
ಭಾರತದಲ್ಲಿ ಹೆಣ್ಣು ಮಕ್ಕಳ ಬಾಳಲ್ಲಿ ಒಮ್ಮೆ ಮದ್ವೆಯಾಗಿ ಗಂಡ ತೀರಿಕೊಂಡ ನಂತರ ಆಕೆ ವಿಧವೆಯಾದಳು ಎಂದರೆ ನಂತರ ಆಕೆಗೆ ಮತ್ತದೇ ಹಳೆಯ ಸುಮಂಗಲೆಯಾಗುವ ಜೀವನ ಸಿಗೋದು ಬಹಳ ಅಪರೂಪ ಬಹುತೇಕ ಶುಭ ಸಮಾರಂಭಗಳಿಗೆ ಆಕೆಯನ್ನು ಯಾರೂ ಕರೆಯೋದೆ ಇಲ್ಲ, ಇಷ್ಟು ದಿನ ಮುತ್ತೈದೆ ಎಂದು ಮನೆಗೆ ಕರೆಯುವವರು ಅಪಶಕುನ ಎಂದು ಮುಖ ತಿರುಗಿಸುತ್ತಾರೆ. ಸಣ್ಣ ವಯಸ್ಸಿನಲ್ಲೇ ಪತಿ ತೀರಿಕೊಂಡು ವಿಧವೆಯಾದರೆ ಕೆಲವರು ಮರು ಮದುವೆ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೂ ಅದು ಬಹಳ ವಿರಳ. ಒಮ್ಮೆ ವಿಧವೆಯಾದ ನಂತರ ಆಕೆಗೆ ಮತ್ತೊಮ್ಮೆ ಹೊಸ ಜೀವನ ಸಿಗೋದು ಬಹಳ ವಿರಳ. ಬಹುತೇಕ ಮಹಿಳೆಯ ತವರಿನವರೇ ಆಕೆಗೆ ಮರು ಮದುವೆ ಮಾಡುವುದಕ್ಕೆ ಒಪ್ಪುವುದಿಲ್ಲ, ಕೆಲವು ಹೆಣ್ಣು ಮಕ್ಕಳು ಪತಿಯ ಸಾವಿನ ನಂತರ ಗಂಡನ ಮನೆ ಸೇರಿದರೆ ಮತ್ತೆ ಕೆಲವರು ಅಲ್ಲೇ ಉಳಿದ ಜೀವನವನ್ನು ಕಳೆಯುತ್ತಾರೆ. ಆದರೆ ಇಲ್ಲೊಂದು ಕಡೆ ತನ್ನ ವಿಧವೆ ಸೊಸೆಗೆ ತಂದೆಯ ಸ್ನಾನದಲ್ಲಿ ನಿಂತು ಆಕೆಯ ಮಾವ ಅಂದರೆ ಆಕೆಯ ಪತಿಯ ತಂದೆಯೇ ಆಕೆಗೆ ಬೇರೆ ಮದುವೆ ಮಾಡಿಸುವ ಮೂಲಕ ದೊಡ್ಡತನ ಮೆರೆದಿದ್ದಾರೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಹೌದು ಎಲ್ಲರೂ ಇದನ್ನು ನಾಚಿಕೆಗೇಡಿನ ವಿಚಾರ ಎಂದು ಕರೆದರೆ ಆ ಮಾವ ಮಾತ್ರ ತನ್ನ ಸೊಸೆಗೆ ಹೊಸ ಬದುಕು ಕಟ್ಟಿಕೊಳ್ಳಲು ಧೃಡವಾಗಿ ನಿಂತರು. ಹೌದು ಗುಜರಾತ್‌ನ ಪುಟ್ಟ ನಗರ ಅಂಬಾಜಿಯಲ್ಲಿ ಈ ಘಟನೆ ನಡೆದಿದೆ. ಪ್ರವೀಣ್ ಸಿಂಗ್ ರಾಣಾ ಎಂಬುವವರೇ ತಮ್ಮ ಸೊಸೆಗೆ ಬೇರೆ ಮದುವೆ ಮಾಡಿಸಿ ಔದಾರ್ಯ ಮೆರೆದವರು. ಇವರ ಪುತ್ರ ಸಿದ್ಧರಾಜ್ ಅವರು ದೀಪಾವಳಿ ಹಬ್ಬದ ಸಮಯದಲ್ಲಿ ಹೃದಯಾಘಾತಕ್ಕೆ ಬಲಿಯಾದರು. ಇದರಿಂದ ಇವರ ಸೊಸೆ ರಾತ್ರೋರಾತ್ರಿ ವಿಧವೆಯಾಗಬೇಕಾಯ್ತು. ಇವರಿಗೆ ಮೂರು ತಿಂಗಳಷ್ಟೇ ತುಂಬಿದ್ದ ಹೆಣ್ಣು ಮಗಳೊಬ್ಬಳಿದ್ದಳು.
