ಅದು ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ಬೆಲೆಬಾಳಲಿ ಅಥವಾ ಬೆಲೆಬಾಳದಿರಲಿ ಗಿಫ್ಟ್ ಗಿಫ್ಟೇ ಅಲ್ಲವೇ, ಯಾರಾದ್ರೂ ನಮಗೆ ಗಿಫ್ಟ್ ಕೊಟ್ರೆ ಸಾಕು ಖುಷಿಯಾಗ್ತೇವೆ. ಅದ್ರಲ್ಲೂ ನಮ್ಮ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಗಿಫ್ಟ್ ಕೊಟ್ರೆ ಅದನ್ನ ಜೋಪಾನ ಮಾಡಿ ಇಡ್ತೇವೆ. ಆದ್ರೆ ಇದೇ ಇಲ್ಲೊಬ್ಬ ಹುಡುಗಿ ಬಾಯ್ ಫ್ರೆಂಡ್ ಕೊಟ್ಟ ಗಿಫ್ಟನ್ನೇ ಎಸೆಯಬಾರದ ಜಾಗದಲ್ಲಿ ಎಸೆದಿದ್ದರಿಂದ ಅದೀಗ ಬ್ರೇಕಪ್ ಲೆವೆಲ್‌ಗೆ ಹೋಗಿ ನಿಂತಿದೆ.
ಸದ್ಯ ಗಿಫ್ಟ್ ಕೊಟ್ಟ ಯುವಕ ತನ್ನ ಅಳಲನ್ನ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದು, ಆ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ. ಜೊತೆಗೆ ಹುಡುಗರು ಆತನಿಗೆ ಒಂದಿಷ್ಟು ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ ಏನಂಥ ಗೊತ್ತಾ?. ಬನ್ನಿ ನೋಡೋಣ.
ಆತನಿಗೆ ಹದಿನೆಂಟು ವರ್ಷ. ಬ್ರಿಕ್‌ಲಿಂಕ್ ಸ್ಟುಡಿಯೋ ಬಳಸಿ LEGO ಮಾದರಿಗಳನ್ನು ವಿನ್ಯಾಸಗೊಳಿಸುತ್ತಾನೆ. ಅದು ನಿಜವಾಗಿಯೂ ಆತನಿಗೆ ಇಷ್ಟವಾದ ಕೆಲಸ. ಒಮ್ಮೆ ಅವನು ಗೆಳತಿಗಾಗಿ ಸಣ್ಣ ಕಸ್ಟಮ್ ಫಿಗರ್ ನಿರ್ಮಿಸಿದ. ಜೊತೆಗೆ ಅದಕ್ಕೆ ಆಕೆಯ ರೀತಿಯೇ ಕೂದಲು, ಉಡುಪನ್ನು ಹೊಂದಿಸಿದ. ಅವಳ ಬೆಕ್ಕನ್ನು ಸಹ ಸೇರಿಸಿದ. ನಿರ್ದಿಷ್ಟ ಇಟ್ಟಿಗೆಗಳನ್ನು ಸಹ ಆಮದು ಮಾಡಿಕೊಂಡು, ವೈಯಕ್ತಿಕ ಸಂದೇಶದೊಂದಿಗೆ ಸಣ್ಣ ಬೇಸ್‌ಪ್ಲೇಟ್ ಅನ್ನು ಸೇರಿಸಿದ.
ಇಷ್ಟೆಲ್ಲಾ ಮಾಡಲು ಆತನಿಗೆ ಸರಿಸುಮಾರು ಎರಡು ವಾರಗಳೇ ಬೇಕಾಯ್ತು. ಆದ್ರೆ ಕೊನೆಗಾಗಿದ್ದೇನು?, ಯುವಕನ ಬಾಯಲ್ಲೇ ಕೇಳುವುದಾದರೆ...
"ನಾನು ಗಿಫ್ಟನ್ನು ಆಕೆಗೆ ಕೊಟ್ಟಾಗ ಮುಗುಳ್ನಕ್ಕು 'ಸ್ವೀಟ್' ಎಂದು ಹೇಳಿದಳು. ಆದರೆ ಅದು ಆ ಜಾಗದಲ್ಲಿರುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ, ಕನಿಷ್ಠ ಪಕ್ಷ ಅವಳು ಅದನ್ನು ಎತ್ತಿಟ್ಟುಕೊಳ್ಳುತ್ತಾಳೆ ಎಂದು ಭಾವಿಸಿದೆ. ಮರುದಿನ ನಾನು ಆಕೆಯ ಮನೆಗೆ ಹೋದೆ. ಮನೆಯಲ್ಲಿ ಅವಳು ಇರಲಿಲ್ಲ. ಅವಳ ತಾಯಿ ನನ್ನನ್ನು ಒಳಗೆ ಬಿಟ್ಟರು. ಕೊನೆಗೆ ನಾನು ಅಡುಗೆಮನೆಗೆ ಹೋಗಿ ಡಸ್ಟ್‌ಬಿನ್‌ನಲ್ಲಿ ಸ್ವಲ್ಪ ಕಸ ಎಸೆಯಲು ಹೋದೆ. ಅಲ್ಲಿ ಅಂದರೆ ಡಸ್ಟ್‌ಬಿನ್‌ನಲ್ಲಿ ನಾನು ಕೊಟ್ಟ ಗಿಫ್ಟ್ ಇತ್ತು. ಇಡೀ ಗಿಫ್ಟ್ ಮಾಡಲ್ ಅನ್ನು ಮುರಿದು ಕಸದ ಬುಟ್ಟಿಯಲ್ಲಿ ಎಸೆಯಲಾಗಿತ್ತು. ಆಹಾರ ತ್ಯಾಜ್ಯ ಮತ್ತು ಟಿಶ್ಯೂಗಳ ಪಕ್ಕದಲ್ಲೇ ಎಸೆಯಲಾಗಿತ್ತು.
