ಮಧುಮಗಳು ತಂದೆಯೊಂದಿಗೆ ಕುಣಿಯುತ್ತಿರುವಾಗ ಇಬ್ಬರೂ ಭಾವುಕರಾದ ಸಂದರ್ಭ ನೆಟ್ಟಿಗರ ಕಣ್ಣಲ್ಲೂ ನೀರು ತರಿಸಿದೆ. ಅಪ್ಪ ಅಂದ್ರೆ ಆಕಾಶ ಎಂದು ವೈರಲ್ ವಿಡಿಯೋ ನೋಡಿದ ಎಲ್ಲರೂ ಹನಿಗಣ್ಣಾಗುತ್ತಿದ್ದಾರೆ.
ಭಾರತೀಯ ವಿವಾಹಗಳೆಂದರೆ ಅದು ಭಾವನೆಗಳ ಸಂಗಮ. ಅಲ್ಲಿ ಖುಷಿ, ದುಃಖ,ನೋವು, ಸಂಭ್ರಮ, ಸಾಮರಸ್ಯ ಎಲ್ಲವೂ ಮಿಳಿತವಾಗಿರುತ್ತದೆ. ಮಗಳ ಮದುವೆಯಾಗುತ್ತಿದೆ ಎಂಬ ಸಂತೋಷ ಹೆಣ್ಣಿನ ತಂದೆತಾಯಿಗೆ ಎಷ್ಟಿರುತ್ತದೋ, ಆಕೆಯನ್ನು ಮನೆಯಿಂದ ಬೇರೆ ಮನೆಗೆ ಕಳುಹಿಸಿಕೊಡಬೇಕಲ್ಲಾ, ಅಲ್ಲಿ ಹೇಗಿರುತ್ತಾಳೋ ಏನೋ, ಚೆನ್ನಾಗಿ ನೋಡಿಕೊಳ್ಳುತ್ತಾರೋ ಇಲ್ಲವೋ, ಕೆಲಸ ಜವಾಬ್ದಾರಿ ಹೊರುವುದು ಕಷ್ಟವಾಗುತ್ತೇನೋ ಎಂಬೆಲ್ಲ ಆತಂಕ, ಸಂಕಟ, ನೋವು ಒಂದು ಪಾಲು ಹೆಚ್ಚೇ ಇರುತ್ತದೆ.
ತಂದೆಗೆ ಮಗಳ ಮದುವೆಯಲ್ಲಿ ಇಂಥದೊಂದು ಭಾವನೆಯ ಕಟ್ಟೆಯೊಡೆದು ಬರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹೃದಯಸ್ಪರ್ಶಿ ವಿಡಿಯೋ ನೋಡಿದ ನೆಟ್ಟಿಗರು, ಅಪ್ಪನ ಔದಾರ್ಯವನ್ನು ನೆನೆದು ಹನಿಗಣ್ಣಾಗುತ್ತಿದ್ದಾರೆ.
Instagram ನಲ್ಲಿ @sakshi.sarvesh_kushwwha ಅವರು ಹಂಚಿಕೊಂಡ ಈ ವಿಡಿಯೋದಲ್ಲಿ ಸ್ವತಃ ಸಾಕ್ಷಿಯು ತನ್ನ ವಿವಾಹದ ಅರಿಶಿನ ಶಾಸ್ತ್ರದಲ್ಲಿ ತಂದೆಯೊಂದಿಗೆ ರಾಝಿ ಚಲನಚಿತ್ರದಿಂದ 'ದಿಲ್ಬರೋ' ಹಾಡಿಗೆ ನೃತ್ಯ ಮಾಡುತ್ತಿರುತ್ತಾರೆ. ಮಗಳ ನೃತ್ಯ ನೋಡುತ್ತಾ ಕಲ್ಲಿನಂತೆ ನಿಂತ ಅಪ್ಪನೊಳಗೆ ಏನಾಗುತ್ತಿದೆ ಎಂಬುದು ಆರಂಭದಲ್ಲಿ ಅರಿವಾಗುವುದಿಲ್ಲ. ಮಗಳು ಅವರ ಕೈ ಹಿಡಿದು ತಿರುಗುತ್ತಾಳೆ, ಮತ್ತಷ್ಟು ಕುಣಿಯುತ್ತಾಳೆ. ಎಲ್ಲಿಯೋ ಕಳೆದು ಹೋದಂತೆ ನಿಂತ ತಂದೆ ಒಂದು ಕ್ಷಣ ಇದ್ದಕ್ಕಿದ್ದಂತೆ ಉಮ್ಮಳಿಸಿ ಬರುವ ದುಃಖವನ್ನು ತಡೆದುಕೊಳ್ಳುತ್ತಾರೆ. ಅದನ್ನು ನೋಡುತ್ತಿದ್ದಂತೆ ಕುಣಿಯುತ್ತಿದ್ದ ಮಗಳಿಗೂ ದುಃಖ ತಾಳಲಾಗುವುದಿಲ್ಲ. ಆಕೆ ಜೋರಾಗಿ ಅಳುತ್ತಾ ತಂದೆಯನ್ನು ತಬ್ಬಿಕೊಳ್ಳುತ್ತಾಳೆ.
