ಜಿದ್ದಾಜಿದ್ದಿನ ಕಣವಾಗಿ ರೂಪುಗೊಂಡಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರಿಗೆ ರಾಜಕೀಯವಾಗಿ ಅಳಿವು ಉಳಿವಿನ ಪ್ರಶ್ನೆಯಾಗಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಏ.12): ಜಿದ್ದಾಜಿದ್ದಿನ ಕಣವಾಗಿ ರೂಪುಗೊಂಡಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರಿಗೆ ರಾಜಕೀಯವಾಗಿ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಜೆಡಿಎಸ್ - ಕಾಂಗ್ರೆಸ್ ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ರಾಮನಗರ ಕ್ಷೇತ್ರದಲ್ಲಿ ಕಮಲ ಅರಳಿಸುವ ತವಕದಲ್ಲಿರುವ ಬಿಜೆಪಿಯೂ ನಿರ್ಣಾಯಕ ಪಾತ್ರ ವಹಿಸಲಿದೆ.
ಈ ಚುನಾವಣೆಯಲ್ಲಿ ಗೆದ್ದವರ ರಾಜಕೀಯ ಭವಿಷ್ಯ ಉಜ್ವಲಗೊಂಡರೆ, ಸೋತವರು ಮೂಲೆ ಗುಂಪಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಕಾರಣದಿಂದಾಗಿಯೇ ಒಂದೆಡೆ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಮೇಲೆ ಮತ್ತೊಮ್ಮೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಇಕ್ಬಾಲ್ ಹುಸೇನ್ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದಾರೆ. ಉಭಯ ನಾಯಕರು ಕ್ಷೇತ್ರಾದ್ಯಂತ ಅಬ್ಬರದ ಪ್ರಚಾರ ನಡೆಸಿ ಧೂಳೆಬ್ಬಿಸುತ್ತಿದ್ದಾರೆ.
ಸಂಪರ್ಕ ಕೊರತೆಯಿಂದಾಗಿ ರಘುಪತಿ ಭಟ್ಟರಿಗೆ ವಿಷಯ ತಿಳಿಸಲು ಸಾಧ್ಯವಾಗಿಲ್ಲ: ಕೋಟ ಶ್ರೀನಿವಾಸ ಪೂಜಾರಿ
ತಾತಾ-ತಂದೆಯಂತೆ ನಿಖಿಲ್‌ಗೂ ಅಗ್ನಿ ಪರೀಕ್ಷೆ: ಒಂದು ಕಾಲದಲ್ಲಿ ಸೋತು ಸುಣ್ಣವಾಗಿದ್ದ ಗೌಡರ ಕುಟುಂಬಕ್ಕೆ ರಾಜಕೀಯ ಮರು ಹುಟ್ಟು ಸಿಕ್ಕಿದ್ದು ರಾಮನಗರ ನೆಲದಲ್ಲಿಯೇ. ಹೀಗಾಗಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಂತೆ ನಿಖಿಲ್ ಕುಮಾರಸ್ವಾಮಿಗೂ ಈ ಬಾರಿಯ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ. 1994ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜನತಾ ದಳ ಪರ ಅಲೆ ಇತ್ತು. ಆಗ ಪಕ್ಷದ ಚುಕ್ಕಾಣಿ ಹಿಡಿದಿದ್ದ ದೇವೇಗೌಡ ಅವರೇ ಮುಂದಿನ ಸಿಎಂ ಎನ್ನುವ ಕೂಗು ಎದ್ದಿತ್ತು. ರಾಮನಗರ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಹುದ್ದೆಗೇರಿದರು. ಅಲ್ಲದೆ, ರಾಮನಗರ ಪ್ರತಿನಿಧಿಯಾಗಿದ್ದಾಗಲೇ ಪ್ರಧಾನ ಮಂತ್ರಿ ಹುದ್ದೆಯೂ ಒಲಿಯಿತು.
1999ರ ಚುನಾವಣೆಯಲ್ಲಿ ದೇವೇಗೌಡ, ಪುತ್ರರಾದ ರೇವಣ್ಣ, ಕುಮಾರಸ್ವಾಮಿ ಸೋತಿದ್ದರು. ಪಕ್ಷದೊಟ್ಟಿಗೆ ದೇವೇಗೌಡ ಕುಟುಂಬ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಎಂ.ವಿ. ಚಂದ್ರಶೇಖರಮೂರ್ತಿ ನಿಧನದಿಂದ ತೆರವಾಗಿದ್ದ ಕನಕಪುರ ಲೋಕಸಭೆ ಕ್ಷೇತ್ರಕ್ಕೆ 2002ರಲ್ಲಿ ನಡೆದ ಮರು ಚುನಾವಣೆ ಎದುರಾಯಿತು. ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ವಿರುದ್ಧ ದೇವೇಗೌಡ ಜಯ ಸಾಧಿಸಿದರು. ಈ ಗೆಲುವು ದೇವೇಗೌಡರಿಗೆ ಮರು ಹುಟ್ಟು ನೀಡಿದರೆ, ಜೆಡಿಎಸ್ ನ ಪುನಶ್ಚೇತನಕ್ಕೂ ನಾಂದಿಯಾಯಿತು. ದೇವೇಗೌಡರು ಸಿಎಂ ಆಗಿದ್ದಾಗ 1996ರಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಕನಕಪುರ ಕ್ಷೇತ್ರದಲ್ಲಿ ಅವಿಭಜಿತ ಜನತಾದಳ ಅಭ್ಯರ್ಥಿಯಾದರು.
