
ಸಂಗಾತಿಯ ಆಯ್ಕೆಯ ಸಮಯದಲ್ಲಿ ಗೊಂದಲವಾಗುವುದು ಸಹಜ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಬಹು ಗೋಜಲಿನ ಕೆಲಸವೂ ಹೌದು. ಇಂತಹ ಸನ್ನಿವೇಶ ಸಹಜವಾಗಿ ಎಲ್ಲರಿಗೂ ಬರುತ್ತದೆ. ಆದರೆ, ಪ್ರೀತಿಸಿ ಮದುವೆಯಾಗುವವರಿಗೆ ಈ ತೊಂದರೆ ಸಾಮಾನ್ಯವಾಗಿ ಇರುವುದಿಲ್ಲ ಎಂದು ನಾವಂದುಕೊಳ್ಳುತ್ತೇವೆ. ಆದರೂ ಕೆಲವರು ಇಲ್ಲೂ ಆಟವಾಡುತ್ತಾರೆ. ಮೊದಲು ಪ್ರೀತಿಸಿರುವ ಹುಡುಗಿಯೋ, ಹುಡುಗನೋ ಇದ್ದರೂ ಮತ್ತೊಬ್ಬರನ್ನೂ ಪ್ರೀತಿಯ ಸನಿಹಕ್ಕೆ ಎಳೆತಂದಿರುತ್ತಾರೆ. ಇದನ್ನು ಆಧುನಿಕ ಪರಿಭಾಷೆಯಲ್ಲಿ “ಕುಷನಿಂಗ್ʼ ಎಂದು ಕರೆಯಲಾಗುತ್ತದೆ. ಅಂದರೆ, ಈಗಾಗಲೇ ಒಬ್ಬ ಲವರ್ ಇದ್ದರೂ ಅವರೊಂದಿಗೆ ಏನಾದರೂ ಸಮಸ್ಯೆ ಎದುರಾದರೆ ಮತ್ತೊಬ್ಬರನ್ನು ಸಂಗಾತಿ ಮಾಡಿಕೊಳ್ಳಲು ಬದಲಿ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಅಂದರೆ, ಅವರು ನಿಮ್ಮನ್ನು ಕುಷನಿಂಗ್ ವ್ಯವಸ್ಥೆಯಲ್ಲಿ ಇಟ್ಟಿರುತ್ತಾರೆ. ಅಂಥವರು ನೀವಲ್ಲದಿದ್ದರೆ ಇನ್ನೊಬ್ಬರು ಲಭ್ಯ ಇರುವಂತೆ ನೋಡಿಕೊಳ್ಳುತ್ತಾರೆ. ನಿಜವಾದ ಪ್ರೀತಿ ಇದ್ದಾಗ ಹೀಗೆಲ್ಲ ಸಂಭವಿಸುವುದಿಲ್ಲ. ಆದರೆ, ಸಂಬಂಧದಲ್ಲಿ ಅಪನಂಬಿಕೆ ಇದ್ದಾಗ, ಬಾಂಧವ್ಯ ಸದೃಢವಾಗಿರದಿದ್ದಾಗ ಇವು ನಡೆಯುತ್ತವೆ. ಹೀಗಾಗಿ, ಹುಡುಗನಾಗಲೀ, ಹುಡುಗಿಯಾಗಲೀ ನಿಮ್ಮನ್ನು ಕುಷನಿಂಗ್ ಆಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎನ್ನುವುದನ್ನು ಮೊದಲು ದೃಢಪಡಿಸಿಕೊಳ್ಳಬೇಕು. ಅವರು ನಿಮ್ಮ ಬಗ್ಗೆ ನಿಜವಾಗಿಯೂ ಪ್ರೀತಿ ಹೊಂದಿಲ್ಲದಿದ್ದರೆ ಕೊನೆಗೆ ನೀವು ಭಾರೀ ಬೆಲೆ ತೆರಬೇಕಾಗುತ್ತದೆ. ಹಲವು ವರ್ತನೆಗಳ ಮೂಲಕ ಈ ಮನೋಭಾವವನ್ನು ಗುರುತಿಸಬೇಕು.
• ತಮ್ಮ ಮೊಬೈಲ್ (Mobile) ಅನ್ನು ನಿಮಗೆ ನೀಡುವುದೇ ಇಲ್ಲ
ನಿಮ್ಮ ಸಂಗಾತಿ (Partner) ನಿಮ್ಮ ಬಗ್ಗೆ ಪ್ರೀತಿ (Love) ಹೊಂದಿರದೆ ಕೇವಲ ಫ್ಲರ್ಟಿಂಗ್ (Flirting) ಮಾಡುತ್ತಿರಬಹುದು. “ನೀವಲ್ಲದಿದ್ದರೆ ಇನ್ನೊಬ್ಬರುʼ ಎನ್ನುವ ಭಾವನೆ ಅವರಲ್ಲಿದ್ದಾಗ ತಮ್ಮ ಮೊಬೈಲ್ ಫೋನನ್ನು ಅವರು ಎಂದಿಗೂ ದೂರ ಇಡುವುದಿಲ್ಲ. ಕೆಲವೊಮ್ಮೆಯಾದರೂ ನಿಮಗೆ ತೋರಿಸುವುದಿಲ್ಲ. ಏಕೆಂದರೆ, ನಿಮಗೆ ಕಳುಹಿಸಿದಂತೆಯೇ ಅವರು ಇನ್ನೊಬ್ಬರಿಗೂ ಫ್ಲರ್ಟಿಂಗ್ ಮೆಸೇಜ್ ಗಳನ್ನು ಕಳುಹಿಸುತ್ತಿರಬಹುದು.
