ಸತತ 2ನೇ ವರ್ಷ ಫೈನಲ್‌ಗೇರುವ ತವ​ಕ​ದಲ್ಲಿ ಬೆಂಗ​ಳೂರು ಬುಲ್ಸ್!

By Web DeskFirst Published Oct 16, 2019, 8:23 AM IST
Highlights

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿಂದು ಸೆಮಿಫೈನಲ್ ಹೋರಾಟ. ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ದಿಲ್ಲಿ ತಂಡಗಳು ಹೋರಾಟ ನಡೆಸುತ್ತಿದೆ. ಹಾಲಿ ಚಾಂಪಿಯನ್ ಬುಲ್ಸ್, ಸತತ 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಅಹ​ಮ​ದಾ​ಬಾದ್‌(ಅ.16): ಪ್ರೊ ಕಬಡ್ಡಿ 7ನೇ ಆವೃ​ತ್ತಿಯ ಸೆಮಿ​ಫೈ​ನಲ್‌ ಸೆಣ​ಸಾಟ ಬುಧ​ವಾರ ಇಲ್ಲಿನ ಟ್ರ್ಯಾನ್ಸ್‌ ಸ್ಟೇಡಿಯಾ ಅರೇ​ನಾ​ದಲ್ಲಿ ನಡೆ​ಯ​ಲಿದೆ. ಮೊದಲ ಸೆಮಿ​ಫೈ​ನಲ್‌ನಲ್ಲಿ ಹಾಲಿ ಚಾಂಪಿ​ಯನ್‌ ಬೆಂಗ​ಳೂರು ಬುಲ್ಸ್‌ ಹಾಗೂ ದಬಾಂಗ್‌ ಡೆಲ್ಲಿ ತಂಡ​ಗಳು ಮುಖಾ​ಮುಖಿ​ಯಾ​ಗ​ಲಿವೆ.

ರೈಡ್‌ ಮಷಿನ್‌ ಪವನ್‌ ಶೆರಾ​ವತ್‌ ಅಬ್ಬರದ ರೈಡಿಂಗ್‌ ನೆರ​ವಿ​ನಿಂದ ಕಳೆದ ಬಾರಿ ಚಾಂಪಿ​ಯನ್‌ ಆಗಿದ್ದ ಬುಲ್ಸ್‌ ಈ ಬಾರಿಯೂ ಅವರನ್ನೇ ನೆಚ್ಚಿ​ಕೊಂಡಿ​ದೆ. ಪವನ್‌ ಮಿಂಚಿದರಷ್ಟೇ ಬುಲ್ಸ್‌ಗೆ ಜಯ. ಮೊದಲ ಎಲಿ​ಮಿ​ನೇ​ಟರ್‌ ಪಂದ್ಯ​ದಲ್ಲೂ 20 ಅಂಕ ಗಳಿಸಿ ಬುಲ್ಸ್‌ ಸೆಮೀಸ್‌ಗೇರಿ​ಸಿದ್ದ ಪವನ್‌, ಇನ್ನೆ​ರಡು ಪಂದ್ಯ​ಗಳಲ್ಲಿ ಉತ್ತಮ ಪ್ರದ​ರ್ಶನ ತೋರಿ ತಂಡ​ವನ್ನು ಚಾಂಪಿ​ಯನ್‌ ಪಟ್ಟ​ಕ್ಕೇ​ರಿ​ಸಲಿ ಎಂದು ಅಭಿ​ಮಾ​ನಿ​ಗಳು ಪ್ರಾರ್ಥಿ​ಸು​ತ್ತಿ​ದ್ದಾರೆ.

ಇದನ್ನೂ ಓದಿ: ಯುಪಿಗೆ ಗುಮ್ಮಿ ಸೆಮೀಸ್ ಗೆ ಲಗ್ಗೆ ಇಟ್ಟ ಬೆಂಗ್ಳೂರು 'ಗೂಳಿಗಳು'

ಒನ್‌ ಮ್ಯಾನ್‌ ಆರ್ಮಿ: ಪವನ್‌ ಬೆಂಗ​ಳೂರು ತಂಡದ ಒನ್‌ ಮ್ಯಾನ್‌ ಆರ್ಮಿಯಂತಾ​ಗಿ​ದ್ದಾರೆ. ತಂಡ ಈ ಆವೃ​ತ್ತಿ​ಯಲ್ಲಿ ಒಟ್ಟು 497 ರೈಡ್‌ ಅಂಕ ಗಳಿ​ಸಿದ್ದು, ಇದ​ರಲ್ಲಿ 321 ಅಂಕ​ಗ​ಳನ್ನು ಪವನ್‌ ಒಬ್ಬರೇ ಪಡೆ​ದಿ​ದ್ದಾರೆ. ಪಂದ್ಯ​ದಲ್ಲಿ ತಂಡದ ಪರ ಬಹು​ತೇಕ ರೈಡ್‌ಗಳನ್ನು ನಡೆ​ಸುವ ಪವನ್‌, ಸಾಧ್ಯ​ವಾ​ದಷ್ಟುಹೆಚ್ಚಿನ ಸಮಯ ಅಂಕಣದಲ್ಲಿ ಕಳೆದರೆ ಬುಲ್ಸ್‌ಗೆ ಹೆಚ್ಚು ಲಾಭ.

