ಕಾಂಗ್ರೆಸ್ ಐದು ಉಚಿತ ಘೋಷಣೆ ಮಾಡಿ 24 ಗಂಟೆ ಅವಧಿ ಕೊಟ್ಟಿತ್ತು, ಆದರೆ ಇದು ಅನುಷ್ಠಾನ ಆಗದೇ ಸರ್ಕಾರಿ ನೌಕರರಿಗೆ ಉಚಿತ ಏಟಿನ ಭಾಗ್ಯ ಸಿಗ್ತಾ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಮಂಗಳೂರು (ಮೇ.27): ಕಾಂಗ್ರೆಸ್ ಐದು ಉಚಿತ ಘೋಷಣೆ ಮಾಡಿ 24 ಗಂಟೆ ಅವಧಿ ಕೊಟ್ಟಿತ್ತು, ಆದರೆ ಇದು ಅನುಷ್ಠಾನ ಆಗದೇ ಸರ್ಕಾರಿ ನೌಕರರಿಗೆ ಉಚಿತ ಏಟಿನ ಭಾಗ್ಯ ಸಿಗ್ತಾ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ದ.ಕ ಜಿಲ್ಲೆಯ ಆರು ಜನ ಬಿಜೆಪಿ ಶಾಸಕರ ಜೊತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಉಚಿತ ಯೋಜನೆಗಳನ್ನು ಕೊಡುವಲ್ಲಿ ವಿಫಲ ಆಗಿದೆ. ದ್ವೇಷದ ರಾಜಕಾರಣ ಮಾಡ್ತಾ ಇದೆ, ಕಾಂಗ್ರೆಸ್ ಬಂದ ನಂತರ ಗಲಾಟೆಗಳು ಆಗ್ತಿದೆ. ದ.ಕ ಜಿಲ್ಲೆಯಲ್ಲೂ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡ್ತಿದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ಕೇಸ್ ಹಾಕಿದ್ದಾರೆ. ಅವರು ಸಿದ್ದರಾಮಯ್ಯ ಸಿಎಂ ಆಗಿದ್ದಾಗ 24 ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ ಅಂದಿದ್ದರು. ಆದರೆ ಅದರ ಮೇಲೆ ಕೇಸು ಹಾಕುವ ಪ್ರಕ್ರಿಯೆ ನಡೆದಿದೆ. ಕ್ಷಮೆ ಕೇಳಿದ್ರೂ ಅಶ್ವಥ್ ನಾರಾಯಣ್ ಮೇಲೆ ಪ್ರಕರಣ ದಾಖಲಿಸಿದ್ದಾರೆ, ಕಾರ್ಯಕರ್ತರನ್ನ ಬಿಟ್ಟು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವ ಗೂಂಡಾಗಿರಿ ಕೆಲಸ ಆಗ್ತಿದೆ. ಕಾಂಗ್ರೆಸ್ ಗೆ ತಾಕತ್ತಿದ್ರೆ ಪಾಕಿಸ್ತಾನ ಘೋಷಣೆ ಕೂಗಿದವರನ್ನ ಬಂಧಿಸಿ. ಇಲ್ಲದಿದ್ದರೆ ಅಂಥವರು ನಮ್ಮ ಕಾರ್ಯಕರ್ತರು ಅಂತ ಒಪ್ಪಿಕೊಳ್ಳಿ ಎಂದು ಕಟೀಲ್ ಹೇಳಿದರು.
ಮೇಕೆದಾಟು ಪಾದಯಾತ್ರೆ: 8 ಕೇಸ್ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಡಿಕೆಶಿ
ನೆಟ್ಟಾರು ಪತ್ನಿಗೆ ಮತ್ತೆ ಉದ್ಯೋಗ ನೀಡಿ: ಪ್ರವೀಣ್ ನೆಟ್ಟಾರು ಪತ್ನಿಗೆ ನಮ್ಮ ಸರ್ಕಾರ ಪರಿಹಾರ ಕೊಟ್ಟು ಪತ್ನಿಗೆ ಉದ್ಯೋಗ ಕೊಟ್ಟಿತ್ತು. ಅನುಕಂಪದ ಆಧಾರದಲ್ಲಿ ಕೊಟ್ಟ ಉದ್ಯೋಗವನ್ನು ತೆಗೆಯಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಅವರನ್ನು ತೆಗೆದು ಹಾಕಲಾಗಿದೆ. ಮಾನವೀಯತೆ ಇರಲಿ, ಸಿಎಂ ಅವರಿಗೆ ತಕ್ಷಣ ಮತ್ತೆ ಉದ್ಯೋಗ ನೀಡಬೇಕು. ಒಂದು ವೇಳೆ ನೀವು ಕೊಡದೇ ಇದ್ದರೂ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಉದ್ಯೋಗ ಕೊಡ್ತೇವೆ. ಆದರೆ ಈ ರೀತಿಯ ದ್ವೇಷ ರಾಜಕಾರಣ ಸರಿಯಲ್ಲ, ಅದು ಅನುಕಂಪದ ಉದ್ಯೋಗ. ಉಚಿತ ಭಾಗ್ಯಗಳ ಮಾನದಂಡ ಏನು ಅಂತ ತಕ್ಷಣ ಹೇಳಿ ಎಂದರು.
