30 ವರ್ಷಗಳ ಬಳಿಕ ಜೀವದ ಗೆಳತಿ ಹುಡುಕಿಕೊಟ್ಟ ಫೇಸ್‌ಬುಕ್!

By Suvarna News  |  First Published Aug 3, 2024, 11:50 AM IST

ನಮ್ಮಿಬ್ಬರ ಸ್ನೇಹಕ್ಕೆ ಸುಮಾರು 30 ವರ್ಷಗಳೇ ಕಳೆದಿವೆ. ಆದರೂ ಹೈಸ್ಕೂಲ್ ಗೆಳೆತನ ಹಾಗೆ ಹಚ್ಚಹಸಿರಾಗಿದೆ. ನನ್ನ ಬದುಕಿನ ನೋವಿನ ಕ್ಷಣಗಳಿಗೆ ನಿನ್ನ ನೆನಪೆ ಒಂಥರಾ ಟಾನಿಕ್. ನನ್ನ ನಿನ್ನ ಗೆಳೆತನ ಕೇವಲ ಪಿಯುಸಿಗೆ ಕೊನೆಯಾದರೂ ಇಂದಿಗೂ ಅದೇ ಬಾಂಧವ್ಯ ಇಟ್ಟುಕೊಂಡಿದ್ದೇವೆ ಅಂತ ಹೇಳುವಾಗ ಏನೋ ಒಂಥರಾ ಖುಷಿ. ಒಂಥರಾ ಹೆಮ್ಮೆ, ಸಾರ್ಥಕ ಭಾವ.


ಫೇಸ್ಬುಕ್ಕು ಹುಡುಕಿ ಕೊಟ್ಟ ಗೆಳತಿಗೆ....

ಪ್ರೀತಿಯ ದೀಪಾ ಹೇಗಿದ್ದೀಯಾ? ಆರಾಮ ಇದ್ದೆ ಅಂತ ತಿಳಿದಿದ್ದೆ. ಸ್ನೇಹಿತರ ದಿನದ ಶುಭಾಶಯಗಳು. ಹಾಗಂತ ಹೇಳಿದ್ರೆ ತುಂಬ ಸಾಧಾರಣ ಸಾಲುಗಳು ಅಂತ ಅನ್ನಿಸೀತೋ ಏನೋ. ಜೀವನದ ಪ್ರತಿ ಕ್ಷಣವೂ ನೀನು ನನ್ನ ನೆನಪಾಗಿ ಕಾಡ್ತೀಯ. ಹಾಗೆ ನೋಡುವುದಕ್ಕೆ ಹೋದ್ರೆ, ಮರೆತರೆ ತಾನೇ ನೆನಪಾಗುವುದು. ಅಲ್ವ?

Tap to resize

Latest Videos

undefined

ಯಾಕಂದ್ರೆ ನನ್ನ ನಿನ್ನ ಸ್ನೇಹ ಅಂತದ್ದು. ನಮ್ಮಿಬ್ಬರಲ್ಲಿ ಸಂಪತ್ತಿನ ಅಂತಸ್ತಿಗೆ ಕೊರತೆ ಇರಬಹುದು. ಆದರೆ ಸ್ನೇಹದ ಅಂತಸ್ತಿಗೆ ಅಂದಿಗೂ, ಇಂದಿಗೂ ಕೊರತೆ ಆಗಲೇ ಇಲ್ಲ. ಎಷ್ಟು ವಿಚಿತ್ರ ಅಲ್ವಾ. ನೀನು ನನಗಿಂತ ಮೊದಲು ಮದುವೆ ಆದೆ. ಬೆಂಗಳೂರು ಎಂಬ ಮಹಾನಗರ ಸೇರಿದೆ. ನಾನೋ ಉನ್ನತ ಶಿಕ್ಷಣ ಅಂತ ಹೋದೆ. ಮತ್ತೆ ನಮ್ಮಿಬ್ಬರ ಭೇಟಿ ಆಗಲೇ ಇಲ್ಲ ಅಂದರೂ ತಪ್ಪಿಲ್ಲ. ಮತ್ತೆ ವರುಷಗಳ ಬಳಿಕ ನೀನು ನಂಗೆ ಕಳೆದು ಹೋದ ನಿಧಿಯ ಹಾಗೆ ಸಿಕ್ಕಿದ್ದು ಈಗ ಅಲ್ವ?

