
ಹುಡುಗ-ಹುಡುಗಿ ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೋ ಇಲ್ಲವೋ, ಇಬ್ಬರಿಗೂ ಮದುವೆಯಾಗುವ ಆಸೆ ಇದೆಯೋ ಇಲ್ಲವೋ ಏನನ್ನೂ ನೋಡದೇ, ಪೂರ್ವಾಪರಗಳನ್ನು ಯೋಚಿಸದೇ ಇಂದಿಗೂ ಅದೆಷ್ಟೋ ಮದುವೆಗಳು ನಡೆದು ಹೋಗುತ್ತವೆ. ಹುಡುಗ ದೈಹಿಕ ಸಂಪರ್ಕ ನಡೆಸಲು ಶಕ್ಯನಲ್ಲವಾಗಿದ್ದರೆ ಅಥವಾ ಹುಡುಗಿಯೋ- ಹುಡುಗನೋ ಸಲಿಂಗಿಯಾಗಿದ್ದರೆ, ಅವರಿಗೆ ಬೇರೆ ಅಫೇರ್ಗಳು ಇದ್ದರೆ... ಹೀಗೆ ಏನೆನೋ ಕಾರಣಗಳಿಗೆ ಮದುವೆ ಅವರಿಗೆ ಇಷ್ಟವಿಲ್ಲದಿದ್ದರೂ ನೂರೊಂದು ಸುಳ್ಳು ಹೇಳಿ ಮದುವೆ ಮಾಡಿಸು ಎನ್ನುವ ಗಾದೆ ಮಾತನ್ನು ಚಾಚೂ ತಪ್ಪದೇ ಮಾಡುವವರೂ ಇದ್ದಾರೆ. ಅದೇ ಇನ್ನೊಂದೆಡೆ ಗಂಡಿನ ಕಡೆಯವರಿಗೆ ಹಣದ ದಾಹ. ಕೊಟ್ಟಷ್ಟೂ ಬೇಕೆನ್ನುವ ಧನ ಪಿಶಾಚಿಗಳು ಇವರು. ಇವರಿಗೆ ಬೇಕಿರುವುದು ಹೆಣ್ಣಲ್ಲ, ಬದಲಿಗೆ ತಮ್ಮ ಮಗ ತರುವ ಹೊನ್ನು ಅಷ್ಟೇ.
ಇವೆಲ್ಲ ಕಾರಣಗಳಿಂದ ಅದೆಷ್ಟೋ ಕುಟುಂಬಗಳಲ್ಲಿ ಇದಕ್ಕೆ ಬಲಿಯಾಗುವುದು ಹೆಣ್ಣೇ ಎನ್ನುವುದು ಮಾತ್ರ ಸತ್ಯ. ಕೆಲವು ಕುಟುಂಬಗಳಲ್ಲಿ ಹೆಣ್ಣಿನಿಂದ ಗಂಡಿನ ಮನೆಯವರಿಗೆ ಅನ್ಯಾಯ ಆಗುತ್ತಿರುವುದು, ಸುಳ್ಳು ಕೇಸ್ಗಳಲ್ಲಿ ಸಿಲುಕಿ ಒದ್ದಾಡುತ್ತಿರುವುದು ನಿಜವಾದರೂ, ಹಣದ ದಾಹ ಇರುವ ಗಂಡಿನ ಕುಟುಂಬದ ವಿಷಯಕ್ಕೆ ಬಂದಾಗ, ಇದಕ್ಕೆ ಬಲಿಯಾಗುವವಳು ಹೆಣ್ಣೇ. ಇದೀಗ ಅಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಷ್ಟೋ ಹೆಣ್ಣುಮಕ್ಕಳು ತಮಗಾಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡು ಜೀವನದುದ್ದಕ್ಕೂ ಕೊರಗುವುದು ಇದೆ. ಆದರೆ ಇಲ್ಲೊಬ್ಬ ಹೆಣ್ಣುಮಗಳು ಧೈರ್ಯ ಮಾಡಿ ಮುಂದೆ ಬಂದಿದ್ದು, ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ.