ಇದನ್ನೂ ಓದಿ: ಪ್ರೀತಿ ಅಂದ್ರೆ ಸ್ನೇಹಿತರನ್ನು ಮರೆತು ಬಿಡುವುದಲ್ಲ
• ಅತಿ ಪ್ರೀತಿ, ಅತಿಯಾದ ಶಾಂತಿ ಮತ್ತು ಗುಟ್ಟು (Secret)
ಒಂದು ದಿನ ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಅಪಾರ ಕಾಳಜಿ (Care) ತೋರಿಸಬಹುದು. ಅತಿಯಾದ ಶಾಂತಿಯಿಂದ ಕೂಡಿದ್ದು, ನಿಮ್ಮ ಪ್ರಶ್ನೆಗಳಿಗೆಲ್ಲ ಶಾಂತವಾಗಿ ಉತ್ತರಿಸಬಹುದು. ಹಾಗೆಯೇ ನಿಮಗಾಗಿ ಸಮಯ (Time) ನೀಡಬಹುದು. ಆದರೆ, ಮರುದಿನವೇ ಅವರು ಸಂಪೂರ್ಣ ಬ್ಯುಸಿಯಾಗಿ ನಿಮ್ಮ ಬಳಿ ಮಾತನಾಡಲು ಸಮಯವೇ ಇರದಂತೆ ವರ್ತಿಸಬಹುದು. ನೀವು ಅವರ ಲೊಕೇಷನ್ ಗುರುತಿಸಬಾರದೆಂಬ ಭಾವನೆಯಿಂದ ನಿಮ್ಮ ಫೋನ್ ಕಾಲ್ ತೆಗೆದುಕೊಳ್ಳಲು ಸಹ ಹಿಂದೇಟು ಹಾಕಬಹುದು. ನಂತರ ಅದರ ಬಗ್ಗೆ ಪ್ರಶ್ನಿಸಿದಾಗ ಕೋಪ ಪ್ರದರ್ಶಿಸಬಹುದು. ವರ್ತನೆಯಲ್ಲಿ ಕಂಡುಬರುವ ಈ ರೀತಿಯ ಏರಿಳಿತಗಳು ಅವರು ನಿಮ್ಮನ್ನು ಕುಷನಿಂಗ್ (Cushioning) ಆಗಿ ಬಳಕೆ ಮಾಡಿಕೊಳ್ಳುತ್ತಿರುವುದರ ಲಕ್ಷಣ. ಹೀಗೆ ಮಾಡುವ ಮೂಲಕ ಅವರು ನಿಮ್ಮನ್ನು ಗೊಂದಲದಲ್ಲಿ ಬೀಳಿಸುತ್ತಾರೆ. ಇದೂ ಸಹ ಕುಷನಿಂಗ್ ಸಂಬಂಧದ ಲಕ್ಷಣವೇ ಆಗಿದೆ.
ಇದನ್ನೂ ಓದಿ: Sexual Health: ಸಂಗಾತಿ ಜೊತೆ ಸಂಭೋಗದ ವೇಳೆ ಶಿಶ್ನ ಮುರಿತ, ವಿಚಿತ್ರ ನಡೆಯಲು ಇದೇ ಕಾರಣ
• ಇಬ್ಬರ ನಡುವೆ ಆಪ್ತತೆ (Intimacy) ಕಡಿಮೆ, ಅನುಮಾನವೇ ಹೆಚ್ಚು
ಸಾಮಾನ್ಯವಾಗಿ ಪ್ರೀತಿಪಾತ್ರರ ನಡುವೆ ಉತ್ತಮ ಆಪ್ತವಾದ ಭಾವನೆ ಇರುವುದು ಸಹಜ. ಆದರೆ, ಇಂತಹ ಸಂಬಂಧದಲ್ಲಿ ಮಾತ್ರ ಆಪ್ತತೆ ಮಾಯವಾಗಿರುತ್ತದೆ. ಹುಡುಗ, ಹುಡುಗಿ ಯಾರಾದರೊಬ್ಬರು ಇನ್ನೊಬ್ಬರನ್ನು ಬದಲಿ ವ್ಯವಸ್ಥೆಯಂತೆ ನೋಡಿಕೊಂಡಾಗ ನಿಧಾನವಾಗಿ ಆಪ್ತ ಭಾವನೆ ಕಡಿಮೆ ಆಗುತ್ತದೆ. ಬದಲಿಗೆ, ಅನುಮಾನ ಹೆಚ್ಚಾಗಿ ಕಾಡುತ್ತದೆ. ಅವರು ಹೇಳಿದ್ದಕ್ಕೆಲ್ಲ ಅನುಮಾನ ಉಂಟಾಗುತ್ತದೆ. ಒಮ್ಮೊಮ್ಮೆ ಕೈಗೆ ಸಿಗುತ್ತಾರೆ, ಇನ್ನೊಮ್ಮೆ ಅವರು ಏನು ಮಾಡುತ್ತಾರೆಂದೇ ತಿಳಿಯದಷ್ಟು ದೂರ ಇರುವುದರಿಂದ ಗೊಂದಲ ತುಂಬುತ್ತದೆ. ಅಪನಂಬಿಕೆ ಉತ್ತಮ ಸಂಬಂಧಕ್ಕೆ ಅಡಿಪಾಯ ಅಲ್ಲ. ಹೀಗಾಗಿ, ನೀವು ನಿಮ್ಮ ಸಂಬಂಧದಲ್ಲಿ ಇಂಥದ್ದೊಂದು ಸ್ಥಿತಿ ಎದುರಿಸುತ್ತಿದ್ದೀರಾ ಎಂದು ಚೆಕ್ ಮಾಡಿಕೊಳ್ಳಿ. ನಿಮ್ಮ ಲವರ್ (Lover) ಜತೆ ಮುಕ್ತವಾಗಿ ಮಾತನಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.