ಪವನ್‌ ನಂತರ ಹೆಚ್ಚು ರೈಡ್‌ ಅಂಕ ಗಳಿ​ಸಿ​ರುವ ಬುಲ್ಸ್‌ ಆಟ​ಗಾ​ರ ಎಂದರೆ ರೋಹಿತ್‌ ಕುಮಾರ್‌ (89). ಗಾಯದ ಸಮಸ್ಯೆಯಿಂದಾಗಿ ರೋಹಿತ್‌ ಈ ಆವೃ​ತ್ತಿ​ಯಲ್ಲಿ ಸಾಧಾ​ರಣ ಪ್ರದ​ರ್ಶನ ತೋರಿದ್ದಾರೆ. ಎಲಿ​ಮಿ​ನೇ​ಟರ್‌ ಪಂದ್ಯ​ದಲ್ಲಿ ಗಾಯದ ನಡುವೆಯೂ ಅವರು ಕಣ​ಕ್ಕಿ​ಳಿದು ಆಡಿ​ದ್ದರು. ಸೆಮೀಸ್‌ನಲ್ಲಿ ಪವನ್‌ಗೆ ರೋಹಿತ್‌ರಿಂದ ಉತ್ತಮ ಬೆಂಬ​ಲ ಸಿಕ್ಕರೆ ಬುಲ್ಸ್‌ ಗೆಲುವು ಸುಲ​ಭ​ವಾ​ಗ​ಲಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ 2019 : ಚಾಂಪಿಯನ್ನರಿಗೆ 3 ಕೋಟಿ!

ಡಿಫೆಂಡರ್‌ಗಳ ಮೇಲೆ ಒತ್ತ​ಡ: ಈ ಆವೃ​ತ್ತಿ​ಯಲ್ಲಿ ಅತಿ​ಹೆಚ್ಚು ಅಂಕಗಳನ್ನು ಬಿಟ್ಟು​ಕೊಟ್ಟತಂಡ​ಗಳ ಪಟ್ಟಿ​ಯಲ್ಲಿ ಬುಲ್ಸ್‌ 2ನೇ ಸ್ಥಾನ​ದ​ಲ್ಲಿದೆ. ತಂಡ 802 ಅಂಕ​ಗ​ಳನ್ನು ಬಿಟ್ಟು​ಕೊ​ಟ್ಟಿದ್ದು, ರಕ್ಷಣಾ ಪಡೆ ಎಷ್ಟುಕಳಪೆಯಾಗಿದೆ ಎನ್ನು​ವು​ದನ್ನು ತೋರಿ​ಸು​ತ್ತದೆ. ಬುಲ್ಸ್‌ನ ಡಿಫೆಂಡರ್‌ಗಳು 23 ಪಂದ್ಯ​ಗ​ಳಿಂದ 224 ಟ್ಯಾಕಲ್‌ ಅಂಕ​ಗ​ಳನ್ನು ಕಲೆಹಾಕಿ​ದ್ದರೂ, ಸ್ಥಿರ ಪ್ರದರ್ಶನ ತೋರು​ವಲ್ಲಿ ಸತತ ವೈಫ​ಲ್ಯ ಕಾಣು​ತ್ತಿ​ದ್ದಾರೆ. ಬಲಿಷ್ಠ ದಬಾಂಗ್‌ ಡೆಲ್ಲಿ​ಯನ್ನು ಕಟ್ಟಿ​ಹಾ​ಕ​ಬೇ​ಕಿ​ದ್ದರೆ ರಕ್ಷಣಾ ಪಡೆ ತನ್ನ ಪ್ರದ​ರ್ಶನ ಗುಣ​ಮಟ್ಟವನ್ನು ಹೆಚ್ಚಿ​ಸಿ​ಕೊ​ಳ್ಳ​ಬೇ​ಕಿದೆ.

