ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಇನ್ನು 2-3 ದಿನಗಳಲ್ಲಿ ಸಕಾರಾತ್ಮಕ ತೀರ್ಮಾನ ಕೈಗೊಳ್ಳುತ್ತೇನೆ. ಕೆಲವೇ ದಿನಗಳಲ್ಲಿ ಜೆಡಿಎಸ್ನ ಆಕಾಂಕ್ಷಿಗಳ ಪಟ್ಟಿಬಿಡುಗಡೆಯಾಗಲಿದ್ದು, ಅದರಲ್ಲಿ ಹಾಸನದ ಹೆಸರೂ ಇರಲಿದೆ.
ಹಾಸನ/ಚಿಕ್ಕಮಗಳೂರು (ಫೆ.27): ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಇನ್ನು 2-3 ದಿನಗಳಲ್ಲಿ ಸಕಾರಾತ್ಮಕ ತೀರ್ಮಾನ ಕೈಗೊಳ್ಳುತ್ತೇನೆ. ಕೆಲವೇ ದಿನಗಳಲ್ಲಿ ಜೆಡಿಎಸ್ನ ಆಕಾಂಕ್ಷಿಗಳ ಪಟ್ಟಿ ಬಿಡುಗಡೆಯಾಗಲಿದ್ದು, ಅದರಲ್ಲಿ ಹಾಸನದ ಹೆಸರೂ ಇರಲಿದೆ. ಹಾಸನ ಟಿಕೆಟ್ ವಿಚಾರವಾಗಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರೇ ನಿರ್ಧಾರ ಮಾಡಲಿದ್ದಾರೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರ ಕೈಬಿಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಹಾಸನದ ಜೆಡಿಎಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದ ಕುತೂಹಲ ಮತ್ತಷ್ಟುಹೆಚ್ಚಾದಂತಾಗಿದೆ.
ಚಿಕ್ಕಮಗಳೂರಿನಲ್ಲಿ ಪಂಚರತ್ನ ಯಾತ್ರೆ ಮುಗಿಸಿ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಹಾಸನದ ರಿಂಗ್ ರೋಡ್ ರಸ್ತೆ ಸುಬೇದಾರ್ ವೃತ್ತದಲ್ಲಿ ತಮ್ಮನ್ನು ಎದುರಾದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಲಕ್ಷಾಂತರ ಕಾರ್ಯಕರ್ತರು ನನ್ನ ಕುಟುಂಬ ಇದ್ದಂತೆ. ಅವರ ನಂಬಿಕೆಗೆ ಧಕ್ಕೆಯಾಗುವ ರೀತಿ ಯಾವ ನಿರ್ಧಾರವನ್ನೂ ಕೈಗೊಳ್ಳಲ್ಲ. ಹಾಗೆಯೇ ನನಗೆ ಕುಟುಂಬದ ಮೇಲೆ ವ್ಯಾಮೋಹವೂ ಇಲ್ಲ. ಎರಡ್ಮೂರು ದಿನ ಅವಕಾಶ ಕೊಡಿ. ಸಕಾರಾತ್ಮಕ ತೀರ್ಮಾನ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಎಚ್‌ಡಿಕೆ ಅಧಿಕಾರ ಇದ್ದಾಗ ಏಕೆ ಪಂಚರತ್ನ ಜಾರಿ ಮಾಡಲಿಲ್ಲ?: ಸಚಿವ ಸುಧಾಕರ್ ಪ್ರಶ್ನೆ
ಕೆಲವೇ ದಿನದಲ್ಲಿ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ ಆಗುತ್ತದೆ. ಅದರಲ್ಲಿ ಹಾಸನದ ಹೆಸರು ಕೂಡ ಇರುತ್ತದೆ. ನಾನು ಈವರೆಗೆ ಹಾಸನದ ರಾಜಕೀಯದಲ್ಲಿ ನೇರವಾಗಿ ಭಾಗಿಯಾಗಿಲ್ಲ. ಕೇವಲ ಹಾಸನ ವಿಧಾನಸಭಾ ಕ್ಷೇತ್ರಕ್ಕೋಸ್ಕರ ನನ್ನ ಪಕ್ಷ ಹಾಳು ಮಾಡಲು ತಯಾರಿಲ್ಲ. ನನ್ನ ಕಾರ್ಯಕರ್ತರನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ದೇವೇಗೌಡರ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಅವರ ಜೀವ ಕಾಪಾಡಲು ಕುಟುಂಬದ ವೈದ್ಯರು ಶ್ರಮಿಸುತ್ತಿದ್ದಾರೆ ಎಂದರು.ನನಗೂ ಎರಡು ಬಾರಿ ಹಾರ್ಟ್ ಆಪರೇಷನ್ ಆಗಿದೆ. ನಾನು ಕೈಗೊಳ್ಳುವ ತೀರ್ಮಾನದಲ್ಲಿ ಒಡಕು ಇರಬಾರದು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಇದಕ್ಕೂ ಮುನ್ನ ಚಿಕ್ಕಮಗಳೂರಿನ ಕೊಪ್ಪದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಯಾವುದೇ ಗೊಂದಲಕ್ಕೆ ಅವಕಾಶ ಆಗಬಾರದೆಂಬ ಉದ್ದೇಶದಿಂದ ಮುಕ್ತವಾಗಿ ಚರ್ಚಿಸಲು ಸಮಾನ ಮನಸ್ಕರಿಗೆ ಭಾನುವಾರ ಸಂಜೆ 6ಕ್ಕೆ ಸಭೆಗೆ ಬರಲು ಹೇಳಿದ್ದೆ. ಕಾರ್ಯಕರ್ತರ ಭಾವನೆ ಅರ್ಥಮಾಡಿಕೊಂಡು ಸರಿಪಡಿಸುವುದು ನನ್ನ ಚಿಂತನೆಯಾಗಿತ್ತು. ಆದರೆ, ಕೊನೇ ಹಂತದಲ್ಲಿ ಸಭೆ ರದ್ದುಪಡಿಸಿದ್ದಾರೆಂದು ರಾತ್ರಿ ಗೊತ್ತಾಯಿತು. ಹಾಸನ ಟಿಕೆಟ್ ವಿಚಾರವಾಗಿ ಅಂತಿಮ ತೀರ್ಮಾನ ತೆಗೆದು ಕೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರೇ ಸಭೆ ಕರೆಯುತ್ತಾರೆ ಎಂದು ತಿಳಿಸಿದರು.
ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ಪರ ಉತ್ತಮ ಅಲೆಯಿದೆ: ಎಚ್.ಡಿ.ಕುಮಾರಸ್ವಾಮಿ
ನನಗೆ ದೇವೇಗೌಡರ ಆರೋಗ್ಯ ಮುಖ್ಯ. ನಾನು ಹಾಸನದ ವಿಷಯವನ್ನು ಅವರ ಮುಂದೆ ಚರ್ಚಿಸಿ, ಅವರ ಆರೋಗ್ಯ ಕೆಡುವ ವಾತಾವರಣ ನಿರ್ಮಿಸುವಂತಾಗಬಾರದು ಎಂಬುದು ನನ್ನ ಅಭಿಪ್ರಾಯ ಆಗಿತ್ತು. ಆದರೆ, ಬೇರೆಯವರಿಗೆ ದೇವೇಗೌಡರ ಆರೋಗ್ಯಕ್ಕಿಂತ ಅವರ ಭಾವನೆಗಳೇ ಮುಖ್ಯವಾದರೆ ನಾನು ಹಿಡಿಯಲು ಆಗಲ್ಲ ಎಂದು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.