ಯುಎಸ್‌ಎ ಅರಿಜೋನದಾಗ ಉತ್ರ ಕರ್ನಾಟಕದ್ ಸುಗ್ಗಿ ಸಂಕ್ರಮಣ

By Suvarna News  |  First Published Feb 8, 2020, 12:52 PM IST

ಕನ್ನಡಿಗರು ಎಲ್ಲೋ ಹೋದರು ತಮ್ಮ ಸಂಪ್ರದಾಯ, ಸಂಸ್ಕೃತಿ ಮರೆಯುವುದಿಲ್ಲ. ಕರ್ನಾಟಕ ಬಿಟ್ಟು ಬೇರೆಡೆಗೆ ತೆರಳಿದಾಗ ನಮ್ಮ ಭಾಷಿಕರು, ನಮ್ಮ ಊರಿನವರು ಸಿಕ್ಕರೆ ಅದಕ್ಕಿಂತ ಸಂಭ್ರಮ ಇನ್ಯಾವುದು ಇಲ್ಲ.  ಹೀಗೆ ಅಮೇರಿಕಾದಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಮಂದಿ ಸುಗ್ಗಿ ಸಂಕ್ರಮಣವನ್ನು ವಿಶೇಷವಾಗಿ ಆಚರಿಸಿಕೊಳ್ಳೋ ಮೂಲಕ ಒಂದೆಡೆ ಸೇರಿದ್ದಾರೆ. ಉತ್ರ ಕರ್ನಾಟಕ ಮಂದಿಯ ಗಮ್ಮತ್ತು ಇಲ್ಲಿದೆ.


ನಮಸ್ಕಾರ್ರೀ, ನಾವು ಅಮೆರಿಕಾದಾಗಿನ ಅರಿಜೋನಾ ರಾಜ್ಯದೊಳಗ ಫೀನಿಕ್ಸ್‌ ನಗರದಾಗಿರೋ ಕನ್ನಡ ಮಂದಿ ರೀ. ಹಂಗಂತ ಹೇಳಿದ್ರೂ ಸತಿಕ್‌ ಫೀನಿಕ್ಸೂ ಸೇರಿದಂಗ ಸುತ್ತಮುತ್ತಲ ಪಿಯೂರಿಯಾ, ನಾರ್ತ್ ಫೀನಿಕ್ಸು, ಗ್ಲೆಂಡೇಲು, ಈ ಕಡಿ ಸ್ಕಾಡ್ಸಡೇಲು ಆಕಡಿ ಚಾಂಡಲರ್ರು, ಗಿಲಬರ್ಟು, ಮೇಸ ಅತ್ತಕಡಿ ಟೆಂಪಿ, ಅವಾಟುಕಿ ಹಿಂಗ ಫೀನಿಕ್ಸಿನ ಸುತ್ತಲೂ ಎಲ್ಲ ಕಡಿ ನಮ್ಮ ಕನ್ನಡ ಮಂದಿ ಇದ್ದಾರ್ರೀ. 

Latest Videos

undefined

ಇದನ್ನೂ ಓದಿ: ಅಮೆರಿಕದ IA ಅಧ್ಯಕ್ಷರಾಗಿ ಸತೀಶ್: ಕರುನಾಡಿಗರಿಂದ ಗುಡ್ ವಿಶ್!

ಭಾಳ ದಿನದಿಂದ ನಮ್ಮ ಗೆಳೆಯಾರು ಸೇರಿ ಸುಗ್ಗಿ ಸಂಕ್ರಮಣ ಮಾಡಿದ್ರ ಹ್ಯಾಂಗ ಅಂತ ವಿಚಾರ ಮಾಡಕ್ಕತ್ತಿದ್ರು. ನಡಿ ಹಂಗಾರ ಈ ಸಾರಿ ಮಾಡೇ ಬಿಡೋಣು ಅಂತ ಏಕ್‌ಧಂ ಹುರ್ರ್ ಅನ್ನಂಗ ಒಂದು ಶೀಟ್‌ ಮೆಸೇಜ್‌ ಟೈಪ್ ಮಾಡಿ ಓಸೂ ವಾಟಸ್ಯಾಪ್ ಗ್ರೂಪನ್ಯಾಗ ಹಾಕೇ ಬಿಟ್ರು. “ನೋಡ್ರಿಪಾ, ನಾವು ಉತ್ರ ಕರ್ನಾಟಕ ಮಂದಿ ಸುಗ್ಗಿ ಸಂಕ್ರಮಣ ಅಂತ ಒಂದ್ ಸಹಭೋಜನ (ಪಾಟ್‌ಲಕ್) ಕಾರ್ಯಕ್ರಮ ಮಾಡಕತ್ತೀವಿ. 

