ಹರ್ಯಾಣದಲ್ಲಿ 'ಕೈ'ಗೆ ಬಂದ ಜಿಲೇಬಿ ಬಿಜೆಪಿ ಬಾಯಿಗೆ: ಕೇಸರಿ ಪಾಳಯದ ಗೆಲುವಿಗೆ ಕಾರಣ ಏನು?

By Anusha Kb  |  First Published Oct 9, 2024, 9:19 AM IST

ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮೀರಿ ದಾಖಲೆಯ 3ನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ‘ಜಯದ ಜಿಲೇಬಿ’ ಸವಿದಿದೆ.


ಚಂಡೀಗಢ/ ಶ್ರೀನಗರ: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮೀರಿ ದಾಖಲೆಯ 3ನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ‘ಜಯದ ಜಿಲೇಬಿ’ ಸವಿದಿದೆ. ಇನ್ನು ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿ ಈ ಸಲ ಇದೇ ಮೊದಲ ಬಾರಿಗೆ 29 ಸ್ಥಾನ ಗೆದ್ದಿದೆಯಾದರೂ, ಕಾಶ್ಮೀರ ಭಾಗದಲ್ಲಿ ಉತ್ತಮ ಸ್ಥಾನ ಗಳಿಸಲು ವಿಫಲವಾಗಿದೆ. ಹೀಗಾಗಿ 10 ವರ್ಷದ ನಂತರ ನಡೆದ ಇಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿಕೂಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.

90 ಸ್ಥಾನಗಳ ಹರ್ಯಾಣ ಚುನಾವಣೆ ಫಲಿತಾಂಶದ ಆರಂಭಿಕ 1 ತಾಸಿನ ಅವಧಿಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದಂತೆ ಕಾಂಗ್ರೆಸ್‌ ಮುನ್ನಡೆ ಸಾಧಿಸಿತ್ತು. ಸಂಭ್ರಮಾಚರಣೆಯನ್ನೂ ಆರಂಭಿಸಿತು. ಕಾರ್ಯಕರ್ತರಿಗೆ ಹಂಚಲು ಜಿಲೇಬಿಯನ್ನು ತಯಾರಿಸಿಟ್ಟುಕೊಂಡಿತ್ತು. ಆದರೆ ಅನಿರೀಕ್ಷಿತ ಎಂಬಂತೆ 10 ಗಂಟೆ ಸುಮಾರಿಗೆ ಟ್ರೆಂಡ್‌ ಉಲ್ಟಾ ಆಗಿ ಬಿಜೆಪಿ ಮುನ್ನಡೆ ಸಾಧಿಸಿತು. ಮತ್ತೆಂದೂ ಅದು ಹಿನ್ನಡೆ ಸಾಧಿಸದೇ ಸರಳ ಬಹುಮತವಾದ 48 ಸ್ಥಾನ ಗಳಿಸಿ ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಿತು ಹಾಗೂ ಹರ್ಯಾಣದಲ್ಲಿ ಪ್ರಖ್ಯಾತವಾದ 'ಮಾಥುರಾಮ್‌ ಹಲ್ವಾಯಿ' ಬ್ರಾಂಡ್‌ನ ಜಿಲೇಬಿ ಸವಿದು ಬಿಜೆಪಿಗರು ಸಂಭ್ರಮಿಸಿದರು.

Latest Videos

undefined

ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ

ಇದೇ ವೇಳೆ, ಈ ಜಿಲೇಬಿ ಬಗ್ಗೆ ಚುನಾವಣಾ ಭಾಷಣದಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಟಾಂಗ್ ನೀಡಿದರು. ಹರ್ಯಾಣದಲ್ಲಿ ಪಕ್ಷವೊಂದು ಹ್ಯಾಟ್ರಿಕ್‌ ಜಯ ಬಾರಿಸಿದ್ದು ಇದೇ ಮೊದಲು. ಪಕ್ಷಕ್ಕೆ ಮತ್ತೊಂದು ಗೆಲುವು ತಂದಕೊಟ್ಟ ಹಾಲಿ ಸಿಎಂ ನಯಾಬ್‌ ಸಿಂಗ್‌ ಸೈನಿ ಮತ್ತೆ ಅಧಿಕಾರಕ್ಕೆ ಏರುವುದು ನಿಶ್ಚಿತ.

ಹರ್ಯಾಣದಲ್ಲಿ ಬಿಜೆಪಿ ಗೆಲುವಿಗೆ ಏನು ಕಾರಣ?

