
ಮದುವೆ ಬರೀ ಇಬ್ಬರ ನಡುವೆ ನಡೆಯೋದಲ್ಲ. ಎರಡು ಕುಟುಂಬಗಳನ್ನು ಒಂದು ಮಾಡುವಂತಹದ್ದು. ಎರಡು ವಿಭಿನ್ನ ವ್ಯಕ್ತಿತ್ವಗಳು ಮತ್ತು ಎರಡು ಜೀವನಶೈಲಿಗಳು ಒಂದಾಗುವ ನಿರ್ಧಾರ. ಹೀಗಾಗಿ ಮದುವೆಗಾಗಿ ಹುಡುಗನನ್ನು ಆಯ್ಕೆ ಮಾಡುವಾಗ ಸಾಮಾನ್ಯವಾಗಿ ಉದ್ಯೋಗ, ಸಂಬಳ, ಕುಟುಂಬದ ಹಿನ್ನೆಲೆ, ಆಸ್ತಿ-ಪಾಸ್ತಿ ಹೀಗೆ ಹಲವು ವಿಷಯಗಳನ್ನು ನೋಡಲಾಗುತ್ತದೆ. ಆದರೆ ಇವೆಲ್ಲಕ್ಕಿಂತಲೂ ಮುಖ್ಯವಾದ ಕೆಲವು ಗುಣಗಳು ವ್ಯಕ್ತಿಯಲ್ಲಿರಬೇಕು ಎನ್ನುತ್ತಾರೆ ಡಿವೋರ್ಸ್ ಲಾಯರ್.
ಮದುವೆಗೂ ಮುನ್ನ ಹುಡುಗನ ಬಗ್ಗೆ ಎರಡು ಪ್ರಮುಖ ವಿಷಯಗಳನ್ನು ಗಮನಿಸಬೇಕು ಎನ್ನುತ್ತಾರೆ ಲಾಯರ್. ಮದುವೆಯಾಗಲಿರುವ ವ್ಯಕ್ತಿ ನಿಮ್ಮನ್ನು ಎಷ್ಟು ಗೌರವಿಸುತ್ತಾನೆ ಎಂಬುದು ಬಹಳ ಮುಖ್ಯ. ನಿಮ್ಮ ಮಾತಿಗೆ ಬೆಲೆ ಕೊಡುತ್ತಾನೆಯೇ, ನೀವು ಮಾತನಾಡುವಾಗ ಗಮನವಿಟ್ಟು ಕೇಳುತ್ತಾನೆಯೇ, ನಿಮ್ಮ ಅಭಿಪ್ರಾಯ ತನ್ನ ಅಭಿಪ್ರಾಯಕ್ಕಿಂತ ಭಿನ್ನವಾಗಿದ್ದರೂ ಅದನ್ನು ಗೌರವಿಸುತ್ತಾನೆಯೇ ಎಂಬುದನ್ನು ಗಮನಿಸಬೇಕು.
ಕೇವಲ ಪ್ರೀತಿಯ ಮಾತುಗಳು ಅಥವಾ ದುಬಾರಿ ಉಡುಗೊರೆಗಳಿಂದ ಒಳ್ಳೆಯ ಜೀವನ ಸಂಗಾತಿಯನ್ನು ಗುರುತಿಸಲು ಸಾಧ್ಯವಿಲ್ಲ. ನಿಮ್ಮೊಂದಿಗೆ ಸಮಯ ಕಳೆಯಲು ಆತ ನಿಜವಾಗಿಯೂ ಆಸಕ್ತಿ ತೋರಿಸುತ್ತಾನೆಯೇ, ನಿಮ್ಮ ಸಂತೋಷ ಮತ್ತು ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆಯೇ ಎಂಬುದನ್ನು ನೋಡಬೇಕು.