ಮದುವೆಯಾಗಿ ಹಲವಾರು ತಿಂಗಳಾದರೂ ಫಸ್ಟ್ ನೈಟ್ಗೆ ಗಂಡ ಒಪ್ಪುತ್ತಿಲ್ಲ ಎನ್ನುವುದು ಆಕೆಯ ದೂರು. ರಾಘವೇಂದ್ರ ಎನ್ನುವವರನ್ನು ನಾನು ಮದುವೆಯಾಗಿದ್ದೇನೆ. ಆದರೆ ಮದುವೆಯಾದ ದಿನದಿಂದಲೂ ನನ್ನ ಬಳಿ ಅವರು ಬರುತ್ತಿಲ್ಲ. ಇದಕ್ಕೆ ಕಾರಣ ಕೇಳಿದರೆ ಅವರು ಹೇಳುತ್ತಿಲ್ಲ. ಮದುವೆಯಾದ ದಿನದಿಂದಲೂ ದೂರ ಇರುತ್ತಿದ್ದಾರೆ. ನಾನೇ ಖುದ್ದಾಗಿ ಮಾತನಾಡಿದರೂ ಇದಕ್ಕೆ ಒಪ್ಪುತ್ತಿಲ್ಲ. ಕಾರಣವನ್ನೂ ತಿಳಿಸುತ್ತಿಲ್ಲ. ಪದೇ ಪದೇ ತನ್ನಿಂದ ದೂರವಾಗುವುದನ್ನು ಕಾಯುತ್ತಿರುತ್ತಾರೆ. ಒಮ್ಮೆ ಕೂಡ ನಾವು ಸಂಪರ್ಕ ಮಾಡಿಲ್ಲ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಈ ದೂರು ದಾಖಲಾಗಿದೆ. ಇದನ್ನು ಕೇಳಿದಾಗಲೆಲ್ಲಾ, ನನ್ನ ಗಂಡನ ಮನೆಯವರು ಟಾರ್ಚರ್ ಕೊಡುತ್ತಿದ್ದಾರೆ. ಮದುವೆಯ ಸಂದರ್ಭದಲ್ಲಿ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ನೀಡಲಾಗಿದ್ದರೂ ಮತ್ತಷ್ಟು ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ಯುವತಿ ಹೇಳಿದ್ದಾರೆ. ಹಣದ ದುರಾಸೆಯಿಂದ ಗಂಡನನ್ನು ತನ್ನ ಬಳಿ ಬಿಡಲು ಬಿಡುತ್ತಿಲ್ಲವೋ ಅಥವಾ ಮದುವೆಯಾದ ಮೊದಲ ದಿನದಿಂದಲೂ ಗಂಡ ಹೀಗೆ ನಡೆದುಕೊಳ್ಳುತ್ತಿರುವುದರಿಂದ ಆತನಲ್ಲಿಯೇ ಏನಾದರೂ ದೋಷ ಇರುವುದೋ ಎಂದು ಅರಿಯದೇ ಯುವತಿ ಕಂಗಾಲಾಗಿ ಹೋಗಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪತಿ ನನ್ನನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಎಲ್ಲಿಯೋ ಹೋಗಿದ್ದಾರೆ. ಅವರ ಜೊತೆ ಸಂಪರ್ಕ ಮಾಡುವಂತೆ ಇಲ್ಲ. ಮಾತನಾಡಲೂ ಸಿಗುತ್ತಿಲ್ಲ ಎಂದಿರುವ ಯುವತಿ, ಬೇರೆ ದಾರಿ ಕಾಣದೇ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ಆಕೆಯ ಪತಿ ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ವರದಕ್ಷಿಣೆ ನಿಷೇಧ ಕಾಯ್ದೆಯ ನಿಬಂಧನೆಗಳ ಜೊತೆಗೆ ಬಿಎನ್ಎಸ್ ಸೆಕ್ಷನ್ 85 (ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯ), ಬಿಎನ್ಎಸ್ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.