
ಇದೆಲ್ಲವೂ ಶುರುವಾಗಿದ್ದು ಎಂಟು ವರ್ಷಗಳ ಹಿಂದೆ. ದೂರದಿಂದ ನೋಡಿದರೆ ಅವನು ನಮ್ಮೂರ ಗಾಳಿ ಮರದಂತೆ ಎತ್ತರಕ್ಕೆ ಇದ್ದ. ಎಷ್ಟುಚೆಂದ ಕಾಣುತ್ತಿದ್ದ ಎಂದರೆ ದೂರದಿಂದಲೇ ಕಣ್ಣು ಕುಕ್ಕುವಷ್ಟು. ಪದ್ಯಗಳು ನಮ್ಮನ್ನು ಒಂದು ಕಡೆ ಸೇರಿಸಿದವು. ಅವನು ನನ್ನ ಕೇರ್ ಮಾಡಿದ.
ನಾನು ಅವನನ್ನು ಕೇರ್ ಮಾಡಿದೆ. ಫ್ರೆಂಡ್ಸ್ ಆದ್ವಿ. ಕ್ಲೋಸ್ ಫ್ರೆಂಡ್ಸ್ ಆದ್ವಿ. ಬೆಸ್ಟ್ ಫ್ರೆಂಡ್ಸ್ ಆದ್ವಿ. ಅವನ ಮತ್ತು ನನ್ನ ಪಿಜಿ ಕೆಲವೇ ಮೀಟರುಗಳಷ್ಟುದೂರವಿತ್ತು. ಆ ಟೈಮಲ್ಲೆಲ್ಲಾ ನಾನೂ ಅವನೂ ಕೈಕೈ ಹಿಡಿದು ಸುತ್ತದ ಬೆಂಗಳೂರಿನ ಬೀದಿಗಳೇ ಇರಲಿಲ್ಲ. ಬೆಂಗಳೂರು ನನಗೆ ಸುಂದರವಾಗಿ ಕಂಡಿದ್ದು ಆಗಲೇ.
ಗಂಡ ಕೊಡೋ ಆ ಒಂದು ಏಟು ಯಾವತ್ತೂ 'ಕೇವಲ ಒಂದೇಟು' ಆಗಿರೋಲ್ಲ...
ಬೆಳ್ಳಂಬೆಳಗ್ಗೆ ಹೂವು ಚೆಲ್ಲಿದ ಹಾದಿಯಲ್ಲಿ ನಡೆದುಹೋಗುತ್ತಿದ್ದರೆ ಈ ಕ್ಷಣ ವರ್ಷವಾಗಬಾರದೇ ಎನ್ನಿಸುತ್ತಿತ್ತು. ನಾವು ತುಂಬಾ ಮಾತನಾಡುತ್ತಿದ್ದೆವು. ಪದ್ಯಗಳು ನಮ್ಮ ದಾರಿ ಸವೆದಿದ್ದು ನಮಗೆ ಗೊತ್ತು ಮಾಡುತ್ತಿರಲಿಲ್ಲ. ನಮ್ಮಿಬ್ಬರಿಗೂ ಕೆಎಸ್ ನರಸಿಂಹಸ್ವಾಮಿಗಳು ಇಷ್ಟ. ಅವರ ಬಹುತೇಕ ಹಾಡುಗಳು ನನ್ನ ಬಾಯಲ್ಲಿದ್ದುವು. ಅದನ್ನು ನಾನು ಹಾಡುತ್ತಿದ್ದೆ.
ಅವನು ಕಣ್ಣು ತುಂಬಿಕೊಂಡು ಕೇಳುತ್ತಿದ್ದ. ಅವನ ಕೊಳದಂಥ ಕಣ್ಣುಗಳೇ ನನ್ನನ್ನು ಅವನಿಗೆ ಇನ್ನಷ್ಟುಹತ್ತಿರ ಮಾಡಿತು ಅನ್ನಿಸುತ್ತದೆ. ಫೈನಲೀ, ನಾವು ನಮಗೂ ಗೊತ್ತಾಗದಂತೆ ಪ್ರೀತಿಯಲ್ಲಿ ಬಿದ್ದಿದ್ದೆವು.
