ಮದುವೆ, ಸಂಸಾರದ ಕನಸು ಹೆಣ್ಣಿಗೆ ಸಹಜ. ಆದರೆ, ಅಂದುಕೊಂಡಂತೆ ಆಗೋದು ಎಲ್ಲಿಯೋ ಕೆಲವರ ಬಾಳಲ್ಲಿ ಮಾತ್ರ. ಎಲ್ಲರಂತೆ ಕನಸು ಕಂಡು ಸಪ್ತಪದಿ ತುಳಿದ ಹೆಣ್ಣಿನ ಬಾಳಿನ ತೊಳಲಾಟಗಳಿವು.
ಆಯ್ಕೆಗಳು ಸಾಕಷ್ಟಿತ್ತು ಆದರೆ ಹೃದಯ ಮಿಡಿಯುತ್ತಿದ್ದದ್ದು ... ನನ್ನವನಿಗಾಗಿ. ತಿಳುವಳಿಕೆ ಬಂದಾಗಿಂದ ಅವನ ಆಗಮನಕ್ಕೆ ಕಾಯುತ್ತಿದ್ದೆ. ಕಾಲೇಜು ದಿನಗಳಲ್ಲಿ ಫೀಸ್ ಕಟ್ಟಲು ಕಷ್ಟವಾದಾಗ, ಬಸ್‌ಗೆ ದುಡ್ಡಿಲ್ಲದೇ 7 ಕೀ.ಮಿ ಕ್ರಮಿಸಿ ಮನೆ ಸೇರುವಾಗ. ಗೆಳತಿಯರು ಚೆಂದದ ಬಟ್ಟೆ ಹಾಕಿ ಅಂದವಾಗಿ ಕಾಣುತ್ತಿರುವಾಗ ಅಂತಹ ಬಟ್ಟೆ ನನಗಿಲ್ಲವಲ್ಲ ಅಂದುಕೊಂಡಾಗ. ಮನಸ್ಸು ಏನ್ ಹೇಳ್ತಿತ್ತು ಗೊತ್ತಾ? ಹೇ ನನ್ ಗಂಡಾ ಬರ್ತಾನೆ ಈ ಎಲ್ಲಾ ನೋವನ್ನೂ ಚಿಟಿಕೆ ಹೊಡದ ಹಾಗೆ ದೂರ ಮಾಡ್ತಾನೆ ಅಂತಾ!
ಹೀಗೆ ಭವಿಷ್ಯದ ಕನಸುಗಳನ್ನು ರಪ್ಪೆ ಮುಚ್ಚದೆ ಕಾಣುತ್ತಿದ್ದ ಸಂದರ್ಭವದು. ಗೊತ್ತು ಗುರಿ ಇಲ್ಲದ ಬೆಂಗಳೂರಿಗೆ ಕೆಲಸ ಅರಸಿ ಬಂದೆ. ನನ್ನವರ್ಯಾರು? ತನ್ನವರು ಯಾರು? ಹೀಗೆ ಲೆಕ್ಕ ಹಾಕಿ ಕೂಡಿ ಕಳೆಯುವಷ್ಟರಲ್ಲಿ ಕಳೆದಿದ್ದು ಬರೊಬ್ಬರಿ 4 ವರ್ಷ.
