
ಹದಿನೈದು ದಿನಗಳ ಹಿಂದೆ ಮಂಡ್ಯ ರೈಲ್ವೆ ಸ್ಟೇಶನ್ ಬಳಿ ಭರತ್ ಗೌಡ ಎನ್ನುವವರು ರೈಲಿಗೆ ತಲೆ ಕೊಟ್ಟು ಹೋದರು. ಇವರು ಒಳ್ಳೆಯ ಉದ್ಯೋಗದಲ್ಲಿದ್ದರು. ಇವರ ಸಾವಿನ ಬಗ್ಗೆ ಯುಟ್ಯೂಬರ್ ರಮ್ಯಾ ಜಗತ್ ಮೈಸೂರು ಎನ್ನುವವರು ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಬರೆದುಕೊಂಡಿದ್ದಾರೆ.
ಕಳೆದ ಗುರುವಾರ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದೆ.. ಬೆಂಗಳೂರಿಗೆ ಹೋಗುವಾಗಲೆಲ್ಲ ರೈಲಿನಲ್ಲೇ ಹೋಗುವುದು ಅಭ್ಯಾಸ.. ಆ ದಿನವೂ ಕೂಡ ಬೆಳಗ್ಗೆ 8.20 ಕ್ಕೆ ಮೈಸೂರಿನ ಅಶೋಕಪುರಂ ನಿಂದ ಮಾಲ್ಗುಡಿ ಎಕ್ಸ್ಪ್ರೆಸ್ ಹಿಡಿದು ಹೊರಟೆ.. ಹೋಗುವಾಗ ಸಂಪೂರ್ಣ ಸಮಯ ಕೆಲಸದ ಬಗೆಗಿನ ಯೋಜನೆಗಳೇ ಇದ್ದವು.. ಕೆಲಸ ಮುಗಿಸಿ ಮರಳಿ ಬಂದದ್ದು ಪ್ಯಾಸೆಂಜರ್ ಒಂದರಲ್ಲಿ ಜನ ಹೆಚ್ಚಿದ್ದ ಕಾರಣ ಚನ್ನಪಟ್ಟಣದವರೆಗೆ ನಿಂತೇ ಬಂದೆ.. ನಂತರ ಕೂತು ಕಿಟಕಿ ಕಡೆ ನೋಡುವಾಗ ತಲೆಯಲ್ಲಿ ಸಾಕಷ್ಟು ಆಲೋಚನೆಗಳು ಬಂದು ಹೋದವು.. ರೈಲಿಗೆ ತಲೆ ಕೊಡುವಾಗ ಭಯ ಆಗುವುದಿಲ್ಲವಾ.. ಹೆತ್ತವಳು ಕಣ್ಣ ಮುಂದೆ ಬರುವುದಿಲ್ಲವಾ.. ನಾವು ಹುಟ್ಟಿಸಿದ ಮಕ್ಕಳ ಕರ್ತವ್ಯಗಳು ನೆನಪಾಗುವುದಿಲ್ಲವಾ.. ಜೀವನವೇ ನೀನೆಂದು ಬದುಕು ಹಂಚಿಕೊಂಡ ಸಂಗಾತಿಯನು ಒಂಟಿಯಾಗಿ ಬಿಡುತ್ತಿದ್ದೇನೆ ಎನಿಸುವುದಿಲ್ಲವಾ.. ಹೀಗೆ ನಾನಾ ಪ್ರಶ್ನೆಗಳು ತಲೆಯಲ್ಲಿ ಬಂದವು.. ರೈಲಿನ ಬಾಗಿಲಿನ ಬಂದು ನಿಂತೆ.. ಎದೆ ಕಂಪಿಸಿತು.. ಕೈ ಕಾಲುಗಳು ನಡುಗಲು ಆರಂಭಿಸಿದವು.. ಮರಳಿ ಹೋಗಿ ಸೀಟಿನಲ್ಲಿ ಕೂತುಬಿಟ್ಟೆ..
