ಮಗುವಿನ ಬೆಳವಣಿಗೆಯಲ್ಲಿ ಕತೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಅವರು ಕೇಳುವ ಕತೆಗಳು, ಓದುವ ಕತೆಗಳಲ್ಲಿನ ಪಾತ್ರಗಳು ಕೆಲ ದಿನಗಳಲ್ಲಿ ಅವರಿಗೆ ಗೆಳೆಯರೇ ಆಗಿಬಿಟ್ಟಿರುತ್ತವೆ. ಈ ಕತೆ ಕೇಳುವುದರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?
ನಮ್ಮ ಬಾಲ್ಯ ನೆನೆಸಿಕೊಳ್ಳಿ. ಅಜ್ಜಿಯ ಕಾಲ ಮೋಲೋ, ಅಮ್ಮನ ಕಾಲ ಮೇಲೋ ಮಲಗಿ ಅವರು ಹೇಳುವ ಕತೆಗಳನ್ನು ಪೂರ್ತಿ ಗಮನದಿಂದ ಕೇಳಿಸಿಕೊಳ್ಳುತ್ತಾ, ಆ ಕತೆಯ ಬಗ್ಗೆ ಮನಸ್ಸಿನೊಳಗೆ ನಮ್ಮದೇ ಕಲ್ಪನಾಲೋಕವೊಂದನ್ನು ಸೃಷ್ಟಿಸಿಕೊಂಡು ನಂತರ ನಿದ್ದೆಗೆ ಜಾರುವ ಸುಖವೋ ಸುಖ. ಬೀರಬಲ್ಲನ ಬುದ್ಧಿವಂತಿಕೆ, ಪಾಂಡವರ ಪ್ರಾಮಾಣಿಕತೆ, ವಿಕ್ರಮಾದಿತ್ಯ ಹಾಗೂ ಬೇತಾಳದ ಪ್ರಶ್ನೋತ್ತರಗಳು, ಕಾಡುಪ್ರಾಣಿಗಳ ಕತೆ ಹೇಳುತ್ತಲೇ ನೀತಿಪಾಠ ಹೇಳುವ ಪಂಚತಂತ್ರ...
ಅಬ್ಬಬ್ಬಾ! ಈ ಕಥಾಲೋಕದಲ್ಲಿ ವಿಹರಿಸುವ ಸಂಭ್ರಮವೇ ಬೇರೆ. ಆದರೆ ಇಂದು ಪೋಷಕರಿಬ್ಬರೂ ಉದ್ಯೋಗಕ್ಕೆ ಹೋಗುತ್ತಾ ಬ್ಯುಸಿಯಾಗಿದ್ದು, ನ್ಯೂಕ್ಲಿಯರ್ ಕುಟುಂಬಗಳಾದ ಕಾರಣ ಟೆಕ್ನಾಲಜಿಯನ್ನೇ ಅಪ್ಪ, ಅವ್ವ, ಅಜ್ಜಿ ಎಂದು ನಂಬಬೇಕಾಗಿದೆ ಮಕ್ಕಳು. ಹೌದು, ಕಂಪ್ಯೂಟರ್‌ಗಳು ಕತೆ ಹೇಳುತ್ತವೆ, ಮೊಬೈಲ್ ಫೋನ್‌ಗಳಲ್ಲಿಯೂ ಕತೆಗಳನ್ನು ಕೇಳುವುದೊಂದೇ ಅಲ್ಲ, ಕಾಣಬಹುದು, ಆಡಿಯೋ ಬುಕ್ಸ್ ಕೂಡಾ ಸಿಗುತ್ತವೆ. ಆದರೆ, ಇದಕ್ಕೂ ಮನೆಯ ಸದಸ್ಯರು ಕತೆ ಹೇಳುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಕತೆ ಕೇಳುವುದರಿಂದ ಏನೆಲ್ಲ ಪ್ರಯೋಜನಗಳಿವೆಯೆಂದರೆ,
1. ಮಕ್ಕಳ ಪದಸಂಗ್ರಹ ಹೆಚ್ಚುತ್ತದೆ
ಸಾಮಾನ್ಯವಾಗಿ ಮಕ್ಕಳು ಇತರರಿಗೆ ಏನನ್ನಾದರೂ ವಿವರಿಸಬೇಕೆಂದರೆ ಪದಗಳು ಸಹಕರಿಸುವುದಿಲ್ಲ. ಆದರೆ, ಪ್ರತಿನಿತ್ಯ ನೀವು ಕತೆ ಹೇಳುತ್ತಿದ್ದಲ್ಲಿ, ಹೊಸ ಪದಗಳತ್ತ ಅವರು ಗಮನ ಹರಿಸುತ್ತಾರೆ. ಕತೆಗಳ ರೂಪದಲ್ಲಿ ಬಂದಾಗ ಆ ಪದಗಳ ಅರ್ಥವನ್ನು ಅವರು ಸರಿಯಾಗಿ ಗ್ರಹಿಸಬಲ್ಲರು. ಇದು ಅವರು ಮಾತನಾಡುವಾಗ, ಓದಿ ಅರ್ಥ ಮಾಡಿಕೊಳ್ಳಬೇಕಾದ ಸಹಾಯವಾಗುತ್ತದೆ.
