ಹೊಸ ಪಕ್ಷ ಸ್ಥಾಪನೆ ಮಾಡಿರುವ ಗಾಲಿ ಜನಾರ್ದನ ರೆಡ್ಡಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡ ಮುಖಂಡರನ್ನ ಟಾರ್ಗೆಟ್ ಮಾಡಿ ಅವರ ಮನವೊಲಿಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಫೆ.3): ಗಾಲಿ ಜನಾರ್ದನ ರೆಡ್ಡಿ ಅಂದ್ರೆ ಬಳ್ಳಾರಿ.. ಬಳ್ಳಾರಿ ಅಂದ್ರೆ ಗಾಲಿ ಜನಾರ್ದನ ರೆಡ್ಡಿ ಎಂಬ ಒಂದು ಕಾಲವಿತ್ತು. ಈಗ ಜೈಲಿಗೆ ಹೋಗಿ ಬಂದ ಮೇಲೆ ಸಾರ್ವಜನಿಕ ಬದುಕಿಗೆ ಬರಬೇಕು ಎಂಬ ಆಸೆಯದೊಂದಿಗೆ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷವೊಂದನ್ನ ಸ್ಥಾಪನೆ ಮಾಡಿದ್ದಾರೆ. ಬಸವಣ್ಣನವರ ತತ್ವದ ಅಡಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ( KRPP) ಸ್ಥಾಪನೆ ಮಾಡಿರುವ ರೆಡ್ಡಿ ಈಗ ಪಕ್ಷ ಸಂಘಟನೆ ಕಾರ್ಯದಲ್ಲಿ ಫುಲ್ ಬ್ಯುಸಿಯಾಗಿ ಓಡಾಟ ನಡೆಸಿದ್ದಾರೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮನೆ ಮಾಡಿದ ಜನಾರ್ದನ ರೆಡ್ಡಿ ಗಂಗಾವತಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಓಡಾಟ ಶುರು ಮಾಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರನ್ನು ಸೆಳೆಯಲು ಮುಂದಾಗಿದ್ದಾರೆ. ಮತ್ತೊಂದು ಕಡೆ ಜನಾರ್ದನ ರೆಡ್ಡಿ ಹೋದ ಕಡೆ ರೆಡ್ಡಿ ಬೆಂಬಲಿಗರು ಮತ್ತು ಆಪ್ತರು ಖುದ್ದಾಗಿ ಆಗಮಿಸಿ ರೆಡ್ಡಿ ಜೊತೆಗೆ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಬೇರೆ ಪಕ್ಷದಲ್ಲಿ ಇದ್ರೂ ಸಹ ಜನಾರ್ದನ ರೆಡ್ಡಿಗೆ ಅದ್ಧೂರಿ ಸ್ವಾಗತ ನೀಡಿ ಮಾತಕತೆ ನಡೆಸುತ್ತಿದ್ದಾರೆ.
ಇತ್ತ ಜನಾರ್ದನ ರೆಡ್ಡಿಯೂ ಸಹ ಅತಿಥಿಗಳಂತೆ ಬಂದು ಆಪ್ತರನ್ನ ಭೇಟಿ ಮಾಡಿ ಹೋಗುತ್ತಿದ್ದಾರೆ. ಯಾವುದೇ ಪಕ್ಷದ ಬಗ್ಗೆ ನೇರವಾಗಿ ಹೇಳಿಕೆ ನೀಡದೇ ಜನಾರ್ದನ ರೆಡ್ಡಿ ಜಾಣತನದ ನಡೆ ಮುಂದುವರೆಸಿದ್ದಾರೆ. ಇತ್ತ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡ ಮುಖಂಡರನ್ನ ಟಾರ್ಗೆಟ್ ಮಾಡಿ ಅವರ ಮನವೊಲಿಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಮತ್ತೊಂದು ಕಡೆ ಕೆಲವರು ಸ್ವಯಂಪ್ರೇರಿತರಾಗಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ ಕೆಲ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ನಿಮ್ಮ ಪಕ್ಷದಿಂದ ಟಿಕೆಟ್ ನೀಡಿ ಅಂತ ಮನವಿ ಮಾಡಿ ಜನಾರ್ದನ ರೆಡ್ಡಿಗೆ ಸನ್ಮಾನಿಸಲಾಗುತ್ತಿದೆ.
