13 ವರ್ಷಗಳ ಮಮತೆಯ ನೆರಳು: ಆ ದಿನಗಳನ್ನು ನೆನೆದು ಸಿಎಂ ಡಿ.ಕೆ. ಶಿವಕುಮಾರ್​ ಭಾವುಕ ಪೋಸ್ಟ್​

Published : Jul 13, 2026, 05:24 PM IST
DK Shivakumar

ಸಾರಾಂಶ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ದೊಡ್ಡಮ್ಮ ಲಿಂಗಮ್ಮ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಾಗ 13 ವರ್ಷಗಳ ಕಾಲ ತಮ್ಮನ್ನು ಸಾಕಿ ಸಲಹಿದ ದೊಡ್ಡಮ್ಮನೊಂದಿಗಿನ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, 'ಮಮತೆಯ ನೆರಳು' ಶೀರ್ಷಿಕೆಯಡಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪತ್ನಿಯ ಜೊತೆಗೂಡಿ ಇಂದು ತಮ್ಮ ದೊಡ್ಡಮ್ಮ ಅರ್ಥಾತ್​ ತಾಯಿಯ ಅಕ್ಕ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಬಳಿಕ, ದೊಡ್ಡಮ್ಮನ ಜೊತೆಗೆ ಕಳೆದ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡು ಎಕ್ಸ್​ ಖಾತೆಯಲ್ಲಿ ಭಾವುಕ ಪೋಸ್ಟ್​ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು, 'ಮಮತೆಯ ನೆರಳು' ಎನ್ನುವ ಶೀರ್ಷಿಕೆ ಕೊಟ್ಟಿದ್ದಾರೆ.

13 ವರ್ಷ ಸಾಕಿ ಬೆಳೆಸಿದ ದೊಡ್ಡಮ್ಮ

ಅವರ ಮಾತಿನಲ್ಲಿಯೇ ಹೇಳುವುದಾದರೆ, 'ಶಿಕ್ಷಣಕ್ಕಾಗಿ ಕನಕಪುರದಿಂದ ಬೆಂಗಳೂರಿನ ಮೆಟ್ಟಿಲು ಹತ್ತಿದಾಗ, ನನಗೆ ಆಶ್ರಯ ನೀಡಿ ಹೆತ್ತ ತಾಯಿಗಿಂತಲೂ ಹೆಚ್ಚಾಗಿ ಬರೋಬ್ಬರಿ 13 ವರ್ಷಗಳ ಕಾಲ ಪ್ರೀತಿಯಿಂದ ಸಾಕಿ ಬೆಳೆಸಿದವರು ನನ್ನ ದೊಡ್ಡಮ್ಮ ಲಿಂಗಮ್ಮ ಅವರು. ಇಂದು ಬೆಂಗಳೂರಿನಲ್ಲಿ ನನ್ನ ಧರ್ಮಪತ್ನಿ ಉಷಾ ಅವರೊಂದಿಗೆ ದೊಡ್ಡಮ್ಮನನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿ, ಅವರ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದೆ. ಕಾಲ ಬದಲಾಗಬಹುದು, ಜವಾಬ್ದಾರಿಗಳು ದೊಡ್ಡದಾಗಬಹುದು. ಆದರೆ, ದೊಡ್ಡಮ್ಮನ ಕೈ ತುತ್ತು ಉಂಡು ಬೆಳೆದ ಆ ದಿನಗಳ ನೆನಪುಗಳು ಎಂದಿಗೂ ಮಾಸದವು. ಇಂದು ಅವರ ಕೈಯನ್ನು ನನ್ನ ಕೈಯಲ್ಲಿ ಹಿಡಿದು ಕುಳಿತಾಗ, ಅವರ ಕಣ್ಣುಗಳಲ್ಲಿ ಕಂಡ ಆ ಅಕ್ಕರೆ ಮತ್ತು ತಲೆಯ ಮೇಲಿಟ್ಟು ಹರಸಿದ ಆ ಕೈಗಳು ನನ್ನ ಎಲ್ಲ ಆಯಾಸವನ್ನು ಮರೆಸಿ, ಮನಸ್ಸಿಗೆ ಅಪಾರ ನೆಮ್ಮದಿಯನ್ನು ನೀಡಿದವು' ಎಂದಿದ್ದಾರೆ.

