ಸಮಾಜದಲ್ಲಿ ಗೌರವಾನ್ವಿತ ಜೀವನ ನಡೆಸಲು ಏನು ಬೇಕು?. ಒಳ್ಳೆಯ ಕೆಲಸ, ಒಳ್ಳೆಯ ಸಂಬಳ, ಮದುವೆ ಮತ್ತು ಕುಟುಂಬ. 32 ವರ್ಷದ ಅಭಿಲಾಷ್ ಕುಮಾರ್‌ಗೆ ಇದೆಲ್ಲವೂ ಇತ್ತು. ಆದರೆ ಅವನ ಕಾ*ಮದ ಮೇಲೆ ಅವನಿಗೆ ಯಾವುದೇ ನಿಯಂತ್ರಣವಿರಲಿಲ್ಲ. ಅದಕ್ಕಾಗಿಯೇ ಅವನು ಇಂದು ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ರಸ್ತೆಯಲ್ಲಿ ಓಡಾಡುವ ಹುಡುಗಿಯರನ್ನು ನೋಡಿದ ನಂತರ ಅವನು ಪಬ್ಲಿಕ್‌ನಲ್ಲೇ ಅಶ್ಲೀಲ ಕೃತ್ಯದಲ್ಲಿ ತೊಡಗುತ್ತಿದ್ದನೆಂದು ಆರೋಪಿಸಲಾಗಿದೆ.
ಈತ ದೆಹಲಿಯ ಪಕ್ಕದಲ್ಲಿರುವ ಹರಿಯಾಣದ ಗುರುಗ್ರಾಮದಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿದ್ದು, ಸದ್ಯ ಬಂಧಿಸಲಾಗಿದೆ. ಇತ್ತೀಚೆಗೆ ಅವನು ಮಾಡೆಲ್ ಒಬ್ಬರ ಮುಂದೆ ಇದೇ ರೀತಿಯ ನಾಚಿಕೆಗೇಡಿನ ಕೃತ್ಯ ಎಸಗಿದನು. ನಂತರ ಮಾಡೆಲ್ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. ಈ ಘಟನೆಯು ಇಡೀ ಗುರುಗ್ರಾಮದಲ್ಲಿ ಸಂಚಲನ ಮೂಡಿಸಿತು. ಶಾಕಿಂಗ್ ವಿಷಯವೆಂದರೆ ಆರೋಪಿಯು ಈ ಹಿಂದೆಯೂ ಅನೇಕ ಕಡೆ ಇಂತಹ ಕೃತ್ಯ ಎಸಗಿದ್ದು, ಕೊನೆಗೂ ಅವನು ಸಿಕ್ಕಿಬಿದ್ದಿದ್ದಾನೆ.
ವಿಡಿಯೋ ಮಾಡಿ ಸತ್ಯವನ್ನ ಜಗತ್ತಿನ ಮುಂದೆ ತಂದಿಟ್ಟ ಮಾಡೆಲ್
ಆಗಸ್ಟ್ 4 ರಂದು, ಓರ್ವ ಮಾಡೆಲ್ 'X' (ಹಿಂದೆ ಟ್ವಿಟರ್) ನಲ್ಲಿ ವಿಡಿಯೋ ಪೋಸ್ಟ್ ಮಾಡಿ ತನಗಾದ ಅನುಭವವನ್ನು ವಿವರಿಸಿದರು. ಆಗಸ್ಟ್ 3 ರ ಬೆಳಗ್ಗೆ ಜೈಪುರದಿಂದ ಗುರುಗ್ರಾಮ್‌ನ ರಾಜೀವ್ ಚೌಕ್‌ಗೆ ಬಸ್ ಹತ್ತಿದ್ದೆ ಮತ್ತು ಮನೆಗೆ ಹೋಗಲು ಕ್ಯಾಬ್‌ಗಾಗಿ ಕಾಯುತ್ತಿದ್ದೆ ಎಂದು ಮಾಡೆಲ್ ಹೇಳಿದ್ದಾರೆ. ಈ ಸಮಯದಲ್ಲಿ ಮಾಸ್ಕ್ ಧರಿಸಿ ಬ್ಯಾಕ್ ಪ್ಯಾಕ್ ಹಿಡಿದು ತನ್ನ ಮುಂದೆ ಅಶ್ಲೀಲ ಸನ್ನೆಗಳನ್ನು ಮಾಡುತ್ತಿದ್ದ ವ್ಯಕ್ತಿಯನ್ನು ಆಕೆ ನೋಡಿದಳು.
ಮೊದಲಿಗೆ ಮಾಡೆಲ್ ಅವನನ್ನು ನಿರ್ಲಕ್ಷಿಸಲು ಪ್ರಯತ್ನಿಸಿದಳು. ಆದರೆ ಅವನ ಕೃತ್ಯಗಳು ಮಿತಿ ಮೀರಿದಾಗ, ಪೊಲೀಸರಿಗೆ ದೂರು ನೀಡಲು ಆಕೆ ವಿಡಿಯೋ ಮಾಡಬೇಕಾಯಿತು. ಆ ವ್ಯಕ್ತಿ ತನ್ನ ಬ್ಯಾಗ್ ಅನ್ನು ಭುಜದ ಮೇಲೆ ನೇತುಹಾಕಿಕೊಂಡು, ಪ್ಯಾಂಟ್ ಜಿಪ್ ತೆರೆದು ಈ ಅಸಹ್ಯ ಕೃತ್ಯವನ್ನು ಮಾಡುತ್ತಿದ್ದನೆಂದು ಮಾಡೆಲ್ ಹೇಳಿದ್ದಾಳೆ. ಈ ವಿಡಿಯೋ ಕಾಣಿಸಿಕೊಂಡ ನಂತರ, ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಹುಡುಕಲು ಪ್ರಾರಂಭಿಸಿದರು.
