
ಮುಟ್ಟಿನ ದಿನಗಳು ಹತ್ತಿರ ಬರ್ತಿದ್ದಂತೆ ಮಹಿಳೆಯರು ಮೆಡಿಕಲ್ ಶಾಪ್ ಗೆ ಓಡ್ತಾರೆ. ಅಗತ್ಯವಿರುವಷ್ಟು ಪ್ಯಾಡ್ ಗಳನ್ನು ಶಾಪಿಂಗ್ ಮಾಡ್ತಾರೆ. ಮುಟ್ಟಿನ ಸಂದರ್ಭದಲ್ಲಿ ಅನೇಕ ಮಹಿಳೆಯರು ಎದ್ದು ಓಡಾಡೋದು ಕಷ್ಟವಾಗುತ್ತದೆ. ಆದ್ರೆ ಕೆಲಸದ ಭಾರ ಅವರ ತಲೆ ಮೇಲೆ ಇರೋ ಕಾರಣ ನೋವಿನ ಮಧ್ಯೆಯೇ ಮನೆ,ಮಕ್ಕಳನ್ನು ಸಂಭಾಳಿಸಬೇಕು. ಮುಟ್ಟಿನ ನೋವು ಕಾಡ್ತಿದೆ ಎಂಬುದು ಗೊತ್ತಿದ್ರೂ ಅನೇಕ ಪುರುಷರು ಇದಕ್ಕೆ ಸ್ಪಂದಿಸೋದಿಲ್ಲ. ಪಿರಿಯಡ್ಸ್ ಆದ್ರೇನು, ಕೆಲಸ ಮಾಡ್ಬಹುದಲ್ಲ ಎನ್ನುವವರೇ ಹೆಚ್ಚು. ಇನ್ನು ಕೆಲವರಿಗೆ ಪಿರಿಯಡ್ಸ್ ಬಗ್ಗೆ ಸರಿಯಾದ ಮಾಹಿತಿಯೇ ತಿಳಿದಿರೋದಿಲ್ಲ. ಕೆಲ ಪಾಲಕರು ಮಕ್ಕಳಿಂದ ಮುಟ್ಟಿನ ವಿಷ್ಯವನ್ನು ಮುಚ್ಚಿಡ್ತಾರೆ. ಹಾಗಾಗಿ ಅವರು ದೊಡ್ಡವರಾದ್ರೂ ಮಹಿಳೆ ಸಮಸ್ಯೆ ಏನು ಎಂಬುದು ಅವರ ಅರಿವಿಗೆ ಬರೋದಿಲ್ಲ. ಆದ್ರೆ ಈ ತಂದೆ ಹಾಗೂ ಇಬ್ಬರು ಗಂಡು ಮಕ್ಕಳು ಎಲ್ಲರಿಗೂ ಮಾದರಿಯಾಗಿದ್ದಾರೆ. ತಾಯಿಯ ಮುಟ್ಟಿನ ದಿನಗಳಲ್ಲಿ ಆಕೆಯನ್ನು ಹೇಗೆ ಆರೈಕೆ ಮಾಡ್ತೇವೆ ಎಂಬುದನ್ನು ಮಗ ವಿಡಿಯೋ ಮೂಲಕ ಹಂಚಿಕೊಂಡಿದ್ದಾನೆ. ಇನ್ಸ್ಟಾಗ್ರಾಮ್ ನಲ್ಲಿ ಆತ ವಿಡಿಯೋ ಪೋಸ್ಟ್ ಮಾಡಿದ್ದು, ತಂದೆ – ಮಕ್ಕಳ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗ್ತಿದೆ.
ಇನ್‌ಸ್ಟಾಗ್ರಾಮ್ (Instagram) ಬಳಕೆದಾರ ಅನೀಶ್ ಭಗತ್ (Anish Bhagat) ಅವರು ರೀಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ತಾಯಿಯನ್ನು ರಾಣಿಯಂತೆ ನೋಡಿಕೊಳ್ತೇವೆ ಎಂದಿದ್ದಾರೆ. ನಾನು, ನನ್ನ ಸಹೋದರ ಮತ್ತು ನನ್ನ ತಂದೆ ಮುಟ್ಟಿನ ಸಮಯದಲ್ಲಿ ತಾಯಿಯ ಆರೈಕೆಯನ್ನು ಹೇಗೆ ಮಾಡ್ತೇವೆ ಎಂಬುದನ್ನು ವಿವರಿಸಿದ್ದಾರೆ. "ನನ್ನ ತಂದೆ ನನಗೆ ಮತ್ತು ನನ್ನ ಸಹೋದರನಿಗೆ ಹದಿಮೂರನೇ ವಯಸ್ಸಿನಲ್ಲಿ ಪಿರಿಯಡ್ಸ್ ಅಂದ್ರೇನು ಎಂಬುದನ್ನು ತಿಳಿಸಿದ್ರು. ನಾವು ಅಮ್ಮನನ್ನು ಹೇಗೆ ನೋಡಿಕೊಳ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರು ಬಯಸಿದ್ದರು ಎಂದು ಅನೀಶ್ ಹೇಳಿದ್ದಾರೆ.
ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಈ ಗುಟ್ಟು!