Friendship Day: ಎಲ್ಲರನ್ನೂ ಒಂದಾಗಿಸುವ ಸ್ನೇಹಕ್ಕೆಲ್ಲಿ ಜಾತಿ, ಧರ್ಮದ ಬೇಲಿ?

ನಮ್ಮಿಬ್ಬರ ಸ್ನೇಹಕ್ಕೆ ಸುಮಾರು 30 ವರ್ಷಗಳೇ ಕಳೆದಿವೆ. ಆದರೂ ಹೈಸ್ಕೂಲ್ ಗೆಳೆತನ ಹಾಗೆ ಹಚ್ಚಹಸಿರಾಗಿದೆ. ನನ್ನ ಬದುಕಿನ ನೋವಿನ ಕ್ಷಣಗಳಿಗೆ ನಿನ್ನ ನೆನಪೆ ಒಂಥರಾ ಟಾನಿಕ್. ನನ್ನ ನಿನ್ನ ಗೆಳೆತನ ಕೇವಲ ಪಿಯುಸಿಗೆ ಕೊನೆಯಾದರೂ ಇಂದಿಗೂ ಅದೇ ಬಾಂಧವ್ಯ ಇಟ್ಟುಕೊಂಡಿದ್ದೇವೆ ಅಂತ ಹೇಳುವಾಗ ಏನೋ ಒಂಥರಾ ಖುಷಿ. ಒಂಥರಾ ಹೆಮ್ಮೆ, ಸಾರ್ಥಕ ಭಾವ.

ಆಶ್ಚರ್ಯ ಏನ್ ಗೊತ್ತಾ? ನನ್ನ ನಿನ್ನ ಮನೆಗೆ ತೆರಳುವ ಡೈವರ್ಷನ್ ದಾರಿ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅಲ್ಲಿರುವ ಮುರುಗಲು ಮೂರು, ಹೊನ್ನಾವರ ಬೆಂಗಳೂರು ಹೈವೆ. ಇನ್ನೂ ಹಸಿರು ಹಸಿರು. ಅಲಾ ಮಾರಾಯ್ತಿ ಅದೇ ಇಪ್ಪತ್ತೈದು ಮತ್ತು ಐವತ್ತು ಪೈಸೆ ಶೇಂಗಾ ಚಿಕ್ಕಿ, ಮಹಾಲೆಕ್ಟೋ ಚಾಕಲೇಟ್, ಕಾಪಿರೈಟ್ ಚಾಕಲೇಟ್ ನಿನ್ನ ಮನೆಯ ತಿಂಡಿ... ಎಲ್ಲಾ ಎಲ್ಲಾ ಇಂದು ನನ್ನ ಮನಸಿನ ತಂಪು ಸಿಂಚನಗಳು. ಹೈವೆ ಗೆ ಬೇಸರ ತರಿಸುವ ನಮ್ಮಿಬ್ಬರ ಮಾತುಕತೆ. ದಿನ ಸಿಕ್ತಿದ್ವಿ. ಮಾತಾಡ್ತಾ ಇದ್ವಿ. ಆದರೆ ಇನ್ನೂ ಮಾತು ಬಾಕಿ ಇರುತ್ತಿತ್ತು. ಎಂದೂ ಮುಗಿಯದ ಕನವರಿಕೆಗಳು...