ವಿವಾಹಿತರಿಗೆ 'ಗುಡ್ ನ್ಯೂಸ್' ಯಾವಾಗ ಎಂದು ಕೇಳೋ ಅಭ್ಯಾಸ ಬಿಟ್ಬಿಡಿ
2. ಕೇಳುವ ಕೌಶಲ್ಯ ಹೆಚ್ಚುತ್ತದೆ
ಶಾಲೆಯ ಕ್ಲಾಸ್‌ರೂಂನಲ್ಲಿ ಮಕ್ಕಳಿಗೆ ಅತ್ಯಗತ್ಯವಾದ ಕೌಶಲ್ಯವೆಂದರೆ ಪಾಠಗಳನ್ನು ಕೇಳಿ ಅರ್ಥ ಮಾಡಿಕೊಳ್ಳುವುದು. ಆದರೆ, ಹೆಚ್ಚಿನ ಮಕ್ಕಳಿಗೆ ಕೇಳುವುದರಲ್ಲಿ ಆಸಕ್ತಿಯೂ ಇರುವುದಿಲ್ಲ, ಅಷ್ಟು ಹೊತ್ತು ಏಕಾಗ್ರತೆ ಸಾಧಿಸಲೂ ಆಗುವುದಿಲ್ಲ. ಆದರೆ, ಬಹಳ ಚಿಕ್ಕವರಾಗಿದ್ದಾಗಿನಿಂದಲೇ ಕತೆ ಕೇಳುವ ರೂಢಿ ಇದ್ದಲ್ಲಿ, ಕೇಳುವ, ಕೇಳಿದ್ದನ್ನು ಅರ್ಥ ಮಾಡಿಕೊಳ್ಳುವ ಕೌಶಲ್ಯ ಮಕ್ಕಳಲ್ಲಿ ಬೆಳೆದುಬಂದಿರುತ್ತದೆ. ಇನ್ನೂ ಸಣ್ಣ ಮಗುವೆಂದುಕೊಂಡ ಈ ಪುಟ್ಟ ಪಾಪುವಿಗೆ ಕೂಡಾ ನೀವು ಕತೆ ಹೇಳಿ ಅಭ್ಯಾಸ ಮಾಡಿಸಬಹುದು. ಇದು ಅವು ಮಾತಿಗೆ ಗಮನವಿಡುವಂತೆ ಮಾಡುತ್ತದೆ. ದೊಡ್ಡವರಾದ ಮೇಲೆ ಕೂಡಾ ಯಾವುದೇ ವಿಷಯದಲ್ಲಿ ಮಾತಿಗಿಂತ ಹೆಚ್ಚು ಕೇಳುವ ಸ್ವಭಾವ ಇದ್ದರೆ ಸಂಬಂಧಗಳೂ ಚೆನ್ನಾಗಿರುತ್ತವೆ.
