
ಮದುವೆಯಾಗುವವರು ಸಾವಿರಾರು ನೀರಿಕ್ಷೆಗಳೊಂದಿಗೆ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವುದು ಸಾಮಾನ್ಯ ವಿಚಾರ. ಆದರೆ ನಿರೀಕ್ಷಿಗಳೆಲ್ಲವೂ ಯಾವಾಗಲೂ ನನಸಾಗುವುದಿಲ್ಲ, ಹೂವಿನ ಜೊತೆಗೆ ಮುಳ್ಳು ಇರುವಂತೆಯೇ ಸುಖದ ಜೊತೆ ಕಷ್ಟವೂ ಇರುತ್ತದೆ. ಅವೆಲ್ಲವನ್ನು ಸರಿದೂಗಿಸಿಕೊಂಡು ಹೋದರಷ್ಟೇ ಜೀವನ ಸರಿಗಮದಂತಿರುತ್ತದೆ. ಹಾಗಂತ ಎಲ್ಲವನ್ನು ಸಹಿಸಿಕೊಂಡು ಹೋಗಲೇಬೇಕೆಂದೆನಿಲ್ಲ, ಆದರೆ ಕೆಲವು ತಾಳ್ಮೆಯಿಂದ ತೆಗೆದುಕೊಂಡ ನಿರ್ಧಾರಗಳು ನಿಮ್ಮ ಬದುಕನ್ನು ಹಸನಾಗಿಸಬಹುದು... ಹೀಗಿರುವಾಗ ನೂರೆಂಟು ಕನಸುಗಳನ್ನು ಹೊತ್ತು ಹೊಸದಾಗಿ ಮದುವೆಯಾದವರಿಗೆ, ಮದುವೆಯಾಗುತ್ತಿರುವವರಿಗೆ ಮದುವೆಯಾಗಲು ತುದಿಗಾಲಲ್ಲಿ ನಿಂತಿರುವವರಿಗೆ ಕೆಲ ಜೀವನಪಾಠಗಳು ಇಲ್ಲಿವೆ.
ಸೌಂದರ್ಯ ಹಾಗೂ ಬ್ಯಾಂಕ್ ಬ್ಯಾಲೆನ್ಸ್‌ಗಿಂತಲೂ ಹೆಚ್ಚಾಗಿ ನಿಮ್ಮ ಸಂಗಾತಿಯ ಗುಣನಡವಳಿಕೆಗಳು ಸುಮಧುರ ದಾಂಪತ್ಯಕ್ಕೆ ಬಹಳ ಮುಖ್ಯವಾಗಿರುತ್ತದೆ. ಚೆಂದ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲವೂ ಇದ್ದು, ನಿಮ್ಮನ್ನು ಆಕೆ/ಆತ ಗೌರವಯುತವಾಗಿ ನಡೆಸಿಕೊಳ್ಳುವುದಿಲ್ಲವೆಂದರೆ ಎಲ್ಲವೂ ಇದ್ದರೂ ಅದು ನಿಷ್ಪ್ರಯೋಜಕ.
ಸರಿ ತಪ್ಪುಗಳ ಪ್ರಶ್ನೆಗಳಿಗಿಂತ ನಿಮ್ಮ ನಡುವಿನ ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ. ಇಬ್ಬರು ಸಮಾನವಾಗಿ ಪರಸ್ಪರ ನ್ಯೂನತೆಗಳನ್ನು ಹೊಂದಿರುವವ ದಂಪತಿಗಳೇ, ಯಾರು ತಪ್ಪು ಯಾರು ಸರಿ ಎಂದು ಹೋರಾಟ ಮಾಡುವವರಿಗಿಂತ ಚೆನ್ನಾಗಿ ಜೀವನ ಮಾಡುತ್ತಿರುವುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ.