ಅಷ್ಟರಲ್ಲಿ ಮದುವೆಯ ಮಾತುಕತೆ. ಯಾರೇ ನೋಡಲು ಬಂದರೂ ಇವನು ನನ್ನವನಲ್ಲ ಅನ್ನೊ ಭಾವನೆ. ಕಣ್ಣಂಚಲ್ಲಿ ಅವನಿಗಾಗಿ ಹೋರಾಟ. ಮನದಲ್ಲಿ ಪ್ರಾರ್ಥನೆ. ದೇವ್ರೆ ನನ್ನವನನ್ನ ನನಗೆ ಕೊಟ್ಟು ಬಿಡು. ಸಮಾಜದ ಚುಚ್ಚು ಮಾತು ಕೇಳಲಾರೆ ಅಂತಾ ಪರಿ ಪರಿಯಾಗಿ ಬೇಡಿಕೊಂಡೆ. ಇಷ್ಟವಿಲ್ಲದ ಹುಡುಗನ ಬಗ್ಗೆ ಮನೆಯಲ್ಲಿ ಗುಣಗಾನ. ಆದರೆ ಅದು ನನಗೆ ಹಸಿ ಗಾಯದ ಮೇಲೆ ತುಸು ಕಾರದ ಪುಡಿ ಹಾಕಿದ ಅನುಭವ.
ಓ ದೇವರೇ ಅವಳು ನನ್ನ ಪ್ರೀತಿ ಒಪ್ಪಲಿ, ಮಗಳು ಹುಟ್ಟಿದರೆ ಹನುಮಂತಿ ಅಂತ ಹೆಸರಿಡುತ್ತೇನೆ!
ಟಹೇ ಅವಳು ಬೆಂಗಳೂರು ಸೇರಿದ್ದಾಳೆ. ಅವಳು ಇಲ್ಲಿ ಬಾಳ್ವೆ ಮಾಡೋದು ಕಷ್ಟ,' ಅಂತಾ ಕೆಲವರಂದ್ರೆ, 'ನೀನು ನೀತಿಗೆಟ್ಟವಳು. ಅದಕ್ಕೆ ನಾವು ಹುಡುಕಿದ ಹುಡುಗ ಬೇಡ ನಿನಗೆ' ಅನ್ನುವ ಮನೆಯವರ ಮಾತು. ಅಂತಹ ಸ್ಥಿತಿಯಲ್ಲಿ ಮತ್ತೆ ಅದೇ ದೇವರಿಗೆ 'ನೋಡು ಬಡವನಾದ್ರೂ ಪರವಾಗಿಲ್ಲ. ಸಾಲ ಶೂಲದಲ್ಲಿ ಮುಳುಗಿದವನಾದರೂ ತೊಂದರೆಯಿಲ್ಲ. ಜಾತಿ ಬೇರೆಯಾದರೂ ಅಡ್ಡಿ ಇಲ್ಲ. ಮೊದಲು ನನ್ನವನನ್ನ ನನಗೆ ಕೊಡು. ತಿಂಗಳೊಳಗೆ ಅವನು ಸಿಕ್ಕರೆ ನಿನ್ನ ಮುಂದೆ ಅವನನ್ನ ನಿಲ್ಲಿಸಿ ನಿನಗೆ ಶರಣಾಗುವಂತೆ ಮಾಡುತ್ತೇನೆ ಅಮ್ಮಾ, ಎಂದು ಆ ದೇವಿಯಲ್ಲಿ ಪ್ರಾರ್ಥನೆ.
ದೇವಿಗೂ ಕೇಳಿಸಿತ್ತು ಪ್ರಾರ್ಥನೆ:
ಯಾವಾಗ ಕಣ್ಣೀರು ಹಾಕಿ ಬೇಡಿಕೊಂಡೆನೋ ಆ ದೇವಿಗೂ ಅಯ್ಯೋ ಪಾಪ ಅನ್ನಿಸಿ ನನ್ನ ಪ್ರಾರ್ಥನೆಗೆ ಅಸ್ತು ಅಂದು ಬಿಟ್ಟಳು. ಅವನು ಸಿಕ್ಕಿದ್ದು ಅದೊಂತರಾ ಮ್ಯಾಜಿಕ್. ಅವನ್ಯಾರು ಅನ್ನೊ ಅರಿವು ಮೂಡುವಷ್ಟರಲ್ಲಿ ಅವನೇ ನನ್ನ ಪತಿರಾಯ ಅನ್ನೊದು ನಿರ್ಣಯವಾಗಿ ಹೋಯ್ತು. ಇವನು ಅಪ್ಪಾ ಅಮ್ಮಾ ಹುಡುಕಿದವನಲ್ಲ, ಇವನನ್ನ ನೋಡಿ ನಾ ಒಪ್ಪಿದ್ದು ಅಲ್ಲ. ಆ ದೇವಿಗೆ ಕೇಳಿಕೊಂಡಂತೆ ಅಮ್ಮನವರೆ ಕರುಣಿಸಿದ 'ಪ್ರಸಾದ' . ಕೆಲ ದಿನಗಳ ನಂತರ ಮನೆಯಲ್ಲಿ ಕಾಡಿ ಬೇಡಿ ಒಪ್ಪಿಸಿದ್ದಾಯ್ತು. ಒಂದು ಮಟ್ಟಕ್ಕೆ ಅದ್ದೂರಿಯಾಗಿ ಮದುವೆ ಆಗಿದ್ದು ಆಯ್ತು.