  • 1 ಪ್ರಭಾವಿ ಜಾಟ್ ಸಮುದಾಯವನ್ನು ಕಾಂಗ್ರೆಸ್ ಓಲೈಸಲು ಮುಂದಾದರೆ, ಬಿಜೆಪಿ ಜಾಟ್‌ ಯೇತರ ಮತಗಳಿಗೆ ಒತ್ತು ನೀಡಿತು
  • 2 ಜಾಟರ ಮತಗಳು ಕಾಂಗ್ರೆಸ್, ಜಾಟ್ ಸಮುದಾಯದ ಪಕ್ಷಗಳಾದ ಐಎನ್‌ಎಲ್‌ ಡಿ, ಜೆಜೆಪಿ, ಆಪ್ ನಡುವೆ ವಿಭಜನೆಯಾದವು
  • 3 ಆಡಳಿತ ವಿರೋಧಿ ಅಲೆ ಹತ್ತಿಕ್ಕಲು ಚುನಾವ ಣೆಗೆ 200 ದಿನ ಮುನ್ನ ಬಿಜೆಪಿಯು ಸಿಎಂ ಬದಲಿಸಿತು. 60 ಹೊಸಬರನ್ನು ಕಣಕ್ಕಿಳಿಸಿತು
  • 4 'ಜವಾನ್, ಕಿಸಾನ್, ಪೈಲ್ವಾನ್' ಎಂಬ ಕಾಂಗ್ರೆಸ್ಸಿನ ಅಸ್ತ್ರವನ್ನೇ ದುರ್ಬಲಗೊಳಿಸಿತು. ಜನಪ್ರಿಯ ಕಾರ್ಯಕ್ರಮ ಜಾರಿಗೆ ತಂದಿತು
  • 5 ಕಾಂಗ್ರೆಸ್ ಗೆದ್ದರೆ ಜಾಟರು ಬಲಾಡ್ಯರಾಗು ತ್ತಾರೆ ಎಂಬ ಭೀತಿಯಿಂದ ಜಾಟ್‌ಯೇತರ ಮತಗಳು ಬಿಜೆಪಿ ಪರವಾಗಿ ಒಗ್ಗೂಡಿದವು
  • 6 ದಲಿತರ ಮೀಸಲಾತಿ ಕುರಿತು ರಾಹುಲ್ ಗಾಂಧಿ ಅಮೆರಿಕದಲ್ಲಿ ನೀಡಿದ್ದ ಹೇಳಿಕೆಯನ್ನು ಬಿಜೆಪಿ ರಾಜಕೀಯ ತಂತ್ರವಾಗಿ ಬಳಸಿತು

ಕಾಶ್ಮೀರ ಕಾಂಗ್ರೆಸ್‌-ಎನ್‌ಸಿ ತೆಕ್ಕೆಗೆ: 
ಇನ್ನು ಜಮ್ಮು-ಕಾಶ್ಮೀರದಲ್ಲಿ 10 ವರ್ಷ ನಂತರ ನಡೆದ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಯಶಸ್ವಿಯಾಗಿ ಅಧಿಕಾರಕ್ಕೇರಿದೆ. ಈ ಕೂಟ 48 ಸ್ಥಾನ ಪಡೆದಿದೆ. ಮತ್ತೊಂದೆಡೆ ಬಿಜೆಪಿ 29 ಸ್ಥಾನ ಗೆಲ್ಲುವುದರೊಂದಿಗೆ 2ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಮೆಹಬೂಬಾ ಮುಫ್ತಿ ಅವರ ಪಿಡಿಪಿ ಕಳೆದ ಸಲದ 28ರ ಬದಲು ಈ ಸಲ ಕೇವಲ 3 ಸ್ಥಾನ ಗೆದ್ದು ದಯನೀಯ ಸೋಲು ಕಂಡಿದೆ.

'ಜುಲನಾ ದಂಗಲ್' ಗೆದ್ದ ವಿನೇಶ್ ಫೋಗಟ್‌; WWE ರೆಸಲರ್‌ ಕವಿತಾ ರಾಣಿಗೆ ಸಿಕ್ಕಿದ್ದೆಷ್ಟು ವೋಟ್?

