ಸಚಿವ ನಾರಾಯಣಗೌಡ ಕಾಂಗ್ರೆಸ್‌ ಅಭ್ಯರ್ಥಿ ಆಗ್ತಾರಾ?: ಎಚ್‌.ಡಿ.ರೇವಣ್ಣ ಜೆಡಿಎಸ್‌ ಅಭ್ಯರ್ಥಿಯಾಗುವ ಕುರಿತೂ ಗಾಳಿ ಸುದ್ದಿ

By Kannadaprabha NewsFirst Published Feb 27, 2023, 8:04 AM IST
Highlights

ಮುಂಬರುವ ಚುನಾವಣೆಯಲ್ಲಿ ಸಚಿವ ಹಾಗೂ ಕೆ.ಆರ್‌.ಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್‌ ಸೇರಿ ಕಣಕ್ಕಿಳಿಯುವುದಕ್ಕೆ ಕಾತುರರಾಗಿದ್ದಾರೆ ಎಂಬ ಮಾತುಗಳು ಕ್ಷೇತ್ರದೆಲ್ಲೆಡೆ ದಟ್ಟವಾಗಿ ಕೇಳಿ ಬರುತ್ತಿವೆ. 

ಮಂಡ್ಯ ಮಂಜುನಾಥ

ಮಂಡ್ಯ (ಫೆ.27): ಮುಂಬರುವ ಚುನಾವಣೆಯಲ್ಲಿ ಸಚಿವ ಹಾಗೂ ಕೆ.ಆರ್‌.ಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್‌ ಸೇರಿ ಕಣಕ್ಕಿಳಿಯುವುದಕ್ಕೆ ಕಾತುರರಾಗಿದ್ದಾರೆ ಎಂಬ ಮಾತುಗಳು ಕ್ಷೇತ್ರದೆಲ್ಲೆಡೆ ದಟ್ಟವಾಗಿ ಕೇಳಿ ಬರುತ್ತಿವೆ. ಜೊತೆಗೆ, ಜೆಡಿಎಸ್‌ನಿಂದ ಎಚ್‌.ಡಿ.ರೇವಣ್ಣ ಸ್ಪರ್ಧಿಸುತ್ತಿದ್ದಾರೆ ಎಂಬ ಗಾಳಿ ಸುದ್ದಿ ಕೂಡ ಹರಿದಾಡುತ್ತಿದೆ. ಈ ಮಾತುಗಳೇ ಈ ಕ್ಷೇತ್ರಕ್ಕೆ ಸ್ಟಾರ್‌ ವ್ಯಾಲ್ಯೂ ತಂದುಕೊಟ್ಟಿವೆ. ಬಿಜೆಪಿ ಬಿಟ್ಟು ಬರುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ ಸಚಿವರು. ಆದರೆ, ಬಿಜೆಪಿಯಿಂದ ಕಣಕ್ಕಿಳಿದರೆ ಗೆಲ್ಲಲಾಗದು ಎಂಬ ಸತ್ಯ ಗೊತ್ತಾಗಿರುವುದರಿಂದ ಅವರು ಕಾಂಗ್ರೆಸ್‌ ಕದ ತಟ್ಟುತ್ತಿದ್ದಾರೆ. 

Latest Videos

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಜೆಡಿಎಸ್‌ ಒಡಕಿನ ಲಾಭ ಪಡೆಯಬಹುದು. ಕ್ಷೇತ್ರದೊಳಗೆ ಕಾಂಗ್ರೆಸ್‌ ಪರವಾದ ವಾತಾವರಣ ಸೃಷ್ಟಿಯಾಗಿರುವುದರಿಂದ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಅವರ ಸೇರ್ಪಡೆಗೆ ಕಾಂಗ್ರೆಸ್‌ನ ಸ್ಥಳೀಯ ಮುಖಂಡರಿಂದ ಪ್ರಬಲ ವಿರೋಧವಿದೆ. ಹೀಗಾಗಿ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ಆತುರಪಡುತ್ತಿಲ್ಲ ಎನ್ನಲಾಗಿದೆ. ಕಳೆದ ಚುನಾವಣಾ ಸಮಯದಲ್ಲಿ ಸಚಿವ ಸಂಪುಟದ ಬಹುತೇಕ ಸದಸ್ಯರು ಕೆ.ಆರ್‌.ಪೇಟೆ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರಿಂದ ನಾರಾಯಣಗೌಡರಿಗೆ ಗೆಲುವು ಸಾಧ್ಯವಾಯಿತು. ಈಗ ಆ ಪರಿಸ್ಥಿತಿ ಕ್ಷೇತ್ರದೊಳಗಿಲ್ಲ.

2-3 ದಿನದಲ್ಲಿ ಹಾಸನ ಟಿಕೆಟ್‌ ಕಗ್ಗಂಟು ಇತ್ಯರ್ಥ: ಎಚ್‌.​ಡಿ.​ಕು​ಮಾ​ರ​ಸ್ವಾಮಿ

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜುನಾಥ್‌ ಗೆಲುವಿಗೆ ಸಹಕರಿಸಲಿಲ್ಲ. ಕಾಂಗ್ರೆಸ್‌ ಪರ ವೋಟುಗಳು ಹೋಗುವಂತೆ ಮಾಡಿದರೆಂಬ ಆರೋಪದಿಂದ ವರಿಷ್ಠರ ಕೆಂಗಣ್ಣಿಗೆ ಅವರು ಗುರಿಯಾದರು. ಇದೇ ಕಾರಣಕ್ಕೆ ಕ್ಷೇತ್ರದೊಳಗೆ ವೀರಶೈವರ ವಿರೋಧ ಕಟ್ಟಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಕೂಡ ನಾರಾಯಣಗೌಡರನ್ನು ದೂರವಿಟ್ಟಿದ್ದಾರೆ. ಇದೇ ಕಾರಣದಿಂದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರನ್ನು ದೂರದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಯಿತು ಎಂಬ ವಿಶ್ಲೇಷಣೆ ಇದೆ.