ಆರೋಪಿಯನ್ನು ಕಂಡುಹಿಡಿದಿದ್ದು ಹೇಗೆ?
ಆರೋಪಿಯನ್ನು ಹಿಡಿಯಲು ಪೊಲೀಸರು ಸಾಮಾಜಿಕ ಮಾಧ್ಯಮಗಳ ಸಹಾಯ ಪಡೆದು, ಆತನನ್ನು ಗುರುತಿಸಲು ಜನರ ಸಹಾಯ ಕೇಳಿದರು. ಏತನ್ಮಧ್ಯೆ ಮತ್ತೊಬ್ಬ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ತನ್ನ ಜೊತೆಯಲ್ಲೂ ಅದೇ ರೀತಿ ನಡೆದುಕೊಂಡಿದ್ದಾನೆ ಎಂದು ಹೇಳಿದರು. ಈ ಮಾಡೆಲ್ ಮಾಡಿದ ವಿಡಿಯೋ ಮತ್ತು ಹಳೆಯ ದೂರಿನ ಸಹಾಯದಿಂದ ಪೊಲೀಸರು ತನಿಖೆಯನ್ನು ಮುಂದಕ್ಕೆ ಕೊಂಡೊಯ್ದರು. ಮೊಬೈಲ್ ನೆಟ್‌ವರ್ಕ್ ಡೇಟಾ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಸಿಸಿಟಿವಿ ದೃಶ್ಯಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಲಾಯಿತು. ರಾಜೀವ್ ಚೌಕ್ ಮತ್ತು ಸುತ್ತಮುತ್ತಲಿನ ಹಲವಾರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪೊಲೀಸರು ಸ್ಕ್ಯಾನ್ ಮಾಡಿದರು, ಇದು ಆರೋಪಿಯನ್ನು ಗುರುತಿಸಲು ಸಹಾಯ ಮಾಡಿತು.
ಒಳ್ಳೆಯ ಕೆಲಸ, ಕುಟುಂಬ, ಆದರೂ ಇಂತಹ ಕೆಲಸ!
ಬಂಧಿತ 32 ವರ್ಷದ ಅಭಿಲಾಷ್ ಕುಮಾರ್ ಹರಿಯಾಣದ ಕರ್ನಾಲ್ ನಿವಾಸಿಯಾಗಿದ್ದು, ಪ್ರಸ್ತುತ ಗುರುಗ್ರಾಮದ ಸೆಕ್ಟರ್ 11 ರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಅವನು ಎಂಟೆಕ್ ಪದವೀಧರನಾಗಿದ್ದು, ಗುರುಗ್ರಾಮದ ಖಾಸಗಿ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದಾನೆ. ವಾರ್ಷಿಕ ಪ್ಯಾಕೇಜ್ 14 ಲಕ್ಷ ರೂ.ಇದೆ. ಅಭಿಲಾಷ್ ವಿವಾಹಿತನಾಗಿದ್ದು, ಒಬ್ಬ ಮಗನಿದ್ದಾನೆ.
ಪೊಲೀಸ್ ತನಿಖೆಯಲ್ಲಿ ಅವನು ಪ್ರತಿದಿನ ತನ್ನ ಕಂಪನಿಗೆ ಹೋಗಲು ರಾಜೀವ್ ಚೌಕ್ ಮೂಲಕ ಹಾದುಹೋಗುತ್ತಿದ್ದನು ಮತ್ತು ಈ ಸಮಯದಲ್ಲಿ ಅವನು ಇಂತಹ ಅಸಹ್ಯಕರ ಕೃತ್ಯಗಳನ್ನು ಹಲವು ಬಾರಿ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಕೊನೆಗೆ ಅವನ ಒಂದು ಕೃತ್ಯದ ವಿಡಿಯೋ ಸಾರ್ವಜನಿಕವಾಗುವುದರೊಂದಿಗೆ ಮತ್ತು ಹಳೆಯ ದೂರುಗಳ ಸಹಾಯದಿಂದ, ಅವನು ಕಾನೂನಿನ ಕಪಿಮುಷ್ಠಿಗೆ ಒಳಗಾದನು. ಈ ಘಟನೆಯು ಸಮಾಜದಲ್ಲಿ ವಿದ್ಯಾವಂತ ಮತ್ತು ನಾಗರಿಕ ಜನರು ಸಹ ಏಕೆ ಇಂತಹ ವಿಕೃತ ಮನಸ್ಥಿತಿಯನ್ನು ಹೊಂದಿದ್ದಾರೆ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಹುಟ್ಟುಹಾಕಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.