
ಸಾಮಾನ್ಯವಾಗಿ ಚಿಕಮ್ಮನ ಮೇಲೆ ಅಂದರೆ ಅಮ್ಮನ ತಂಗಿ ಮೇಲೆ ಹಾಗೂ ಅಪ್ಪನ ತಂಗಿ ಮೇಲೆ ಮಕ್ಕಳಿಗೆ ಇನ್ನಿಲ್ಲದ ಪ್ರೀತಿ ಇರುತ್ತದೆ. ಈ ಅತ್ತೆ ಹಾಗೂ ಚಿಕ್ಕಮ್ಮನ ಪಾತ್ರ ಮಕ್ಕಳ ಬಾಳಲ್ಲಿ ಅಷ್ಟು ಮಹತ್ವದ್ದು, ಚಿಕ್ಕಮ್ಮ ಎಂದರೆ ಎರಡನೇ ಅಮ್ಮನಿದ್ದಂತೆ ಇನ್ನು ಕೆಲವರಿಗೆ ಅತ್ತೆ ಎಂದರೆ ಅಮ್ಮನಿಗಿಂತಲೂ ಹೆಚ್ಚು ಪ್ರೀತಿ. 90ರ ದಶಕ ಹಾಗೂ ಅದರ ಹಿಂದಿನ ತಲೆಮಾರಿನ ಜನರಿಗೆ ಅಮ್ಮ ಅತ್ತೆ ಚಿಕ್ಕಮ್ಮನ ಪ್ರೀತಿಯ ಬಗ್ಗೆ ತುಂಬಾ ಚೆನ್ನಾಗಿ ಗೊತ್ತು, ಆಗ ಮನೆ ತುಂಬಾ ಜನರಿರುತ್ತಿದ್ದರು. ಈಗಿನಂತೆ ಅವಿಭಕ್ತ ಕುಟುಂಬವೂ ಅಲ್ಲ ಅಮ್ಮನ ಕಡೆಯವರು 10 ಮಕ್ಕಳಾದರೆ ಅಪ್ಪನ ಕಡೆಯೂ ಅಷ್ಟೇ ಬಲ ಕಡಿಮೆ ಎಂದರೆ 6 ಮಕ್ಕಳಂತು ಪ್ರತಿ ಮನೆಯಲ್ಲಿ ಇದ್ದೇ ಇರುತ್ತಿದ್ದರು. ಹೀಗೆ 10 ರಿಂದ 12 ಮಕ್ಕಳಿರುತ್ತಿದ್ದರೆ ಕೊನೆಯವಳು ಹುಡುಗಿಯಾಗಿದ್ದರೆ ಆಕೆಗೂ ಮೊದಲು ಜನಿಸಿದ ಅಣ್ಣ ಅಥವಾ ಅಕ್ಕಂದಿರ ಮಕ್ಕಳ ಜೊತೆಗೆ ಆಕೆಗೆ ಉತ್ತಮ ಒಡನಾಟವಿರುತ್ತಿತ್ತು. ಅತ್ತೆ ಹಾಗೂ ಚಿಕ್ಕಮ್ಮ ಅಥವಾ ಮಗಳು ಒಂದೇ ತರಗತಿಯಲ್ಲಿ ಓದುತ್ತಿರುವಂತಹ ಸಂದರ್ಭಗಳು ಇದ್ದವು. ಆಕೆಯ ಮದುವೆ ಸಂಭ್ರಮದ ವೇಳೆ ಈ ಮಕ್ಕಳಿಗೆಲ್ಲಾ ಹಬ್ಬವೋ ಹಬ್ಬ. ಇನ್ನು ಮಕ್ಕಳು ಸಣ್ಣವರಾಗಿದ್ದರೆ ಅವರು ಅತ್ತೆಯನ್ನೋ ಚಿಕ್ಕಮ್ಮನನ್ನೋ ಗಂಡನ ಮನೆಗೆ ಕಳುಹಿಸಿಕೊಡುವುದಕ್ಕೆ ಸುತಾರಾಂ ಇಷ್ಟಪಡುತ್ತಿರಲಿಲ್ಲ.