ಇನ್ನು, ಕಾಂಗ್ರೆಸ್‌ನಿಂದ 1999 ಹಾಗೂ 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಬಿ.ಚಂದ್ರಶೇಖರ್‌, 1996ರ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದ ಬಿ.ಪ್ರಕಾಶ್‌ ‘ಬಿ’ ಫಾರಂಗೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್‌ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್‌ ಹೊಸಮುಖವಾಗಿ ಕ್ಷೇತ್ರವನ್ನು ಪ್ರತಿನಿಧಿಸಲು ಸಿದ್ಧರಾಗಿ ಕ್ಷೇತ್ರಾದ್ಯಂತ ಓಡಾಡುತ್ತಿದ್ದಾರೆ. ಅವರೂ ‘ಬಿ’ ಫಾರಂ ಕೋರಿ ಅರ್ಜಿ ಹಾಕಿದ್ದಾರೆ. ಜೆಡಿಎಸ್‌ನಿಂದ ಬಿ.ಎಲ್‌.ದೇವರಾಜು, ಎಚ್‌.ಟಿ.ಮಂಜು, ಬಸ್‌ ಸಂತೋಷ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಜೊತೆಗೆ, ಕೆಸಿಎನ್‌ ಬಿಜೆಪಿ ತೊರೆದರೆ ಕುರುಬ ಸಮುದಾಯದ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಆಲೋಚನೆಯೂ ಜೆಡಿಎಸ್‌ಗಿದೆ.

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ 80 ಸಾವಿರ ಒಕ್ಕಲಿಗರು, 35 ಸಾವಿರ ಕುರುಬರು, 25 ಸಾವಿರ ದಲಿತರು, 15 ಸಾವಿರ ವೀರಶೈವರಿದ್ದಾರೆ. ಕುರುಬರು ಹಾಗೂ ಸಣ್ಣ ಸಮುದಾಯದವರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಒಕ್ಕಲಿಗ ಮತಗಳು ಜೆಡಿಎಸ್‌-ಕಾಂಗ್ರೆಸ್‌ ಎರಡೂ ಕಡೆ ಹಂಚಿಹೋಗುವುದು ನಿಚ್ಚಳ. ಕುರುಬ ಸಮುದಾಯದ ಮತಗಳು ಬಹುಪಾಲು ಕಾಂಗ್ರೆಸ್‌ ಬೆನ್ನಿಗೆ ನಿಂತರೆ, ವೀರಶೈವರ ಮತಗಳು ಬಿಜೆಪಿಗೆ ಹರಿದು ಹೋಗಲಿವೆ. ದಲಿತರು ಕಾಂಗ್ರೆಸ್‌ ಪರ ಹೆಚ್ಚು ಒಲವು ತೋರುವ ಸಾಧ್ಯತೆಗಳಿವೆ.

ಇಂದು ಶಿವಮೊಗ್ಗ ಏರ್‌ಪೋರ್ಟ್‌ ಲೋಕಾರ್ಪಣೆ: ಬಿಎಸ್‌ವೈ 80ನೇ ಜನ್ಮದಿನದಂದೇ ಮೋದಿ ಉದ್ಘಾಟನೆ

ಕ್ಷೇತ್ರ ವಿಶೇಷ: ಕೆ.ಆರ್‌.ಪೇಟೆ ಕಳೆದ ಮೂರು ಚುನಾವಣೆಗಳಿಂದ ಪ್ರತಿಷ್ಠೆಯ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ರಾಜ್ಯಸಭಾ ಉಪ ಸಭಾಪತಿಯಾಗಿದ್ದ ಕೆ.ಆರ್‌.ರೆಹಮಾನ್‌ಖಾನ್‌, ವಿಧಾನಸಭಾಧ್ಯಕ್ಷರಾಗಿದ್ದ ಕೆ.ಆರ್‌.ಪೇಟೆ ಕೃಷ್ಣ ಅವರನ್ನು ಕೊಡುಗೆಯಾಗಿ ನೀಡಿದ ಕ್ಷೇತ್ರವಿದು. ಯಡಿಯೂರಪ್ಪ ಹುಟ್ಟೂರು ಬೂಕನಕೆರೆ ಇದೇ ಕ್ಷೇತ್ರಕ್ಕೆ ಸೇರುತ್ತದೆ. ಸರಳ, ಸಜ್ಜನ ರಾಜಕಾರಣಿಯಾಗಿದ್ದ ಕೆ.ಆರ್‌.ಪೇಟೆ ಕೃಷ್ಣ ಬಳಿಕ ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿಯ ಕೊರತೆ ಎದುರಾಗಿದೆ. ಜೆಡಿಎಸ್‌ನಿಂದ 2013, 2018ರಲ್ಲಿ ಸತತವಾಗಿ ಆಯ್ಕೆಯಾದ ಕೆ.ಸಿ.ನಾರಾಯಣಗೌಡರು 2019ರಲ್ಲಿ ಜೆಡಿಎಸ್‌ ತೊರೆದು, ಬಿಜೆಪಿ ಸೇರಿ ನಂತರ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

click me!