ಚೊಚ್ಚಲ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದರು. 1998ರ ಕನಕಪುರ ಲೋಕಸಭಾ ಕ್ಷೇತ್ರ ಚುನಾವಣೆ ಹಾಗೂ 1999ರ ವಿಧಾನಸಭಾ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಲ್ಲಿನ ಸೋಲು ಕುಮಾರಸ್ವಾಮಿರವರ ರಾಜಕೀಯ ಹಿನ್ನಡೆಗೆ ಕಾರಣವಾಯಿತು. ಆನಂತರ 2004ರಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿ ರಾಜಕೀಯವಾಗಿ ಮರು ಜನ್ಮ ಪಡೆದರು. ಈಗ 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸೋತಿರುವ ನಿಖಿಲ್ ಕುಮಾರಸ್ವಾಮಿ ರಾಜಕೀಯ ಆಶ್ರಯ ಪಡೆಯಲು ರಾಮನಗರ ಕ್ಷೇತ್ರಕ್ಕೆ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಜೆಡಿಎಸ್ , ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಪೈಪೋಟಿ ನಡೆಯಲಿದ್ದು, ಅದೃಷ್ಟದ ನೆಲ ಯಾರ ಕೈ ಹಿಡಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಬದಲಾವಣೆಯ ಗಾಳಿ ಬೀಸುವುದೇ?: ಕಳೆದ 29 ವರ್ಷಗಳಿಂದ ರಾಮನಗರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಸೇರಿದವರೇ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಆದರೆ, ಈ ಬಾರಿಯ ವಾತಾವರಣ ಹಿಂದಿನ ಚುನಾವಣೆಗಳಂತೆ ದಳಪತಿಗಳಿಗೆ ಪೂರಕವಾಗಿಲ್ಲ. ಎಚ್.ಡಿ.ದೇವೇಗೌಡ, ಪುತ್ರ ಎಚ್.ಡಿ.ಕುಮಾರಸ್ವಾಮಿ, ಸೊಸೆ ಅನಿತಾಕುಮಾರಸ್ವಾಮಿ ತರುವಾಯ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರಿಗೂ ದುಡಿಯಬೇಕೇ ಎಂಬ ಪ್ರಶ್ನೆ ಪಕ್ಷದ ಹಿರಿಯ ಮುಖಂಡರನ್ನೇ ಕಾಡುತ್ತಿದೆ. ಅಲ್ಲದೆ, ಒಂದು ಕುಟುಂಬದವರಿಗೆ ಕ್ಷೇತ್ರವನ್ನು ಮುಡಿಪಾಗಿಡುವುದು, ಗೆದ್ದ ಮೇಲೆ ಕೈಗೆ ಸಿಗದಿರುವುದು, ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂಬ ಬೇಸರವೂ ಜನರ ಮನದಲ್ಲಿದೆ. ಹೀಗಾಗಿ ಕ್ಷೇತ್ರದಲ್ಲಿ ಬದಲಾವಣೆ ಗಾಳಿಯೂ ಬೀಸುತ್ತಿದೆ.
ಬಿಜೆಪಿ ಟಿಕೆಟ್ ಮಿಸ್ ಆಗಲು ಬಿಎಸ್‌ವೈ, ವಿಜಯೇಂದ್ರ ಕಾರಣ: ಗೂಳಿಹಟ್ಟಿ ಶೇಖರ್
ಕ್ಷೇತ್ರದಲ್ಲಿ 29 ವರ್ಷಗಳಿಂದ ತಮ್ಮ ಪಕ್ಷದ ಶಾಸಕರು ಇಲ್ಲದಿರುವ ನೋವು ಕಾಂಗ್ರೆಸ್ಸಿಗರಿಗೆ ಕಾಡುತ್ತಿದೆ. ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ಹಾಗೂ ಜೆಡಿಎಸ್ ನ ಕುಟುಂಬ ರಾಜಕಾರಣದ ಬಗ್ಗೆ ಕಾಂಗ್ರೆಸ್ ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಜತೆಗೆ ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಎದುರು ಪರಾಭವಗೊಂಡರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರುವ ಇಕ್ಬಾಲ್ ಹುಸೇನ್ ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.