ಅಷ್ಟೇ ಅಲ್ಲ ಭಗತ್ ಮೆನ್ ಹೆಸರಿನ ವಾಟ್ಸಾಪ್ ಗ್ರೂಪ್ ಕೂಡ ನಾವು ಹೊಂದಿದ್ದೇವೆ. ತಾಯಿ ಅನಾರೋಗ್ಯದಿಂದ ಬಳಲುತ್ತಿರುವಾಗ ಗುಂಪನ್ನು ನಾವು ಬಳಸುತ್ತೇವೆ ಎಂದು ಅನೀಶ್ ಹೇಳಿದ್ದಾರೆ.
ವಾಸ್ತವವಾಗಿ ನಾವು ಭಗತ್ ಮೆನ್ ಎಂಬ ಗುಂಪನ್ನು ಹಲವು ವರ್ಷಗಳಿಂದ ಬಳಸ್ತಿದ್ದೇವೆ. ತಾಯಿ ಅಸ್ವಸ್ಥರಾಗಿರುವಾಗ ಅಥವಾ ಅವರ ಋತುಚಕ್ರದ ಸಮಯದಲ್ಲಿ ತಾಯಿಯನ್ನು ನಾವು ನೋಡಿಕೊಳ್ತೇವೆ. ಪ್ಯಾಡ್‌ಗಳನ್ನು ನಾವೇ ತಂದು ಕೊಡ್ತೇವೆ ಎಂದು ಅನೀಶ್ ಹೇಳಿದ್ದಾರೆ.
ನಿಮಗೆ ಅಚ್ಚರಿಯಾಗಬಹುದು, ಅನೀಶ್ ತಾಯಿ ಕಳೆದ ಆರು ವರ್ಷಗಳಿಂದ ಸ್ಯಾನಿಟರಿ ಪ್ಯಾಡ್ ಖರೀದಿ ಮಾಡಿಲ್ಲವಂತೆ. ಪ್ಯಾಡ್ ಖರೀದಿ ಶಿಫ್ಟ್ ಪ್ರಕಾರ ನಡೆಯುತ್ತದೆ. ಇತ್ತೀಚಿಗೆ ತಾಯಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸುವ ಜವಾಬ್ದಾರಿ ಅನೀಶನದ್ದಾಗಿತ್ತಂತೆ. ಅವರು ಪ್ಯಾಡ್ ಜೊತೆ ಚಾಕೊಲೇಟ್, ತ್ವಚೆಯ ಆರೈಕೆ ಉತ್ಪನ್ನಗಳಿರುವ ಗಿಫ್ಟ್ ಹ್ಯಾಂಪರ್ ಜೊತೆ ಸ್ಪೇಷಲ್ ಟೀ ಮಾಡಿ ತಾಯಿಗೆ ನೀಡಿದ್ದರು. ಇದನ್ನು ಕೂಡ ಅವರು ವಿಡಿಯೋದಲ್ಲಿ ನೋಡಬಹುದು. ಕಳೆದ ಆರು ವರ್ಷಗಳಿಂದ ಅಮ್ಮ ಪ್ಯಾಡ್ ಖರೀದಿಗೆ ಹೋಗಿಲ್ಲ. ನಾವೇ ಅವರಿಗೆ ಪ್ಯಾಡ್ ಖರೀದಿಸಿ ನೀಡ್ತೇವೆ ಎಂದು ಅನೀಶ್ ಹೇಳಿದ್ದಾರೆ. ಮುಟ್ಟಿನ ಸಮಯದಲ್ಲಿ ಆಕೆಯನ್ನು ರಾಣಿಯಂತೆ ನೋಡಿಕೊಳ್ಳಲಾಗುತ್ತದೆ ಎಂದು ಅನೀಶ್ ತಮ್ಮ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ.
ಪಿರಿಯಡ್ಸ್ ಆದಾಗ ಏನು ತಿಂದ್ರೆ ಒಳ್ಳೇಯದು?
ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊ ವೈರಲ್ ಆಗಿದೆ. 2 ಮಿಲಿಯನ್ ಗೂ ಹೆಚ್ಚು ಲೈಕ್ ಸಿಕ್ಕಿದೆ. ನಿಮ್ಮ ತಂದೆ ಓ ಮೈ ಗಾಡ್. ನನಗೆ ಅವರು ತರಗತಿ ನೀಡಬೇಕಿದೆ. ಅವರು ಹೆಂಡತಿಯನ್ನು ಇಷ್ಟು ಪ್ರೀತಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮಕ್ಕಳ ಪಾಲನೆ ಪೋಷಣೆ ಬಗ್ಗೆ ನಿಮ್ಮ ತಂದೆ ಅರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ಹುಡುಗರಿಗೆ ಸರಿಯಾದ ಉತ್ಪನ್ನಗಳಿಗೆ ಗಮನ ಕೊಡಲು ಕಲಿಸಿದ್ದಾರೆ. ಇದು ಅದ್ಭುತವಾಗಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಅದ್ಭುತ. ಇದು ಅತ್ಯುತ್ತಮ ಪೋಷಕರಿಗೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ. ಮುಟ್ಟು ಸಹಜವಾದ ವಿಷಯವಾಗಿದ್ದು, ಅದನ್ನು ಗರ್ಭಧಾರಣೆಯಂತೆಯೇ ಚರ್ಚಿಸಬೇಕು ಮತ್ತು ಸಾಮಾನ್ಯಗೊಳಿಸಬೇಕು. ಈ ವಿಡಿಯೋ ನೋಡಿ ನನಗೆ ಸಂತೋಷವಾಗಿದೆ. ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇದು ಉತ್ತಮ ಆರಂಭ ಎಂದು ಇನ್ನೊಬ್ಬರು ಬರೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.