ಒಂದೇ ಒಂದು ಚಾಟ್‌ಜಿಪಿಟಿ ಪ್ರಾಂಪ್ಟ್.. ಬ್ರೇಕಪ್ ಎಂದ ಗೆಳೆಯನಿಗೆ ಹೆದರಿಸಲು ಹೋಗಿ ಪೊಲೀಸ್ ಬಲೆಗೆ ಬಿದ್ದ ವಿದ್ಯಾರ್ಥಿನಿ!

Published : Nov 19, 2026, 02:30 PM IST
Faked with ChatGPT

ಸಾರಾಂಶ

Hyderabad SHE Teams: ಮಾಜಿ ಪ್ರಿಯಕರನಿಗೆ ಬೆದರಿಕೆ ಹಾಕಲು ಚಾಟ್‌ಜಿಪಿಟಿ ಬಳಸಿ 'ಶೀ ಟೀಮ್ಸ್' ಹೆಸರಿನ ನಕಲಿ ನೋಟಿಸ್ ಸೃಷ್ಟಿಸಿದ 24 ವರ್ಷದ ಹೈದರಾಬಾದ್ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನ ವಿರುದ್ಧ ಸೈಫಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಹೈದರಾಬಾದ್: ವರ್ಷಗಳ ಕಾಲ ಪ್ರೀತಿಸಿ ಬ್ರೇಕಪ್ ಹೇಳಿದ ಪ್ರಿಯಕರನಿಗೆ ಪಾಠ ಕಲಿಸಲು, ಯುವತಿಯೊಬ್ಬಳು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಕಲಿ ಪೊಲೀಸ್ ನೋಟಿಸ್ ಕಳುಹಿಸಿರುವ ವಿಚಿತ್ರ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.

ನಗರದ ಕೂಕಟ್‌ಪಲ್ಲಿಯ ಕೆಪಿಎಚ್‌ಬಿ (KPHB) ಕಾಲೋನಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯುವಕ ಮತ್ತು ಯುವತಿ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಯುವಕ ಆಕೆಯಿಂದ ಅಂತರ ಕಾಯ್ದುಕೊಂಡಿದ್ದನು. ಅಷ್ಟೇ ಅಲ್ಲದೆ, ಬ್ರೇಕಪ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲೂ ಆಕೆಯನ್ನು ಬ್ಲಾಕ್ ಮಾಡಿದ್ದನು. ಇದರಿಂದ ತೀವ್ರ ಆಕ್ರೋಶಗೊಂಡ ಯುವತಿ, ಹೇಗಾದರೂ ಮಾಡಿ ಆತನಿಗೆ ಭಯ ಹುಟ್ಟಿಸಬೇಕೆಂದು ಸಂಚು ರೂಪಿಸಿದ್ದಳು.

ತನ್ನ ಹಠ ತೀರಿಸಿಕೊಳ್ಳಲು ಆಕೆ ಆಧುನಿಕ 'ಎಐ' (AI) ಮೊರೆ ಹೋಗಿದ್ದಾಳೆ. ಮಹಿಳೆಯರ ರಕ್ಷಣೆಗಾಗಿ ಇರುವ ಹೈದರಾಬಾದ್ ಪೊಲೀಸರ ಪ್ರತಿಷ್ಠಿತ 'ಶೀ ಟೀಮ್ಸ್' (SHE Teams) ಹೆಸರಿನಲ್ಲಿ ನಕಲಿ ಪೊಲೀಸ್ ನೋಟಿಸ್ ಒಂದನ್ನು ಸೃಷ್ಟಿಸಿದ್ದಾಳೆ. ನಂತರ ಹರಿ ಎಂಬ ತನ್ನ ಸ್ನೇಹಿತನ ಸಹಾಯ ಪಡೆದು, ಆ ನಕಲಿ ನೋಟಿಸ್ ಅನ್ನು ಪ್ರಿಯಕರನ ವಾಟ್ಸಾಪ್‌ಗೆ ಕಳುಹಿಸಿಕೊಟ್ಟಿದ್ದಾಳೆ.

ಮೊಬೈಲ್‌ಗೆ ಬಂದ ಪೊಲೀಸ್ ನೋಟಿಸ್ ನೋಡಿ ತೀವ್ರ ಆತಂಕಗೊಂಡ ಯುವಕ, ವಿಷಯದ ಸತ್ಯಾಸತ್ಯತೆ ತಿಳಿಯಲು ನೇರವಾಗಿ 'ಶೀ ಟೀಮ್ಸ್' ಕಚೇರಿಗೆ ತೆರಳಿದ್ದಾನೆ. ಅಲ್ಲಿನ ಅಧಿಕಾರಿಗಳು ನೋಟಿಸ್ ಪರಿಶೀಲಿಸಿದಾಗ, ಇಲಾಖೆಯಿಂದ ಯಾವುದೇ ನೋಟಿಸ್ ಜಾರಿಯಾಗಿಲ್ಲ ಮತ್ತು ಅದು ನಕಲಿ ಎಂಬ ಶಾಕಿಂಗ್ ಸತ್ಯ ಬೆಳಕಿಗೆ ಬಂದಿದೆ.