ಇಷ್ಟೆಲ್ಲಾ ಆಲೋಚನೆಗಳು ತಲೆಯಲ್ಲಿ ಬರಲು ಕಾರಣ ನಾನು ಬೆಂಗಳೂರಿಗೆ ಹೋಗಿದ್ದ ಗುರುವಾರಕ್ಕೆ ಸರಿಯಾಗಿ ಒಂದು ವಾರದ ಹಿಂದೆ ಮಂಡ್ಯದ ಶುಗರ್ ಟೌನ್ ಬಳಿ ಬಿಜಾಪುರಕ್ಕೆ ತೆರಳುತ್ತಿದ್ದ ಗೋಲ್ ಗುಂಬಾಜ್ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ವ್ಯಕ್ತಿ ಒಬ್ಬರು ಜೀವ ಕಳೆದುಕೊಂಡಿದ್ದರು.. ಆ ವ್ಯಕ್ತಿಯ ಹೆಸರು ಭರತ್ ರಾಜ್.. ಮಂಡ್ಯದ ಮನ್ ಮುಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ..
ನಾವು ಹುಟ್ಟಿ ಬೆಳೆದಿದ್ದೆಲ್ಲಾ ಹೆಚ್ ಡಿ ಕೋಟೆಯಲ್ಲೇ.. ನಮ್ಮ ಮನೆ ಇದ್ದ ರೋಡಿನ ಪಕ್ಕದ ರಸ್ತೆಯಲ್ಲಿಯೇ ಇವರ ಮನೆ.. ಅಣ್ಣನ ವಯಸ್ಸಿನವ.. ನಾವು ಅಲ್ಲಿ ಇಲ್ಲಿ ಸಮಾರಂಭಗಳಲ್ಲಿ ನೋಡಿದ್ದಷ್ಟೇ.. ಅಣ್ಣನಿಗೆ ಪರಿಚಯ ಹೆಚ್ಚು.. ಇತ್ತ ಅವರ ತಂದೆ ತಾಯಿ ನಮ್ಮ ಕುಟುಂಬಕ್ಕೆ ಸಮಾರಂಭಗಳಿಗೆ ಆಹ್ವಾನ ನೀಡುವಷ್ಟು ಪರಿಚಯಸ್ತರು.. ಒಟ್ಟಿನಲ್ಲಿ ಶಾಲಾ ದಿನಗಳಲ್ಲಿ ಇವರುಗಳನ್ನೆಲ್ಲಾ ನೋಡಿ ಬೆಳೆದಿದ್ದ ದಿನಗಳು ಎನ್ನಬಹುದು..
ಇವರ ತಂದೆ ತಾಯಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ.. ಗಂಡು ಮಗನೇ ಈ ಭರತ್ ರಾಜ್.. ಚೆನ್ನಾಗಿ ಓದಿ ಮನ್ ಮುಲ್ ನಲ್ಲಿ ಕೆಲಸಕ್ಕೂ ಸೇರಿಕೊಂಡು ಒಳ್ಳೆಯ ಜೀವನ ನಡೆಸುತ್ತಿದ್ದರು.. ಮನೆಕಡೆ ಅನುಕೂಲಸ್ಥರೇ.. ಕೆಲ ವರ್ಷಗಳ ಹಿಂದಷ್ಟೇ ಮದುವೆಯಾಗಿ ಮುದ್ದಾದ ಗಂಡು ಮಗುವೂ ಆಗಿತ್ತು.. ಸೋಷಿಯಲ್ ಮೀಡಿಯಾದಲ್ಲಿ ಪತ್ನಿಯೊಟ್ಟಿಗಿನ ಫೋಟೋಗಳನ್ನು ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದದ್ದೂ ಉಂಟು.. ಇವರನ್ನು ನೋಡಿ ನಾವೂ ಹಿಂಗೆ ಇರಬೇಕು ಅಂತ ಅಂದುಕೊಂಡ ಜೋಡಿಗಳೂ ಉಂಟು.. ಅದೇ ಕಾರಣಕ್ಕೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳು ಕೂಡ ಈ ಜೋಡಿಗೆ ಇದ್ದರು..