ಅಬ್ಬಾ ! ಇನ್ನೇನ್ ಬೇಕ್ರಿ ಜೀವ್ನಕ್ಕೆ? ಇಷ್ಟಾ ಪಟ್ಟೊವ್ನು ಸಿಕ್ಕ. ಮದುವೆ ಕೂಡಾ ಸಾಂಗವಾಗಿ ಆಯ್ತು. ನನ್ನಷ್ಟು ಪುಣ್ಯವಂತೆ ಯಾರಾದ್ರು ಇದ್ದಾರಾ ? ಇಲ್ಲಿ ಪ್ರೀತಿಸಿದವನಿಗೆ ನಾನು ಮೋಸ ಮಾಡಿ ಕೈ ಕೊಟ್ಟು ಓಡಿಯೂ ಹೋಗ್ಲಿಲ್ಲ. ಅಪ್ಪ ಅಮ್ಮನನ್ನ ಎದುರು ಹಾಕಿಕೊಂಡು ತಾಳಿಯನ್ನು ಕಟ್ಟಿಸಿಕೊಳ್ಳಲಿಲ್ಲ. ಎಲ್ಲವೂ ಚನ್ನಾಗಿ ನಡೆದುಹೋಯ್ತು . ರೀ.. ನಾವು ಮನುಷ್ಯರು . ದೇವ್ರು ಇಷ್ಟೆಲ್ಲ ನಮ್ಮನ್ನ ಆರಾಮಾಗಿ ಇಟ್ಟಾಗ ಏನಾದ್ರೂ ಒಂದು ಟ್ವಿಸ್ಟ್ ಇಡ್ಬೇಕಲ್ವಾ? ಅಯ್ಯೋ ಅದು ಅಂತಾ ಇಂತ ಟ್ವಿಸ್ಟ್ ಅಲ್ಲಾ . ಸೀದಾ ನನ್ನ ಹೃದಯವೆ ಸುಟ್ಟು ಕರಕಲಾದಂತ ಅನುಭವ..
ಮದುವೆಯಾಗುತ್ತಿದ್ದಂತೆ ಬಯಲಾಯ್ತು ಮುಖ:
ನನ್ನ ಹಿಂದೆ ಮುಂದೆ ಪ್ರೀತಿಯಿಂದ ಸುಳಿದಾಡುತ್ತಿದ್ದ ಪತಿರಾಯ ಮದುವೆ ಆದ ಎರಡನೇ ದಿನದಿಂದ ತನ್ನ ಅಸಲಿ ಮುಖ ತೋರಿಸಿಬಿಟ್ಟ .