ನಾನು ಚಿಕ್ಕಂದಿನಲ್ಲೇ ಸಂಬಂಧಿಯೊಬ್ಬನಿಂದ ದೈಹಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. ಅದೊಂದು ಮಾಯದ ಗಾಯದಂತೆ ಒಳಗಿತ್ತು. ಇವನು ಸಿಕ್ಕ ಮೇಲೆ ನಾನು ಅದನ್ನು ಬಲವಂತವಾಗಿ ಹತ್ತಿಕ್ಕಿದ್ದೆ. ಮರೆತಿದ್ದೆ ಅಥವಾ ಮರೆತಂತೆ ನಟಿಸಿದ್ದೆ. ಇವನೊಬ್ಬ ಜತೆಗಿದ್ದರೆ ಸಾಕು ಎಲ್ಲವನ್ನೂ ಮರೆತು ಹಾಯಾಗಿರಬಹುದು ಅನ್ನಿಸುತ್ತಿತ್ತು. ಆಗಲೇ ನಾನು ಕೊಂಚ ಆಲೋಚನೆ ಮಾಡಬೇಕಿತ್ತು. ತುಂಬಾ ಹಂಬಲಿಸಬಾರದಿತ್ತು.
ಇಂಥಾ ಗಳಿಗೆಯಲ್ಲೇ ನಾವೊಂದು ತಪ್ಪು ಮಾಡಿಬಿಟ್ಟೆವು. ಒಂದೇ ಮನೆಯೊಳಕ್ಕೆ ಇಬ್ಬರೂ ನಡೆದುಹೋದೆವು. ಇಬ್ಬರ ಮಧ್ಯೆ ಒಂಚೂರು ಸ್ಪೇಸ್ ಇರಬೇಕು. ಯಾವಾಗ ಆ ಸ್ಪೇಸ್ ತುಂಬಿಕೊಳ್ಳುತ್ತದೋ ಸಣ್ಣ ಅಸಹನೆ ಶುರುವಾಗುತ್ತದೆ.
ಇನ್ನೊಬ್ಬರನ್ನು ಆಕರ್ಷಿಸಲು, ಎಲ್ಲರ ಕೇಂದ್ರ ಬಿಂದು ಆಗಲು ಹೀಗ್ ಮಾಡಿ
ಜತೆಗೆ ಕಾಲ ಕಳೆಯುತ್ತಿದ್ದ ವೇಳೆಯಲ್ಲೇ ನನಗೆ ಒಂದು ದಿನ ಇದ್ದಕ್ಕಿದ್ದಂತೆ ಹೊಟ್ಟೆನೋವು ಶುರುವಾಯಿತು. ಡಾಕ್ಟರ್ ಬಳಿಗೆ ಹೋದರೆ ಇನ್‌ಫೆಕ್ಷನ್ ಆಗಿದೆ ಎಂದರು. ನಾನು ಆಸ್ಪತ್ರೆಯಲ್ಲಿದ್ದೆ. ಮದ್ದುಗಳನ್ನು ತೆಗೆದುಕೊಳ್ಳುತ್ತಿದ್ದೆ. ಅದೊಂದು ಎಂತಹ ನೋವಿನ ಅನುಭವ ಎಂದರೆ ಡಿಸ್‌ಚಾಜ್‌ರ್ ಆದ ನಂತರ ನಾನು ಯಾವುದನ್ನು ತಿನ್ನುವುದಕ್ಕೂ ಹೆದರತೊಡಗಿದೆ.