ಇದನ್ನೂ ಓದಿ:ಮಗನ ನೋಡಿಕೊಂಡಿದ್ದ ಮನೆ ಕೆಲಸದವರಿಗೆ 1 ಕೋಟಿ ರು. ನೀಡಲು ಹುಡುಕುತ್ತಿರುವ ತಂದೆ

ನಿಮಗ್ಯಾರಗಾರ ನಮ್ಮ ಈ ಸಂಭ್ರಮದಾಗ ಸೇರ್ಕೋಬೇಂತ ಇಷ್ಟ ಇದ್ರ ನಾವ್ ಉತ್ರ ಕರ್ನಾಟಕದಾಗಿನ ತಿಂಡಿ ತಿನಿಸುಗಳದ್ದ ಒಂದು ಪಟ್ಟಿ ಕಳಸ್ತೇವಿ. ನೀವ್ ಅದ್ರಾಗ ಯಾವುದಾರ ಒಂದು ತಿನ್ನೋ ಐಟಮ್‌ ಮನ್ಯಾಗ ಮಾಡ್ಕೋ ಬರ್ಬೇಕಾಗ್ತದ. ಅಂದಾಂಗ ಇದಕ್ಕ ರೊಕ್ಕಪಕ್ಕ ಏನ ಇಸಕೋಣಕತ್ತಿಲ್ಲ. ನೀವು ಅಡಿಗಿ ಮಾಡ್ಕೊಂಡು ಬರ್ತೀರಲ್ಲ ಅಷ್ಟ ಸಾಕು” ಅಂತ ಇಷ್ಟ್‌ ಮೆಸೇಜ್‌ ಮಾಡಿದ್ರು ನೋಡ್ರಿ. ಮಂದಿ ಹಂಗ ನಾ ಮುಂದು ತಾ ಮುಂದು ಅಂತ ಠಣಠಣ ಹೆಸರು ಹಾಕಾಕತ್ರು ನೋಡ್ರಿ. 

ಹೇ! ತಡ್ರಿಪಾ.. ಅವ್ರೇನ್‌ ಈ ಅಮೆರಿಕದಾಗೂ ಉತ್ರ ದಕ್ಷಿಣ ಅತ್ತ ಬ್ಯಾರೇ ಬ್ಯಾರೇ ಮಾಡಾಕತ್ತಿಲ್ಲ. ವಿಚಾರ ಇರೋದು ಇಷ್ಟೇ. ಉತ್ರ ಕರ್ನಾಟಕದ ಊಟ ಜೊತೆಗೊಂದೀಟ್‌ ಆಟ, ನಾಲ್ಕು ಪದ, ಸಂಜಿ ಮುಂದ್‌ ಒಂದ್‌ ಕಪ್‌ ಚಾ ಜೊತೇಗ್‌ ಮಿರ್ಚಿ ಬಜ್ಜಿ, ಹಸಿ ಉಳ್ಳಾಗಡ್ಡಿ ಹಾಕಿ ಮಾಡಿರೋ ಖಾರಮಂಡಕ್ಕಿ. ಇಷ್ಟ್‌ ಅದ. ನಮ್‌ ಕನ್ನಡ್‌ ಮಂದಿ ಒಷ್ಟ್ರೂ ಬರ್ರೀ. ನಿಮಗೇನಾರ ನಮ್‌ ಅಡಿಗಿ ಐಟಮ್‌ ತಿಳಿವಲ್ದೋ ಅಥ್ವಾ ನಿಮ್‌ ಜೀವನ್ದಾಗ್‌ ಈ ತಿನ್ನೋ ಐಟಮ್‌ ಹೆಸರಾ ಕೇಳಿಲ್ಲೋ ಕಂಗಾಲಾಗಬೇಡ್ರಿ. ನಾವ ನಿಮಗ ಬ್ಯಾರೇ ಏನಾರ ಐಟಮ್‌ ತರಾಕ್‌ ಹೇಳ್ತೀವಿ. ಅದನ್ನ ಹಿಡಕೊಂಡ್‌ ಬರ್ರೀ ಅಂತ ಇಷ್ಟ ವಿಚಾರ ತಿಳಿಸಿದ್ರು. 