ಆದರೆ ಇದ್ದಕಿದ್ದ ಹಾಗೆ ಕಳೆದ ಗುರುವಾರ ಅಂದರೆ ಹನ್ನೊಂದು ದಿನಗಳ ಹಿಂದೆ ಸಂಜೆ ಭರತ ರೈಲಿಗೆ ಈ ರೀತಿ ಮಾಡಿಕೊಂಡು ತೀರಿಕೊಂಡಿದ್ದಾನೆ ಎಂದು ಅಣ್ಣ ಬಂದು ಅಮ್ಮನ ಬಳಿ ಹೇಳಿದಾಗ ಒಂದು ರೀತಿ ಶಾಕ್ ಆಗಿತ್ತು.. ಹೇ ಸುಳ್ಳಿರಬಹುದು ಎಂದು ಸುಮ್ಮನಾದೆವು.. ಆದರೂ ಅದ್ಯಾಕೋ ಮನಸ್ಸು ತಡೆಯದೇ ನಮ್ಮ ಪತ್ರಿಕಾ ವರದಿಗಾರರೊಬ್ಬರಿಗೆ ಫೋನ್ ಮಾಡಿ ಯಾವುದಾದರೂ ಕೇಸ್ ರಿಪೋರ್ಟ್ ಆಗಿದೆಯಾ ಎಂದು ಕೇಳಿದೆ.. ಆಗ ವಿಚಾರ ಖಚಿತವಾಯಿತು..
ವಯಸ್ಸು 35 - 36 ಇರಬಹುದಷ್ಟೇ.. ಇಷ್ಟು ಚಿಕ್ಕ ವಯಸ್ಸಿಗೆ ಅಷ್ಟು ಸುಂದರ ಸಂಸಾರವನ್ನು ಬಿಟ್ಟು ಹೋಗುವುದು ಅಂದರೆ ನಿಜಕ್ಕೂ ನಾನಾ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.. ಸಂಬಂಧಿಕರು ಸಾವಿಗೆ ಹೋಗಿ ಬಂದಾಗ ಹಣಕಾಸಿನ ವಿಚಾರಕ್ಕೆ ಎನ್ನುವ ಕಾರಣ ತಿಳಿಯಿತು.. ನಂತರದಲ್ಲಿ ಪತ್ರಿಕೆಯಲ್ಲಿಯೇ ಆನ್ಲೈನ್ ಟ್ರೇಡಿಂಗ್ ನಲ್ಲಿ ಹಣ ಕಳೆದುಕೊಂಡದ್ದು ಎನ್ನುವುದು ವರದಿಯಾಯ್ತು.. ನಿಜಕ್ಕೂ ತೀರಾ ಬೇಸರವಾಯ್ತು.. ನಾವು ಕಂಡಂತ ಹುಡುಗನೇ.. ಸೋಷಿಯಲ್ ಮೀಡಿಯಾ ಬಳಸುವಾಗ ಪತ್ನಿ ಜೊತೆಗಿನ ಫೋಟೋ ನೋಡಿ ಅಮ್ಮನಿಗೆ ತೋರಿಸಿದ್ದೂ ಉಂಟು.. ಅಷ್ಟು ಸುಂದರ ಸಂಸಾರ ಅವರದ್ದು..