ಮತ್ತೆ ಹುಷಾರು ತಪ್ಪುವ ಭಯ ಆವರಿಸುತ್ತಿತ್ತು. ಉಸಿರಾಡುವುದಕ್ಕೂ ನಾನು ಸಂಕಟಪಡತೊಡಗಿದೆ. ಆ ನೋವಿಗೆ, ಒದ್ದಾಟಕ್ಕೆ ನಾನು ನಿಧಾನಕ್ಕೆ ಡಿಪ್ರೆಷನ್‌ಗೆ ಹೋಗತೊಡಗಿದೆ. ಈ ಘಟನೆ ಆಗುವುದಕ್ಕಿಂತ ಮೊದಲೇ ನಮ್ಮ ಸಂಬಂಧದ ತಾಳ ತಪ್ಪಿತ್ತು.
ಅವನ ಮತ್ತು ಅವನ ಅಮ್ಮನ ಮಧ್ಯೆ ಸರಿ ಇರಲಿಲ್ಲ. ಅವರಿಬ್ಬರು ಜಗಳಾಡಿದ ದಿನ ನಾನು ನೆಮ್ಮದಿಯಿಂದ ಇರುವಂತೆ ಇರಲಿಲ್ಲ. ಅವನು ರೇಗುತ್ತಿದ್ದ. ಕೋಪಿಸಿಕೊಳ್ಳುತ್ತಿದ್ದ. ಕೂಗಾಡುತ್ತಿದ್ದ. ನಾನು ಹೆದರುತ್ತಿದ್ದೆ. ಅವನು ನನ್ನನ್ನು ಸಂಭಾಳಿಸಬೇಕಿತ್ತು. ಆದರೆ ಅವನನ್ನು ನಾನು ಸಂಭಾಳಿಸುವ ಪರಿಸ್ಥಿತಿ ಬಂತು. ಅದನ್ನು ಹ್ಯಾಂಡಲ್ ಮಾಡುವಷ್ಟು ದೊಡ್ಡವಳಾಗಿರಲಿಲ್ಲ ನಾನು.
ಒಂದು ಕಡೆ ನಾನು ಅವನಿಗೆ ಪೂರ್ತಿ ಡಿಪೆಂಡ್ ಆಗಿದ್ದೆ. ಏನು ಮಾಡುವುದಿದ್ದರೂ ಅವನು ಬೇಕಿತ್ತು. ನಾನು ಹೇಯ್ ಅಂದರೆ ಅವನು ಎದುರಿಗೆ ಬಂದು ನಿಲ್ಲಬೇಕಿತ್ತು. ಇಲ್ಲದಿದ್ದರೆ ನನಗೆ ಏನು ಮಾಡಬೇಕೆಂದೇ ತಿಳಿಯುತ್ತಿರಲಿಲ್ಲ. ಅವನಿಗೆ ಡಿಪೆಂಡ್ ಆಗಿ, ಅವನಿಗೆ ಬೇಕಾದಂತೆ ಬದುಕಿ ಬದುಕಿ ನನಗೆ ಸುಸ್ತಾಗತೊಡಗಿತು.
ಜತೆಗಿರುವುದೇ ಉಸಿರುಗಟ್ಟಿದಂತೆ ಅನ್ನಿಸತೊಡಗಿತು. ಈ ಸಂಬಂಧದಲ್ಲಿ ನಾನು ಇರಲೇ ಇಲ್ಲ. ಬರೀ ಅವನೇ ಇದ್ದ. ನಾನು ಎಲ್ಲೋ ಕಳೆದುಹೋಗಿದ್ದೇನೆ ಅಂತ ಬಲವಾಗಿ ಅನ್ನಿಸಿತು. ಒಂದು ವರ್ಷ ತಗೊಂಡೆ. ಈ ಸಂಬಂಧ ಮುರಿಯೋಣ ಎಂದು ಹೇಳಿ ತಿರುಗಿ ನೋಡದೆ ಎದ್ದು ಬಂದೆ.