ಇದನ್ನೂ ಓದಿ: 2024ರ ಒಲಿಂಪಿ​ಕ್ಸ್‌ಗೆ ಕಬಡ್ಡಿ ಸೇರಲಿ: ಕಿರಣ್ ರಿಜಿ​ಜು

ಡೆಲ್ಲಿಗೆ ನವೀನ್‌ ಆಸರೆ: ಯುವ ರೈಡರ್‌ ನವೀನ್‌ ಕುಮಾರ್‌ ಈ ಆವೃ​ತ್ತಿ​ಯಲ್ಲಿ ಸತತ 19 ಪಂದ್ಯ​ಗ​ಳಲ್ಲಿ ಸೂಪರ್‌ 10 ಸಾಧಿ​ಸಿ​ದ್ದಾರೆ. 21 ಪಂದ್ಯ​ಗ​ಳಿಂದ 268 ರೈಡ್‌ ಅಂಕ ಸಂಪಾ​ದಿ​ಸಿ​ರುವ ನವೀನ್‌, ಡೆಲ್ಲಿ ಪಾಲಿನ ಟ್ರಂಪ್‌ ಕಾರ್ಡ್‌ ಎನಿ​ಸಿದ್ದು ತಂಡ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇರಿ​ಸಿದೆ. ಚಂದ್ರನ್‌ ರಂಜಿತ್‌ (110 ರೈಡ್‌ ಅಂಕ)ರಿಂದ ನವೀನ್‌ಗೆ ಉತ್ತಮ ಬೆಂಬಲ ಸಿಗು​ತ್ತಿದ್ದು, ಈ ಇಬ್ಬರು ಬುಲ್ಸ್‌ ಡಿಫೆಂಡರ್‌ಗಳ​ನ್ನು ಕಾಡ​ಲಿ​ದ್ದಾರೆ.

ಈ ಆವೃ​ತ್ತಿಯಲ್ಲಿ ಅತಿ​ಕ​ಡಿಮೆ ಟ್ಯಾಕಲ್‌ ಅಂಕ​ಗ​ಳನ್ನು ಪಡೆದ ತಂಡಗಳ ಪಟ್ಟಿ​ಯಲ್ಲಿ ಡೆಲ್ಲಿ 11ನೇ ಸ್ಥಾನ​ದ​ಲ್ಲಿದೆ. 22 ಪಂದ್ಯ​ಗ​ಳಿಂದ ತಂಡ 204 ಟ್ಯಾಕಲ್‌ ಅಂಕ ಗಳಿ​ಸಿದೆ. ಡೆಲ್ಲಿ ಡಿಫೆಂಡರ್‌ಗಳನ್ನು ಪವನ್‌ ಹೇಗೆ ವಂಚಿಸಿ ಅಂಕ ಹೆಕ್ಕು​ತ್ತಾರೆ ಎನ್ನು​ವುದು ಕುತೂ​ಹ​ಲಕ್ಕೆ ಕಾರ​ಣ​ವಾ​ಗಿ​ದೆ.

ಈ ಆವೃ​ತ್ತಿ​ಯಲ್ಲಿ ಡೆಲ್ಲಿ ವಿರುದ್ಧ 2 ಪಂದ್ಯ​ಗ​ಳನ್ನು ಆಡಿ​ರುವ ಬುಲ್ಸ್‌, 1ರಲ್ಲಿ ಸೋತು ಮತ್ತೊಂದನ್ನು ಟೈ ಮಾಡಿ​ಕೊಂಡಿತ್ತು. ಈ ಪಂದ್ಯ​ದಲ್ಲಿ ಗೆದ್ದು ಫೈನಲ್‌ಗೇರು​ವುದು ಹಾಲಿ ಚಾಂಪಿ​ಯನ್‌ ತಂಡದ ಗುರಿ​ಯಾ​ಗಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ

2ನೇ ಸೆಮೀಸ್‌ನಲ್ಲಿ ಯು ಮುಂಬಾ ಎದು​ರಾಳಿ
ಬುಧ​ವಾರ 2ನೇ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಬೆಂಗಾಲ್‌ ವಾರಿ​ಯ​ರ್‍ಸ್ ಹಾಗೂ ಯು ಮುಂಬಾ ತಂಡ​ಗಳು ಎದು​ರಾ​ಗ​ಲಿವೆ. ಎರಡೂ ತಂಡ​ಗಳು ರೈಡಿಂಗ್‌ ಹಾಗೂ ಡಿಫೆಂಡಿಂಗ್‌ನಲ್ಲಿ ಬಲಿ​ಷ್ಠ​ವಾ​ಗಿದ್ದು, ಭಾರೀ ಪೈಪೋಟಿ ನಿರೀಕ್ಷೆ ಮಾಡ​ಲಾ​ಗಿದೆ. ಬೆಂಗಾಲ್‌ ಮೊದಲ ಬಾರಿಗೆ ಫೈನಲ್‌ ಪ್ರವೇ​ಶಿ​ಸಲು ಕಾತ​ರಿ​ಸು​ತ್ತಿ​ದ್ದರೆ, ಮುಂಬಾ ಮತ್ತೊಮ್ಮೆ ಫೈನಲ್‌ಗೇರಿ ಟ್ರೋಫಿ ಗೆಲ್ಲ​ಲು ಎದುರು ನೋಡು​ತ್ತಿದೆ.

click me!
Last Updated Oct 16, 2019, 8:23 AM IST
click me!