ನಾನಿನ್ನೂ ಪ್ರೀತಿ, ಪ್ರೇಮ, ಪ್ರಣಯ ಅಂತಾ ಭ್ರಮಾ ಲೋಕದಲ್ಲಿದ್ದೆ. ಅವನು ರಿಯಾಲಿಟಿಗೆ ಬಂದು ಬಿಟ್ಟಿದ್ದ. ಬೆರಳ ತುದಿ ಹಿಡಿದು ಮುದ್ ಮುದ್ದಾಗಿ ಮಾತನಾಡುತ್ತಿದ್ದವ ಮೊಬೈಲ್‌ನಲ್ಲಿ ತಲ್ಲೀನ. ಗೇಮ್ ಅಂತೆ ಸಿನಿಮಾ ಅಂತೆ. ಸುಡುಗಾಡು ಇದರಲ್ಲಿ ಆ ಪಬ್ ಜೀ ಅನ್ನೊ ಆಟ . ಅಷ್ಟೇ ಅಲ್ಲ, ರೂಮಲ್ಲಿ 5 ನಿಮಿಷವಾದ್ರು ಬಾ ಕೂತು ಪ್ರೀತಿಯಿಂದ ಮಾತಾಡೊಣ ಅಂದ್ರೆ .. ಊ ಹು... ಅಪ್ಪಾ, ಅಮ್ಮನ ಎದುರಲ್ಲೆ ಮಾತನಾಡು. ಮನೆಯ ಹಾಲ್‌ನಲ್ಲೇ ಕುಳಿತುಕೋ. ನಾಲ್ಕು ಗೋಡೆ ಮಧ್ಯ ಇದ್ದು ನನಗೆ ರೂಢಿ ಇಲ್ಲ. ಅಪ್ಪ ಜೊತೆಲಿದ್ದಾಗ ಗಂಡಾ ಹೆಂಡತಿ ಜೊತೆಯಲ್ಲಿ ಕೂರಬಾರದು. ಅಯ್ಯೋ ಒಂದಾ, ಎರಡಾ ಈ ನಿಯಮಗಳು.. ಹೋಗ್ಲಿ ಆಚೆ ಎಲ್ಲಾದ್ರೂ ಹೋಗೊಣ ಕನಿಷ್ಠ ಪಕ್ಷ ಬೀದಿ ಕೊನೆಯವರೆಗಾದರೂ ಹೋಗಿ ಬರೋಣ ಅಂದ್ರೆ. ಅಯ್ಯೋ ಅಪ್ಪ, ಅಮ್ಮ ಇಲ್ಲಿಯೇ ಇದ್ದಾಗ ಹೀಗೆ ಓಡಾಡೊಕೆ ಆಗುತ್ತಾ? ಬೇಡ್ವೆ ಬೇಡ. ಹೀಗೆ ನನ್ನ ಪ್ರೀತಿಯನ್ನ ಕೊಲ್ಲೊ ಕ್ಷಣಗಳು ಶುರುವಾದ್ವು.
ಪ್ರೀತಿ ಅಂದ್ರೆ ಕಟ್ಟಿ ಹಾಕೋದಲ್ಲ, ಫ್ರೀಯಾಗಿ ಬಿಡೋದು, ಬಾಂಡಿಂಗ್ ಪಾಠ ಹೇಳಿದ ಅಮೃತಧಾರೆ
ಇಲ್ಲಿ ಇನ್ನೊಂದು ದೊಡ್ಡ ಸಮಸ್ಯೆ ಆಗಿತ್ತು. ನನ್ನ ಗಂಡನ ಆಫೀಸಿನಲ್ಲಿ ಸಮಸ್ಯೆ ಆಗಿ ಸಂಬಳವೇ ಕೊಡುತ್ತಿರಲಿಲ್ಲ. ಹೀಗಾಗಿ ಅವರು ಮದುವೆ ಆದ ಹೊಸದರಲ್ಲಿ ಕೆಲಸಕ್ಕೆ ಹೋಗದೇ ಮನೆಯಲ್ಲೆ ಇದ್ದರು. ಇನ್ನೂ ಜೀವನಕ್ಕಂತೂ ತುಂಬಾ ಕಷ್ಟ. ಇಎಂಐಗಳು ಮನೆ ಬಾಡಿಗೆ ಖರ್ಚುಗಳು ಮೈ ತುಂಬಾ. ಸಾಲದ ಸುಳಿಯಲ್ಲಿ ತೇಲಾಡುತ್ತ ಆ ಟೆನ್ಷನ್ ಮರಿಯೋಕೆ ಗೇಮ್ ಆಡೋದು.. ಇದ್ಯಾವ ಪರಿಯಪ್ಪಾ ಅನ್ನಿಸದ ಕ್ಷಣವಿಲ್ಲ ನಂಗೆ .