ನಿಮ್ಮ ಕುಟುಂಬ, ನಿಮ್ಮ ಬೆಳೆದು ಬಂದ ರೀತಿ ಮತ್ತು ನಿಮ್ಮ ವೈಯಕ್ತಿಕ ಇಷ್ಟ-ಕಷ್ಟಗಳನ್ನು ಗೌರವಿಸುವ ಮನಸ್ಸು ಆತನಲ್ಲಿದೆಯೇ ಎಂಬುದೂ ಮುಖ್ಯ. ನಿಮ್ಮನ್ನು ತನ್ನ ಇಷ್ಟಕ್ಕೆ ತಕ್ಕಂತೆ ಬದಲಾಯಿಸಲು ಪ್ರಯತ್ನಿಸುವ ವ್ಯಕ್ತಿಗಿಂತ, ನಿಮ್ಮ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಸ್ವೀಕರಿಸುವ ವ್ಯಕ್ತಿಯೊಂದಿಗೆ ದಾಂಪತ್ಯ ಜೀವನ ಹೆಚ್ಚು ಸುಗಮವಾಗಿರಬಹುದು.
ಮದುವೆಗೂ ಮುನ್ನ ಎಲ್ಲರೂ ತಮ್ಮ ಉತ್ತಮ ಮುಖವನ್ನು ತೋರಿಸುತ್ತಾರೆ. ಆದರೆ ಒಬ್ಬ ವ್ಯಕ್ತಿಯ ನಿಜವಾದ ಸ್ವಭಾವ ಕೋಪ, ಒತ್ತಡ ಮತ್ತು ಸಮಸ್ಯೆಯ ಸಮಯದಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗಾಗಿ ಹುಡುಗನಿಗೆ ಕೋಪ ಬಂದಾಗ ಆತ ಹೇಗೆ ವರ್ತಿಸುತ್ತಾನೆ ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ಸಣ್ಣ ವಿಷಯಕ್ಕೂ ಕೂಗುತ್ತಾನೆಯೇ, ಎದುರಿನವರನ್ನು ಅವಮಾನಿಸುತ್ತಾನೆಯೇ, ತನ್ನ ಕೋಪಕ್ಕೆ ಇತರರನ್ನು ಹೊಣೆ ಮಾಡುತ್ತಾನೆಯೇ ಅಥವಾ ಸ್ವಲ್ಪ ಸಮಯ ತೆಗೆದುಕೊಂಡು ಶಾಂತವಾಗಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾನೆಯೇ ಎಂಬುದನ್ನು ಗಮನಿಸಬೇಕು.
ಹೊರಗಿನ ಕೆಲಸದ ಒತ್ತಡ ಅಥವಾ ಬೇರೆ ಸಮಸ್ಯೆಗಳ ಕೋಪವನ್ನು ಪ್ರತಿದಿನ ಮನೆಗೆ ಬಂದು ಸಂಗಾತಿಯ ಮೇಲೆ ತೋರಿಸುವುದು ಆರೋಗ್ಯಕರ ಸಂಬಂಧದ ಲಕ್ಷಣವಲ್ಲ. ದಾಂಪತ್ಯದಲ್ಲಿ ಸಮಸ್ಯೆಗಳು ಬಂದಾಗ ಇಬ್ಬರೂ ಪರಸ್ಪರ ಕೇಳಿಕೊಂಡು, ಮಾತನಾಡಿಕೊಂಡು ಪರಿಹಾರ ಹುಡುಕುವ ಮನೋಭಾವ ಹೊಂದಿರುವುದು ಅಗತ್ಯ.
ಸಣ್ಣ ಸ್ವಭಾವವೇ ಮುಖ್ಯ
ಒಬ್ಬ ವ್ಯಕ್ತಿ ತನ್ನ ಬಗ್ಗೆ ಹೇಳಿಕೊಳ್ಳುವ ಮಾತುಗಳಿಗಿಂತ ಆತ ಇತರರೊಂದಿಗೆ ಹೇಗೆ ವರ್ತಿಸುತ್ತಾನೆ ಎಂಬುದು ಹೆಚ್ಚು ಹೇಳುತ್ತದೆ. ಉದಾಹರಣೆಗೆ, ಹೋಟೆಲ್ನಲ್ಲಿ ವೇಟರ್ ಜೊತೆ ಹೇಗೆ ಮಾತನಾಡುತ್ತಾನೆ, ಡ್ರೈವರ್ ಅಥವಾ ಕೆಲಸ ಮಾಡುವ ವ್ಯಕ್ತಿಯನ್ನು ಗೌರವದಿಂದ ನೋಡುತ್ತಾನೆ, ಸಣ್ಣ ತಪ್ಪಾದಾಗ ತಕ್ಷಣ ಕೋಪಗೊಳ್ಳುತ್ತಾನೆಯೇ, ತನ್ನಿಂದ ತಪ್ಪಾದರೆ ಕ್ಷಮೆ ಕೇಳಲು ಸಿದ್ಧನಿದ್ದಾನೆಯೇ, ಇಂಥ ಸಾಮಾನ್ಯ ಸಂದರ್ಭಗಳಲ್ಲಿ ಆತನ ವರ್ತನೆಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಮದುವೆಯ ಆರಂಭದಲ್ಲಿ ಕಾಣಿಸುವ ಸಣ್ಣ ವರ್ತನೆಗಳೇ ಮುಂದೆ ದಾಂಪತ್ಯ ಜೀವನದಲ್ಲಿ ದೊಡ್ಡ ಸಮಸ್ಯೆಗಳಾಗಬಹುದು.
