
ಚೆನ್ನೈ(ಏ.04) ತಮಿಳುನಾಡು ಬಿಜೆಪಿಯಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಇದೀಗ ಮಹತ್ವದ ಬೆಳವಣಿಗೆಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ರೇಸ್‌ನಿಂದ ಹಿಂದೆಯ ಸರಿಯಲು ಅಣ್ಣಾಮಲೈ ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಅಣ್ಣಾಮಲೈ ಹಾಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಎರಡು ವಾರದಲ್ಲಿ ತಮಿಳುನಾಡಿಗೆ ಹೊಸ ಬಿಜೆಪಿ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಅಣ್ಣಾಮಲೈ ರಾಜೀನಾಮೆ ನಿರ್ಧಾರಕ್ಕೆ ಕೆಲ ಪ್ರಮುಖ ಕಾರಣಗಳು ಬಹಿರಂಗವಾಗಿದೆ. ಎಐಎಡಿಎಂಕೆ ಷರತ್ತಿನಿಂದ ಅಣ್ಣಾಮಲೈ ರಾಜೀನಾಮೆಗೆ ಮುಂಜಾಗಿದ್ದಾರೆ ಅನ್ನೋ ಮಾಹಿತಿಗಳು ಬಹಿರಂಗವಾಗಿದೆ.
ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಅಣ್ಣಾಮಲೈ ಖಚಿತಪಡಿಸಿದ್ದಾರೆ. ಇಷ್ಟೇ ಅಲ್ಲ ಹೊಸ ಅಧ್ಯಕ್ಷರನ್ನು ಪಕ್ಷ ಒಗ್ಗಟ್ಟಾಗಿ ನೇಮಕ ಮಾಡಲಿದೆ ಎಂದಿದ್ದಾರೆ. ಬಿಜೆಪಿ ಹೈಕಮಾಂಡ್ ಮುಂದಿನ ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ ಎಂದು ಅಣ್ಮಾಮಲೈ ಸ್ಪಷ್ಟಪಡಿಸಿದ್ದಾರೆ.
ಎಐಎಡಿಎಂಕೆ ಷರತ್ತು
ತಮಿಳುನಾಡಿನಲ್ಲಿ ಬಿಜೆಪಿಗೆ ಭಾರಿ ಆತ್ಮವಿಶ್ವಾಸ ಕೊಟ್ಟ ನಾಯಕನಾಗಿ ಅಣ್ಮಾಮಲೈ ಗುರುತಿಸಿಕೊಂಡಿದ್ದಾರೆ. ಪ್ರಾದೇಶಿಕ ಪಕ್ಷಗಳೇ ಪ್ರಾಬಲ್ಯ ಸಾಧಿಸಿರುವ ತಮಿಳುನಾಡಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಕನಸಿನೊಂದಿಗೆ ಪಕ್ಷ ಕಟ್ಟಿದ ಅಣ್ಣಾಮಲೈ ಮತ್ತೆ ಅಧಿಕಾರ ಅವಧಿ ಮುಂದುವರಿಸುವ ಕುರಿತು ಕಾರ್ಯಕರ್ತರು ಇಂಗಿತ ವ್ಯಕ್ತಪಡಿಸಿದ್ದರು. ಆದರೆ ತಮಿಳುನಾಡು ಬಿಜೆಪಿಯಿಂದ ಮುನಿಸಿಕೊಂಡುಹೊರನಡೆದಿದ್ದ ಎಐಎಡಿಎಂಕೆ ಇದೀಗ ಮೈತ್ರಿಗೆ ಮುಂದಾಗಿದೆ. ಬಿಜೆಪಿ ಹೈಕಮಾಂಡ್ ಮೈತ್ರಿ ದಾಳ ಉರುಳಿಸಿದೆ. ಆದರೆ ಅಣ್ಣಾಮಲೈ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ ಮೈತ್ರಿ ಮಾಡಿಕೊಳ್ಳುವುದಾಗಿ ಷರತ್ತು ಹಾಕಿದೆ ಎನ್ನಲಾಗಿದೆ.