ಕನಸಾಗೇ ಉಳಿದ ಹನಿಮೂನ್:
ಹನಿಮೂನ್ ಅಂತು ಕನಸಿನ ಮಾತು , ಹೋಗ್ಲಿ ಹೊಸ ಸಂಸಾರ ಶುರು ಮಾಡ್ತಿದ್ದೀವಿ ಮನೆ ದೇವರಿಗೆ ಹೋಗಿ ಬರೋಣ್ವ ಅಂದ್ರೆ , 'ಅಯ್ಯೋ ದುಡ್ಡಿಲ್ಲ. ಅದೆಲ್ಲಾ ಆಗಲ್ಲ .' ಸರಿ ಬನ್ನಿ ನನ್ ಹತ್ರಾ ಸ್ವಲ್ಪ ದುಡ್ಡಿದೆ ಮನೆ ದೇವರಿಗೆ ಹೋಗಿ ಬರೋಣ ಅಂದ್ರೆ 'ಅಪ್ಪನ್ನ ಕೇಳ್ಬೇಕು' ಪ್ರೀತಿ ಮಾಡುವಾಗ .. ಹಿಂದೆ ಮುಂದೆ ಸುತ್ತುವಾಗ ಯಾರಪ್ಪನ ಅಪ್ಪಣೆಯೂ ಕೇಳದವರು ಈಗ ಪ್ರತಿಯೊಂದಕ್ಕೂ ಅಪ್ಪನ ಅಪ್ಪಣೆಗೆ ನಿಂತು ಬಿಟ್ಟರು. ಸರಿ ಆಯ್ತು ಅಂತಾ ಮಾವ ನನ್ನ ಬಳಿ ಸ್ವಲ್ಪ ಹಣವಿದೆ. ನಾನು ನಿಮ್ಮ ಮಗ ಮನೆ ದೇವರಿಗೆ ಹೋಗಿ ಬರ್ತಿವಿ ಅಂದೆ. 'ಅಯ್ಯೋ ಮನೆ ಹಿರಿಯರು ನಾವು . ನಮ್ಮನ್ನ ಬಿಟ್ಟು ಅದೇಗೆ ನೀವು ಹೋಗ್ತಿರಾ. ಬಸ್ ಎಲ್ಲಾ ಆಗಲ್ಲ ಕಾರಿನಲ್ಲೆ ಹೋಗಿ ಬರಬೇಕು . ಅದೆಲ್ಲಾ ಈಗ ಆಗಲ್ಲ. ಎಲ್ಲಿಯೂ ಹೋಗೊದು ಬೇಡ ಸುಮ್ನಿರಮ್ಮಾ,' ಅಂತಾ ಒರಟಾಗಿ ಉತ್ತರ ಬಂತು. ಇಷ್ಟೇ ಜೀವನ ಅಂತಾ ಸುಮ್ಮನಾದೆ. ಹೀಗೆ ಶುರುವಾದ ಸಂಸಾರದ ಕಾನೂನು ಕಟ್ಟಳೆಗಳು ಜೀವನವನ್ನೇ ಹಿಂಡಿ ಹಿಪ್ಪೆ ಮಾಡಿಬಿಟ್ಟಿತು. ನಾನೊಬ್ಬಳೆ ಕೆಲಸವನ್ನು ಹುಡುಕಿ ಹೋಗಲು ಆರಂಭಿಸಿದೆ. ಗಂಡನ ಮನೆಯಲ್ಲಿ ನಾನು ಪರಕೀಯಳು. ಬೇರೆಯವರ ಮನೆಯಿಂದ ಬಂದವಳು ಅಂತ ಅಡುಗೆ ಮನೆಗೆ ಬರುವುದನ್ನ ಇನ್ ಡೈರೆಕ್ಟ್ ಆಗಿ ಅತ್ತೆ ತುಂಬಾ ಚಾಣಾಕ್ಷತನದಿಂದ ತಡೆದು ಬಿಟ್ಟಿದ್ದರು. ಕುಟುಂಬದ ಗುಟ್ಟು ಅವರ ಮೂವರಲ್ಲಿ ಮಾತ್ರ. ಹೆಸರಿಗೆ ಮಾತ್ರ ಹೆಂಡತಿಯಾಗಿ, ಅತ್ತೆ ಮಾವನಿಗೆ ಸೊಸೆಯಾಗಿ ಮನೆಗೆ ಸದಸ್ಯೆಯಾಗಿ ಉಳಿದುಬಿಟ್ಟೆ.
