭಿಪ್ರಾಯಗಳೇ ಮುನ್ನೆಲೆಗೆ ಬರುತ್ತವೆ. ಆದರೆ, ಹೆತ್ತ ತಾಯಿಯ ಪ್ರೀತಿಯನ್ನೂ ಮೀರಿಸುವಂತಹ ವಾತ್ಸಲ್ಯ ಅತ್ತೆಯಲ್ಲೂ ಇರುತ್ತದೆ ಎಂಬುದಕ್ಕೆ ಚೀನಾದಲ್ಲಿ ನಡೆದಿರುವ ಈ ನೈಜ ಘಟನೆಯೇ ಸಾಕ್ಷಿ.

ಮದುವೆಯಾಗಿ ಕೇವಲ ಒಂದು ತಿಂಗಳಾಗಿದ್ದಾಗ ಭೀಕರ ಅಪಘಾತಕ್ಕೆ ತುತ್ತಾಗಿ ಇಡೀ ದೇಹದ ಸ್ವಾಧೀನ ಕಳೆದುಕೊಂಡ ಸೊಸೆಯನ್ನು, ಕಳೆದ 17 ವರ್ಷಗಳಿಂದ ಹಗಲಿರುಳೆನ್ನದೆ ಕಣ್ಣಿನ ರೆಪ್ಪೆಯಂತೆ ಕಾಯುತ್ತಿರುವ 68 ವರ್ಷದ ಅತ್ತೆಯೊಬ್ಬರ ತ್ಯಾಗದ ಕಥೆ ಇದೀಗ ಇಡೀ ವಿಶ್ವದ ಕಣ್ಣಾಲಿಗಳನ್ನು ತೇವಗೊಳಿಸಿದೆ. ಈ ಅಪರೂಪದ ಹೃದಯಸ್ಪರ್ಶಿ ಘಟನೆಯನ್ನು 'ಸೌತ್ ಚೈನಾ ಮಾರ್ನಿಂಗ್ ಪೋಸ್ಟ್' (SCMP) ವರದಿ ಮಾಡಿದೆ.

ಮದುವೆಯಾದ ಒಂದೇ ತಿಂಗಳಿಗೆ ಒಕ್ಕರಿಸಿದ ವಿಧಿ ಆಟ!

ಪೂರ್ವ ಚೀನಾದ ಶಾಂಡಾಂಗ್ ಪ್ರಾಂತ್ಯದ ಕ್ವಿಂಗ್ಯುನ್ ಕೌಂಟಿಯ ಹಳ್ಳಿಯೊಂದರಲ್ಲಿ 2009ರಲ್ಲಿ ಈ ದುರಂತ ಸಂಭವಿಸಿತ್ತು. ಕ್ಸು ಎಂಬ ಯುವತಿಗೆ ಮದುವೆಯಾಗಿ ಕೇವಲ ಒಂದು ತಿಂಗಳಾಗಿತ್ತು. ಹೊಸ ಬದುಕಿನ ಕನಸು ಕಾಣುತ್ತಿದ್ದ ಆಕೆಗೆ ವೇಗವಾಗಿ ಬಂದ ಟ್ರಕ್ ಒಂದು ಡಿಕ್ಕಿ ಹೊಡೆಯಿತು. ಈ ಭೀಕರ ರಸ್ತೆ ಅಪಘಾತದಲ್ಲಿ ಆಕೆಯ ಮೆದುಳಿಗೆ ತೀವ್ರ ಪೆಟ್ಟಾಗಿ, ಇಡೀ ದೇಹ ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡಿತು. ಹಾಸಿಗೆ ಹಿಡಿದ ಸೊಸೆಯನ್ನು ನೋಡಿ ಕುಟುಂಬವೇ ಕಂಗಾಲಾಯಿತು. ಆದರೆ, ಆಕೆಯ 68 ವರ್ಷದ ಅತ್ತೆ ಕ್ಸುವಾನ್ ಫೆಂಗ್ಯಿಂಗ್ ಮಾತ್ರ ಎದೆಗುಂದಲಿಲ್ಲ. ಸೊಸೆಯನ್ನು ಕೈಬಿಡದೆ, ಆಕೆಯ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡರು.