ಇದರಿಂದ ಬೆಚ್ಚಿಬಿದ್ದ ಯುವಕ ತಕ್ಷಣವೇ ಸೈಫಾಬಾದ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಎಐ ಬಳಸಿ ನಕಲಿ ಪೊಲೀಸ್ ನೋಟಿಸ್ ಸೃಷ್ಟಿಸಿದ ಯುವತಿ ಹಾಗೂ ಅದಕ್ಕೆ ಸಾಥ್ ನೀಡಿದ ಆಕೆಯ ಸ್ನೇಹಿತ ಹರಿ ಎಂಬಾತನ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ. ತಂತ್ರಜ್ಞಾನವನ್ನು ಸೇಡು ತೀರಿಸಿಕೊಳ್ಳಲು ಬಳಸಿದ ಈ ಘಟನೆ ನಗರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಾಟ್ಸಾಪ್ ನೋಟಿಸ್ ನಂಬಬೇಡಿ - ಪೊಲೀಸರ ಸ್ಪಷ್ಟನೆ

"ಪೊಲೀಸ್ ಇಲಾಖೆ ಅಥವಾ ಮಹಿಳಾ ಸುರಕ್ಷತಾ ಘಟಕಗಳು (ಶೀ ಟೀಮ್ಸ್) ಯಾವುದೇ ಅಧಿಕೃತ ಸಮನ್ಸ್ ಅಥವಾ ನೋಟಿಸ್‌ಗಳನ್ನು ವಾಟ್ಸಾಪ್ ಮೂಲಕ ಅಷ್ಟಾಗಿ ಕಳುಹಿಸುವುದಿಲ್ಲ. ಒಂದು ವೇಳೆ ವಾಟ್ಸಾಪ್ ಅಥವಾ ಇಮೇಲ್‌ನಲ್ಲಿ ಇಂತಹ ನೋಟಿಸ್ ಬಂದರೆ ಗಾಬರಿಯಾಗದೆ, ನೇರವಾಗಿ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಪರಿಶೀಲಿಸಬೇಕು" ಎಂದು ಹೈದರಾಬಾದ್ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಎಐ ಬಳಸಿ ನಕಲಿ ದಾಖಲೆ ಸೃಷ್ಟಿಸಿದರೆ ಜೈಲು ಗ್ಯಾರಂಟಿ!

ಸರ್ಕಾರಿ ಇಲಾಖೆಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸುವುದು, ಅಧಿಕಾರಿಯ ಸೋಗು ಹಾಕುವುದು ಗಂಭೀರ ಜಾಮೀನುರಹಿತ ಅಪರಾಧ. ಐಟಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಈ ಆರೋಪಗಳು ಸಾಬೀತಾದರೆ ಆರೋಪಿಗಳಿಗೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಭಾರಿ ಮೊತ್ತದ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಸೇಡು ತೀರಿಸಿಕೊಳ್ಳಲು ಎಐ ಬಳಕೆ: ಆತಂಕಕಾರಿ ಬೆಳವಣಿಗೆ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಜನರ ಕೆಲಸಗಳನ್ನು ಸುಲಭಗೊಳಿಸಲು ಬಂದಿದ್ದರೂ, ಇತ್ತೀಚಿನ ದಿನಗಳಲ್ಲಿ ಇದನ್ನು ನಕಲಿ ದಾಖಲೆ, ಡೀಪ್‌ಫೇಕ್ ವೀಡಿಯೋ ಮತ್ತು ಸೈಬರ್ ಬ್ಲ್ಯಾಕ್‌ಮೇಲ್‌ಗಳಿಗೆ ದುರುಪಯೋಗಪಡಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಕೇವಲ ಪ್ರೇಮ ವೈಫಲ್ಯ ಅಥವಾ ವೈಯಕ್ತಿಕ ದ್ವೇಷಕ್ಕೆ ವಿದ್ಯಾವಂತ ಯುವಜನರೇ ಎಐ ದುರ್ಬಳಕೆ ಮಾಡಿಕೊಂಡು ಕ್ರಿಮಿನಲ್ ಕೇಸ್‌ಗಳಲ್ಲಿ ಸಿಲುಕುತ್ತಿರುವುದು ಕಳವಳಕಾರಿಯಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಣ್ಣನ ಪ್ರೀತಿಗೆ ಸೇತುವೆಯಾದ ಶಂಕರ್ ನಾಗ್! ಅನಂತ್ ನಾಗ್-ಗಾಯತ್ರಿ ಲವ್ ಸ್ಟೋರಿ ಶುರುವಾಗಿದ್ದೇ ಹೀಗೆ!
ಸೋನಿಯಾ ಗಾಂಧಿ ಮೊಟ್ಟಮೊದಲು ಭಾರತಕ್ಕೆ ಬಂದಾಗ ಕರೆತರಲು ಹೋಗಿದ್ದ ರಾಜೀವ್ ಗಾಂಧಿ ಜೊತೆಗೆ ಇದ್ದ ಅಮಿತ್ ಯಾರು?