ನಿನ್ನನ್ನು ಸಂಭಾಳಿಸುವುದು ಇನ್ನು ನನ್ನಿಂದ ಸಾಧ್ಯವೇ ಇಲ್ಲ

By Suvarna NewsFirst Published Feb 1, 2020, 2:31 PM IST
Highlights

ನಿನ್ನ ಡ್ರೆಸ್, ಶೂಗಳು, ಬೆಲ್ಟ್, ಪರ್ಸ್, ಲ್ಯಾಪ್‍ಟಾಪ್ ಸೇರಿದಂತೆ ಪ್ರತಿ ವಸ್ತುವನ್ನು ಹುಡುಕುವ, ಜೋಪಾನ ಮಾಡುವ ಕೆಲಸವನ್ನು ಇನ್ನು ನನ್ನಿಂದ ಮಾಡಲು ಸಾಧ್ಯವಿಲ್ಲ.ಇನ್ನು ಮುಂದೆ ಸ್ನಾನ ಮಾಡಿದ ಬಳಿಕ ಒದ್ದೆಯಾದ ಟವಲ್ ಅನ್ನು ಬೆಡ್ ಮೇಲೆ ಹಾಕುವುದು, ಕೊಳೆಯಾದ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಮಾಡಿದ್ರೆ ಅವೆಲ್ಲವೂ ಡಸ್ಟ್ಬಿನ್ ಸೇರುತ್ತವೆ,ನೆನಪಿಟ್ಟುಕೊಳ್ಳು.

ನನ್ನ ಮಕ್ಕಳ ಅಪ್ಪನೇ,

ಈ ಪತ್ರ ಕೈಯಲ್ಲಿ ಹಿಡಿದ ತಕ್ಷಣ ನೀನು ಜೋರಾಗಿ ನಗುತ್ತಿರಬಹುದು. ಈ ಕ್ಷಣಕ್ಕೆ ನನ್ನನ್ನು ಕರೆದು ನಿನ್ನ ಹೀಗೆ ಸಂಬೋಧಿಸಿದ್ದಕ್ಕೆ ಗೇಲಿ ಮಾಡಿ ನಗಬೇಕು ಎಂಬ ಬಯಕೆಯೂ ನಿನ್ನ ಮನದಲ್ಲಿ ಮೂಡುತ್ತಿರಬಹುದು.ನಿನ್ನ ಯೋಚನೆಗಳಿಗೆ ನಾನೇನು ಜವಾಬ್ದಾರಳಲ್ಲ ಬಿಡು. ಹೇಗೆ ಬೇಕೋ ಹಾಗೇ ಯೋಚಿಸುವ ಸಂಪೂರ್ಣ ಸ್ವಾತಂತ್ರ್ಯನಿನಗಿದೆ. ಕೆಲವೊಂದು ವಿಷಯಗಳನ್ನು ನಿನ್ನ ಬಳಿ ನೇರವಾಗಿ ಚರ್ಚಿಸಲು ಬಂದರೆ ಮನೆಯೇ ರಣರಂಗವಾಗಿ ಕುರುಕ್ಷೇತ್ರ ಯುದ್ಧವೊಂದು ನಡೆದೇ ಬಿಡುತ್ತದೆ.ಆ ಯುದ್ಧದ ಪರಿಣಾಮವಾಗಿ ಎರಡ್ಮೂರು ದಿವಸ ಮಾತು ಬಿಡೋದು,ಮನಸ್ಸು ಕೆಡಿಸಿಕೊಳ್ಳೋದು, ಎದುರು-ಬದುರು ಆದಾಗ ಎತ್ತಲೋ ನೋಡುವುದು,ಇವೆಲ್ಲಕ್ಕಿಂತ ಹೆಚ್ಚಾಗಿ ಮಕ್ಕಳನ್ನು ನಮ್ಮಿಬ್ಬರ ಮಿಡಿಯೇಟರ್‍ಗಳನ್ನಾಗಿ ಬಳಸಿಕೊಳ್ಳುವುದು....ಈ ರಗಳೆಗಳೆಲ್ಲ ಯಾಕೆ ಎಂದು ಈ ಪತ್ರ ಬರೆಯುತ್ತಿದ್ದೇನೆ. 