ಅಲ್ಲದೆ ನಿಮ್ಮ ಮನೆ ಒಂಥರಾ ನನ್ನ ಮನೆ ಆಗಿತ್ತು. ಅಲ್ಲಿ ನಿನ್ನ ಅಮ್ಮ, ಅಣ್ಣ, ದೊಡ್ಡಪ್ಪ, ರವಿ ಅಣ್ಣ, ಶಿವಣ್ಣನ ಗೀತಕ್ಕ, ಪೂರ್ಣಿಮಾ, ಎಲ್ಲರೂ ಒಂಥರಾ ಈಗಲೂ ಆಗಾಗ ನೆನಪಿಗೆ ಬರುತ್ತಾರೆ.
ನಮ್ಮಿಬ್ಬರ ಕುಶಲೋಪರಿಯ ಮಧ್ಯೆ ಬಂದು ಹೋಗುವ ನಿನ್ನ ಅಮ್ಮ ಮಾಡಿದ ಪಲಾವ್, ಅನ್ನ, ಸಾರು ಮಜ್ಜಿಗೆ, ಸಂಡಿಗೆ, ಅಕ್ಕಿ ಹಪ್ಪಳ, ಹಲಸಿನ ಹಪ್ಪಳ ಎಲ್ಲದರ ನೆನಪುಗಳು ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ಆದರೆ ಆದರೆ ನಿನ್ನ ನಾ ಮಿಸ್ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ ಈ ಮೊಬೈಲ್ ಸಂಪರ್ಕ, ಬ್ಯುಸಿ ಕೆಲಸದ ಒತ್ತಡ, ಮಕ್ಕಳು, ಗಂಡ, ಮನೆಯ ಜವಾಬ್ದಾರಿ ಎಲ್ಲಾ ಕಾರಣವಾದವು. ಓದು, ಕೆಲಸ, ಸಂಸಾರದ ನಡುವೆ ವರ್ಷಗಳು ಉರುಳಿದ್ದು ಗೊತ್ತೇ ಆಗಲಿಲ್ಲ. ಆದರೂ ನೆನಪು ನೆನಪೇ ತಾನೇ? ಸ್ನೇಹ ಸ್ನೇಹನೆ ತಾನೇ? ಅದರಲ್ಲೂ ಈ ಜಂಜಾಟಗಳ ನಡುವೆ ನಿನ್ನ ಪೋನ್ ನಂಬರ್ ಮಿಸ್ ಆಗಿತ್ತು. ಆಗ 30ವರ್ಷಗಳ ಹಿಂದೆ ನಮ್ಮ ಸೇತುವೆ ಆಗಿದ್ದದ್ದು ಲ್ಯಾಂಡ್ ಫೋನ್. ಈಗ ಅದು ಇತಿಹಾಸ. ಈಗ ಅದು ಅಲ್ಲೋ ಇಲ್ಲೋ ಕೆಲವು ಮನೆಗಳು ಅಲಂಕಾರಿಕ ವಸ್ತುವಾಗಿದೆ. ಜೊತೆಗೆ ಆ ಕಾಲದ ಫೋನ್ ನಂಬರು, ಎಸ್ಟಿಡಿ ನಂಬರು ಎಲ್ಲ ಅಲ್ಲೋಕಲ್ಲೋಲ ಆಗಿದ್ದು, ಅದನ್ನೇ ಹಿಡ್ಕೊಂಡು ಯಾರಿಗೆ ಅಂತ ಕಾಲ್ ಮಾಡ್ಲಿ. ಆ ಫೋನನ್ನು ನೋಡಿದಾಗ ನಿನ್ನ ನನ್ನ ಮಾತಿನ ಸೇತುವೆಯನ್ನು ಒಮ್ಮೆ ಸವರುತ್ತೇನೆ.