ಮನೆಯಲ್ಲಿ ಮಕ್ಕಳು ಗಲಾಟೆ ಮಾಡಿದಾಗ ತಮ್ಮ ಅಪ್ಪ-ಅಮ್ಮ, ಅಜ್ಜ ಅಜ್ಜಿ ಬೈದರೆ ಈ ಪುಟ್ಟ ಮಕ್ಕಳು ಅತ್ತೆ, ಚಿಕ್ಕಮ್ಮನ ಮಡಿಲು ಸೇರುತ್ತಿದ್ದರು. ಹೀಗಾಗಿ ಮನೆಯಲ್ಲಿ ಮಕ್ಕಳ ಮುದ್ದಿನ ಅತ್ತೆ ಎನಿಸುತ್ತಿದ್ದ ಅಪ್ಪನ ಕೊನೆಯ ಸೋದರಿ, ಅಥವಾ ಅಜ್ಜಿ ಮನೆಯಲ್ಲಿ ಬೆಳೆದವರಿದ್ದರೆ ಅಮ್ಮನ ಕೊನೆ ಸೋದರಿ ಎಂದರೆ ಮಕ್ಕಳಿಗೆ ತುಸು ಹೆಚ್ಚೇ ಪ್ರೀತಿ. ಹೀಗಿರುವಾಗ ಅವರ ಮದುವೆಯ ದಿನದ ಸಂಭ್ರಮದ ಜೊತೆಗೆ ಅವರು ಬೇರೆ ಮನೆಗೆ ಹೋಗುತ್ತಿದ್ದಾರೆ ಎಂದು ಅರಿತ ನಂತರ ಬಿಕ್ಕಳಿಸಿ ಬರುವ ದುಃಖವನ್ನು ಯಾರಿಗೂ ತಡೆಯಲು ಆಗುವುದಿಲ್ಲ, ಮದುವೆಯ ನಂತರ ಅತ್ತೆ ಚಿಕ್ಕಮ್ಮ/ ತಮ್ಮ ಮುದ್ದಿನ ಪುಟ್ಟ ಅತ್ತೆ ಬೇರೆ ಮನೆಗೆ ಹೋಗುತ್ತಾರೆ ಎಂಬುದೇ ಗೊತ್ತಿಲ್ಲದೇ ಮದುವೆ ಮನೆಯ ತುಂಬೆಲ್ಲಾ ಓಡಾಡುತ್ತಾ ಎಂಜಾಯ್ ಮಾಡ್ತಿರುತ್ತಾರೆ. ಆದರೆ ಮಾವನ ಕೈ ಹಿಡಿದು ಅತ್ತೆ, ಚಿಕ್ಕಪ್ಪನ ಕೈ ಹಿಡಿದು ಚಿಕ್ಕಮ್ಮ ಹೊರಟು ನಿಂತಾಗಲೇ ನೋಡಿ ನಿಜವಾದ ದುಃಖ ಶುರುವಾಗೋದು, ಅನೇಕ ಮಕ್ಕಳು ಅತ್ತೆ/ ಚಿಕ್ಕಮ್ಮನನ್ನು ಅವರ ಗಂಡನ ಜೊತೆ ಕಳುಹಿಸುವುದು ಬೇಡ ಅವರು ನಮ್ಮ ಮನೆಯಲ್ಲೇ ಇರಲಿ ಎಂದು ರೆಚ್ಚೆ ಹಿಡಿದು ಅಳಲು ಶುರು ಮಾಡುತ್ತಾರೆ.
