
ಬೆಂಗಳೂರು(ಡಿ.24): ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಕುಡುಕ ಚಾಲಕರ ಹಾವಳಿ ಮುಂದುವರಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊರವರ್ತುಲ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿದ್ದ ಕಾರು ಚಾಲಕನೊಬ್ಬ ಬೈಕ್‌ಗೆ ಗುದ್ದಿದ್ದಲ್ಲದೆ, ಬೈಕನ್ನು ಸುಮಾರು 2 ಕಿಲೋಮೀಟರ್‌ಗಳವರೆಗೆ ರಸ್ತೆಯಲ್ಲೇ ಎಳೆದೊಯ್ದ ಭೀಕರ ಘಟನೆ ಇಂದು ನಡೆದಿದೆ.
ಬೈಕ್ ಸವಾರರೊಬ್ಬರು ತಮಗೆ ಫೋನ್ ಬಂದ ಹಿನ್ನೆಲೆಯಲ್ಲಿ ಮಾತನಾಡಲು ರಸ್ತೆ ಬದಿಯಲ್ಲಿ ಬೈಕ್ ಸ್ಲೋ ಮಾಡಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ KA06MC8559 ನೋಂದಣಿ ಸಂಖ್ಯೆಯ ಕಾರು ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಚಾಲಕ ರಸ್ತೆಗೆ ಬಿದ್ದಿದ್ದರೆ, ಬೈಕ್ ಮಾತ್ರ ಕಾರಿನ ಮುಂಭಾಗದ ಅಡಿಯಲ್ಲಿ ಸಿಲುಕಿಕೊಂಡಿದೆ.
ಬೈಕ್ ಕಾರಿನ ಅಡಿ ಸಿಲುಕಿದ್ದರೂ ಚಾಲಕ ಶಿವಕುಮಾರ್ ಕಾರನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿದ್ದಾನೆ. ರಸ್ತೆಯ ಮೇಲೆ ಬೈಕ್ ಉಜ್ಜಿಕೊಂಡು ಹೋದ ಪರಿಣಾಮ ಕಿಡಿಗಳು ಸಿಡಿದು ಬೆಂಕಿ ಕಾಣಿಸಿಕೊಂಡರೂ, ಮದ್ಯದ ಅಮಲಿನಲ್ಲಿದ್ದ ಚಾಲಕನಿಗೆ ಇದರ ಅರಿವೇ ಇರಲಿಲ್ಲ. ಸುಮಾರು 2 ಕಿಲೋಮೀಟರ್‌ವರೆಗೂ ಬೈಕನ್ನು ಎಳೆದೊಯ್ದ ದೃಶ್ಯವನ್ನು ಕಂಡು ಹಾದಿಹೋಕರು ಬೆಚ್ಚಿಬಿದ್ದಿದ್ದಾರೆ.
ಚೇಸ್ ಮಾಡಿ ಕಾರು ಅಡ್ಡಗಟ್ಟಿದ ಸ್ಥಳೀಯರು
ಕಾರಿನ ಅಡಿಯಲ್ಲಿ ಬೈಕ್ ಸಿಲುಕಿ ಬೆಂಕಿ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಇತರ ವಾಹನ ಸವಾರರು ತಕ್ಷಣವೇ ಕಾರನ್ನು ಬೆನ್ನಟ್ಟಿದ್ದಾರೆ. ಕೊನೆಗೆ ಕಾರನ್ನು ಅಡ್ಡಗಟ್ಟಿದ ಸಾರ್ವಜನಿಕರು ಚಾಲಕನನ್ನು ಕೆಳಗಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಾಲಕ ಶಿವಕುಮಾರ್ ಮದ್ಯ ಸೇವಿಸಿ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದದ್ದು ಮೇಲ್ನೋಟಕ್ಕೆ ದೃಢಪಟ್ಟಿದೆ.
ಬೈಕ್ ಸವಾರ ಪ್ರಾಣಾಪಾಯದಿಂದ ಪಾರು
ಅದೃಷ್ಟವಶಾತ್ ಬೈಕ್ ಸವಾರ ದೊಡ್ಡ ಅಪಾಯದಿಂದ ಪಾರಾಗಿದ್ದು, ಡಿಕ್ಕಿ ಹೊಡೆದ ತಕ್ಷಣ ಕೆಳಕ್ಕೆ ಬಿದ್ದಿದ್ದರಿಂದ ಚಿಕ್ಕಪುಟ್ಟ ಗಾಯಗಳಾಗಿವೆ. ಒಂದು ವೇಳೆ ಸವಾರ ಕೂಡ ಬೈಕ್‌ನಲ್ಲೇ ಸಿಲುಕಿಕೊಂಡಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.
ಕಾರು ಚಾಲಕ ಪೊಲೀಸರ ವಶಕ್ಕೆ
ಅಪಘಾತಕ್ಕೆ ಕಾರಣನಾದ ಕಾರು ಚಾಲಕ ಶಿವಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.