ಇದನ್ನೂ ಓದಿ: ಕತಾರ್ ಉತ್ತರ ಕರ್ನಾಟಕ ಬಳಗಕ್ಕೆ ವರ್ಷದ ಸಂಭ್ರಮ: ಅದ್ಧೂರಿ ಕಾರ್ಯಕ್ರಮ

 ಸರಿ ಶನಿವಾರ ಮುಂಜಾನೆ ಎಲ್ರೂ ಸ್ಕಾಟ್ಸ್‌ಡೇಲನ್ಯಾಗಿರೋ ಶಾಪರೆಲ್‌ ಪಾರ್ಕಿನ್ಯಾಗ ಸೇರಕತ್ವಿ. ಒಬ್ಬೊಬ್ಬರ ಮಂದಿ ಬರಾಕತ್ತಿದ್ರು. ತಾವ್‌ ಮಾಡ್ಕೊಂಡ್‌ ಬಂದಿರೋ ಅಡಿಗಿ ತಂದ್‌ ಟೇಬಲ್‌ ಮ್ಯಾಲ್‌ ಜೋಡಸಾಕತ್ರು. ರೊಟ್ಟಿ, ಎಣಗಾಯ್‌ ಪಲ್ಲೆ, ಜುಣಕ, ಕಾಳಪಲ್ಲೆ, ಪುಂಡಿಪಲ್ಲೆ, ಖಾರಬ್ಯಾಳಿ, ಕಡ್ಲಿಚಟ್ನಿ, ಸೇಂಗಚೆಟ್ನಿ, ಗುರೆಳ್ಪುಡಿ, ಸೇಂಗಾದ್ಹೋಳ್ಗಿ, ಕುಂದ, ಪೇಡೆ, ಗೋಧಿ ಕುಟ್ಟಿದ್‌ ಪಾಯ್ಸ, ಚಪಾತಿ, ಹಚ್ಕೊಣಾಕ್‌ ಮಸೂರು ಭಾರಿ ಜಬರ್ದಸ್ತ್‌ ಊಟ ರೆಡಿ ಆಗಕತ್ತು. ಮತ್ತೀಕಡಿ ಒಂದ್ಮೂರ್ನಾಲ್ಕು ಥರದ್‌ ಕೋಸಂಬ್ರಿ, ಬಾಳಕ, ಉಪ್ಪಿನಕಾಯಿ ಏನಂತಿರಿ! ಬಂದಿರೋ ಮಂದಿ ಎಲ್ಲ ಭಾಳ ಖುಷಿ ಆಗಿದ್ರು ನೋಡ್ರಿ. 

ಇದನ್ನೂ ಓದಿ: ಭಾಷಾ ಪ್ರೀತಿಗೆ ಎಲ್ಲೆ ಎಲ್ಲಿ.. ಅಮೆರಿಕಾದ ಕನ್ನಡ 'ಕಲಿ'ಗಳು

ಊಟ ಚಾಲೂ ಮಾಡಿದ್ದೇ ತಡ ರೊಟ್ಟಿ ಬಾಯಾಗ್‌ ತುರುಕ್ಕೋತನೇ ನಮ್‌ ಮಂದಿ “ತುಂಬ ಥ್ಯಾಂಕ್ಸ್‌ ರೀ, ನಮ್‌ ಕಡಿದ್‌ ಅಡಿಗಿ ಊಟ ಮಾಡ್ದ ನಾಲ್ಗಿ ಅನ್ನೋದ್‌ ತುಕ್‌ ಹಿಡದಂಗಾಗಿತ್ತು. ಸುಗ್ಗಿ ಸಂಕ್ರಮಣ ಮಾಡಿ ಛಲೋ ಕೆಲ್ಸ ಮಾಡಿದ್ರಿ” ಅಂತ ಶಭಾಷ್ಗಿರಿ ಕೊಡಕತ್ತಿದ್ರು. ಮತ್ತ ನಮ್‌ ಕಡಿ ಅಡಿಗಿ ಅಪರೂಪ ಆದವ್ರು ಇದೇನ, ಇದ ಹ್ಯಾಂಗ್‌ ಮಾಡಿದ್ರಿ, ಇದರಾಗ್‌ ಏನಾಕಿರೀ, ಭಾಳ ಛಲೋ ಟೇಸ್ಟ್‌ ಅದ” ಅಂತ ಹೇಳ್ಕೋತಾ, ಕೇಳಿ ಇನ್ನೊಮ್ಮೆ ಹಾಕಿಶ್ಕೊಂಡು ತಿಂದು ಖುಷಿ ಪಟ್ರು ನೋಡ್ರಿ. ಅಂತೂ ಹೊಟ್ಟೆ ತುಂಬ ಊಟ ಆತು. ಇನ್ನ ಒಂದಿಷ್ಟು ಆಟ ಆಡಿದ್ವಿ. ಮೂಕಾಭಿನಯ ಆಟ ಆಡಿ ಮಸ್ತ್‌ ಮಜ ಬಂತು ನೋಡ್ರಿ. 

