ಉಚ್ಚಾಟಿತ 18 ಶಾಸಕರ ಪರ ವಹಿಸಿಕೊಳ್ಳುವ ಬದಲು ಅವರು ಆ ರೀತಿ ನಡೆದುಕೊಳ್ಳದಂತೆ ಹೇಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೈಸೂರು (ಏ.03): ಉಚ್ಚಾಟಿತ 18 ಶಾಸಕರ ಪರ ವಹಿಸಿಕೊಳ್ಳುವ ಬದಲು ಅವರು ಆ ರೀತಿ ನಡೆದುಕೊಳ್ಳದಂತೆ ಹೇಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಸುದ್ದಿಗಾರರೊಡನೆ ಮಾತನಾಡಿದ ಅವರು, ಶಾಸಕರ ವರ್ತನೆಗಳನ್ನು ನಾವು ನೋಡಿದ್ದೇವೆ. ಕೆಲವೊಂದು ವಿಚಾರಗಳಿಗೆ ಗಂಭೀರವಾಗಿ ಉದ್ರೇಕಕ್ಕೆ ಹೋಗಿರೋದು ನಡೆದಿದೆ. ಆದರೆ ಈ ಕ್ಷುಲ್ಲಕ ಕಾರಣಕ್ಕೆ ಸ್ಪೀಕರ್ ಕೂರುವ ಸ್ಥಾನಕ್ಕೆ ಹೋಗಿ ಧರಣಿ ಮಾಡಿ, ಅತ್ಯಂತ ಕೆಟ್ಟ ರೀತಿಯಲ್ಲಿ ವರ್ತಿಸಿದ್ದರು. ಶಾಸಕರಿಗೆ ಅಗೌರವ ತರುವಂತೆ ನಡೆದುಕೊಂಡಿದ್ದಾರೆ ಎಂದರು. ಬಜೆಟ್ ಮೇಲೆ ಅವರಿಗೆ ಏನು ಟೀಕೆ ಮಾಡಲಿಕ್ಕೆ ಆಗಲಿಲ್ಲ. ವಿಧಾನಸಭೆಯಲ್ಲಿ ವಿಪಕ್ಷ ಸಂಪೂರ್ಣ ವಿಫಲವಾಗಿತ್ತು.
ಈಗಾಗಿ ಅವರಿಗೆ ಯಾವುದೇ ಅಸ್ತ್ರ ಇರಲಿಲ್ಲ. ಈ ವಿಷಯದಲ್ಲಿ ಸ್ಪೀಕರ್ ಕೂಡ ಸರಿಯಾದ ತೀರ್ಮಾನ ತಕೊಂಡರು. ಇದರಿಂದ 18 ಶಾಸಕರು ಪಾಠ ಕಲಿತಿದ್ದಾರೆ ಎಂದು ಅವರು ಹೇಳಿದರು. ಬಿಜೆಪಿಯವರು ಹೀಗಾಗಿ ಧರಣಿ ಮಾಡ್ತಾರೆ. ಪ್ರತಿಭಟನೆ ಮಾಡಬಾರದು ಎಂದು ಹೇಳಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿರುವುದನ್ನು ಒಟ್ಟಿಗೆ ಸೇರಿಸಿಕೊಂಡು ಪ್ರತಿಭಟಿಸಲಿ ಎಂದು ಅವರು ಸಲಹೆ ನೀಡಿದರು. ಸ್ಪೀಕರ್ ನಿರ್ಧಾರದ ಬಗ್ಗೆ ಶಾಸಕ ಹರೀಶ್ ಪೂಂಜಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಗುಜರಾತ್ ನಲ್ಲಿ ಮೋದಿ ಮುಖ್ಯಮಂತ್ರಿ ಆಗಿದ್ದಾಗ ಏನೇನು ಮಾಡಿದರು. ಪ್ರಧಾನಿಯಾದ ಬಳಿಕ ಏನೇನು ಮಾಡಿದ್ದಾರೆ. ಎಷ್ಟು ಜನ ಸಂಸದರನ್ನು ಹೊರ ಹಾಕಿಸಿದ್ದಾರೆ.
