
ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾಸನ (ನ.22): ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಅಪರೂಪದ ಮದುವೆ ನಡೆಯಿತು. ನಾನು ಬಡವಿ, ಆತ ಬಡವ ಒಲವೆ ನಮ್ಮ ಬದುಕು ಎಂಬ ವರಕವಿ ದ.ರಾ.ಬೇಂದ್ರೆ ಅವರ ಪ್ರಸಿದ್ಧ ಗೀತೆಯನ್ನು ನೆನಪಿಸಿತು. ಆ ಜೋಡಿಗೆ ಮಾತು ಬರುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಆದರೂ ತಮ್ಮ ತಮ್ಮ ನಡುವಿನ ಆರೆಕೊರೆ ದಾಟಿ ನಾ ನಿನಗೆ, ನೀ ನನಗೆ ಎಂಬಂತೆ ಹಸಮಣೆ ಏರುವ ಮೂಲಕ ಗಮನ ಸೆಳೆದರು. ಜೊತೆಗೆ, ದಾಂಪತ್ಯದಲ್ಲಿ ಯಾವುದೇ ಬೈಗುಳ, ಅನುಮಾನ, ಇದ್ಯಾವುದಕ್ಕೂ ಅವಕಾಶವೇ ಇಲ್ಲದಂತಾಗಿದ್ದು ಜಗಳವೇ ಬಾರದ ಜೋಡಿ ಎಂದು ಜಿಲ್ಲೆಯ ಜನತೆ ಹಾರೈಸಿದ್ದಾರೆ.
ಬಾಳ್ಳುಪೇಟೆ ಗ್ರಾಮದ ಕೆಂಚಮ್ಮ- ಮಲ್ಲೇಗೌಡ ಸಮುದಾಯ ಭವನದಲ್ಲಿ ನಡೆದ ವಿಶೇಷ ಮದುವೆಯಲ್ಲಿ ಈ ಜೋಡಿ ನವ ಜೀವನಕ್ಕೆ ಕಾಲಿಟ್ಟರು. ಈ ಸನ್ನಿವೇಶಕ್ಕೆ ಎರಡೂ ಮನೆಯ ಕುಟುಂಬ ಸದಸ್ಯರು ಹಾಗೂ ಬಂಧು ಮಿತ್ರರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು ಸಾಕ್ಷಿಯಾದರು.ಬಾಳ್ಳುಪೇಟೆ -ಬನವಾಸೆ ಗ್ರಾಮದ ಸುವರ್ಣ-ಅಶೋಕ್ ಕುಮಾರ್ ದಂಪತಿ ಪುತ್ರಿ ಜ್ಞಾನ್ಹವಿ ಹಾಗೂ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಲ್ಯಾ ಗ್ರಾಮದ ಅನುಸೂಯಮ್ಮ- ನಂಜಪ್ಪ ದಂಪತಿ ಪುತ್ರ ನವೀನ್ ಇಬ್ಬರೂ ಹುಟ್ಟಿನಿಂದಲೂ ತಮ್ಮದಲ್ಲದ ತಪ್ಪಿಗೆ ದೈಹಿಕ ಊನತೆ ಹೊಂದಿದ್ದಾರೆ. ನೋಡೋಕೆ ಎಲ್ಲರಂತೆಯೇ ಇದ್ದರೂ, ಇಬ್ಬರೂ ಮಾತು ಬಾರದ ಕಿವಿ ಕೇಳದ ವಿಶೇಷ ಚೇತನರು ಆಗಿದ್ದಾರೆ.
'ಕುಮಾರ್‌ಸೋಮಿ ಕರೆಂಟ್ ಕಳ್ಳ' ಪೋಸ್ಟರ್ ಅಂಟಿಸಿದವ ಸಿಕ್ಬಿಟ್ಟ: ಪೆನ್‌ಡ್ರೈವ್‌ನಲ್ಲಿ ಸಾಕ್ಷಿ ಕೊಟ್ಟ ಜೆಡಿಎಸ್ ಮುಖಂಡರು
ಇಬ್ಬರೂ ಮದುವೆ ವಯಸ್ಸಿಗೆ ಬಂದಿದ್ದರಿಂದ ಇಬ್ಬರಿಗೂ ಹೊಂದುವವರನ್ನೇ ಹೇಗೆ ಜೋಡಿಸುವುದು ಎಂದು ಹೆತ್ತವರು ಚಿಂತೆಗೆ ಬಿದ್ದಿದ್ದರು. ಹೇಗೋ ಎರಡೂ ಕುಟುಂಬದವರಿಗೆ ಮಾಹಿತಿ ಲಭ್ಯವಾಗಿ ನಂತರ ಪರಸ್ಪರ ಹೋಗಿ ಬಂದು ಮದುವೆ ಪ್ರಸ್ತಾಪ ಮಾಡಿದರು. ಇದಕ್ಕೆ ಎರಡೂ ಕಡೆಯವರು ಸಮ್ಮತಿ ಸೂಚಿಸಿದ್ದರಿಂದ ಇಂದು ಮದುವೆ ನಿಶ್ಚಯ ಮಾಡಲಾಗಿತ್ತು. ಅದರಂತೆ ಶಾಸ್ತ್ರೋಕ್ತವಾಗಿ ನಡೆದ ಮದುವೆಗೆ ಸಾಮಾನ್ಯರು ಸೇರಿದಂತೆ ಇವರಂತೆಯೇ ಇರುವ ಹಲವು ಮಂದಿ ಸಾಕ್ಷಿಯಾದರು. ಮಾತಿಲ್ಲ, ಕತೆ ಇಲ್ಲ ಎಂಬಂತೆ ಹಾವ-ಭಾವ ಸಹ್ನೆಯಲ್ಲೇ ಮಂಗಳವಾದ್ಯ ನಡುವೆ ಶುಭ ವಿವಾಹನ ಮೌನವಾಗಿ ನಡೆದು ಹೋಯಿತು.