ಸಿದ್ದರಾಜು ಸ್ನೇಹಿತನ ಜೊತೆ ಸೊಸೆಯ ಮದ್ವೆ ಮಾಡಿಸಿದ ಮಾವ
ಇತ್ತ ಇಳಿವಯಸ್ಸಿನಲ್ಲಿ ಮಗನನ್ನು ಕಳೆದುಕೊಂಡ ದುಃಖದ ಮಧ್ಯೆಯೂ ಪ್ರವೀಣ್ ಸಿಂಗ್ ರಾಣಾ ಅವರು ತಮ್ಮ ಎಳೆಯ ಪ್ರಾಯದ ಸೊಸೆಗೆ ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಬೆಂಬಲಿಸಿದರು. ಅನೇಕರು ಆಕೆ ಮೌನವಾಗಿ ಉಳಿದ ಜೀವನವನ್ನು ಕಳೆಯಬೇಕು ಎಂದು ಬಯಸಿದ್ದರೆ ಪ್ರವೀಣ್ ಸಿಂಗ್ ರಾಣಾ ಅವರು ತಮ್ಮ ಪುತ್ರ ಸಿದ್ಧರಾಜು ಅವರ ಆತ್ಮೀಯ ಸ್ನೇಹಿತನ ಜೊತೆ ಆಕೆಯ ಮದುವೆ ಮಾಡಿಸುವ ಮೂಲಕ ಆಕೆಗೆ ಹೊಸದೊಂದು ಬದುಕು ಕಲ್ಪಿಸಲು ಮುಂದಾದರು. ಮದುವೆಯ ನಂತರ ಆಕೆಯನ್ನು ಕಳುಹಿಸಿ ಕೊಡುವ ವೇಳೆ ಅವರು ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವ ಅಪ್ಪನಂತೆ ಬಿಕ್ಕಿ ಬಿಕ್ಕಿ ಅತ್ತರು. ಏಕೆಂದರೆ ಅವರು ಕೇವಲ ವಿದಾಯ ಹೇಳುಲಿಲ್ಲ ಬದಲಿಗೆ ಆಕೆಯನ್ನು ಪ್ರೀತಿಯಿಂದ ತುಂಬಿದ ಭವಿಷ್ಯ ರೂಪಿಸಿಕೊಳ್ಳಲು ಕಳುಹಿಸಿ ಕೊಟ್ಟಿದ್ದರು.
ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಮಾವ ಪ್ರವೀಣ್ ಸಿಂಗ್ ರಾಣಾ ಅವರ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗ್ತಿದೆ. ಇಂತಹ ಮಾವ ನಿಜವಾಗಿಯೂ ತಂದೆಯ ಕರ್ತವ್ಯವನ್ನು ನಿಭಾಯಿಸಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಸಮಾಜದಲ್ಲಿ ಇಷ್ಟೊಂದು ಒಳ್ಳೆಯ ಜನರಿದ್ದಾರೆ ಅಂತ ನಂಬಲು ಆಗ್ತಿಲ್ಲ ಹೆಮ್ಮೆ ಆಗ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ತಲೆಗೆ ಬೀಗ ಹೆಂಡ್ತಿ ಕೈಲಿ ಕೀ: ಕೊನೆಗೂ ಸಿಗರೇಟ್ ಚಟದಿಂದ ಹೊರಬಂದ ವ್ಯಕ್ತಿ
ಇದನ್ನೂ ಓದಿ: 15 ವರ್ಷದ ದಾಂಪತ್ಯಕ್ಕೆ ವಿದಾಯ: ವಿಚ್ಚೇದನದತ್ತ ಮುಖ ಮಾಡಿದ ಕಿರುತೆರೆಯ ಸ್ಟಾರ್ ಜೋಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.