ಅಲ್ಲಾ 30 ವರ್ಷಗಳ ಈ ಅಪರಿಮಿತ ಸ್ನೇಹಕ್ಕೆ ಜೀವ ತಂದುಕೊಟ್ಟಿದ್ದು ಈ ನಮ್ಮ ಫೇಸ್ ಬುಕ್ ಎಂಬ ಸೋಶಿಯಲ್ ಮೀಡಿಯಾ. ಎಂಥಾ ಅಂದ್ರೆ ನಿನ್ನ ಫೋನ್ ನಂಬರ್ ಹುಡುಕುವುದಕ್ಕೆ ತುಂಬಾ ಕಷ್ಟ ಪಟ್ಟೆ. ಸಿಗಲಿಲ್ಲ. ನನ್ನ ನಿನ್ನ ಸ್ನೇಹದ ಮಹಲಿಗೆ ಮತ್ತೆ ಜೀವ ತಂದಿದ್ದು ನನ್ನ ನಿನ್ನ ಮಕ್ಕಳು. ಅದೇ ಫೇಸ್ ಬುಕ್ ಮೆಸೇಜ್ ಮೂಲಕ. ಒಂಥರಾ ಫೀನಿಕ್ಸ್ ಹಕ್ಕಿಯಂತೆ ಬಂದೆ. ನೀನು ಕಾಲ್ ಮಾಡಿದೆ. ನಾನೊ ಖುಷಿಯಲ್ಲಿ ಮಾತೆ ಬಾರದೆ ತೊದಲುತ್ತಿದ್ದೆ. ನಿನಗಾದ ಆಕ್ಸಿಡೆಂಟ್ ಬಗ್ಗೆ ಕೇಳಿ ಮನಸಿಗೆ ತುಂಬಾ ಕಸಿವಿಸಿ. ನಿನ್ನ ಅಮ್ಮನ ಜೊತೆ ಮತ್ತೊಮ್ಮೆ ಮಾತಾಡಿದೆ. ನಾವು ಬೆಳಗಾದ್ರೆ ಮೊಬೈಲಿಗೆ, ಈ ಜಾಲತಾಣಕ್ಕೆಲ್ಲ ಬೈತಾ ಇರ್ತೀವಿ. ನಮ್ಮ ಓದು, ನಮ್ಮ ಬಿಡುವಿನ ವೇಳೆ, ಬಂಧುಗಳು, ಸ್ನೇಹಿತರಿಂದ ನಮ್ಮನ್ನು ದೂರ ಮಾಡುವುದೇ ಮೊಬೈಲು ಅಂತ ಶಾಪ ಹಾಕಿಕೊಂಡೇ ಇರ್ತೀವಿ. ಆದರೂ ಜೀವದ ಗೆಳತಿಯಾದ ನಿನ್ನನ್ನು ಮತ್ತೊಮ್ಮೆ ಕೇಳಲು, ಕಾಣಲು, ಮಾತನಾಡಲು ಸಾಧ್ಯವಾಗಿಸಿದ್ದು ಅದೇ ಮೊಬೈಲು, ಅದೇ ಜಾಲತಾಣ.

ನನ್ನನ್ನು ಮತ್ತೆ ಅದೇ ಹಳೆಯ ಗೆಳೆತನದ ಸವಿಶೃತಿಗೆ ಕರೆದುಕೊಂಡು ಹೋದ ನಿನಗೆ ಅಂತರಾಳದ ಸ್ನೇಹಿತರ ದಿನದ ಶುಭಾಶಯಗಳು. ಖಂಡಿತಾ ನನಗೆ ಸ್ನೇಹಿತರ ದಿನದ ಶುಭಾಶಗಳು ಎಂಬ ಸಾಲಿಗೆ ನಮ್ಮ ಗೆಳೆತನವನ್ನು ಸೀಮಿತ ಆಗಿಡಲು ಮನಸ್ಸಿಲ್ಲ. ಅಡ್ಡಿಲ್ಲ... ಈ ನೆಪದಲ್ಲಾದ್ರೂ ಇಷ್ಟು ಮಾತಾಡುವ ಹಾಗಾಯ್ತು. ಏನಂತೀಯ?

-ನಿನ್ನ ಲತಾ (ಸುಮಲತಾ ನಾಯ್ಕ್, ಉಪನ್ಯಾನಕಿ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ)

click me!