3. ಲ್ಯಾಪ್‌ಟಾಪ್ ಸ್ಟೋರೀಸ್ ವರ್ಸಸ್ ಅಜ್ಜಿಕತೆ
ಟೆಕ್ನಾಲಜಿಯ ಹೊಡೆತಕ್ಕೆ ಕತೆ ಹೇಳುವ ಕೌಶಲ ಹಾಗೂ ಅಭ್ಯಾಸಗಳು ನಲುಗಿವೆ. ಆದರೆ, ಡಿಜಿಟಲೀಕರಣಗೊಂಡ ಕತೆ ಮಕ್ಕಳನ್ನು ತನ್ನೊಳಗೆ ಸೇರಿಸಿಕೊಳ್ಳುವುದಿಲ್ಲ. ಸುಮ್ಮನೆ ತನ್ನ ಪಾಡಿಗೆ ತಾನು ಕತೆ ಹೇಳಿಕೊಂಡು ಹೋಗುತ್ತದೆ. ಅದೇ ಮನುಷ್ಯರು ಕತೆ ಹೇಳುವಾಗ ಕತೆಯ ಹಿಂದಿನ ಭಾವನೆಗಳು ಅವರ ಎಕ್ಸ್‌ಪ್ರೆಶನ್ಸ್‌ನಲ್ಲಿ ವ್ಯಕ್ತವಾಗುತ್ತವೆ. ಮಧ್ಯೆ ಮಧ್ಯೆ ಮಕ್ಕಳೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು, ಪ್ರಶ್ನಿಸಬಹುದು. ಈ ಪರಸ್ಪರ ಶೇರಿಂಗ್ ಡಿಜಿಟಲ್ ಮಾಧ್ಯಮದ ಕತೆಗಳಲ್ಲಿ ಇರುವುದಿಲ್ಲ. ಅಲ್ಲದೆ ಅವು ಕತೆ ಹೀಗೆಯೇ ಆಯಿತು ಎಂದು ವಿಡಿಯೋಗಳನ್ನು ಬೇರೆ ತೋರಿಸುವುದರಿಂದ ಮಕ್ಕಳ ಕಲ್ಪನಾ ಸಾಮರ್ಥ್ಯ, ಯೋಚಿಸುವ ಕೌಶಲ ಕುಗ್ಗುತ್ತದೆ. ಮೆದುಳಿನ ಬೆಳವಣಿಗೆಗೆ ಬೇಕಾದ್ದನ್ನು ಇದು ನೀಡದೇ ಸುಮ್ಮನೇ ಸ್ಪೂನ್ ಫೀಡ್ ಮಾಡಿದಂತಾಗುತ್ತದೆ.
ಅಮ್ಮನಾದ ಬಳಿಕದ ಸವಾಲುಗಳು ಸುಲಭವಿಲ್ಲ, ಆದರೆ ನೀವು ಒಂಟಿಯಲ್ಲ!
4. ಸಂಸ್ಕೃತಿ, ಭಾಷೆ
ಶಾಲೆಯಲ್ಲಿ ಮಕ್ಕಳು ಎಲ್ಲವನ್ನೂ ಇಂಗ್ಲಿಷ್‌ನಲ್ಲಿ ಅಭ್ಯಾಸ ಮಾಡುತ್ತಾರೆ. ಹೀಗಾಗಿ, ಅವರಿಗೆ ಮಾತೃಭಾಷೆಯೇ ಸರಿಯಾಗಿ ಬರುವುದಿಲ್ಲ. ಆದರೆ, ಮನೆಯಲ್ಲಿ ಪೋಷಕರು ಮಾತೃಭಾಷೆಯಲ್ಲೇ ಮಾತನಾಡುತ್ತಾ, ಅದರಲ್ಲೇ ಕತೆ ಹೇಳುತ್ತಿದ್ದರೆ ಅವರಿಗೆ ಭಾಷೆ ಕರಗತವಾಗುತ್ತದೆ. ಜೊತೆಗೆ, ನಮ್ಮ ಭಾಷೆಯ ಕತೆಗಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆಗಳು ಮಿಳಿತವಾಗಿರುತ್ತವೆ. ಇದರಿಂದ ಮಕ್ಕಳಿಗೆ ಕೂಡಾ ಅವುಗಳ ಪರಿಚಯವಾಗುತ್ತದೆ. ಇತಿಹಾಸ, ಪರಂಪರೆಯ ಕತೆಗಳನ್ನು ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಅವರಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಹೇಳುವ ಕತೆಗಳು ಕೇವಲ ನೀತಿಯನ್ನು ಒಳಗೊಂಡಿದ್ದರೆ ಸಾಲದು, ಅವು ಮಕ್ಕಳ ಯೋಚನಾ ಪ್ರಪಂಚವನ್ನು ಹಿಗ್ಗಿಸುವಂತಿರಬೇಕು.