ಈ ವಿಶೇಷ ವರ-ವಧು ಹಸಮಣೆ ಏರುತ್ತಿದ್ದಂತೆಯೇ ಮದುವೆಗೆ ಸಾಕ್ಷಿಯಾದ ಅನೇಕರು, ನೂರು ಕಾಲ ಸುಖವಾಗಿ ಬಾಳಿ ಎಂದು ಅಕ್ಷತೆ ಹಾಕಿ ಸಂತೋಷದಿಂದ ಹರಸಿದರು. ಮತ್ತೊಂದು ವಿಶೇಷ ಎಂದರೆ ನ.22 ರಂದು ಬಾಳ್ಳುಪೇಟೆಯಲ್ಲಿ ವಿಶೇಷ ಮದುವೆಯೊಂದು ನಡೆಯಲಿದೆ. ಇದಕ್ಕೆ ಎಲ್ಲರೂ ಹಾಜರಾಗಿ ಆಶೀರ್ವಾದ ಮಾಡಿ ಎಂದು ವಿವಿಧ ಸಂಘಟನೆಗಳ ಮುಖಂಡರು ಸಾಮಾಜಿಕ ಜಾಲತಾಣ ಮೊದಲಾದ ಕಡೆಗಳಲ್ಲಿ ಪ್ರಚಾರ ಮಾಡಿದ್ದರಿಂದ ಕುತೂಹಲದಿಂದಲೇ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಆಗಮಿಸಿ ವಿಶೇಷ ಜೋಡಿಯನ್ನು ಕಂಡು ಶುಭ ಕೋರಿದರು.
ಹೆಂಡ್ತಿ ನೋಡೋಕೆ ಸುಂದರವಾಗಿದ್ದಾಳಂತ ಸಹಿಸದೇ ವರದಕ್ಷಿಣೆ ನೆಪವೊಡ್ಡಿ ಕತ್ತು ಹಿಸುಕಿದ ಪತಿ
ದಾಂಪತ್ಯದಲ್ಲಿ ಜಗಳವೇ ಇಲ್ಲದ ವಧು-ವರರ ಜೋಡಿ: ಈ ಜಗತ್ತಿನ ಬಗ್ಗೆ ಇರಲಿ ತಮ್ಮ ಬಗ್ಗೆಯೂ ಏನನ್ನೂ ಮಾತನಾಡದ, ಏನನ್ನೂ ಕೇಳಿಸಿಕೊಳ್ಳದ ಜ್ಞಾನ್ಹವಿ ಹಾಗೂ ನವೀನ್‌ಗೆ ವರ-ವಧು ಹೊಂದಿರುವುದು ಹೇಗೆ ಎಂದು ದೊಡ್ಡ ಚಿಂತೆಗೆ ಬಿದಿದ್ದ ಪೋಷಕರು, ಇಂದು ಯಾವುದೇ ಅಡ್ಡಿ-ಆತಂಕ ಇಲ್ಲದೆ ಮದುವೆ ಸಂಭ್ರಮದಿಂದ ನಡೆದಿದ್ದನ್ನು ಕಂಡು ಸಹಜವಾಗಿಯೇ ಖುಷಿ ಪಟ್ಟರು. ಅಷ್ಟೇ ಅಲ್ಲ ದೊಡ್ಡ ಜವಾಬ್ದಾರಿಯ ಭಾರ ಇಳಿಯಿತು ಎಂದು ನಿಟ್ಟುಸಿರು ಬಿಟ್ಟರು. ಹೆಣ್ಣಿಗೊಂದು ಗಂಡು, ಗಂಡಿಗೊಂದು ಹೆಣ್ಣಣ್ಣು ದೇವರು ಹೊಂದಿಸಿರುತ್ತಾನೆ ಅನ್ನೋ ಮಾತಿನಂತೆ ಮದುವೆ ನಡೆದಿದೆ. ಅವರಿಬ್ಬರೂ ಸದಾ ಕಾಲ ಚೆನ್ನಾಗಿರಲಿ ಎಂದು ಹರಸಿ, ಆಶೀರ್ವಾದ ಮಾಡಿದರು.ಈ ಅಪರೂಪದ ಮದುವೆಗೆ ಆಗಮಿಸಿದ್ದ ಕೆಲವರು ತಮ್ಮದೇ ರೀತಿಯಲ್ಲಿ ಚರ್ಚೆ, ಮಾತುಕತೆಯಲ್ಲಿ ತೊಡಗಿದ್ದುದು ಕಂಡು ಬಂತು. ಅದೇನೆಂದರೆ ಇಂದಿನ ಸಂಸಾರಗಳಲ್ಲಿ ಪತ್ನಿ ಕಡೆಯಿಂದಲೋ ಅಥವಾ ಪತಿ ಕಡೆಯಿಂದಲೋ ಸಣ್ಣಪುಟ್ಟ ತಪ್ಪಾಗಿ ಜಗಳ, ಕಲಹ ನಡೆಯುವುದು ಸಾಮಾನ್ಯ. ಆದರೆ ಈ ಜೋಡಿಯ ನಡುವೆ ಅದಾವುದರ ಗೊಡವೆ ಮರುಕಳಿಸದು ಅಲ್ವಾ ಎಂದು ಮಾತನಾಡಿಕೊಳ್ಳುತ್ತಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.