ಸದ್ದು ಗದ್ದಲವಿಲ್ಲದೆ ಜನಾರ್ದನ ರೆಡ್ಡಿ ಪಕ್ಷ ಸಂಘಟನೆ:
ಗಾಲಿ ಜನಾರ್ದನ ರೆಡ್ಡಿ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಓಡಾಟ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯಲ್ಲಿ 41 ವಿಧಾನಸಭಾ ಕ್ಷೇತ್ರ ಹಾಗೂ ಗದಗ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ ಸುಮಾರು 20-25 ಸ್ಥಾನ ಗೆಲ್ಲಿಸಿ ತಾವು ಮತ್ತೆ ರಾಜಕಾರಣದಲ್ಲಿ ಜನಾರ್ದನ ರೆಡ್ಡಿ ಕಿಂಗ್ ಮೇಕರ್ ಆಗಲು ಪ್ರಯತ್ನ ಮುಂದುವರೆಸಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಟಿಕೆಟ್ ವಂಚಿತರಾಗುವ ಮುಖಂಡರನ್ನು ಜನಾರ್ದನ ರೆಡ್ಡಿ ಸಂಪರ್ಕಿಸುತ್ತಿದ್ದಾರೆ. ಬಹುತೇಕ ಮುಖಂಡರು ಅವರನ್ನು ಭೇಟಿಯಾದ ನಂತರ ನಿರ್ಧಾರ ತಿಳಿಸಲು ಅವಕಾಶ ಕೇಳಿ ಬಂದಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ಹೊಸ ರಾಜಕೀಯ ಪಕ್ಷ ಕಟ್ಟಿದ ದೇವರಾಜ ಅರಸ್, ಬಂಗಾರಪ್ಪ, ಯಡಿಯೂರಪ್ಪ, ಶ್ರೀರಾಮುಲು ಸಹ ಸಕ್ಸಸ್ ಆಗಿಲ್ಲ. ಆದ್ರೂ ಸಹ ಗಾಲಿ ಜನಾರ್ದನ ರೆಡ್ಡಿ ಪಟ್ಟು ಬಿಡದೇ ಓಡಾಟ ಶುರು ಮಾಡಿದ್ದಾರೆ.
ಮತ್ತೊಂದು ವಿಶೇಷವೆಂದರೆ ಕೆಲವರು ರೆಡ್ಡಿ ಪಕ್ಷದಿಂದ ಸ್ಪರ್ಧಿಸಿದರೆ ಹೆಚ್ಚಿನ ಹಣವನ್ನು ಸಿಗುತ್ತೆ ಎಂಬ ಮಹಾದಾಸೆಯಿಂದ ರೆಡ್ಡಿ ಸುತ್ತಮುತ್ತ ತಿರುಗಾಟ ಮಾಡಿ ಚುನಾವಣೆಗೆ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದಾರೆ. ಆದ್ರೆ ರೆಡ್ಡಿ ಅಭ್ಯರ್ಥಿಗಳಿಗೆ ಸ್ವಯಂ ಸಾಮರ್ಥ್ಯಕ್ಕೆ ನಾನು ಒಂದಿಷ್ಟು ಹಣದ ಸಹಾಯ ಮಾಡಬಹುದು ಎಂದು ಕೂಡ ರೆಡ್ಡಿ ಹೇಳಿಕೊಂಡು ಓಡಾಟ ಶುರು ಮಾಡಿದ್ದಾರೆ. ಬಹುತೇಕ ಕಡೆಯಲ್ಲಿ ಜನಾರ್ದನ ರೆಡ್ಡಿ ಬಹುತೇಕ ರೆಡ್ಡಿ ಲಿಂಗಾಯತ್, ಲಿಂಗಾಯತ್ ಹಾಗು ಮುಸ್ಲಿಂ ನಾಯಕರನ್ನು ಹೆಚ್ಚಾಗಿ ಭೇಟಿ ಮಾಡಿ ಅವರಿಂದ ಮಾಹಿತಿ ಸಂಗ್ರಹಿಸಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತಯಾರಿ ಶುರು ಮಾಡಿದ್ದಾರೆ. ಹೀಗಾಗಿ ರೆಡ್ಡಿ ಹೋದ ಕಡೆಯಲ್ಲಿ ಬಹುತೇಕ ಮುಸ್ಲಿಂ ಸಮುದಾಯದವರು, ರೆಡ್ಡಿ ಜನಾಂಗದವರು ಕಾಣಿಸಿಕೊಳ್ಳುತ್ತಿದ್ದಾರೆ.