ಚಿಗುರೊಡೆದ ಜೀವ:
ಮೊದಲಬಾರಿಗೆ ತವರು ಮನೆಗೆ ಹೋಗಬೇಕಿತ್ತು. ಅಣ್ಣ ಬಂದು ಕರೆದುಕೊಂಡು ಹೋಗಲು ಬರುತ್ತಿರುವಷ್ಟರಲ್ಲಿ ಸಾಕಷ್ಟು ನೊಂದು ಬೆಂದು ಕಣ್ಣೀರಾಗಿ ಹೋಗಿದ್ದೆ. ಅದೇ ನೋವಿನಲ್ಲಿ ಕಣ್ಣೀರ ಸುರಿಸುತ್ತ ಹೇಳಿ ಬಿಟ್ಟೆ, ನಾನಿನ್ನು ಈ ಮನೆಗೆ ಬರಲ್ಲ. ಡಿವೊರ್ಸ್ ತಗೊಳ್ಳೊಣ . ಈ ತರ ಬದಕೊಕಿಂತ ದೂರ ಇರುವುದೇ ಉತ್ತಮ. ಅದಕ್ಕೆ ಅವನ ಉತ್ತರ 'ನಿನಗೊಸ್ಕರ ಏನು ಮಾಡಿದ್ರು ಅಷ್ಟೇ . ಅಂತಹ ತಪ್ಪು ನಾನೇನೂ ಮಾಡಿಲ್ಲ..' ಹೀಗೆ ವಾದ ವಿವಾದಗಳು ಶುರುವಾದ್ವು . ಈ ಮಧ್ಯ ತವರು ಮನೆಗೆ ಹೋಗಿ ಬಂದೆ . ಅಪರೂಪಕ್ಕೆ ಸಿಕ್ಕನೆಂದು ಮುದ್ದು ಮಾಡಿ ಮಾತನಾಡಿದ ಪತಿರಾಯ. ಅದ್ಯಾವ ಘಳಿಗೆಯೋ ಮತ್ತೆ ಯಾಮಾರಿ ಬಿಟ್ಟೆ. ಹೊಟ್ಟೆಯಲ್ಲೊಂದು ಜೀವ ಚಿಗರೊಡೆಯಿತು. ನನಗೂ ನನ್ನ ಗಂಡನಿಗೂ ಹೇಳಿಕೊಳ್ಳಲಾಗದಷ್ಟು ಖುಷಿ. ಅದು ನಮ್ಮ ಪ್ರೀತಿಯ ಮೊದಲ ಸಂಕೇತ. ಆದರೆ ನಮ್ಮ ಪರಿಸ್ಥಿತಿ ಆರ್ಥಿಕವಾಗಿ ಹದಗೆಟ್ಟು ಹೋಗಿತ್ತು. ನಾನು ಶತಾಯ ಗತಾಯ ಕೆಲಸಕ್ಕೆ ಹೋಗಲೆ ಬೇಕು. ಮತ್ತೆ ನೋವಿನ ದಿನಗಳು ಆರಂಭ. ಅಡುಗೆ ಮನೆಗೆ ಹೋದರೆ ಕೆಲಸ ಮಾಡಲು ಹೋದಾಗೆಲ್ಲ ಬೇಡಮ್ಮ ಅನ್ನೊರು