'ನಿಜಕ್ಕೂ, ನನ್ನ ಹೆತ್ತ ಅಮ್ಮ ಗೌರಮ್ಮ ಮತ್ತು ದೊಡ್ಡಮ್ಮ ಲಿಂಗಮ್ಮನವರ ನಡುವೆ ಇಂದಿಗೂ ಇರುವ ಆ ಅಪೂರ್ವ, ಅವಿನಾಭಾವ ಸಂಬಂಧವನ್ನು ಹತ್ತಿರದಿಂದ ನೋಡುತ್ತಾ ಬೆಳೆಯುವ ಭಾಗ್ಯ ನನ್ನದು. ಆ ಇಬ್ಬರು ತಾಯಂದಿರ ನಡುವಿನ ಈ ನಿಸ್ವಾರ್ಥ ಪ್ರೀತಿ ಮತ್ತು ಕೌಟುಂಬಿಕ ಒಗ್ಗಟ್ಟೇ ಇಂದು ನನ್ನ ಬದುಕಿನಲ್ಲಿ ನನ್ನ ಒಡಹುಟ್ಟಿದ ತಮ್ಮ ಹಾಗೂ ತಂಗಿಯ ಜೊತೆಗೆ ಇಷ್ಟೊಂದು ಆತ್ಮೀಯವಾದ, ಗಟ್ಟಿಯಾದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಅಡಿಪಾಯವಾಗಿದೆ. ಹಿರಿಯರು ತೋರಿದ ಆ ದಾರಿಯೇ ಇಂದು ನಮ್ಮನ್ನು ಒಂದಾಗಿ ಹಿಡಿದಿಟ್ಟಿದೆ ಎಂದಿದ್ದಾರೆ.

ದೊಡ್ಡಪ್ಪನ ಸಮಾಧಿಗೆ ಮಾಲಾರ್ಪಣೆ

ಇದೇ ಸಂದರ್ಭದಲ್ಲಿ, ನನ್ನ ಬೆಳವಣಿಗೆಯ ಪ್ರತಿ ಹಂತದಲ್ಲೂ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿದ್ದ ದೊಡ್ಡಪ್ಪನವರಾದ ದಿವಂಗತ ಎಂ. ಕೃಷ್ಣಪ್ಪ ಅವರ ಸಮಾಧಿಗೆ ಮಾಲಾರ್ಪಣೆ ಮಾಡಿ ಭಾವಪೂರ್ಣ ನಮನ ಸಲ್ಲಿಸಿದೆ. ದೈಹಿಕವಾಗಿ ಅವರು ನಮ್ಮೊಂದಿಗಿಲ್ಲದಿದ್ದರೂ, ಅವರು ಹಾಕಿಕೊಟ್ಟ ದಾರಿ ಮತ್ತು ಆಶೀರ್ವಾದದ ಶಕ್ತಿ ಸದಾ ನನ್ನೊಂದಿಗಿರುತ್ತದೆ ಎಂಬ ಭಾವನೆ ಮನಸ್ಸನ್ನು ತುಂಬಿತು. ಹಿರಿಯರ ಈ ಪ್ರೀತಿಯೇ ನನ್ನ ಬದುಕಿನ ದಾರಿ ದೀಪ' ಎಂದು ಬರೆದುಕೊಂಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

19ನೇ ವಯಸ್ಸಿನಲ್ಲೇ ₹25 ಕೋಟಿ ಆಸ್ತಿ! ಅಪ್ಪ-ಅಮ್ಮನಿಗೆ ಬಿಡಿಗಾಸು ಕೊಡದೇ ಬಾಲ್ಯದ ಗೆಳೆಯನಿಗೆ ವಿಲ್ ಮಾಡಿಟ್ಟ ಯುವಕ!
ವಿಶ್ವಕಪ್ ವೇಳೆ ಸಹ ಆಟಗಾರ್ತಿ ಜೊತೆ ಅಕ್ರಮ ಸಂಬಂಧ: ಆಸೀಸ್‌ ಮಹಿಳಾ ಕ್ರಿಕೆಟರ್ ಆಶ್ಲೀ ಗಾರ್ಡ್ನರ್ ಮೋಸ ಬಯಲು ಮಾಡಿದ ಪತ್ನಿ ಮೋನಿಕಾ