ಅದು ನನ್ನ ಜೀವನದ ಅತಿ ಕಷ್ಟಕರ ನಿರ್ಧಾರ. ಸುಮ್ಮಸುಮ್ಮನೆ ಕಣ್ಣು ತುಂಬಿಕೊಳ್ಳುತ್ತಿತ್ತು. ಗಂಟಲು ಉಬ್ಬುತ್ತಿತ್ತು. ಮತ್ತೆ ಅವನ ಬಳಿಗೆ ಜಿಂಕೆಯಂತೆ ಓಡಿ ಅವನ ಕೊರಳನ್ನು ತಬ್ಬಿಕೊಳ್ಳಲೇ ಎಂದು ಆಸೆಯಾಗುತ್ತಿತ್ತು. ನನ್ನನ್ನು ನಾನು ಕಂಟ್ರೋಲ್ ಮಾಡಿಕೊಳ್ಳಬಲ್ಲೆ ಎಂದು ಧೈರ್ಯ ಬಂದಿದ್ದೆ ಆವಾಗ. ಕಣ್ಣೀರಾದೆ. ಒದ್ದಾಡಿದೆ. ದಿನ ಗಟ್ಟಲೆ ಕತ್ತಲಲ್ಲಿ ಒಬ್ಬಳೇ ಕುಳಿತೆ. ಕಡೆಗೂ ಅವನಿಂದ ದೂರ ಉಳಿಯಲು ಕಲಿತೆ.
ಈಗ ನಾವು ಪರಸ್ಪರರ ಬದುಕಿನಲ್ಲಿ ಉಳಿದಿಲ್ಲ. ನಾನು ಹೆದರಿದಾಗ ಸಮಾಧಾನ ಮಾಡಲು ಅವನಿಲ್ಲ. ನಾನು ಎಲ್ಲಾದರೂ ಹೋಗಬೇಕೆಂದಾಗ ಕರೆದೊಯ್ಯಲು ಅವನಿಲ್ಲ. ನಾನು ಸತ್ತು ಹೋಗುತ್ತೇನೆ ಎಂದಾಗ ಇಲ್ಲ ನೀನು ನನ್ನ ಜೀವ ಎಂದು ಹೇಳಲು ಅವನಿಲ್ಲ. ನನ್ನ ಸಮಸ್ಯೆಗಳಿಗೆ ಉತ್ತರ ಹುಡುಕುವ ಹುಡುಗನೇ ನನ್ನ ಜತೆಗಿಲ್ಲ.
ನಾನು ನಾನಾಗಿ ಬದುಕುವುದನ್ನು ಕಲಿತೆ. ಎಲ್ಲವನ್ನೂ ನಾನೇ ಮಾಡಬಹುದು ಎಂದು ಅರ್ಥವಾಗಿದ್ದೇ ಆಗ. ನನ್ನ ಶಕ್ತಿ ತಿಳಿಯತೊಡಗಿತು. ನಾನು ಎಲ್ಲಿ, ಹೇಗೆ ಬೇಕಾದರೂ ಬದುಕುವ ಶಕ್ತಿ ಹೊಂದಿದ್ದೇನೆ ಎಂಬ ಅರಿವು ಬಂತು. ನನಗೆ ನಾನೇ ಇಂಪಾರ್ಟೆಂಟು ಎಂದು ಗೊತ್ತಾಗುವ ಕ್ಷಣ ಇದೆಯಲ್ಲ, ಅದೇ ಜ್ಞಾನೋದಯ ಎಂದು ನಾನು ನಂಬಿದ್ದೇನೆ.
ನಮ್ಮನ್ನು ನಾವೇ ಮರೆತುಹೋಗುವ ಸಂಬಂಧ ಒಳ್ಳೆಯ ಸಂಬಂಧ ಅಲ್ಲ. ಪರಸ್ಪರರ ಮಧ್ಯೆ ಒಂದು ಗೆರೆ ಇರಬೇಕು. ಅದನ್ನು ಇಬ್ಬರೂ ಗೌರವಿಸಬೇಕು. ನಾನು ಅವನ್ನು ತುಂಬಾ ಪ್ರೀತಿಸಿದೆ ಮತ್ತು ಹಂಬಲಿಸಿದೆ. ಆದರೆ ನಾನು ಯಾವಾಗೆಲ್ಲಾ ಅವನ ಜೊತೆ ಇದ್ದೆನೋ ಆಗೆಲ್ಲಾ ನಾನು ನನ್ನನ್ನು ಪ್ರೀತಿಸುವುದನ್ನು ಮರೆತೆ. ಹಾಗಂತ ಅವನು ಕೆಟ್ಟವನಲ್ಲ. ನಾನೂ ಕೆಟ್ಟವಳಲ್ಲ. ನಾವಿಬ್ಬರೂ ಪರಸ್ಪರರಿಗೆ ಆಗಿಬರಲಿಲ್ಲ.