ಕವಡೆ ಕಾಸು ಕೊಟ್ಟರೂ ಮನೆ ನಿಭಾಯಿಸೋ ರಾಶಿಗಳಿವು!
ಈ ವಿಡಿಯೋ ನೆಟ್ಟಿಗರ ಹೃದಯ ಕರಗಿಸುತ್ತಿದೆ. ತಂದೆ ಮಗಳ ಭಾವನಾತ್ಮಕ ಮಧುರ ಬಂಧಕ್ಕೆ ಎಲ್ಲರೂ ಮನಸೋಲುತ್ತಿದ್ದಾರೆ.
50,000ಕ್ಕೂ ಹೆಚ್ಚು ಲೈಕ್‌ಗಳೊಂದಿಗೆ ವೀಡಿಯೊವು ವೀಕ್ಷಕರನ್ನು ಅನುರಣಿಸಿದೆ. ಅವರು ತಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳೊಂದಿಗೆ ಕಾಮೆಂಟ್‌ಗಳ ವಿಭಾಗವನ್ನು ತುಂಬಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಅಳು ಬಂತು ಎಂದಿದ್ದರೆ, ಹಲವಾರು ಹೆಣ್ಣುಮಕ್ಕಳು ತಮ್ಮ ತಂದೆ ನೆನಪಾದರು ಎಂದು ಭಾವುಕರಾಗಿದ್ದಾರೆ. ಸರಳ ವಿಡಿಯೋವಾದರೂ ಸಾಕಷ್ಟು ಭಾವನಾತ್ಮಕವಾಗಿದ್ದು, ಪ್ರತಿ ಹೆಣ್ಣುಮಕ್ಕಳು ಹಾಗೂ ತಂದೆಯಂದಿರು ಈ ವಿಡಿಯೋಗೆ ತಮ್ಮನ್ನು ಕನೆಕ್ಟ್ ಮಾಡಿಕೊಳ್ಳುತ್ತಿದ್ದಾರೆ.
ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಇದಕ್ಕೆ ಕಾಮೆಂಟ್ ಮಾಡಿ, 'ನಾನು ಇಂದು Instagram ನಲ್ಲಿ ನೋಡಿದ ಅತ್ಯುತ್ತಮ ವಿಡಿಯೋ ಇದು' ಎಂದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ 'ತಂದೆಯ ಪ್ರೀತಿಯನ್ನು ಮಗಳು ಎಂದಿಗೂ ಮರೆಯುವುದಿಲ್ಲ' ಎಂದಿದ್ದಾರೆ. ಇನ್ನೊಬ್ಬರು, 'ತಂದೆಗೆ ಮಗಳಿಗಿಂತ ಮಿಗಿಲಾದ ಇನ್ನೊಂದಿಲ್ಲ. ಮಗಳಿಗೆ ಕಣ್ಣಿಗೆ ಕಾಣುವ ದೇವರೇ ಅಪ್ಪ' ಎಂದಿದ್ದಾರೆ.
ನಾನು ಧರಿಸಿದ್ದು ಹೆಚ್ಚಾಯ್ತು, ಅದಕ್ಕೇ ಗೊಂಬೆಗಳ ಬಟ್ಟೆ ಬಿಚ್ಚಬೇಕಾಯ್ತು ಎಂದ ಉರ್ಫಿ!
ಇದಕ್ಕೂ ಮುನ್ನ ಇದೇ ಸಾಕ್ಷಿ ಹಂಚಿಕೊಂಡ ಮತ್ತೊಂದು ವಿಡಿಯೋದಲ್ಲಿ ಕೂಡಾ ವೇದಿಕೆ ಮೇಲೆ ತಂದೆಯೊಂದಿಗೆ ಕುಳಿತ ಆಕೆ, ಅಪ್ಪನನ್ನು ತಬ್ಬಿ ಇಬ್ಬರೂ ಜೋರಾಗಿ ಅಳುತ್ತಿರುವುದನ್ನು ಕಾಣಬಹುದು.
ಈ ಭಾವನಾತ್ಮಕ ವಿಡಿಯೋವನ್ನು ನೀವೂ ನೋಡಿ..