ಉಚಿತ ಬಸ್, ಉಚಿತ ಕರೆಂಟ್ ಎಲ್ಲದಕ್ಕೂ ಮಾನದಂಡ ಹೇಳಿದಾರೆ. ಇದರಿಂದ ಜನ ಆಕ್ರೋಶಿತರಾಗಿ ಗಲಾಟೆ ಮಾಡ್ತಿದಾರೆ. ಇದೆಲ್ಲದಕ್ಕೂ ಕಾಂಗ್ರೆಸ್ ಹೊಣೆಯಾಗುತ್ತೆ, ನಾವು ಒಂದು ತಿಂಗಳು ಕಾಯ್ತೇವೆ. ಇಲ್ಲದೇ ಇದ್ರೆ ನಾವು ಹೋರಾಟ ಮಾಡ್ತೇವೆ, ಕಾನೂನು ಹೋರಾಟ ಕೂಡ ಮಾಡ್ತೇವೆ. ನಮ್ಮ ವಿರುದ್ದ ತನಿಖೆ ಮಾಡ್ತೀವಿ ಅಂತ ಹೇಳಿದ್ದೀರಿ, ಮಾಡಿ. ಅದರ ಜೊತೆಗೆ ಸಿದ್ದರಾಮಯ್ಯ ವಿರುದ್ದವೂ ಲೋಕಾಯುಕ್ತ ತನಿಖೆ ಮಾಡಿ. ಕರಾವಳಿ ಜಿಲ್ಲೆಗೆ ಮಂತ್ರಿ ಪಟ್ಟ ಕೊಡದ ನೋವು ನಮಗೆ ಇದೆ. ಆದರೂ ನಾವು ಜಿಲ್ಲೆಯ ಅಭಿವೃದ್ಧಿಗೆ ನಾವು ಸರ್ಕಾರಕ್ಕೆ ಬೆಂಬಲ ಕೊಡ್ತೇವೆ. ಜಿಲ್ಲೆಯ ಜನ ನಮ್ಮನ್ನ ಜಿಲ್ಲೆಯಲ್ಲಿ ಆಶೀರ್ವಾದಿಸಿದ್ದಾರೆ.
ಹಾಗಾಗಿ ಕಾಂಗ್ರೆಸ್ ಗೆ ಇಲ್ಲಿನ ಅಭಿವೃದ್ಧಿಗಾಗಿ ನಮ್ಮ ಪೂರ್ಣ ಬೆಂಬಲ ಇದೆ. ಆದರೆ ದ್ವೇಷ ರಾಜಕಾರಣ, ಗಲಾಟೆಯಂಥ ರಾಜಕಾರಣ ಬೇಡ. ರಾಜಕಾರಣದಲ್ಲಿ ವ್ಯತ್ಯಾಸ ಸಹಜ, ಅದನ್ನು ಸಮಾನವಾಗಿ ಸ್ವೀಕರಿಸ್ತೇವೆ. ನಮ್ಮ ಯಾವುದೇ ಶಾಸಕರ ಬಗ್ಗೆ ದ್ವೇಷದ ರಾಜಕಾರಣ ಮಾಡಿದ್ರೆ ಒಟ್ಟಾಗಿ ನಾವು ಎದುರಿಸ್ತೇವೆ. ಪ್ರವೀಣ್ ನೆಟ್ಟಾರು ಪತ್ನಿ ಕೆಲಸದ ವಿಚಾರದಲ್ಲಿ ನಮ್ಮ ಸರ್ಕಾರವೇ ಇರುತ್ತೆ ಅಂತ ಆದೇಶ ಮಾಡಿದ್ದೆವು. ಆದರೆ ಸರ್ಕಾರ ಬದಲಾಗಿದೆ, ಹೀಗಾಗಿ ಮಾನವೀಯತೆ ನೆಲೆಯಲ್ಲಿ ಸಿಎಂ ಮುಂದುವರೆಸಲಿ. ಇದರ ಜೊತೆಗೆ 20 ಸಾವಿರ ಕೋಟಿ ಅಭಿವೃದ್ಧಿ ಯೋಜನೆ ಸ್ಥಗಿತ ಮಾಡಿದ್ದಾರೆ. ಜುಲೈವರೆಗೆ ಅವರಿಗೆ ಸಮಯ ಕೊಡ್ತೇವೆ, ಆ ಬಳಿಕ ಹೋರಾಟ ಮಾಡ್ತೇವೆ.
ಪ್ರಿಯಾಂಕ್ ಖರ್ಗೆ ತಮ್ಮ ಭಾಷಣಗಳಲ್ಲೇ ಆರ್.ಎಸ್.ಎಸ್ ನಿಷೇಧದ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್ ಈ ಹಿಂದೆ ಮೂರು ಬಾರಿ ಆರ್.ಎಸ್.ಎಸ್ ಬ್ಯಾನ್ ಮಾಡಿತ್ತು. ಆದರೆ ಕೋರ್ಟ್ ಆರ್.ಎಸ್.ಎಸ್ ಒಂದು ದೇಶಭಕ್ತ ಸಂಘಟನೆ ಅಂತ ಹೇಳಿತ್ತು. ಪ್ರಧಾನಿ ಮೋದಿ, ನನ್ನನ್ನೂ ಸೇರಿಸಿ ಬಹುತೇಕರು ಎಲ್ಲರೂ ಸಂಘದವರೇ ಆಗಿದ್ದಾರೆ. ಪುತ್ತೂರಿನ ಬಗ್ಗೆ ಅವಲೋಕನ ಸಭೆ ನಡೀತಿದೆ, ಅದರ ಬಗ್ಗೆ ನೋಡುವ, ಅರುಣ್ ಪುತ್ತಿಲ ಬಗ್ಗೆ ಅಪಾರ ಗೌರವ ಇದೆ, ಪ್ರಜಾಪ್ರಭುತ್ವದಲ್ಲಿ ಯಾರೂ ಚುನಾವಣೆಗೆ ನಿಲ್ಲಬಹುದು ಸಂಘದ ಮತ್ತು ಪಕ್ಷದ ಒಳಗಿನ ಎಲ್ಲವನ್ನೂ ಸರಿ ಮಾಡ್ತೇವೆ ಎಂದರು.
ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮೇಲ್ಮನೆ 5 ಸ್ಥಾನಗಳಿಗೆ ಸದ್ಯದಲ್ಲೇ ಚುನಾವಣೆ?
ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ನಾನು ಖಂಡಿಸಿದ್ದೆ, ಖಂಡಿಸ್ತೇನೆ. ಬಿಜೆಪಿ ಬ್ಯಾನರ್ ಹಾಕಿದವರ ವಿರುಧ್ಧ ನಾವು ದೂರು ಕೊಟ್ಟಿಲ್ಲ. ಕಾರ್ಯಕರ್ತರು ತಪ್ಪು ಕಲ್ಪನೆಯಿಂದ ಫೇಸ್ ಬುಕ್ ನಲ್ಲಿ ಹಾಕಿರಬಹುದು. ನಾವು ಪೊಲೀಸರಿಗೆ ಒತ್ತಡ ಹಾಕಿಲ್ಲ, ಕಾಂಗ್ರೆಸ್ ನವರೇ ಹಾಕಿರಬಹುದು. ರಾಜಕಾರಣದಲ್ಲಿ ಟೀಕೆಗಳನ್ನ ಸ್ವೀಕರಿಸಬೇಕು, ಅದಕ್ಕೆ ಉತ್ತರ ಕೊಡಲ್ಲ. ಟೀಕೆಗಳು ಒಳ್ಳೆಯ ರೀತಿಯಲ್ಲಿ ಇರಬೇಕು, ಅದನ್ನು ಸ್ವೀಕರಿಸ್ತೇನೆ. ನಾವು ಯಾವುದೇ ಟೀಕೆಗಳನ್ನ ಸ್ವಾಗತಿಸ್ತೇವೆ ಎಂದು ಕಟೀಲ್ ಹೇಳಿದರು.