ವಾಟ್ಸಾಪ್ ಗ್ರೂಪ್ ಮಾಡಿ ರೆಡ್ಡಿ ಪಕ್ಷದ ಬಗ್ಗೆ ಸಂದೇಶ ರವಾನೆ:
ಡಿಸೆಂಬರ್ 25ರಂದು ಜನಾರ್ದನ ರೆಡ್ಡಿ ಹೊಸ ಪಕ್ಷವೊಂದು ಘೋಷಣೆ ಮಾಡಿದ್ರು. ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿದ ಜನಾರ್ದನ ರೆಡ್ಡಿ 41 ವಿಧಾನಸಭಾ ಕ್ಷೇತ್ರದಲ್ಲಿ ಗೆಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಮುಖ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಟಿಕೆಟ್ ವಂಚಿತರಾದ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಲು ರೆಡ್ಡಿ ರಾಜಕೀಯ ತಂತ್ರಗಾರಿಕೆ ನಡೆಸಿದ್ದಾರೆ. ಅಂತಹ ಅಭ್ಯರ್ಥಿಗಳನ್ನ ಭೇಟಿಗೂ ಮುನ್ನ ಜನಾರ್ದನ ರೆಡ್ಡಿ ತಮ್ಮ ಆಪ್ತರ ಸಹಾಯದಿಂದ ಕ್ಷೇತ್ರದಲ್ಲಿ ಮಾಧ್ಯಮ ಮತ್ತು ಸಂಘಟನೆಗಳ ಮುಖಂಡರನ್ನ ಒಳಗೊಂಡ ವಾಟ್ಸಾಪ್ ಗ್ರೂಪ್ ಗಳನ್ನ ಮಾಡಿಸಿ ಜನಾರ್ದನ ರೆಡ್ಡಿ ಓಡಾಟ ಬಗ್ಗೆ ಮೆಸೇಜ್ ಗಳನ್ನು ರವಾನಿಸಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ ರೆಡ್ಡಿ ತಮ್ಮ ಆಪ್ತರನ್ನ ಗೌಪ್ಯವಾಗಿ ಭೇಟಿ ಮಾಡಿ ಹೊಸ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಲು ಶುರು ಮಾಡಿದ್ದಾರೆ.
ಜನಾರ್ದನ ರೆಡ್ಡಿ ಭೇಟಿ ಮಾಡಿದ ರೂಪಾ ಶ್ರೀನಿವಾಸ ನಾಯಕ
ರಾಯಚೂರು ಜಿಲ್ಲೆಯಲ್ಲಿ ರೈತ ಹೋರಾಟಗಳಿಂದ ಗುರುತಿಸಿಕೊಂಡ ರೂಪಾ ಶ್ರೀನಿವಾಸ್ ನಾಯಕ, ದೇವದುರ್ಗ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ಅದರ ಭಾಗವಾಗಿ ಗಾಲಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ದೇವದುರ್ಗ ಕ್ಷೇತ್ರದ ಟಿಕೆಟ್ ನೀಡುವಂತೆ ಜನಾರ್ದನ ರೆಡ್ಡಿ ಬಳಿ ರೂಪಾ ಶ್ರೀನಿವಾಸ್ ನಾಯಕ ಮನವಿ ಮಾಡಿದ್ರು. ಅಷ್ಟೇ ಅಲ್ಲದೇ ತಾವು ಕಳೆದ 2019ರಿಂದ ಮಾಡಿರುವ ಹೋರಾಟಗಳನ್ನು ಜನಾರ್ದನ ರೆಡ್ಡಿಗೆ ತೋರಿಸಿ ದೇವದುರ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದ್ರೆ ಸ್ಪರ್ಧೆಗೆ ನಾನು ಸಿದ್ದವಾಗಿದ್ದೇನೆ ಎಂಬುವುದನ್ನು ಜನಾರ್ದನ ರೆಡ್ಡಿ ಅವರಿಗೆ ತಿಳಿಸಿ ಸನ್ಮಾನಿಸಿ ಬಂದಿದ್ರು.