ರಾಜ್ಯದಲ್ಲಿ ಹಿಂದೂ ಬಾಹುಳ್ಯದ ಜಮ್ಮುವಿನಲ್ಲಿ ಬಿಜೆಪಿ ಹೆಚ್ಚೂ ಕಡಿಮೆ ಕ್ಲೀನ್‌ ಸ್ವೀಪ್‌ ಮಾಡಿದ್ದರೆ, ಕಾಶ್ಮೀರ ಭಾಗದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌-ಕಾಂಗ್ರೆಸ್ ಕೂಟ ಪ್ರಾಬಲ್ಯ ಮೆರೆದಿದೆ. ಆದರೆ ರಾಜ್ಯದಲ್ಲಿ ಕಳೆದ ಸಲ 12 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ಈ ಸಲ ಕೇವಲ 6 ಸ್ಥಾನ ಗೆದ್ದಿದ್ದು ಇಲ್ಲಿ ಗಮನಾರ್ಹ. ಇದೇನೇ ಇದ್ದರೂ ಎನ್‌ಸಿ-ಕಾಂಗ್ರೆಸ್‌ ಕೂಟವು 'ಅತಂತ್ರ ಸ್ಥಿತಿ ಬರಬಹುದು' ಎಂಬ ಅಂದಾಜನ್ನು ಸುಳ್ಳು ಮಾಡಿದೆ. ಹೀಗಾಗಿ ಎನ್‌ಸಿ ನಾಯಕ ಒಮರ್‌ ಅಬ್ದುಲ್ಲಾ 2ನೇ ಬಾರಿ ಕಾಶ್ಮೀರ ಸಿಎಂ ಆಗುವುದು ಬಹುತೇಕ ಖಚಿತ.

ಜಮ್ಮುವಿನಲ್ಲಿ ಕಾಂಗ್ರೆಸ್ ಮೈತ್ರಿ ಗೆದ್ದಿದ್ದು ಹೇಗೆ?

  • 1 ಈ ಬಾರಿಯ ವಿಧಾನಸಭೆ ಚುನಾವಣೆ ಬಿಜೆಪಿ ವರ್ಸಸ್ ಕಾಂಗ್ರೆಸ್ ಮಿತ್ರ ಕೂಟ ಎಂಬಂತಾಗಿತ್ತು. ನೇರಾನೇರ ಪೈಪೋಟಿ ಇತ್ತು
  • 2 ಸಂವಿಧಾನದ 370ನೇ ವಿಧಿ ರದ್ದು, ರಾಜ್ಯ ಸ್ಥಾನಮಾನ ಕಸಿದ ಕಾರಣ ಬಿಜೆಪಿ ವಿರುದ್ಧ ಕಣಿವೆಯೊಳಗೆ ಆಕ್ರೋಶ ತೀವ್ರವಾಗಿತ್ತು
  • 3 ಸಣ್ಣಪುಟ್ಟ ಪಕ್ಷಗಳು: ಭಾರಿ ಸದ್ದು ಮಾಡಿದವಾದರೂ ಜನರು ಬಿಜೆಪಿಗೆ ಪ್ರಬಲ ಎದುರಾಳಿ ಯಾಗಿದ್ದ ಕಾಂಗ್ರೆಸ್ ಮೈತ್ರಿ ಪರ ನಿಂತರು
  • 4 ಮೆಹಬೂಬಾ ನೇತೃತ್ವದ ಪಿಡಿಪಿ ಕಣದಲ್ಲಿತ್ತಾದರೂ, ಬಿಜೆಪಿ ಜತೆ ಕೈಜೋಡಿಸಿದ ಕಾರಣ ಬೆಂಬಲ ಸಿಗಲಿಲ್ಲ. ಮತ ವಿಭಜನೆ ತಪ್ಪಿತು
  • 5.ಅಧಿಕಾರಕ್ಕೆ ಬಂದರೆ ಕಾಶ್ಮೀರಕ್ಕೆ ಮರಳಿ ರಾಜ್ಯ ಸ್ಥಾನ ಕೊಡಿಸುವ ಕಾಂಗ್ರೆಸ್ - ನ್ಯಾಷನಲ್ ಕಾನ್ಸರೆನ್ಸ್ ಭರವಸೆಗೆ ಬೆಂಬಲ ದೊರೆಯಿತು
  • 6 ನ್ಯಾಷನಲ್ ಕಾನ್ಫರೆನ್ಸ್- ಕಾಂಗ್ರೆಸ್‌ನ ಹಲವು ಉಚಿತ ಗ್ಯಾರಂಟಿ ಭರವಸೆಗಳು ಕಾಶ್ಮೀರ ವಾಸಿಗಳ ಗಮನ ಸೆಳೆದು ಮತ ತಂದವು
click me!