ಇದೆಲ್ಲವನ್ನು ಹರೀಶ್ ಪೂಂಜಾ ನೋಡಬೇಕು. ಆದ್ದರಿಂದ ಪೂಂಜಾ ಹಾಗೂ ಬಿಜೆಪಿಯಿಂದ ಏನೂ ಕಲಿಯಬೇಕಿಲ್ಲ ಎಂದರು. ವಕ್ಫ್ ಬಿಲ್ ಮಂಡಿಸಿರುವುದು ಸಂವಿಧಾನಕ್ಕೆ ವಿರುದ್ಧವಾದ ಕಾನೂನು. ಧಾರ್ಮಿಕ ಸಂಸ್ಥೆಗಳ ವಿಚಾರ ರಾಜ್ಯಕ್ಕೆ ಸೀಮಿತವಾದದ್ದು, ಭೂಮಿಗೆ ಸೀಮಿತವಾದದ್ದು. ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಲಿಕ್ಕೆ ಯಾವುದೇ ಅಧಿಕಾರ ಇಲ್ಲ. ಹಿಂದೂ ಧರ್ಮದ ಸಂಸ್ಥೆಗಳಿರಲಿ, ಕ್ರೈಸ್ತ ಧರ್ಮ ಇರಲಿ, ಮುಸ್ಲಿಂ ಇರಲಿ. ರಾಜ್ಯ ಸರ್ಕಾರದ ಅಧಿಕಾರವ್ನು ಕಿತ್ತುಕೊಳ್ಳುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು. ಇದು ಸಂವಿಧಾನಕ್ಕೆ ವಿರೋಧವಾದ ನಡೆ. ಸಂಸತ್ ನಲ್ಲಿ ದಬ್ಬಾಳಿಕೆಯಿಂದ ಪಾಸ್ ಮಾಡಿದರು. ಈ ವಿಷಯ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುತ್ತದೆ. ಇದರಿಂದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತದೆ.
ಇದನ್ನೂ ಓದಿ: 2 ಬಾರಿ ಟೆಸ್ಟ್ ಮಾಡಿ ಸರ್ಕಾರಿ ಆಸ್ಪತ್ರೆಗೆ ಔಷಧ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಇದು ಸರ್ವಧಿಕಾರಿ ಧೋರಣೆಗೆ ಹಿಡಿದ ಕನ್ನಡಿ. ವಕ್ಫ್ ಆಸ್ತಿ ಕಾಂಗ್ರೆಸ್ ನವರಿಗೆ ಸೇರಿದೆ ಎನ್ನುವ ಬಸವರಾಜ್ ಬೊಮ್ಮಾಯಿ ಅವರೇ ನಾಲ್ಕು ವರ್ಷ ಸಿಎಂ ಆಗಿದ್ದರು. ಆಗ ಏನು ಮಾಡಿದರು. ಈ ರೀತಿ ಆರೋಪ ಮಾಡೋದು ಸುಲಭ. ತಪ್ಪನ್ನ ಯಾರು ರಕ್ಷಣೆ ಮಾಡಲಿಕ್ಕೆ ಹೋಗಲ್ಲ ಎಂದರು. ವಕ್ಫ್ ನಲ್ಲಿ ಭ್ರಷ್ಟಾಚಾರ ಆಗಿದ್ರೆ ಕ್ರಮ ಆಗಲಿ. ಭೂಮಿ ಮೇಲೆ ಅಕ್ರಮ ಮಾಡಿದ್ರೆ ಕ್ರಮ ಆಗಲಿ. ವಕ್ಫ್ ಆಸ್ತಿ ಕಾಂಗ್ರೆಸ್ ನವರದ್ದು ಅನ್ನೋದಕ್ಕೆ ಒಂದು ದಾಖಲೆ ನೀಡಲಿ, ಸಾಬೀತುಪಡಿಸಲಿ. ರಾಜ್ಯದ ಅಧಿಕಾರ ಕಿತ್ತುಕೊಂಡು ಕೇಂದ್ರ ನಾವೇ ಮಾಡುತ್ತೇವೆ. ಬೇರೆದಕ್ಕೆ ಅವಕಾಶ ಮಾಡಿಕೊಡುತ್ತೇವೆ ಅಂದರೆ ಆಗುವುದಿಲ್ಲ. ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲ. ಈ ಬಿಲ್ ಪಾಸ್ ಆದರೂ ಕಾನೂನು ಬಾಹಿರ ಆಗುತ್ತದೆ. ಸುಪ್ರೀಂ ಕೋರ್ಟ್ ಕೂಡ ಇದನ್ನ ತಿರಸ್ಕಾರ ಮಾಡುತ್ತದೆ ಎಂದು ಅವರು ತಿಳಿಸಿದರು.