
ಹಿಮಾಚಲ ಪ್ರದೇಶದ ನಯನಮನೋಹರ ಸ್ಪಿತಿ ಕಣಿವೆಯ ಬೌದ್ಧ ಭಿಕ್ಕುಗಳ ಮಠವೊಂದರಲ್ಲಿ ಅದ್ಭುತ ಹಾಗೂ ಮುದ್ದಾದ ಘಟನೆಯೊಂದು ನಡೆದಿದೆ. ಅಲ್ಲಿನ ಯುವ ಬೌದ್ಧ ಭಿಕ್ಕುಗಳು ಫುಟ್‌ಬಾಲ್ ಆಡುತ್ತಿದ್ದಾಗ, 'ಮಾಫು' ಹೆಸರಿನ ಗೋಲ್ಡನ್ ರಿಟ್ರೈವರ್ ತಳಿಯ ನಾಯಿಯೊಂದು ಅವರೊಂದಿಗೆ ಸೇರಿಕೊಂಡು ಅತ್ಯಂತ ಉತ್ಸಾಹದಿಂದ ಆಟವಾಡಿದೆ. ಈ ಅಪರೂಪದ ಹಾಗೂ ಕಣ್ಣಿಗೆ ತಂಪು ನೀಡುವ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಲಕ್ಷಾಂತರ ಜನರ ಹೃದಯ ಗೆದ್ದಿದೆ.
Instagram ನ @thepawsomelifeofmurphy ಎಂಬ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ನಾವು ಸ್ಪಿತಿಯಲ್ಲಿರುವ ಮಠವೊಂದರ ಬಳಿ ನಿಂತಾಗ ಈ ಸುಂದರ ಕ್ಷಣ ಎದುರಾಯಿತು. ಮಾಫು ತಕ್ಷಣವೇ ಅಲ್ಲಿದ್ದ ಯುವ ಸನ್ಯಾಸಿಗಳ ಫುಟ್‌ಬಾಲ್ ಪಂದ್ಯವನ್ನು ಸೇರಿಕೊಂಡ. ಈ ಯುವ ಸನ್ಯಾಸಿಗಳೊಂದಿಗೆ ಆಡುವುದು ಖಂಡಿತವಾಗಿಯೂ ಅವನ ನೆಚ್ಚಿನ ಕ್ಷಣಗಳ ಪಟ್ಟಿಗೆ ಸೇರಿರುತ್ತದೆ ಎಂದು ಭಾವಿಸುತ್ತೇನೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.
ಆಟದಲ್ಲಿ ಸಂಪೂರ್ಣವಾಗಿ ತಲ್ಲೀನವಾಗಿದ್ದ ಮಾಫುವಿನ ಈ ತುಂಟತನ ಹಾಗೂ ಚೇಷ್ಟೆಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ವೀಡಿಯೊ ನೋಡಿದ ಜನರು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
'ಪಾವ್ನಾಲ್ಡೊ' ನಾಯಕ: ಫುಟ್‌ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರು ಮತ್ತು ನಾಯಿಯ ಪಂಜವನ್ನು (Paw) ಸಂಯೋಜಿಸಿ, ಬಳಕೆದಾರರೊಬ್ಬರು ತಮಾಷೆಯಾಗಿ "ಇವನೇ ನಿಜವಾದ ಪಾವ್ನಾಲ್ಡೊ ! ಎಂದು ಕಾಮೆಂಟ್ ಮಾಡಿದ್ದಾರೆ.
ನಿಷ್ಕಲ್ಮಶ ಪ್ರೀತಿ: ಮತ್ತೊಬ್ಬರು, ಇದು ಶುದ್ಧ ಸಂತೋಷ! ನಾಯಿಗಳು ಪ್ರೀತಿ ಮತ್ತು ನಿಷ್ಠೆಯ ಸಂಕೇತ. ಅವು ನಮ್ಮಿಂದ ಏನನ್ನೂ ಬಯಸದೆ, ತಮ್ಮ ಇಡೀ ಹೃದಯವನ್ನೇ ನಮಗೆ ನೀಡುತ್ತವೆ. ಮಾಫು ತನ್ನ ಸುತ್ತಲಿನ ಎಲ್ಲರಿಗೂ ನಗು ಮತ್ತು ಸಂತೋಷ ತಂದಿದ್ದಾನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಶ್ಲಾಘನೆ: "ಇಂದು ನಾನು ಇಂಟರ್ನೆಟ್‌ನಲ್ಲಿ ನೋಡಿದ ಅತ್ಯಂತ ಸುಂದರವಾದ ವೀಡಿಯೊ ಇದಾಗಿದೆ," ಎಂದು ಹಲವರು ಹೇಳಿದ್ದರೆ, ಇನ್ನು ಕೆಲವರು "ಮಫ್ಫು, ನಾನು ನಿನ್ನ ದೊಡ್ಡ ಅಭಿಮಾನಿ! ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಹಿಮಾಲಯದ ಕಣಿವೆಯಲ್ಲಿ ಯುವ ಬಿಕ್ಕುಗಳು ಹಾಗೂ ಈ ಮುದ್ದಾದ ನಾಯಿಯ ನಡುವೆ ನಡೆದ ಈ ಅನಿರೀಕ್ಷಿತ ಫುಟ್‌ಬಾಲ್ ಆಟವು, ಕೇವಲ ಅಲ್ಲಿಗಷ್ಟೇ ಅಲ್ಲದೆ ಜಾಲತಾಣದಲ್ಲೂ ಖುಷಿಯ ಅಲೆಯನ್ನೇ ಎಬ್ಬಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.