ಮಕ್ಕಳ ಅಳುವಿನ ಜೊತೆಗೆ ಇತ್ತ ಪೋಷಕರಿಗೂ ಇಷ್ಟು ದಿನ ಸಾಕಿ ಮುದ್ದಾಗಿ ಬೆಳೆಸಿದ ಮಗಳನ್ನು ಬೇರೆ ಮನೆಗೆ ಕಳುಹಿಸಿಕೊಡುವಾಗ ಇನ್ನಿಲ್ಲದ ದುಃಖವಾಗುತ್ತದೆ. ಅಜ್ಜ ಅಜ್ಜಿ, ಅಪ್ಪ ಅಮ್ಮ ಹೀಗೆ ಎಲ್ಲರೂ ಅಳುವುದಕ್ಕೆ ಶುರು ಮಾಡುತ್ತಾರೆ. 'ಮಗಳು ಮನೆಗಲ್ಲಾ' ಎಂಬ ವಾಸ್ತವ ಅರ್ಥವಾಗುತ್ತಲೇ ತಮ್ಮನ್ನು ತಾವು ಸಮಾಧಾನಿಸಿಕೊಂಡು ಪೋಷಕರು ಸುಮ್ಮನಾಗುತ್ತಾರೆ. ಆದರೆ ಮಕ್ಕಳು ಮಾತ್ರ ಅತ್ತೆ/ ಚಿಕ್ಕಮ್ಮ ಅಲ್ಲಿಂದ ಹೋಗುವವರೆಗೂ ಅವರನ್ನು ತಡೆಯಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ವೀಡಿಯೋ ವೈರಲ್ ಆಗಿದೆ. ಪುಟ್ಟ ಬಾಲಕನೋರ್ವ ತನ್ನ ಅತ್ತೆಯನ್ನು ಆಕೆಯ ಗಂಡನ ಜೊತೆ ಕಳುಹಿಸಿ ಕೊಡುವ ಮನಸ್ಸಾಗದೇ ಕೋಲು ಹಿಡಿದುಕೊಂಡು ಮಾವನಿಗೆ ಬಾರಿಸಲು ಬರುತ್ತಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
arvhan6(Arvhan) ಎಂಬ ಇನ್ಸ್ಟಾ ಖಾತೆಯಿಂದ ಈ ವೀಡಿಯೋ ವೈರಲ್ ಆಗಿದ್ದು, ತನ್ನ ಅತ್ತೆಯನ್ನು(ತಂದೆಯ ಕಿರಿಯ ಸೋದರಿ) ಕರೆದುಕೊಂಡು ಹೋಗುವುದನ್ನು ತಡೆಯಲು ಆ ಪುಟ್ಟ ಹುಡುಗ ಏನು ಸಾಧ್ಯವೋ ಅದೆಲ್ಲಾ ಮಾಡಿದ. ಮದುವೆಯ ಅರ್ಥವನ್ನು ಅರ್ಥಮಾಡಿಕೊಳ್ಳಲು ಆ ಮಗು ತುಂಬಾ ಚಿಕ್ಕದು, ತನ್ನ ಅತ್ತೆ ಮತ್ತೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ಆತ ಭಾವಿಸಿದ್ದಾನ ಎಂದು ಬಾಲಕನೋರ್ವನ ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.
ವೀಡಿಯೋದಲ್ಲಿ ಆ ಬಾಲಕ ಕೋಲು ಹಿಡಿದು ಹೊಡೆದಾಡುವುದನ್ನು ನೋಡಬಹುದು. ಒಬ್ಬರು ಮಹಿಳೆ ಬಹುಷಃ ಆತನ ತಾಯಿ ಆತನನ್ನು ಹಿಡಿದುಕೊಂಡು ಸಮಾಧಾನಪಡಿಸಲು ಯತ್ನಿಸಿದರು ಆತ ಕೇಳುತ್ತಿಲ್ಲ. ಈ ಹುಡುಗನ ಗಲಾಟೆ ನೋಡಿ ಸುತ್ತಲಿರುವವರು ನಗುವುದನ್ನು ಕಾಣಬಹುದು. ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ಅತ್ತೆ ಮೇಲಿನ ಮಕ್ಕಳ ಪ್ರೀತಿ ಅಳತೆ ಮೀರಿದ್ದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಯಾರದು ಆತನ ಅತ್ತೆಯನ್ನು ಕಸಿಯಲು ಬಯಸುತ್ತಿರುವವರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.