ನಮ್ಮತ್ತೆ. ಆಚೆ ಮಾವನ ಮುಂದೆ ಅವಳೇನೂ ಮಾಡಲ್ಲ ಅನ್ನುವ ಮಾತುಗಳು. ಹೊಟ್ಟೆ ಹಸಿದರೆ ಊಟ ಸಿಗುವುದು ಸ್ವಲ್ಪ ಕಷ್ಟವೆ ಇತ್ತು. ಬೆರಳೆಣಿಕೆಯ ಊಟ ಮನೆಯಲ್ಲಿ. ಆಚೆ ತಿನ್ನಲು ಹಣ ಇರುತ್ತಿರಲಿಲ್ಲ. ಎಂಜಲು ನುಂಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ, ಇದೇ ಊಟವಾಗಲಿ ನನ್ನ ಮಗುವಿಗೆ ಶಕ್ತಿಯಾಗಲೆಂದು.
ನನ್ನ ಈ ದರಿದ್ರಕ್ಕೆ ಮಗು ಅಂಜಿಹೋಗಿತ್ತು. 4 ತಿಂಗಳಿಗೆ ಮಗು ನನ್ನ ಗರ್ಭ ಬಿಟ್ಟು ಹೋಯ್ತು. ಅದು ನನ್ನ ಜೀವನದ ದೊಡ್ಡ ಪೆಟ್ಟು. ಊಟವಿಲ್ಲದೆ ಮನಸ್ಸಿಗೆ ನೆಮ್ಮದಿ ಇಲ್ಲ. ಇದನ್ನ ಗಂಡನ ಬಳಿ ಹೇಳಿದ್ರೆ 'ಅಯ್ಯೋ ಇದೆಲ್ಲ ಅತ್ತೆ ಮನೇಲಿ ಕಾಮನ್ . ಅದನ್ನ ಎಲ್ಲರೂ ಫೇಸ್ ಮಾಡಿರ್ತಾರೆ. ಅದೇನು ದೊಡ್ಡ ವಿಷಯವಲ್ಲ,' ಅಂದ್ರು. ಹೀಗೆ ಎರಡು ವರ್ಷ ಕಳೆದೊಯ್ತು. ಅಷ್ಟರಲ್ಲಿ ಮತ್ತೊಂದು ಅಬಾರ್ಷನ್ ಆಗಿತ್ತು. ನನ್ನ ಗಂಡನ ಪ್ರೀತಿ ಊಟದಲ್ಲಿರುವ ಉಪ್ಪಿನಕಾಯಿ ಪಲ್ಯ ಇದ್ದಂತೆ. ಊಟವೆಲ್ಲ ಬರೀ ನೋವು. ಆದರೆ ಸಿಗುವ ಕೊಂಚ ಪ್ರೀತಿಯನ್ನ ಆಸ್ವಾದಿಸುತ್ತ ಇದ್ದೆವು. ನನ್ನ ಗಂಡನಿಗೆ ನನ್ನ ಪರಿಸ್ಥಿತಿ ಅರ್ಥವಾಗಿ ಬೇರೆ ಮನೆ ಮಾಡಿದ. ಅಬ್ಬಾ ! ಮತ್ತೆ ಪ್ರೀತಿ ಮಳೆಯಾಗಿದೆ ಅಂತಾ ಖುಷಿಯಾಯ್ತು . ರೀ.. ಆ ದೇವ್ರು ಖುಷಿಯಾಗಿದ್ರೆ ಸುಮ್ನೆ ಬಿಡ್ತಾನಾ ಮತ್ತೆ ಟ್ವಿಸ್ಟ್ ಇಟ್ಟಿರಲ್ವಾ? ಖಂಡಿತಾ ಇದೆ.