ಆಕೆ ನನ್ನ ಸೊಸೆಯಲ್ಲ, ನನ್ನ ಮಗಳು!

ಈ ಬಗ್ಗೆ ಮಾತನಾಡುವ ಕ್ಸುವಾನ್, 'ಆಕೆ ನನ್ನ ಮಗನನ್ನು ನಂಬಿ ಬಂದವಳು. ನನ್ನ ಮಗನ ಕೈಹಿಡಿದ ಮೇಲೆ ಆಕೆ ನನ್ನ ಮಗಳು ಕೂಡ ಹೌದು. ಹಾಗಿರುವಾಗ ಸಂಕಷ್ಟದಲ್ಲಿದ್ದ ಆಕೆಯನ್ನು ನಾನು ಹೇಗೆ ತಾನೇ ಅನಾಥವಾಗಿ ಬಿಡಲಿ?" ಎಂದು ಭಾವುಕರಾಗಿ ನುಡಿಯುತ್ತಾರೆ. ಹಾಸಿಗೆಯಲ್ಲೇ ಮಲಗಿರುವ ಸೊಸೆಯ ವೈಯಕ್ತಿಕ ಸ್ವಚ್ಛತೆಯಿಂದ ಹಿಡಿದು ಪ್ರತಿಯೊಂದು ಕೆಲಸವನ್ನೂ ಅವರೇ ಮಾಡುತ್ತಾರೆ. ದ್ರವರೂಪದ ಆಹಾರವನ್ನು ಚಮಚದಲ್ಲಿ ಸ್ವಲ್ಪ ಸ್ವಲ್ಪವೇ ಆಕೆಯ ಬಾಯಿಗೆ ಹಾಕುತ್ತಾರೆ. ಒಂದು ಹೊತ್ತಿನ ಊಟ ಮಾಡಿಸುವುದಕ್ಕೇ ಅತ್ತೆಗೆ ಬರೋಬ್ಬರಿ ಒಂದು ಗಂಟೆ ಸಮಯ ಹಿಡಿಯುತ್ತದೆ. ಸೊಸೆಯ ಮೆದುಳು ಮತ್ತೆ ಚುರುಕಾಗಲಿ ಎಂಬ ಆಸೆಯಿಂದ ಹಳ್ಳಿಯ ಸುದ್ದಿಗಳನ್ನು ಹೇಳುವುದು, ಆಕೆಗೆ ಇಷ್ಟವಾದ ಹಾಡುಗಳನ್ನು ಹಾಡುವುದು ಮತ್ತು ಹೆಸರು ಹಿಡಿದು ಕರೆದು ಹುರಿದುಂಬಿಸುವುದನ್ನು ಈ ಅತ್ತೆ ಎಂದಿಗೂ ನಿಲ್ಲಿಸಲಿಲ್ಲ.

ಪ್ರೀತಿಯ ತಪಸ್ಸಿಗೆ ಒಲಿದ ಪವಾಡ: ಮಗುವಿನಂತೆ ಪ್ರಜ್ಞೆ!

ವರ್ಷಗಳ ನಿರಂತರ ಪರಿಶ್ರಮ, ಕಣ್ಣೀರು ಮತ್ತು ಪ್ರಾರ್ಥನೆಯ ಫಲವಾಗಿ ಕ್ಸು ಅವರ ಆರೋಗ್ಯದಲ್ಲಿ ಈಗ ಪವಾಡಸದೃಶ ಬದಲಾವಣೆ ಕಂಡುಬಂದಿದೆ. ಸಂಪೂರ್ಣ ಕೋಮಾದಲ್ಲಿದ್ದ ಆಕೆಗೆ ಈಗ ಸ್ವಲ್ಪ ಪ್ರಜ್ಞೆ ಮರಳಿದೆ.