ಪ್ರತಿಯೊಂದಕ್ಕೂ ಸಂಗಾತಿಯ ಸಮ್ಮತಿ ಬೇಕಾ?

ಈಗ ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ನಾನು ಕೂಡ ನಿನ್ನಂತೆಯೇ ಪ್ರತಿದಿನ ಆಫೀಸ್‍ಗೆ ಹೋಗುತ್ತೇನೆ. ಆದರೆ,ನೀನು ನನ್ನಂತೆ ಬೆಳಗ್ಗೆ ಬೇಗ ಏಳಬೇಕಾದ ಅನಿವಾರ್ಯತೆಯೇನೂ ಇಲ್ಲ ನೋಡು.ಏಕೆಂದರೆ ನಂಗೆ ತಿಂಡಿ ರೆಡಿಮಾಡಬೇಕು,ಮಕ್ಕಳಿಗೆ ಸ್ಕೂಲ್‍ಗೆ ಸ್ನಾಕ್ಸ್ಗೊಂದು,ಲಂಚ್‍ಗೊಂದು ಎಂದು ಎರಡೆರಡು ಬಾಕ್ಸ್ ರೆಡಿ ಮಾಡಬೇಕು. ಜೊತೆಗೆ ನಂಗೂ, ನಿಂಗೂ ಬಾಕ್ಸ್ ರೆಡಿಮಾಡಬೇಕು.ಇಷ್ಟೆಲ್ಲ ಹೊರೆಯನ್ನು ನಾನೊಬ್ಬಳೇ ಹೊತ್ತುಕೊಂಡು ಮಾಡುತ್ತಿದ್ದೇನೆ. ಈ ಬಗ್ಗೆ ನಂಗೆ ಬೇಸರಯೇನೂ ಇಲ್ಲ. ಆದರೆ, ಆ ಮಕ್ಕಳ ಜೊತೆಗೆ ನಿನಗೂ ಕೂಡ ಶರ್ಟ್, ಪ್ಯಾಂಟ್, ಪರ್ಸ್ ಅಂತೆಲ್ಲ ಹುಡುಕಿಕೊಡುವಾಗ ಎಲ್ಲಿಲ್ಲದ ಸಿಟ್ಟು ಬರುತ್ತದೆ ಅಷ್ಟೆ.ಮದುವೆಯಾಗಿ 10 ವರ್ಷ ಕಳೆದರೂ ನಿನ್ನನ್ನು ಇನ್ನೂ ಸುಧಾರಿಸಲು ಆಗಿಲ್ಲ ನೋಡು ನನ್ನ ಕೈಯಲ್ಲಿ. ಎಷ್ಟೋ ಬಾರಿ ನಿನಗಿಂತ ಮಕ್ಕಳೇ ಎಷ್ಟೋ ವಾಸಿ ಅಂದೆನಿಸುತ್ತದೆ.

ಮಕ್ಕಳು ಅಂದರೆ ಇಷ್ಟಾನೇ ಆಗಲ್ಲ! 