ಆದರೆ ಆನ್ಲೈನ್ ಹಣದ ವಿಚಾರಕ್ಕೆ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರ ಮಾಡಿದ್ದಾರೆಂದರೆ ನಿಜಕ್ಕೂ ಸಂಕಟವಾಗುತ್ತದೆ. ದಯವಿಟ್ಟು ಆನ್ಲೈನ್ ನಲ್ಲಿ ಆಡುವ ಆಟಗಳು ಜೀವ ಜೀವನ ಎಲ್ಲವನ್ನೂ ಕಸಿದುಕೊಂಡು ಬಿಡುತ್ತದೆ.. ದಯವಿಟ್ಟು ಅಂತಹ ಅಭ್ಯಾಸ ಇರುವವರು ನಿಮ್ಮ ಕುಟುಂಬದ ಮುಖವನ್ನೊಮ್ಮೆ ನೋಡಿ ಬಿಟ್ಟುಬಿಡಿ.. ಬೀದಿಗೆ ಬಂದ ನಂತರ ಜೀವ ಕಳೆದುಕೊಂಡರೆ ನಿಮ್ಮನ್ನೇ ನಂಬಿಕೊಂಡ ಜೀವಗಳು ತಮ್ಮ ಜೀವನಪೂರ್ತಿ ಕೊರಗುತ್ತಲೇ ಇರಬೇಕಾಗುತ್ತದೆ..
ಇನ್ನು ಕಾರಣ ಏನೇ ಇರಲಿ.. ಇರುವುದೊಂದು ಬದುಕು.. ಇದ್ದು ಎದುರಿಸಬೇಕೇ ಹೊರತು ಕಣ್ಮರೆಯಾಗಿ ಹೆತ್ತ ಕರುಳಿಗೆ ಕಣ್ಣೀರು ತರಿಸಬಾರದು.. ಆ ಕೊನೆಯ ಕ್ಷಣ ಇನ್ನೇನು ರೈಲು ಬರುತ್ತಿದೆ ಎನುವಾಗಲಾದರೂ ಹೆಂಡತಿ ನಿನಪಾಗಲಿಲ್ಲವೇ.. ಮಗನ ಮುಖ ಕಣ್ಣ ಮುಂದೆ ಬರಲಿಲ್ಲವೇ? ಎನ್ನುವ ಹತ್ತಾರು ಪ್ರಶ್ನೆಗಳಿವೆ.. ಆದರೆ ಉತ್ತರ ಕೊಡಲು ಭರತನಿಲ್ಲ ಅಷ್ಟೇ.. ದಯವಿಟ್ಟು ಅಂತಹ ಆನ್ಲೈನ್ ಆಟಗಳ ಅಭ್ಯಾಸ ಇರುವವರು ದಯಮಾಡಿ ಬಿಟ್ಟುಬಿಡಿ..
ನಿನ್ನೆ ಭರತನ ಹನ್ನೊಂದು ದಿನಗಳ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ.. ಬಂದ ನೆಂಟರಿಷ್ಟರು ಮನೆಗೆ ಮರಳುತ್ತಾರೆ.. ನಾಳೆ ಮತ್ತೊಂದು ಕಾರ್ಯಕ್ಕೋ ಸಮಾರಂಭಕ್ಕೋ ಹೋಗುತ್ತಾರೆ.. ದಿನಕಳೆದಂತೆ ಭರತನನ್ನು ಮರೆಯುತ್ತಾರೆ.. ಆದರೆ ಆತನ ಕುಟುಂಬದ ಕತೆ.. ಆತನನ್ನು ಹೆತ್ತ ತಾಯಿಯ ಕತೆ.. ಆತನೇ ಸರ್ವಸ್ವ ಎಂದು ನಂಬಿಕೊಂಡು ಬಂದ ಹೆಣ್ಣು ಮಗಳ ಕತೆ.. ಅಪ್ಪನನ್ನು ಹೀರೋ ಆಗಿ ನೋಡುವ ವಯಸ್ಸಿನ ಆ ಕಂದನ ಕತೆ.. ತಿಳಿಯದು.. ಭಗವಂತ ಅವರನ್ನೆಲ್ಲಾ ಗಟ್ಟಿ ಮಾಡಿ ಬಿಡಲಿ ಅಷ್ಟೇ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.