ಮೆದುಳಿಗೆ ತೀವ್ರ ಪೆಟ್ಟಾಗಿದ್ದರಿಂದ ಆಕೆಗೆ ಪ್ರಸ್ತುತ ನಾಲ್ಕು ವರ್ಷದ ಮಗುವಿನ ಮಾನಸಿಕ ಬೆಳವಣಿಗೆ ಮಾತ್ರ ಇದೆ. ಆದಾಗ್ಯೂ, ಆಕೆ ಈಗ ಕೆಲವು ತೊದಲು ಪದಗಳನ್ನು ಮಾತನಾಡುತ್ತಾರೆ. ಅಷ್ಟೇ ಅಲ್ಲ, ಹಸಿವಾದಾಗ ತನಗೆ ಬೇಕಾದ ಸರಳವಾದ ಆಹಾರವನ್ನು ತಾನೇ ತಯಾರಿಸಿಕೊಳ್ಳುವ ಮಟ್ಟಿಗೆ ಸುಧಾರಿಸಿಕೊಂಡಿದ್ದಾರೆ. 17 ವರ್ಷಗಳ ತಪಸ್ಸಿಗೆ ಸಿಕ್ಕ ಈ ಪುಟ್ಟ ಫಲವೇ ಅತ್ತೆ ಕ್ಸುವಾನ್ ಅವರ ಮೊಗದಲ್ಲಿ ಕೋಟಿ ರೂಪಾಯಿ ಬೆಲೆಬಾಳುವ ನಗೆ ತರಿಸಿದೆ.

ಮುಪ್ಪಿನ ಕಾಲದಲ್ಲೂ ಸೊಸೆಯದ್ದೇ ಚಿಂತೆ!

ವಯಸ್ಸಾಗುತ್ತಿರುವ ಕ್ಸುವಾನ್ ಅವರಿಗೆ ಈಗಲೂ ಕಾಡುತ್ತಿರುವುದು ಒಂದೇ ಚಿಂತೆ. 'ನಾನು ಜೀವಂತವಾಗಿರುವವರೆಗೂ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಆದರೆ ನಾನು ಕಣ್ಣು ಮುಚ್ಚಿದ ಮೇಲೆ ಆಕೆ ಹಸಿದುಕೊಂಡು ಇರಬಾರದು. ಈಗ ಆಕೆಗೆ ಸರಳ ಅಡುಗೆ ಮಾಡಿಕೊಳ್ಳಲು ಬರುತ್ತಿರುವುದೇ ನನ್ನ ಪಾಲಿಗೆ ದೊಡ್ಡ ನೆಮ್ಮದಿ' ಎಂದು ಕಣ್ಣೀರಿಡುತ್ತಾರೆ. ತಮ್ಮ ನಂತರ ಸೊಸೆಯನ್ನು ತಾಯಿಯಂತೆ ಕಾಯಬೇಕೆಂದು ಕ್ಸುವಾನ್ ತಮ್ಮ ಮಗನಿಗೂ ಮಾತು ಪಡೆದುಕೊಂಡಿದ್ದಾರೆ. ನಿಸ್ವಾರ್ಥ ಪ್ರೀತಿ, ತಾಳ್ಮೆ ಮತ್ತು ತ್ಯಾಗಕ್ಕೆ ಹಿಡಿದ ಕೈಗನ್ನಡಿಯಂತಿರುವ ಈ ಅತ್ತೆಯ ಕಾರ್ಯಕ್ಕೆ ಜಗತ್ತಿನಾದ್ಯಂತ ನೆಟ್ಟಿಗರು ತಲೆಬಾಗಿ ನಮಿಸುತ್ತಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಟಿ ಎನ್ನೋ ಕಾರಣಕ್ಕೆ ಮದುವೆ ಪ್ರಪೋಸಲ್ಸ್​ ರಿಜೆಕ್ಟ್​: ಕಲಾವಿದರ ರಿಯಲ್​ ಲೈಫ್​ ಸ್ಟೋರಿ ಹೇಳಿದ Rani Serial ಕಾವೇರಿ
Marriage ಪ್ರಾಮಿಸ್ ಮಾಡೋ ಮುನ್ನ ಯೋಚಿಸಿ; ರಾಜ್ಯಪಾಲರಾದ ಆನಂದಿಬೆನ್‌ರಿಂದ ಯೂತ್ಸ್‌ಗೆ ಮಾರ್ಮಿಕ ಸಂದೇಶ! ಅಸಲಿ ಕಥೆ ಏನು?