ಕಳೆದ ವರ್ಷ ನನ್ನ ಬದುಕಿನ ಅತ್ಯಂತ ಮಹತ್ವದ ವರ್ಷ. ಅವನ ಪ್ರೇಮದ ಸೂತ್ರವನ್ನು ಕಡಿದುಕೊಂಡ ವರ್ಷ ಅದು. ಒಂದೆರಡು ವರ್ಷಗಳ ಹಿಂದೆಯೇ ನಾವು ದೂರಾಗಬೇಕಿತ್ತು ಅಂತ ಈಗ ಅನ್ನಿಸುತ್ತಿದೆ. ಎಮೋಷನಲ್ ಬ್ಯಾಗೇಜ್‌ಗಳು ಸುಮಾರು ಸಲ ನಮಗೆ ಭಾರ ಅನ್ನಿಸುತ್ತವೆ. ಇನ್ನೊಂಚೂರು ಮುಂದೆ ಹೋಗೋಣ ಅಂತಲೂ ಅನ್ನಿಸುತ್ತದೆ. ಆದರೆ ಯಾವಾಗ ಬ್ಯಾಗು ಕೆಳಗಿಡಬೇಕೋ ಆಗ ಕೆಳಗಿಟ್ಟು ಮುಂದೆ ನಡೆದು ಹೋಗುತ್ತಿರಬೇಕು. ಇಬ್ಬರಿಗೂ ಅದು ಒಳ್ಳೆಯದು.
ಹಲವಾರು ವರ್ಷಗಳ ಕಾಲ ಅವನು ನನ್ನ ಬದುಕಿನ ಅತ್ಯಂತ ಮುಖ್ಯ ಆಗಿದ್ದ. ಅದಕ್ಕಾಗಿ ನಾನು ಅವನಿಗೆ ಯಾವತ್ತಿಗೂ ಋುಣಿ. ಅವನಿಲ್ಲದಿದ್ದಿದ್ದರೆ, ಆ ಸಂಬಂಧ ಇಲ್ಲದೇ ಇರುತ್ತಿದ್ದರೆ ನಾನು ಈಗ ಹೇಗಿದ್ದೇನೋ ಹೇಗಾಗಿದ್ದೇನೋ ಅದಾಗುತ್ತಿರಲಿಲ್ಲ. ಅವನು ನನ್ನನ್ನು ನಾನು ಕಂಡುಕೊಳ್ಳಲು ನೆರವಾದ.
ಅವನಿಗೆ ಜಗತ್ತಿನ ಎಲ್ಲಾ ಪ್ರೀತಿ, ಸಂತೋಷ ಸಿಗಲಿ ಎಂಬುದೇ ನನ್ನ ಈ ಕ್ಷಣದ ಹರಕೆ. ಆದರೆ ಆ ಸಂತೋಷವನ್ನು ಕಾಣಲು ನಾನು ಇರಲಾರೆ. ಇನ್ನು ಮುಂದೆ ನಾನು ಹೊಸ ಮನುಷ್ಯಳು. ನನ್ನದು ಹೊಸ ದಾರಿ. ಆ ದಾರಿ ಹೇಗಿರುತ್ತದೆ ಎಂಬ ಕುತೂಹಲ ನನಗೂ ಇದೆ. ಹುಡುಕಾಟ ಮುಂದುವರಿಯುತ್ತದೆ.
- ಬಿಂದು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.