ಆರೋಗ್ಯಕರವಾಗಿರಲಿ ಮಕ್ಕಳ ಡಯಟ್, ದೂರವಿರಲಿ ಬ್ರೆಡ್ ಬಿಸ್ಕೇಟ್ ಡೋನಟ್!
5. ಕಲಿಕೆಯ ಅತ್ಯುತ್ತಮ ಮಾರ್ಗ
ಕತೆ ಹೇಳುವುದು ಬಹಳ ಉತ್ತಮ ಸಂವಹನ ಮಾಧ್ಯಮ. ಕತೆ ಬೆಳೆದಂತೆಲ್ಲ ಮಕ್ಕಳು ಪ್ರಶ್ನಿಸುತ್ತಾರೆ. ಇದು ಬಹಳ ಉತ್ತಮ ಕಲಿಕಾ ಚಟುವಟಿಕೆ. ಕತೆ ಹೇಳುವವರಿಗೆ ಮಕ್ಕಳಲ್ಲಿ ಕುತೂಹಲ ಹುಟ್ಟಿಸುವ, ಪ್ರಶ್ನೆಗಳನ್ನು ಕೇಳುವಂತೆ ಪ್ರೇರೇಪಿಸುವ ಸಾಮರ್ಥ್ಯವಿರಬೇಕು ಅಷ್ಟೇ. ಏಕೆಂದರೆ ಇದರಿಂದ ಮಕ್ಕಳು ಯೋಚಿಸುವಂತಾಗುತ್ತದೆ. ಪುಸ್ತಕದಲ್ಲಿರುವ ಚಿತ್ರಗಳನ್ನು ಕತೆಯೊಂದಿಗೆ ಜೋಡಿಸಿ ಕಲ್ಪಿಸಿಕೊಳ್ಳಲು ಆರಂಭಿಸುತ್ತಾರೆ. ಕತೆಗಳನ್ನು, ಅದರ ನೀತಿಯನ್ನು ನೆನಪಿಟ್ಟುಕೊಳ್ಳಲು ಕಲಿಯುತ್ತಾರೆ. ಇವೆಲ್ಲವೂ ಮೆದುಳಿನ ಬೆಳವಣಿಗೆಗೆ ಸಹಾಯಕ.
6. ಎಮೋಶನ್ಸ್
ಇಂದು ಮಗು ಹುಟ್ಟುತ್ತಿದ್ದಂತೆಯೇ ಫೋನ್, ಟಿವಿ, ಕಂಪ್ಯೂಟರ್‌ಗಳು ಕತೆಗಳ ಸಿದ್ಧಮಾದರಿಯನ್ನು ಮಕ್ಕಳೆದುರಿಗೆ ತೆರೆದಿಡಲು ಆರಂಭಿಸಿ ಅವರ ಮಾನಸಿಕ ಬೆಳವಣಿಗೆ ಕುಗ್ಗಿಸುತ್ತವೆ. ಆದರೆ, ಕತೆಯನ್ನು ಕೇಳುವಾಗ ಮಕ್ಕಳು ಎಷ್ಟು ಅದರೊಳಗೆ ಹೋಗುತ್ತಾರೆಂದರೆ, ಅವರು ಅದರಲ್ಲಿನ ಭಾವನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಸಣ್ಣವರಿದ್ದಾಗಿ ಪುಣ್ಯಕೋಟಿಯ ಕತೆ ಕೇಳಿ ಅತ್ತಿದ್ದು ನೆನಪಿದೆಯಷ್ಟೇ? ಹಾಗೆಯೇ, ಒಳ್ಳೆ ಪಾತ್ರ ಗೆದ್ದಾಗ ಖುಷಿ, ಕೆಟ್ಟ ಪಾತ್ರ ಗೆದ್ದಾಗ ಸಿಟ್ಟು, ಒಳ್ಳೆಯವರಿಗೆ ನೋವಾದಾಗ ಅಳು- ಎಲ್ಲವನ್ನೂ ಮಕ್ಕಳು ವ್ಯಕ್ತಪಡಿಸಬಲ್ಲರು.