ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ ಅಪ್ರತಿಮ ಪ್ರತಿಭಾವಂತ. ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಈ ಹುಡುಗ ಏರಿದ ಎತ್ತರ ಯಾರಿಗೇ ಆದರೂ ಸ್ಫೂರ್ತಿ ನೀಡುವಂಥದ್ದು. ಇವರು ತಮ್ಮ ಪ್ರೇಮಕತೆಯನ್ನು ಹೇಳಿಕೊಂಡಿದ್ದಾರೆ. ಮುದ್ದಾದ ಈ ಕತೆ ಒಂದು ಚೆಂದದ ಸಿನಿಮಾದಂತಿದೆ.
ಸುನೀಲ್ ಛೇಟ್ರಿ
ಅವಳ ತಂದೆ ನನ್ನ ಕೋಚ್. ಅವರು ನನ್ನ ಬಗ್ಗೆ ಮನೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು ಅಂತ ಅನ್ನಿಸುತ್ತದೆ. ಹಾಗಾಗಿ ಅವಳಿಗೆ ನನ್ನ ಬಗ್ಗೆ ತಿಳಿದುಕೊಳ್ಳಲು ಭಾರಿ ಕುತೂಹಲ. ಅವಳು ಒಂದ್ಸಲ ಅವಳ ತಂದೆಯ ಮೊಬೈಲಿನಿಂದ ನನ್ನ ನಂಬರ್ ಕದ್ದು ಮೆಸೇಜ್ ಮಾಡಿದಳು. ‘ಹಾಯ್, ನಾನು ಸೋನಮ್, ನಿಮ್ಮ ದೊಡ್ಡ ಅಭಿಮಾನಿ. ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಗಬಹುದೇ?’ ಅವಳು ಯಾರು ಅಂತ ನನಗೆ ಐಡಿಯಾನೇ ಇರಲಿಲ್ಲ. ನನಗಾಗ 18. ಅವಳಿಗೆ 15.
ಸರಳತೆಗೆ ಮತ್ತೊಂದು ಹೆಸರು ರಾಹುಲ್ ದ್ರಾವಿಡ್
ಅವಳ ಒಳ್ಳೆಯ ಮಾತುಗಳಿಗೆ ಮಣಿದು ನಾನು ಅವಳನ್ನು ಭೇಟಿ ಮಾಡಲು ನಿರ್ಧರಿಸಿದೆ. ಅವಳನ್ನು ನೋಡಿದಾಗಲೇ ಗೊತ್ತಾಗಿದ್ದು ಅವಳು ಪುಟ್ಟಹುಡುಗಿ ಎಂದು. ನೀನು ಪುಟ್ಟಹುಡುಗಿ, ಹೋಗಿ ಓದಿಕೋ ಅಂತ ಹೇಳಿ ನಾನು ಅಲ್ಲಿಂದ ಎದ್ದು ಬಂದಿದ್ದೆ. ಆದರೆ ಕೆಲವು ಕಾರಣಗಳಿಂದಾಗಿ ನಾವು ಪರಸ್ಪರ ಮೆಸೇಜ್ ಮಾಡುವುದನ್ನು ನಿಲ್ಲಿಸಲಿಲ್ಲ.
ಒಂದೆರಡು ತಿಂಗಳು ಹಾಗೆಯೇ ಕಳೆದಿರಬಹುದು. ಒಮ್ಮೆ ಏನಾಯಿತೆಂದರೆ ನನ್ನ ಕೋಚ್ ಫೋನ್ ಕೆಲಸ ಮಾಡುತ್ತಿರಲಿಲ್ಲ. ಅವರು ರಿಪೇರಿ ಮಾಡಲು ನನ್ನ ಕೈಗೆ ಕೊಟ್ಟರು. ನಾನು ಅದನ್ನು ನೋಡುತ್ತಿರುವಾಗ ಕೋಚ್ ಮಗಳ ಫೋನ್ ಬಂತು. ಆ ನಂಬರ್ ನೋಡಿದೆ. ಅರೆ, ಎಲ್ಲೋ ನೋಡಿದ ಹಾಗಿದೆಯಲ್ಲ ಅನ್ನಿಸಿತು. ತಕ್ಷಣ ಇದು ಸೋನಮ್ ನಂಬರ್ ಅಲ್ವಾ ಎಂದು ಗಾಬರಿಯಾಯಿತು. ಎಲ್ಲವೂ ನಿಚ್ಚಳವಾಯಿತು.