ರಾಜೀನಾಮೆ ಖಚಿತಪಡಿಸಿದ ಅಣ್ಣಾಮಲೈ
ಷರತ್ತಿನ ಕಾರಣದಿಂದ ಅನಿವಾರ್ಯವಾಗಿ ಅಣ್ಣಾಮಲೈ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳೆಗಿಳಿಯಬೇಕಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೇ ಕಾರಣಕ್ಕೆ ಮುಂದಿನ ಬಿಜೆಪಿ ಅಧ್ಯಕ್ಷ ರೇಸ್‌ನಿಂದ ಹೊರಗುಳಿಯುವುದಾಗಿ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಕೊಯಂಬತ್ತೂರಿನಲ್ಲಿ ಮಾತಾಡಿದ ಅಣ್ಣಾಮಲೈ, ತಮಿಳುನಾಡು ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಪಕ್ಷದ ವರಿಷ್ಠರು ಅಧ್ಯಕ್ಷರ ಆಯ್ಕೆ ನಿರ್ಧಾರ ಮಾಡುತ್ತಾರೆ. ಇದು ಎಲ್ಲರೂ ಒಗ್ಗಟ್ಟಿನಿಂದ, ಅವಿರೋಧವಾಗಿ ಮಾಡುವ ಆಯ್ಕೆ ಪ್ರಕ್ರಿಯೆಯಾಗಿದೆ. ತಮಿಳುನಾಡು ಬಿಜೆಪಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಸೂಕ್ತ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ.ಇದೇ ವೇಳೆ ತಾವು ಬಿಜೆಪಿ ನೂತನ ಅಧ್ಯಕ್ಷರ ಆಯ್ಕೆ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲ ಹಾಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಇಪಿಎಸ್ ಭೇಟಿ ಬೆನ್ನಲ್ಲೇ ಸಂಚಲನ
AIADMK ನಾಯಕ ಎಡಪ್ಪಾಡಿ ಪಳನಿಸ್ವಾಮಿ, ಕೇಂದ್ರ ಗೃಹ ಸಚಿವ, ಬಿಜೆಪಿ ಪ್ರಮುಖ ನಾಯಕ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡು ರಾಜಕೀಯದಲ್ಲಿ ಕೋಲಾಹಲ ಶುರುವಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ಜೊತೆ ಮೈತ್ರಿಗೆ ಅಣ್ಣಾಮಲೈ ಅಡ್ಡಿ ಎಂದು ಹಲವು ಬಾರಿ ಹೇಳಿಕೊಂಡಿದ್ದರು. ಇದೇ ಷರತ್ತು ಬಿಜೆಪಿ ವರಿಷ್ಠರ ಮುಂದೆಯೂ ಇಟ್ಟಿದ್ದಾರೆ. ಹೀಗಾಗಿ ಬಿಜೆಪಿ ವರಿಷ್ಠರು ಅಣ್ಣಾಮಲೈಗೆ ರಾಜೀನಾಮೆ ಸೂತ್ರ ಮುಂದಿಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಅಣ್ಣಾಮಲೈಗೆ ಬೇರೆ ಪ್ರಮುಖ ಜವಾಬ್ದಾರಿ ನೀಡುವ ಕುರಿತು ಕೇಂದ್ರ ಬಿಜೆಪಿ ವರಿಷ್ಠರು ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
ಎಪ್ರಿಲ್ 6ಕ್ಕೆ ಮೋದಿ ಜೊತೆ ಚರ್ಚೆ
ಎಡಪ್ಪಾಡಿ ಪಳನಿಸ್ವಾಮಿ ಎಪ್ರಿಲ್ 6 ರಂದು ಪ್ರಧಾನಿ ಮೋದಿ ಬೇಟಿಯಾಗುವ ಸಾಧ್ಯತೆ ಇದೆ. ಎಪ್ರಿಲ್ 6 ರಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಬೇಟಿ ನೀಡುತ್ತಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಬೇಟಿಯಾಗಿ ಮೈತ್ರಿ ಖಚಿತಡಿಸುವ ಸಾಧ್ಯತೆ ಇದೆ. ಮೋದಿ ಸಮ್ಮುಖದಲ್ಲೇ ಮೈತ್ರಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರ: ಮತ್ತೆ ಅಣ್ಣಾಮಲೈ ಮೇಲೆ ಡಿಕೆಶಿ ವಾಕ್ ಪ್ರಹಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.