ರೋಮ್ಯಾನ್ಸ್ ದಾಂಪತ್ಯದ ಭಾಗವಷ್ಟೇ ಅದೇ ಎಲ್ಲವೂ ಅಲ್ಲ, ನಿಮ್ಮ ದಾಂಪತ್ಯದ ರಹಸ್ಯಗಳು ನಿಮ್ಮಲ್ಲೇ ಇರಲಿ, ಕಷ್ಟಗಳನ್ನಷ್ಟೇ ಹಂಚಿಕೊಳ್ಳಿ, ಖುಷಿ ವಿಚಾರ ಬೇಡ, ನಿಮ್ಮ ಖುಷಿ, ರೋಮ್ಯಾಂಟಿಕ್ ಜೀವನದ ಬಗ್ಗೆ ಎಲ್ಲರೂ ಒಳ್ಳೆಯದನ್ನೇ ಬಯಸಬೇಕೆಂದೇನಿಲ್ಲ,
ಭಾರತದಲ್ಲಿ ಮದುವೆ ಕೇವಲ ಇಬ್ಬರು ಗಂಡು ಹೆಣ್ಣಿಗೆ ಸಂಬಂಧಿಸಿದ್ದಲ್ಲ, ಇದು ಸಂಪೂರ್ಣವಾಗಿ ಕುಟುಂಬ, ಉದ್ಯೋಗ ಜೀವನ, ಬದುಕಿನ ವಾಸ್ತವತೆ, ಸಾಮಾಜಿಕ ಸಾಂಸ್ಕೃತಿಕ ನಂಬಿಕೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಮದುವೆಯಾದ ತಕ್ಷಣ ಅದೇಕೆ ಇದೇಕೆ ಅಂತ ಪ್ರಶ್ನಿಸುತ್ತಾ ಮನೆಯವರನ್ನೆಲ್ಲಾ ಎದುರು ಹಾಕಿಕೊಳ್ಳದಿರಿ.
ಯಶಸ್ವಿ ಮದುವೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಫಾರ್ಮುಲಾಗಳಿಲ್ಲ, ಪ್ರತಿಯೊಂದು ಮದುವೆಯೂ ಪ್ರತಿಯೊಂದು ಜೋಡಿಯೂ ವಿಭಿನ್ನ, ಈ ಆತ್ಮ ಸಮ್ಮಿಲನಕ್ಕೆ ಏನು ಕಾರಣವಿರಬಹುದು ಎಂಬುದನ್ನು ಕೇವಲ ತಿಳಿದುಕೊಳ್ಳಲು ಪ್ರಯತ್ನಿಸಿ.
ಕೊನೆಯದಾಗಿ ಆದರೆ ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರ ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತೋರಿಸುವಂತೆ ಮದುವೆ ಜೀವನ ನಿಜವಾಗಿಯೂ ಇರುವುದಿಲ್ಲ, ಇತರರೊಂದಿಗೆ ಅಥವಾ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೊಗಳನ್ನು ಹಾಕಿಕೊಂಡು ಎಂಜಾಯ್ ಮಾಡುತ್ತಿರುವ ಜೋಡಿಯ ಜೀವನದ ಜೊತೆ ನಿಮ್ಮನ್ನು ಹೋಲಿಸಿಕೊಳ್ಳಲು ಕಲ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಶೋಕಿ ಮಾಡುವವರು ವಾಸ್ತವದಲ್ಲಿ ಇತರರಿಗಿಂತ ಬಹಳ ಕೆಟ್ಟದಾಗಿ ಹೊಡೆದಾಡಿಕೊಂಡಿರುತ್ತಾರೆ. ಜೊತೆಯಾಗಿ ಸಾಗಲು ಕಷ್ಟಪಡುತ್ತಿರುತ್ತಾರೆ. ಕಿತ್ತಾಟವನ್ನು ಯಾವ ದಂಪತಿಯೂ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಿಲ್ಲ. ಹೀಗಾಗಿ ಬೇರೆಯವರಿಗೆ ನಿಮ್ಮ ಬದುಕನ್ನು ಹೋಲಿಸಿಕೊಳ್ಳುವ ಮೊದಲು ಯೋಚಿಸಿ, ಸುಖಿ ದಾಂಪತ್ಯ ಜೀವನಕ್ಕಾಗಿ ಈ ವಿಚಾರಗಳು ನಿಮ್ಮ ಗಮನದಲ್ಲಿರಲಿ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.