ಇನ್ನು ಸಂಜೆ ಮನೆಗೆ ಬಂದು ಬ್ಯಾಗ್ ಒಂದು ಕಡೆ, ಬಟ್ಟೆಗಳನ್ನೆಲ್ಲ ಇನ್ನೊಂದು ಕಡೆ ಎಸೆದು ಆರಾಮವಾಗಿ ಸೋಫಾದ ಮೇಲೆ ಕುಳಿತು ಟಿವಿ ಚಾನಲ್‍ಗಳನ್ನು ಬದಲಾಯಿಸುತ್ತ ನಂಗೂ ಮನೆಕೆಲಸಕ್ಕೂ ಸಂಬಂಧವಿಲ್ಲ ಎಂಬ ನಿನ್ನ ವರ್ತನೆ ಮೊದಲೇ ಆಫೀಸ್ ಟೆನ್ಷನ್‍ನಿಂದ ತಲೆಕೆಟ್ಟು ಬಂದಿರುವ ನನ್ನ ಪಿತ್ತವನ್ನು ನೆತ್ತಿಗೇರಿಸುತ್ತದೆ.ಹಲವು ಬಾರಿ ಇದನ್ನು ನಿನ್ನ ಬಳಿ ಪ್ರಸ್ತಾಪಿಸಿ ಕ್ಯಾತೆ ತೆಗೆದ ಪರಿಣಾಮ ನೀನು ಪಾತ್ರೆ ತೊಳೆಯುವ ಕೆಲಸವನ್ನು ಆರಿಸಿಕೊಂಡಿದ್ದೆ.ಆದರೆ, ಪಾತ್ರೆ ತೊಳೆಯುವ ಮಧ್ಯೆ ಮಧ್ಯೆ ಕ್ರಿಕೆಟ್ ಸ್ಕೋರ್ ಎಷ್ಟಾಯಿತು ಎಂದು ಆಗಾಗ ಟಿವಿ ಬಳಿ ಹೋಗಿ ನೋಡೋದು, ನೀನೇ ಕ್ಯಾಚ್ ಹಿಡಿದೆಯೇನೋ ಅನ್ನುವ ರೀತಿ ವಿಕೆಟ್ ಹೋದ ತಕ್ಷಣ ಪಾತ್ರೆಯನ್ನು ಸಿಂಕ್‍ಗೆ ಎಸೆದು ಓಡುವುದು ಸೇರಿದಂತೆ ಇಂಥ ಅನೇಕ ಹುಚ್ಚಾಟಗಳನ್ನು ನೋಡಿ ನಗಬೇಕೋ, ಅಳಬೇಕೋ ಎಂದು ತಿಳಿಯದೆ ತಲೆಚಚ್ಚಿಕೊಂಡಿದ್ದೂ ಇದೆ. ಪಾತ್ರೆ ತೊಳೆಯುವಾಗ ನಿನ್ನ ಗಮನವೆಲ್ಲ ಟಿವಿ, ಮೊಬೈಲ್ ಮೇಲೆಯೇ ಇರುತ್ತಿದ್ದ ಕಾರಣ ಸಾಬೂನಿನ ನೊರೆ ಪಾತ್ರೆ ಬಿಟ್ಟು ಹೋಗುತ್ತಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಪಾತ್ರೆ ತೊಳೆಯುವ ಅನಿವಾರ್ಯ ಕರ್ಮ ನನ್ನದು. ಇದೇ ಕಾರಣಕ್ಕೆ ಇತ್ತೀಚೆಗೆ ಪಾತ್ರೆ ತೊಳೆಯುವ ವಿಚಾರಕ್ಕೆ ನಿನ್ನನ್ನು ಕೇಳುವುದು, ಒತ್ತಾಯಿಸುವುದು ಬಿಟ್ಟುಬಿಟ್ಟಿದ್ದೇನೆ.

ಇವರು ಕಾಲೇಜಿನಲ್ಲಿ ಕ್ಲಾಸ್ ಮೇಟ್ಸ್, ಮನೆಯಲ್ಲಿ ಗಂಡ ಹೆಂಡತಿ!