ಬಳ್ಳಾರಿಯಲ್ಲಿ ಸಹೋದರರ ಸವಾಲ್: 'ಗಣಿಧಣಿ' ವಿರುದ್ಧ ಸೋಮಶೇಖರ್ ರೆಡ್ಡಿ ಕಿಡಿ
ಯಾರು ಈ ರೂಪಾ ಶ್ರೀನಿವಾಸ್ ನಾಯಕ:
ರಾಯಚೂರು ಮಾಜಿ ಸಂಸದ ವೆಂಕಟೇಶ ನಾಯಕ ಅವರ ಮೊಮ್ಮಗ ಶ್ರೀನಿವಾಸ್ ನಾಯಕ ಅವರ ಪತ್ನಿ ರೂಪಾ ಶ್ರೀನಿವಾಸ್ ನಾಯಕ. ರೂಪಾ ಶ್ರೀನಿವಾಸ್ ನಾಯಕ ಅವರು ಎಂಸ್ಸಿ (ಭೌತಶಾಸ್ತ್ರ) ಸ್ನಾತಕೋತ್ತರ ಪದವೀಧರರು. ಯಾದಗಿರಿ ಜಿಲ್ಲೆ ಸುರಪುರ ಪಟ್ಟಣದ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ 2012ರಿಂದ 2015ರವೆಗೆ ಸೇವೆ ಸಲ್ಲಿಸಿದ್ದ, ಇವರು ಮುಂದೆ ರಾಯಚೂರು ಜಿಲ್ಲೆಯಲ್ಲಿ ವಾಸವಾಗಿದ್ದರು. 2018-19ರಿಂದ ರೈತ ಸಂಘಟನೆಗಳಲ್ಲಿ ಗುರುತಿಸಿಕೊಂಡು ರೂಪಾ ಶ್ರೀನಿವಾಸ್ ನಾಯಕ ಕರ್ನಾಟಕ ರಾಜ್ಯ ರೈತಸಂಘದ ಮಹಿಳಾ ಜಿಲ್ಲಾಧ್ಯಕ್ಷರಾಗಿ ಗುರುತಿಸಿಕೊಂಡು ಹತ್ತಾರು ಹೋರಾಟ ಮಾಡುತ್ತಾ ಬಂದಿದ್ದಾರೆ. ಸದ್ಯ 2023ರ ವಿಧಾನಸಭಾ ಚುನಾವಣೆಯಲ್ಲಿ ದೇವದುರ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಕಸರತ್ತು ನಡೆಸಿದ್ದಾರೆ. ಅದರ ಭಾಗವಾಗಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ ದೇವದುರ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಆದ್ರೆ ಜನಾರ್ದನ ರೆಡ್ಡಿ ಮಾತ್ರ ಇನ್ನೂ ಯಾವುದೇ ಭರವಸೆ ನೀಡಿಲ್ಲ. ಆದ್ರೂ ಇತ್ತ ಪಟ್ಟು ಬಿಡದೇ ರೂಪಾ ಶ್ರೀನಿವಾಸ್ ನಾಯಕ ದೇವದುರ್ಗ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳು ಮಾಡುತ್ತಾ ಕ್ಷೇತ್ರದಲ್ಲಿ ತಿರುಗಾಟ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್ ಸವಾಲ್: ಸೋಮಶೇಖರ್‌ರೆಡ್ಡಿ ವಿರುದ್ಧ ಜನಾರ್ಧನರೆಡ್ಡಿ ಪತ್ನಿ ಸ್ಪರ್ಧೆ
ಒಟ್ಟಿನಲ್ಲಿ ಗಾಲಿ ಜನಾರ್ದನ ರೆಡ್ಡಿ ಪಕ್ಷ ಬಂದ ಮೇಲೆ ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚಾಗಿವೆ. ಮೂರು ಪಕ್ಷದ ಟಿಕೆಟ್ ಕೈ ತಪ್ಪಿದ್ರೆ ಜನಾರ್ದನ ರೆಡ್ಡಿ ಪಕ್ಷ ಇದೇ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿದೆ.