ಮಹದೇಶ್ವರನ ಆಶೀರ್ವಾದದಿಂದ ಚಾಮರಾಜನಗರ ಮಾದರಿ ಜಿಲ್ಲೆಯಾಗಿಸುವಾಸೆ: ಸಚಿವ ಸೋಮಣ್ಣ

By Kannadaprabha News  |  First Published Apr 12, 2023, 10:22 PM IST

ಮಲೆ ಮಹದೇಶ್ವರ ಆಶೀರ್ವಾದ ಪಡೆದು ಮಾದರಿ ಜಿಲ್ಲೆ ಮಾಡಬೇಕು ಎಂಬುದು ನನ್ನ ಆಸೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು. 


ಚಾಮರಾಜನಗರ (ಏ.12): ಮಲೆ ಮಹದೇಶ್ವರ ಆಶೀರ್ವಾದ ಪಡೆದು ಮಾದರಿ ಜಿಲ್ಲೆ ಮಾಡಬೇಕು ಎಂಬುದು ನನ್ನ ಆಸೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು. ಚಾಮರಾಜನಗರದ ಸೂರ್ಯೋದಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನಾನು ಚುನಾವಣೆ ಗಿಮಿಕ್‌ಗಾಗಿ ಮಾತನಾಡುತ್ತಿಲ್ಲ. ಚಾಮರಾಜನಗರ ಜಿಲ್ಲಾ ಕೇಂದ್ರವೂ ಅಲ್ಲ, ತಾಲೂಕು ಅಲ್ಲದ ಸ್ಥಿತಿಯಲ್ಲಿದೆ. ಚಾಮರಾಜನಗರ ಅಭಿವೃದ್ಧಿ ಮಾಡಬೇಕು. ಭಗವಂತನ ಅಶಿರ್ವಾದದಿಂದ ಒಳ್ಳೆ ಕಾಲ ಬರ್ತಿದೆ. ಹಾಗಂತ ಕೈ ಕಟ್ಟಿ ಕುಳಿತುಕೊಳ್ಳಬಾರದು. ನಿಮ್ಮ10 ವರ್ಷದ ಅಭಿವೃದ್ಧಿ ಕನಸುಗಳನ್ನು ಒಳ್ಳೆಯದು ಮಾಡೋಣ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ 1490 ಕೋಟಿ ಯೋಜನೆಗೆ ಡಿಪಿಆರ್‌ ಸಿದ್ಧಪಡಿಸಲಾಗಿದ್ದು, ಟೆಂಡರ್‌ ಹಂತದಲ್ಲಿದೆ. ಮುಂದಿನ 2 ವರ್ಷಗಳಲ್ಲಿ ಎಲ್ಲ ಕರೆಗಳಿಗೆ ನೀರು ತುಂಬಿಸುವ ದೂರದೃಷ್ಟಿಯನ್ನು ನಾವು ಹೊಂದಿದ್ದೇವೆ, ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಆದರೆ, ಇಲ್ಲಿನ ಜನರು ಸ್ವಾಭಿಮಾನದಲ್ಲಿ ಬೇರೆಲ್ಲಾ ಜಿಲ್ಲೆಗಳಿಗಿಂತ ಮುಂದೆ ಇದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಕಾಲದಲ್ಲಿ ಕೈಗೊಂಡುರಾಜ್ಯದಲ್ಲೇ ಯಶಸ್ವಿಯಾಯಿತು ಎಂದರು.

Tap to resize

Latest Videos

undefined

ಬಿಜೆಪಿ ಟಿಕೆಟ್ ಮಿಸ್ ಆಗಲು ಬಿಎಸ್‌ವೈ, ವಿಜಯೇಂದ್ರ ಕಾರಣ: ಗೂಳಿಹಟ್ಟಿ ಶೇಖರ್‌

ರೈತ ನಾಯಕರು ಮತ್ತು ಜಿಲ್ಲೆಯ ಸರ್ವತೋಮುಖ ಬೆಳವಣಿಗೆ ಪ್ರಧಾನಿ ಮೋದಿ ಸರ್ಕಾರ ಬದ್ಧವಾಗಿದ್ದು, ರೈತರನ್ನು ರೈತರಾಗಿ ಉಳಿಸದೆ ಉದ್ಯಮಿಗಳಾಗಿ ಮಾಡಿ ಅವರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಆತ್ಮನಿರ್ಭರ ಯೋಜನೆ ಜಾರಿ ಮಾಡಿದೆ. ಸ್ವಾತಂತ್ರ ಬಂದು 76 ವರ್ಷವಾಗಿದ್ದು, ಈ ದೇಶವನ್ನು ಸಂಪದ್ಭರಿತ ರಾಷ್ಟ್ರವನ್ನಾಗಿಸುವಲ್ಲಿ ರೈತರ ಪಾತ್ರ ಸಾಕಷ್ಟಿದೆ. ರೈತರು ತಾವು ಬೆಳೆದ ಪದಾರ್ಥ ಬಳಕೆ ಮಾಡಿಕೊಂಡು ತಾವೇ ಉದ್ಯಮ ಮಾಡುವಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ರೈತರು ಉದ್ಯಮಿ ಮತ್ತು ವ್ಯಾಪಾರಿಗಳಾಗಿ ಜೀವನ ಮಟ್ಟಸುಧಾರಣೆ ಮಾಡಿಕೊಳ್ಳಬೇಕೆಂದು ನಮ್ಮ ಆಶಯ ಎಂದು ತಿಳಿಸಿದರು.

ರೈತ ಮೋರ್ಚಾದ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ಕೊರೋನಾ ವೇಳೆ ಜಗತ್ತಿನ ಎಲ್ಲ ಉದ್ಯಮಗಳು ಬಂದಾಗಿದ್ದವು. ಆದರೆ, ರೈತರು ಮಾತ್ರ ತಮ್ಮ ಕಾಯಕ ಮುಂದುವರಿಸಿದರು. 2014ರ ನಂತರ ದೇಶದ ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಕಾಂಗ್ರೆಸ್‌ ಸರ್ಕಾರದ ಸಮಯದಲ್ಲಿ ರೈತರ ಆತ್ಮಹತ್ಯೆ ಅಧಿಕವಾಗಿತ್ತು. ಡಾ. ಸ್ವಾಮಿನಾಥನ್‌ ವರದಿ ಆಧಾರದ ಮೇಲೆ ಪ್ರಧಾನಿ ನರೇಂದ್ರಮೋದಿ ರೈತರ ಆದಾಯ ದ್ವಿಗುಣಗೊಳಿಸಲು ಅನೇಕ ಯೋಜನೆ ಜಾರಿಗೆ ತಂದಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅಧಿಕ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಪ್ರವಾಸಿ ರೀತಿಯ ಹೊರಗಿನ ಅಭ್ಯರ್ಥಿಗಳಿಗೆ ಕೊಡಗಿನ ಜನ ಬೆಂಬಲಿಸಲ್ಲ: ಮಂತರ್ ವಿರುದ್ಧ ಶಾಸಕ ಅಪ್ಪಚ್ಚು ರಂಜನ್ ವ್ಯಂಗ್ಯ

ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್‌, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಚುನಾವಣಾ ಉಸ್ತುವಾರಿ ಕೋಟೆ ಎಂ ಶಿವಣ್ಣ, ರೈತ ಮೊರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ, ವಿಧಾನಪರಿಷತ್‌ ಮಾಜಿ ಸದಸ್ಯ ಪ್ರೋ. ಕೆ.ಆರ್‌. ಮಲ್ಲಿಕಾರ್ಜುನಪ್ಪ, ಜಿಪಂ ಮಾಜಿ ಅಧ್ಯಕ್ಷರಾದ ಎಂ.ರಾಮಚಂದ್ರ, ನಾಗಶ್ರೀ ಪ್ರತಾಪ್‌, ಕಾಡಾ ಮಾಜಿ ಅಧ್ಯಕ್ಷ ಜಿ. ನಿಜಗುಣರಾಜು, ನಗರಸಭಾ ಅಧ್ಯಕ್ಷೆ ಆಶಾ ನಟರಾಜು, ಡಾ.ಎ.ಆರ್‌. ಬಾಬು, ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್‌, ಮಾಜಿ ಅಧ್ಯಕ್ಷ ಆರ್‌. ಸುಂದರ್‌, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್‌, ಚಾಮುಲ್‌ ಅಧ್ಯಕ್ಷ ನಾಗೇಂದ್ರ, ಎಪಿಎಂಸಿ ಅಧ್ಯಕ್ಷ ಮನೋಜ್‌ ಪಟೇಲ್‌, ನೂರೊಂದು ಶೆಟ್ಟಿ, ಹನುಮಂತಶೆಟ್ಟಿ, ಎ.ಎಸ್‌. ನಟರಾಜಪ್ಪ, ಸಿ.ಎನ್‌. ಬಾಲರಾಜು. ಬಸವಣ್ಣ ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!