ಕನಕಪುರ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಹಾಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವ ಮೂಲಕ ಜನರು ಆರೋಗ್ಯ ಸೌಲಭ್ಯ ಮತ್ತು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುವುದು ನನ್ನ ಗುರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನಕಪುರ (ಜೂ.04): ಕನಕಪುರ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಹಾಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವ ಮೂಲಕ ಜನರು ಆರೋಗ್ಯ ಸೌಲಭ್ಯ ಮತ್ತು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುವುದು ನನ್ನ ಗುರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ತಾಲೂಕಿನ ಹಾರೋಹಳ್ಳಿ, ಕಬ್ಬಾಳು, ಕಲ್ಲಹಳ್ಳಿ, ಶಿವನಹಳ್ಳಿ, ಸಾತನೂರು, ದೊಡ್ಡಾಲಹಳ್ಳಿ, ಕೋಡಿಹಳ್ಳಿ ಹಾಗೂ ಕನಕಪುರ ಟೌನ್‌ನಲ್ಲಿ ಪ್ರವಾಸ ಕೈಗೊಂಡ ಡಿ.ಕೆ.ಶಿವಕುಮಾರ್ ಮತದಾರರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಕನಕಪುರ ಕ್ಷೇತ್ರದ ಅಭಿವೃದ್ಧಿ ಹಾಗೂ ಮಾದರಿ ಕ್ಷೇತ್ರ ಮಾಡಲು ತೀರ್ಮಾನಿಸಿದ್ದೇನೆ. ಈ ಹಿಂದೆ ಈ ಕ್ಷೇತ್ರಕ್ಕೆ ಮೆಡಿಕಲ… ಕಾಲೇಜು ಮಂಜೂರಾಗಿತ್ತು. ಆದರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ರದ್ದು ಮಾಡಿ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ಕನಕಪುರಕ್ಕೆ ಆದ ಅನ್ಯಾಯ ಸರಿಪಡಿಸುವುದು ನನ್ನ ಮೊದಲ ಕೆಲಸ. ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ ಉದ್ದೇಶದ ಅಡಿಯಲ್ಲಿ ಈಗಾಗಲೇ ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪ ಮಾಡಿದ್ದೇನೆ. ಶ್ರೀಘ್ರದಲ್ಲಿಯೇ ಕಾಮಗಾರಿ ಆರಂಭಿಸಿ ಕ್ಷೇತ್ರದ ಮಹಾನ್ ಜನತೆಗೆ ಕೊಟ್ಟಮಾತನ್ನು ಉಳಿಸಿಕೊಳ್ಳುತ್ತೇನೆ ಎಂದರು.
ಮಕ್ಕಳ ದಾಖಲಾತಿಗೆ ವಾಮಮಾರ್ಗ ಹಿಡಿದ ಪೋಷಕರು: ಎಲ್‌ಕೆಜಿಗೆ 4 ವರ್ಷ, ಯುಕೆಜಿಗೆ 5 ವರ್ಷ
ಕನಕಪುರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಬಂಧ ನಾನು ಹಾಗೂ ಸುರೇಶ್ ಗುತ್ತಿಗೆದಾರರನ್ನು ಭೇಟಿ ಮಾಡಿ ಈ ಕಾಮಗಾರಿ ಮುಕ್ತಾಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಾನು ಕ್ಷೇತ್ರದ ಎಲ್ಲ ಜನರ ಜೇಬಿಗೆ ಹಣ ಹಾಕಲು ಸಾಧ್ಯವಿಲ್ಲ. ಆದರೆ, ನಿಮ್ಮ ಆಸ್ತಿ ಮೌಲ್ಯ ಹೆಚ್ಚಾಗುವಂತೆ ಮಾಡುತ್ತೇನೆ. ಈ ಹಿನ್ನೆಲೆಯಲ್ಲಿ ರೇಷ್ಮೆ, ಹೈನುಗಾರಿಕೆ, ತೋಟಗಾರಿಕೆಯಲ್ಲಿ ಆರ್ಥಿಕ ಶಕ್ತಿ ನೀಡಲು ಪ್ರಯತ್ನ ಮಾಡಿದ್ದೇವೆ. ಕೆರೆ ತುಂಬಿಸಲು ಆದ್ಯತೆ ನೀಡಲಾಗಿದೆ. ಕಳೆದ ಬಾರಿ ಕೆರೆ ತುಂಬಿಸಿ ಬತ್ತಿಹೋಗಿದ್ದ ಕೊಳವೆ ಬಾವಿಗೆ ಮರು ಜೀವ ನೀಡಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕನಕಪುರ ಹಾಗೂ ರಾಮನಗರ ಜಿಲ್ಲೆಗೆ ಪ್ರತಿ ವಾರ ಒಂದು ದಿನ ಮೀಸಲಿಡುತ್ತೇನೆ. ಇಲ್ಲಿ ಪ್ರತ್ಯೇಕ ಕಚೇರಿ ಆರಂಭಿಸುತ್ತೇನೆ. ನಾನು ನಿಮ್ಮನ್ನು ಭೇಟಿ ಮಾಡಿ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ತಪ್ಪುಗಳನ್ನು ಮನ್ನಿಸಿ ಪಕ್ಷಾತೀತವಾಗಿ ನನ್ನ ಹಾಗೂ ಪಕ್ಷದ ಮೇಲೆ ವಿಶ್ವಾಸವಿಟ್ಟು ಅಣ್ಣತಮ್ಮ, ಮನೆ ಮಗನ ಪ್ರೀತಿ ತೋರಿ ಆಶೀರ್ವದಿಸಿ ಅತಿ ಹೆಚ್ಚಿನ ಮತಗಳನ್ನು ನೀಡಿದ್ದೀರಿ. ಆ ಮೂಲಕ ರಾಜ್ಯ, ದೇಶಕ್ಕೆ ಹಾಗೂ ಎಲ್ಲ ಪಕ್ಷಗಳಿಗೆ ಒಂದು ಸ್ಪಷ್ಟ ಸಂದೇಶ ಕೊಟ್ಟಿದ್ದೀರಿ. ಇದಕ್ಕಾಗಿ ನಿಮ್ಮೆಲ್ಲರಿಗು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನಾನು ಉಪಮುಖ್ಯಮಂತ್ರಿಯಾಗಿದ್ದರೂ ಇಂದು ನಿಮ್ಮಲ್ಲಿ ಒಬ್ಬನಾಗಿ, ನಿಮ್ಮಂತೆಯೇ ಕಾರ್ಯಕರ್ತನಾಗಿ ಬಂದಿದ್ದೇನೆ. ನಿಮ್ಮ ಋುಣ ತೀರಿಸಿ, ನಿಮ್ಮ ಸೇವೆ ಯಾವ ರೀತಿ ಮಾಡಬೇಕು ಎಂದು ಅನೇಕ ನಾಯಕರಿಂದ ಸಲಹೆ ಪಡೆಯುತ್ತಿದ್ದೇನೆ. ನಾನು ಯಾವುದೇ ಹುದ್ದೆ ಅಲಂಕರಿಸಿದರು ಅಧಿಕಾರದ ಮದ ನನ್ನ ತಲೆಗೆ ಏರುವುದಿಲ್ಲ. ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಾವು ಗೆದ್ದಿದ್ದೇವೆ ಎಂದು ಬೇರೆ ಪಕ್ಷದ ಕಾರ್ಯಕರ್ತರನ್ನು ಹೀಯಾಳಿಸಬೇಡಿ. ಜೆಡಿಎಸ್, ಬಿಜೆಪಿ ಸೇರಿದಂತೆ ಅನ್ಯ ಪಕ್ಷದವರ ಜೊತೆ ಪ್ರೀತಿ ವಿಶ್ವಾಸಗಳಿಸಿ ಜೊತೆಯಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಯಲಿದ್ದು, ಅದಕ್ಕೆ ನೀವು ಸಿದ್ಧರಾಗಬೇಕು. ಉಳಿದಿರುವ ಬೇರೆ ಪಕ್ಷದ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ನಮಗೆ ಕುಟುಂಬ, ಹಳ್ಳಿ ಹಾಗೂ ಪಂಚಾಯ್ತಿ ಮಟ್ಟದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಜೆಡಿಎಸ್ ಪರಿಸ್ಥಿತಿ ಬಗ್ಗೆ ನಾನು ಈಗಾಗಲೇ ಹೇಳಿದ್ದೇನೆ. ದೇವರು ಅವರಿಗೆ ಎಲ್ಲಾ ರೀತಿ ಅವಕಾಶ ನೀಡಿದ್ದು, ನನಗೆ ಅವಕಾಶ ನೀಡುವಂತೆ ಕೇಳಿದ್ದೆ. ನೀವು ಅವಕಾಶ ನೀಡಿದ್ದೀರಿ, ಕೆಲಸ ಮಾಡಿ ತೋರಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು.
ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ: ಕಬ್ಬಾಳಿನಲ್ಲಿರುವ ಕಬ್ಬಾಳಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಕಾರ್ಯಕರ್ತರು ಬೃಹತ್ ಕೊಬ್ಬರಿ ಹಾರ ಹಾಕಿ ಜನಪದ ಕಲಾತಂಡಗಳ ಮೂಲಕ ಸ್ವಾಗತ ಕೋರಲಾಯಿತು. ಕಲ್ಲಹಳ್ಳಿ ಯಲ್ಲಿ ಮಹಿಳೆಯರು ಪೂರ್ಣ ಕುಂಭಕಳಶದೊಂದಿಗೆ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡರು - ಕಾರ್ಯಕರ್ತರು ಬೃಹತ್ ಸೇಬಿನ ಹಾರವನ್ನು ಹಾಕುವ ಮೂಲಕ ಬರಮಾಡಿಕೊಂಡರು. ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರ ಚಿಕ್ಕತಿರುಪತಿ ಎಂದೇ ಖ್ಯಾತಿ ಪಡೆದಿರುವ ಕಲ್ಲಹಳ್ಳಿಯ ಶ್ರೀ ಶ್ರೀನಿವಾಸ ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ಪೂಜೆ ಸಲ್ಲಿಸಿದರು.
ಆನಂತರ ಕನಕಪುರಲ್ಲಿನ ಸ್ವಾತಂತ್ರ್ಯ ಹೋರಾಟಗಾರರಾದ ಎಸ್.ಕರಿಯಪ್ಪ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ನಗರಸಭೆ ಮಾಜಿ ಅಧ್ಯಕ್ಷರಾದ ದಿಲೀಪ್, ಕೃಷ್ಣಮೂರ್ತಿ, ಮುಖಂಡರಾದ ನಾರಾಯಣಗೌಡ, ರಾಯಸಂದ್ರ ರವಿ, ತಾಪಂ ಮಾಜಿ ಅಧ್ಯಕ್ಷ ಹೊಸಕೋಟೆ ಪುರುಷೋತ್ತಮ ಮತ್ತಿತರರು ಹಾಜರಿದ್ದರು.
ಗ್ಯಾರಂಟಿಗಾಗಿ ಪಿಎಚ್‌ಎಚ್ ಕಾರ್ಡ್ ಹೊಂದುವ ಬಯಕೆ: ಆನ್‌ಲೈನ್ ಪೋರ್ಟಲ್ ಸ್ಥಗಿತ
ಕನಕಪುರ ಕ್ಷೇತ್ರದಲ್ಲಿ ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಜೂಜು, ಸಣ್ಣಪುಟ್ಟಜಗಳ ವಿಚಾರದಲ್ಲಿ ನನಗೆ ಯಾವುದೇ ದೂರು ಬರಬಾರದು. ತಾಲೂಕು ಪಂಚಾಯ್ತಿ, ಪೊಲೀಸ್ ಠಾಣೆ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಲಂಚಕ್ಕೆ ಕೊನೆಯಾಡಬೇಕು. ನಾವು 40 ಪರ್ಸೆಂಟ್ ಕಮಿಷನ್ ವಿರುದ್ಧ ಹೋರಾಟ ಮಾಡಿಕೊಂಡು ಬಂದವರು. ಕಾನೂನುಬಾಹಿರವಾಗಿ ಯಾವುದೇ ಕೆಲಸ ಮಾಡಬಾರದು.
-ಡಿ.ಕೆ.ಶಿವಕುಮಾರ್ , ಉಪಮುಖ್ಯಮಂತ್ರಿ.