ಅವಳಿಗೆ ಫೋನ್ ಮಾಡಿದೆ. ನಾನು ನಿನ್ನ ಜೊತೆ ಮಾತನಾಡುವುದು ಒಂದು ವೇಳೆ ಕೋಚ್‌ಗೆ ತಿಳಿದರೆ ನನ್ನ ಕರಿಯರ್ ಮುಗಿದು ಹೋಗುತ್ತದೆ, ಯಾಕೆ ಹೇಳಲಿಲ್ಲ ಮೊದಲೇ ಎಂದೆ. ಈ ಸಂಬಂಧ ಅಲ್ಲೇ ಮುಗಿಸಿಕೊಳ್ಳಲು ಯೋಚಿಸುತ್ತಿದ್ದೆ. ಅವಳು ಕ್ಷಮೆ ಯಾಚಿಸಿದಳು. ನಾನು ಸುಮ್ಮನಾಗಿಬಿಟ್ಟೆ.
ಹಾಗೇ ತಿಂಗಳುಗಳು ಉರುಳಿದವು. ಅವಳು ನನ್ನ ಮನಸ್ಸಿಂದ ಆಚೆ ಹೋಗಲೇ ಇಲ್ಲ. ಅವಳು ನನ್ನ ಜೊತೆಗಿದ್ದಾಗ ನಾನು ಬಹಳ ಸಂತೋಷವಾಗಿದ್ದೆ ಎಂಬುದು ಅರಿವಾಗತೊಡಗಿತು. ಕಡೆಗೂ ನನಗೆ ತಡೆಯಲಾಗಲಿಲ್ಲ. ನಾನು ಅವಳಿಗೆ ಮೆಸೇಜು ಮಾಡಿದೆ. ಮಾತು ಕತೆ ಶುರುವಾಯಿತು ಮತ್ತೆ.
ನಿಸ್ವಾರ್ಥ ಕ್ರಿಕೆಟಿಗ ಸುರೇಶ್ ರೈನಾ ಹುಟ್ಟು ಹಬ್ಬ; ಪತ್ನಿ, ಮಗಳೊಂದಿಗೆ ಸೆಲೆಬ್ರೇಷನ್!
ಆಗಾಗ ಭೇಟಿ ನಡೆಯತೊಡಗಿತು. ಆದರೆ ಯಾರಿಗೂ ಗೊತ್ತಾಗದಂತೆ ನಾವು ಗುಟ್ಟು ಕಾಪಾಡಿಕೊಳ್ಳಬೇಕಿತ್ತು. ಆಗೆಲ್ಲಾ ನಾನು ತುಂಬಾ ಟ್ರಾವೆಲ್ ಮಾಡುತ್ತಿದ್ದೆ. ವರ್ಷಕ್ಕೆ ಎರಡೋ ಮೂರು ಬಾರಿಯೋ ಭೇಟಿಯಾಗುತ್ತಿದ್ದೆವು. ಆಗ ಸಿನಿಮಾಗೆ ಹೋಗುವುದೇ ಮಜಾ ಇತ್ತು. ಎರಡು ಟಿಕೆಟ್ ಖರೀದಿಸುತ್ತಿದ್ದೆ. ಅವಳ ಹೆಸರಿನ ಟಿಕೆಟ್ ಅನ್ನು ಟಿಕೆಟ್ ಕೌಂಟರಿನಲ್ಲಿಯೇ ಬಿಟ್ಟು ಒಳಗೆ ಹೋಗುತ್ತಿದ್ದೆ. ನಾನು ಒಳಗೆ ಹೋದ ಹತ್ತು ನಿಮಿಷಗಳ ನಂತರ ಅವಳು ಬರುತ್ತಿದ್ದಳು.
ವರ್ಷಗಳುರುಳಿದವು. ನಮ್ಮ ಬಂಧ ದೃಢವಾಗುತ್ತಾ ಗಟ್ಟಿಯಾಗುತ್ತಾ ಹೋಯಿತು. ನಾನು ನನ್ನ ಕರಿಯರ್ ರೂಪಿಸಿಕೊಳ್ಳುತ್ತಿದ್ದೆ. ನನ್ನ ಹುರಿದುಂಬಿಸಲು ಅವಳು ಯಾವತ್ತೂ ಇರುತ್ತಿದ್ದಳು. ನನ್ನ ಭಯವನ್ನು ತೊರೆಯುವಂತೆ ಮಾಡುತ್ತಿದ್ದಳು. ಸ್ಫೂರ್ತಿ ತುಂಬುತ್ತಿದ್ದಳು. ನನ್ನ ಬೆನ್ನೆಲುಬೇ ಅವಳಾಗಿದ್ದಳು. ಬೆಳೆಯುತ್ತಾ ಮುಂದೆ ಸಾಗುತ್ತಾ ಯಾವಾಗ ಪ್ರೀತಿಯಲ್ಲಿ ಬಿದ್ದೆವೋ ನಮಗೇ ಗೊತ್ತಾಗಲಿಲ್ಲ.
ಒನ್ ಫೈನ್ ಡೇ ಮದುವೆಯಾಗಲು ನಿರ್ಧರಿಸಿದೆವು. ಅವಳ ತಂದೆಯ ಬಳಿ ಮಾತನಾಡಲು ಇದು ಸರಿಯಾದ ಸಮಯ ಎಂದ ನನಗೆ ಗೊತ್ತಿತ್ತು. ಅವರ ಮನೆಗೆ ಹೋದೆ. ನರ್ವಸ್ಸಾಗಿದ್ದೆ. ಮನೆಗೆ ಹೋಗಿ ಕೂತ ಕೂಡಲೇ ಅವಳ ತಂದೆ ಸೂರ್ಯನ ಕೆಳಗೆ ಇರುವ ಎಲ್ಲಾ ವಿಚಾರಗಳ ಬಗ್ಗೆಯೂ ಮಾತನಾಡಿದರು. ನಾನು ಧೈರ್ಯ ತಂದುಕೊಳ್ಳುತ್ತಿದ್ದೆ. ಕಡೆಗೂ ಹೇಳಿದೆ. ‘ಸರ್, ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ. ಅವಳೂ ನನ್ನ ಪ್ರೀತಿಸುತ್ತಿದ್ದಾಳೆ ಎಂದು ನಂಬಿದ್ದೇನೆ.’
ಒಂದು ಕ್ಷಣ ಮೌನ. ‘ಹಾಂ ಹಾಂ ಓಕೆ ಓಕೆ’ ಎಂದವರೇ ಬಾತ್‌ರೂಮಿಗೆ ಎದ್ದು ಹೋದರು.
ಡ್ರಗ್ಸ್ ಸೇವಿಸಿ ಬ್ಯಾನ್ ಆದ ಟಾಪ್ 5 ಕ್ರಿಕೆಟಿಗರಿವರು..!
ನಾನು ಕಾಯುತ್ತಿದ್ದೆ. ಹೊರಗೆ ಬಂದ ನಂತರ ಒಪ್ಪಿಗೆ ಸೂಚಿಸಿದರು. ಒಂದೆರಡು ತಿಂಗಳಲ್ಲಿ ನಮ್ಮ ಮದುವೆಯೂ ನಡೆದುಹೋಯಿತು.
13 ವರ್ಷ ನಾವು ಪ್ರೀತಿಯಲ್ಲಿದ್ದೆವು. ಮದುವೆಯಾಗಿ ಈಗ ಎರಡು ವರ್ಷ ಕಳೆದಿದೆ. ನನ್ನ ಬಳಿ ಏನೂ ಇಲ್ಲದಿದ್ದಾಗ, ನಾನು ಏನೂ ಆಗದೇ ಇದ್ದಾಗಲೂ ಸೋನಮ್ ನನ್ನ ಜೊತೆ ಇದ್ದಳು. ನನ್ನ ಮೊದಲ ಗೆಲುವು, ನನ್ನ ಸೋಲು ಎಲ್ಲದರಲ್ಲೂ ಅವಳಿದ್ದಳು. ನಾನು ಭಾರತ ಫುಟ್‌ಬಾಲ್ ತಂಡದ ನಾಯಕನಾದಾಗ ಅವಳಿದ್ದಳು. ನನ್ನ ಇದುವರೆಗಿನ ಬದುಕನ್ನು ಅವಳಿಲ್ಲದೇ ಕಲ್ಪಿಸಿಕೊಳ್ಳಲು ನನ್ನಿಂದ ಸಾಧ್ಯವೇ ಇಲ್ಲ. ಬಹುಶಃ ಭವಿಷ್ಯವನ್ನೂ ಕಲ್ಪಿಸಿಕೊಳ್ಳಲಾರೆ. ಇವತ್ತಿನವರೆಗೂ ನಾನು ನಿಮ್ಮ ಅತಿದೊಡ್ಡ ಅಭಿಮಾನಿ ಎಂದೇ ಅವಳು ಹೇಳಿಕೊಳ್ಳುತ್ತಾಳೆ. ನಾನು ಭಯಭಕ್ತಿ, ವಿಸ್ಮಯದಿಂದ ಅವಳನ್ನು ನೋಡುತ್ತೇನೆ.
Credit: Humans of Bombay