ನಾನು ಈ ಬಗ್ಗೆ ಏನೂ ಹೇಳಲಿಲ್ಲ. ಸುಮ್ಮನೆ ಹೊರಟೆ. ಎರಡು ದಿನಗಳಾಗಿವೆ. ಅದರ ಬಗ್ಗೆ ಮಾತನಾಡಿಲ್ಲ, ಮತ್ತು ಅವಳು ಕೂಡ ಏನನ್ನೂ ಹೇಳಿಲ್ಲ. ನಾನು ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚು ಅದರ ಬಗ್ಗೆ ಯೋಚಿಸುತ್ತಿದ್ದೇನೆ. ಅದು ಕೇವಲ LEGO ಎಂದು ನನಗೆ ತಿಳಿದಿದೆ. ಆದರೆ ಅದು ಇಟ್ಟಿಗೆಗಳ ಬಗ್ಗೆ ಅಲ್ಲ - ಅದು ಒಂದು ಪ್ರಯತ್ನವಾಗಿತ್ತು. ಹೀಗೆ ಆಲೋಚನೆ ಮಾಡಿದರೆ ಅದನ್ನು ಎಸೆಯುವುದು ಅವಳಿಗೆ ಎಷ್ಟು ಸುಲಭವೆಂದು ಅನಿಸುತ್ತದೆ. ಈ ವಿಚಾರವಾಗಿ ನಾನು ದೂರವಾದರೆ ನಾನು ಕಮ್ಮಿ ಅನಿಸಿಕೊಳ್ತೀನಾ ಅಥವಾ ನಾನು ನಿಜವಾಗಿಯೂ ಅವಳೊಂದಿಗೆ ಅದರ ಬಗ್ಗೆ ಮಾತನಾಡಬೇಕೇ? ಎಂದು ಪ್ರಶ್ನಿಸಿದ್ದಾನೆ ಅ ಯುವಕ.
ಇದಕ್ಕೆ ನೆಟ್ಟಿಗರು ಕೊಟ್ಟ ಉತ್ತರ ಹೀಗಿತ್ತು..."ನೀವು ಇದರ ಬಗ್ಗೆ ಅವಳೊಂದಿಗೆ ಮಾತನಾಡಬೇಕು, ಇದೇ ವಿಚಾರವಾಗಿ ದ್ವೇಷವನ್ನು ಇಟ್ಟುಕೊಳ್ಳುವುದು ಹೆಚ್ಚಿನ ತೊಡಕುಗಳಿಗೆ ಕಾರಣವಾಗಬಹುದು. ಆಕೆ ನಿಮ್ಮ ಪ್ರಯತ್ನಗಳನ್ನು ಮೆಚ್ಚದಿದ್ದರೆ ನಿಮ್ಮ ಹುಡುಗಿಯನ್ನು ಅಪ್‌ಗ್ರೇಡ್ ಮಾಡುವ ಸಮಯ ಬಂದಿದೆ" ಎಂದೆಲ್ಲಾ ಸೂಚಿಸಿದ್ದಾರೆ. ಬಹುತೇಕರ ಉತ್ತರ "ಆಕೆಯೊಂದಿಗೆ ಮುಕ್ತವಾಗಿ ಮಾತನಾಡುವುದೇ ಆಗಿದೆ". ಆದರೆ ಮತ್ತೆ ಕೆಲವರು ಹುಡುಗಿಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಹಾಗೆಯೇ "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಯಾರಿಗಾದರೂ ಉಡುಗೊರೆಯನ್ನು ಆರಿಸುವಾಗ ಅವರು ಏನನ್ನು ಮೆಚ್ಚುತ್ತಾರೆ ಎಂಬುದರ ಬಗ್ಗೆ ಯೋಚಿಸಬೇಕು. ನೀವು ಯಾವ ರೀತಿಯ ಉಡುಗೊರೆಯನ್ನು ಆನಂದಿಸುತ್ತೀರಿ ಎಂಬುದರ ಬಗ್ಗೆ ಅಲ್ಲ" ಎಂದು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.