Relationship Tips: ದಾಂಪತ್ಯ ಗಟ್ಟಿಯಾಗ್ಬೇಕೆಂದ್ರೆ ಬೆಳಗ್ಗೆ ಹೀಗ್ ಮಾಡೋದ ರೂಢಿಸಿಕೊಳ್ಳಿ!
ನನ್ ಗಂಡನಿಗೆ ಮನೆ ಸಾಗಿಸಲು ದುಡ್ಡು ಕೇಳಿದೆ. ಒಂದು ಏಟು ನನಗೆ ಬಿದ್ದೆ ಬಿಡ್ತು. 'ಈಗ ತಾನೆ ಸಾಲಗಳಿಂದ ಸುಧಾರಿಸಿಕೊಳ್ತಿದ್ದೇನೆ. ಅಲ್ಲಿ ಅಪ್ಪ ಅಮ್ಮನನ್ನ ನೋಡಿಕೊಳ್ಬೇಕು. ಇಲ್ಲಿ ನಿನ್ನ ನೋಡಿಕೊಳ್ಳೊಕೆ ಆಗಲ್ಲ. ಅಷ್ಟಿದ್ರೆ ಜೊತೆಗೆ ಬಾ, ಅಲ್ಲೆ ಇರು ನೋಡಿಕೊಳ್ತಿನಿ . ನನಗಾಗಲ್ಲಾ ಇದೆಲ್ಲಾ' ಅಂತಾ ಒಂದು ಮಟ್ಟಕ್ಕೆ ಅತ್ತು ಬಿಡುತ್ತಿದ್ದೆ. ಮತ್ತೆ ಮನಸ್ಸು ಕರಗಿತು. ಆಯ್ತು ಬಿಡು ಅಂತಾ ಟೊಂಕ ಕಟ್ಟಿ ಸಂಸಾರ ಕಟ್ಟಿಕೊಳ್ಳಬೇಕು ಅಂತಾ ದುಡಿಯಲು ನಿಂತೆ. ಹೀಗೆ ನೋವಿನ ಸಂತೆ ಶುರುವಾಗಿ ಬಿಡ್ತು. ಹೇಳ್ತಾ ಹೋದ್ರೆ ಜೀವನವೇ ಬೇಡ ಅನ್ನುಸುವಷ್ಟು ಪೆಟ್ಟು. ಹಾಗಂತ ಪ್ರೀತಿಗೇನೂ ಕಮ್ಮಿ ಇಲ್ಲ ಅಂತಾನೂ ಅನಿಸುತ್ತೆ. ಸಾಯುವ ವ್ಯಕ್ತಿಗೆ ಆಕ್ಸಿಜನ್ ಕೊಟ್ಟಹಾಗೆ ಪ್ರೀತಿಯ ಉಸಿರಾಟ. ಇದು ಉಸಿರು ಚೆಲ್ಲುವವರೆಗೆ ಇದ್ದೇ ಇರುತ್ತೆ ಅಂತ ಸುಮ್ಮನಾಗಿಬಿಟ್ಟೆ. ಕೊನೆಯಲ್ಲಿ ಒಂದೇ ಮಾತು.
'ಅವನೆಂದರೆ ಆಕಾಶದಷ್ಟು ಪ್ರೀತಿ ಅಂದುಕೊಂಡಿದ್ದೆ. ಆದರೆ ಅವನು ಆಕಾಶದಷ್ಟು ದೂರ..'