ಆತುರ ಬೇಡ
ಮೊದಲ ಭೇಟಿಯಲ್ಲೇ ಒಬ್ಬ ವ್ಯಕ್ತಿಯ ಸಂಪೂರ್ಣ ಸ್ವಭಾವ ತಿಳಿದುಕೊಳ್ಳುವುದು ಕಷ್ಟ. ಚೆನ್ನಾಗಿ ಮಾತನಾಡುವುದು, ಒಳ್ಳೆಯ ಕೆಲಸ ಮಾಡುವುದು ಅಥವಾ ಆಕರ್ಷಕ ವ್ಯಕ್ತಿತ್ವ ಹೊಂದಿರುವುದು ಮಾತ್ರ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಸಾಕಾಗುವುದಿಲ್ಲ. ಮದುವೆಗೂ ಮುನ್ನ ವಿವಿಧ ಸಂದರ್ಭಗಳಲ್ಲಿ ಆ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಸಣ್ಣ ಭಿನ್ನಾಭಿಪ್ರಾಯ ಬಂದಾಗ ಹೇಗೆ ಪ್ರತಿಕ್ರಿಯಿಸುತ್ತಾನೆ, ನಿರ್ಧಾರವನ್ನು ಹೇಗೆ ಗೌರವಿಸುತ್ತಾನೆ ಎಲ್ಲವನ್ನೂ ಅರಿಯಬೇಕು. ವಿಶೇಷವಾಗಿ ಮದುವೆಯಂತಹ ದೊಡ್ಡ ನಿರ್ಧಾರದಲ್ಲಿ, ಕುಟುಂಬದ ಒತ್ತಡ ಅಥವಾ ವಯಸ್ಸಿನ ಕಾರಣಕ್ಕೆ ಆತುರಪಡದೆ ವ್ಯಕ್ತಿಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಒಳ್ಳೆಯದು.
ಮದುವೆ ಯಶಸ್ವಿಯಾಗಲು ಕೇವಲ ಪ್ರೀತಿ ಇದ್ದರೆ ಸಾಕಾಗುವುದಿಲ್ಲ. ಗೌರವ, ನಂಬಿಕೆ, ಸಂವಹನ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವ ಗುಣವೂ ಬೇಕಾಗುತ್ತದೆ. ಜೀವನದಲ್ಲಿ ಸಂತೋಷದ ದಿನಗಳು ಮಾತ್ರ ಇರುವುದಿಲ್ಲ. ಕಷ್ಟ, ಹಣಕಾಸಿನ ಸಮಸ್ಯೆ, ಕುಟುಂಬದ ವಿಚಾರ, ಆರೋಗ್ಯದ ಸಮಸ್ಯೆ ಅಥವಾ ಬೇರೆ ಒತ್ತಡಗಳು ಎದುರಾಗಬಹುದು. ಅಂತಹ ಸಂದರ್ಭಗಳಲ್ಲಿ ಸಂಗಾತಿ ಹೇಗೆ ವರ್ತಿಸುತ್ತಾನೆ ಎಂಬುದೇ ದಾಂಪತ್ಯದ ನಿಜವಾದ ಪರೀಕ್ಷೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.