ಮಕ್ಕಳಿಗೆ ಸ್ನಾನ ಮಾಡಿಸುವ ಕೆಲಸವನ್ನು ನೀನೇ ವಹಿಸಿಕೊಂಡೇನೋ ಹೋಗುತ್ತೀಯಾ,ಆದರೆ ಜೋರಾಗಿ ಮೈ ಉಜ್ಜುವುದು, ಕಣ್ಣಿಗೂ ಸೋಪ್ ತಾಗಿಸುವುದು ಸೇರಿದಂತೆ ನೀನು ಮಾಡುವ ಎಟವಟ್ಟುಗಳ ಕಾರಣಕ್ಕೆ ಮಕ್ಕಳು ನಾನೇ ಸ್ನಾನ ಮಾಡಿಸಬೇಕೆಂದು ಹಟ ಮಾಡುತ್ತವೆ. ಸೋ, ಆ ಕೆಲಸವೂ ಕೆಲವೇ ದಿನಗಳಲ್ಲಿ ನಿನ್ನ ಕೈ ತಪ್ಪಿ ನನ್ನ ತೆಕ್ಕೆಗೆ ಬಂದು ಸೇರಿಕೊಂಡಿದೆ. ಮಕ್ಕಳನ್ನು ಸ್ಕೂಲ್‍ಗೆ ನೀನು ರೆಡಿ ಮಾಡಿದ ದಿನ ಏನಾದರೊಂದು ಎಡವಟ್ಟಾಗುವುದು ಪಕ್ಕಾ. ಹೀಗಾಗಿ ನೀನು ರೆಡಿ ಮಾಡಿದ ಬಳಿಕ ಇನ್ನೊಮ್ಮೆ ಎಲ್ಲವೂ ಸರಿಯಾಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲೇಬೇಕು. ಹೀಗೆ ನಿನ್ನನ್ನು ನಂಬಿ ಸಂಪೂರ್ಣ ಜವಾಬ್ದಾರಿ ಹೊರಿಸಬಹುದಾದ ಯಾವ ಕೆಲಸವೂ ಮನೆಯಲ್ಲಿ ಉಳಿದಿಲ್ಲ. ಹೋಗಲಿ ಬಿಡು, ಅವೆಲ್ಲವೂ ನನಗೇ ಇರಲಿ,ಬೇಜಾರೇನೂ ಇಲ್ಲ. ಆದರೆ, ನಿನ್ನ ಡ್ರೆಸ್, ಶೂಗಳು, ಬೆಲ್ಟ್, ಪರ್ಸ್, ಲ್ಯಾಪ್‍ಟಾಪ್ ಸೇರಿದಂತೆ ಪ್ರತಿ ವಸ್ತುವನ್ನು ಹುಡುಕುವ, ಜೋಪಾನ ಮಾಡುವ ಕೆಲಸವನ್ನು ಇನ್ನು ಮುಂದೆ ನನ್ನಿಂದ ಮಾಡಲು ಸಾಧ್ಯವಿಲ್ಲ.ಹಾಗೆಯೇ ಇನ್ನು ಮುಂದೆ ಸ್ನಾನ ಮಾಡಿದ ಬಳಿಕ ಒದ್ದೆಯಾದ ಟವಲ್ ಅನ್ನು ಬೆಡ್ ಮೇಲೆ ಹಾಕುವುದು, ಕೊಳೆಯಾದ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಮಾಡಿದ್ರೆ ಅವೆಲ್ಲವೂ ಡಸ್ಟ್ಬಿನ್ ಸೇರುತ್ತವೆ,ನೆನಪಿಟ್ಟುಕೊಳ್ಳು.ನಿನ್ನ ಈ ಎಲ್ಲ ಆವಾಂತರಗಳನ್ನು ಮಕ್ಕಳು ಮೈಗೂಡಿಸಿಕೊಳ್ಳುವ ಮುನ್ನ ಸ್ವಲ್ಪ ಎಚ್ಚೆತ್ತುಕೊಂಡರೆ ಒಳ್ಳೆಯದು. ನನ್ನ ಮಕ್ಕಳ ಅಪ್ಪ ಎಂದು ಸಂಬೋಧಿಸುವ ಮೂಲಕ ಪತ್ರ ಪ್ರಾರಂಭಿಸಿರುವುದು ಏಕೆ ಗೊತ್ತಾ? ನೀನಿನ್ನು ಮಗುವಲ್ಲ, ಅಪ್ಪ ಎಂಬುದನ್ನು ನೆನಪಿಸಲು. ಗಂಡನಾಗಿ ಬೇಡ, ಅಟ್‍ಲೀಸ್ಟ್ ಅಪ್ಪನಾಗಿಯಾದರೂ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸು, ಪ್ಲೀಸ್.

ಇಂತಿ ನಿನ್ನ 
ಹೆಂಡತಿ ಕಮ್ ಕೇರ್ ಟೇಕನ್

click me!