ಇದನ್ನೂ ಓದಿ: ನೈಜೀರಿಯಾ NRIಗಳಿಂದ ನೆರೆ ಸಂತ್ರಸ್ತರಿಗೆ ದೇಣಿಗೆ

ಇದಾದ ಮ್ಯಾಲೆ ಕನ್ನಡ ಹಾಡಿನ್‌ ಅಂತ್ಯಾಕ್ಷರಿನೂ ಆತು. ಸರಿ, ಗಂಟಿ ನಾಕಾತು ಅನ್ಕೋತ ಆಗಲೇ ಒಂದಿಷ್ಟು ಹೆಣ್ಮಕ್ಳು ಅತ್ತಕಡಿ ಉಳ್ಳಾಗಡ್ಡಿ ಮೆಣಸಿನಕಾಯಿ ಕೊತ್ತಂಬರಿ ಹೆಚ್ಚಾಕತ್‌ ಖಾರಮಂಡಕ್ಕಿ ರೆಡಿ ಮಾಡಿದ್ರು. ಇತ್ತಾಗ ಒಂದಿಷ್ಟು ಮಂದಿ ಗಂಡ್ಮಕ್ಳು ಭಾಂಡೆದಾಗ ಎಣ್ಣಿ ಕಾಯಾಕಿಟ್ಟು ಹಿಟ್‌ ಕಲಿಸಿ ಮೆಣಸಿನಕಾಯಿ ಭಜ್ಜಿ ಬಿಟ್ಕೋತ ಮತ್ತೊಂದ್ಕಡಿ ಚಾ ಮಾಡಿದ್ರು. “ಇದಕ್ಕ ನೋಡ್ರಿ ನಮ್ನಮ್‌ ಕನ್ನಡ ಮಂದಿ ಆಗಾಗ ಹಿಂಗ್ ಒಂದ್ ಕಡಿ ಸೇರ್ಕೋತಿರಬೇಕು. ಇರ್ಲಿಕ್ಕಂದ್ರೆ ಈ ನಮೂನಿ ಊಟ, ಹಿಂಗ್‌ ಹೊಸ ಮಂದಿ ಪರಿಚಯ ಎಲ್ಲಾ ಹೆಂಗ್‌ ಸಾಧ್ಯ ಆಗ್ತದ್ಹೇಳ್ರೀ” ಅಂತ ಇಂಡಿಯಾಲಿಂದ ಮಕ್ಕಳನ್ನ್‌ ನೋಡಾಕ್‌ ಬಂದಿದ್ದ ಅಪ್ಪಾವ್ವಂದ್ರು ಒಂದು ಕಡಿ ಕುಂತ್‌ ಚಾ ಕುಡ್ಕೋತ್‌ ಮಾತಾಡಕ್ಹತ್ತಿದ್ರು. ಮರ್ತೇ ಬಿಟ್ಟೆ ನೋಡ್ರಿ. ಈ ಸುಗ್ಗಿ ಸಂಕ್ರಮಣಕ್ಕ ಬರೋರೆಲ್ಲ ಮುದ್ದಾಂ ನಮ್ಮೂರ್ನ್ಯಾಗ ಹಬ್ಬಕ್ಕ ಹಾಕೋ ಬಟ್ಟಿನ ಹಾಕ್ಕೊಂಡ್‌ ಬರ್ರೀ ಅಂತ ಹೇಳಿದ್ರು ನೋಡ್ರಿ. ಗಂಡ್ಮಕ್ಳು ಜುಬ್ಬ ಪಯ್ಜಾಮದಾಗ ಬಂದ್ರೆ ಹೆಣ್ಮಕ್ಳು ಇಳಕಲ್ಸೀರೆ ಉಟಕೊಂಡು ಮ್ಯಾಲ ಕವಡಿ ಸರಾನೂ ಹಾಕ್ಕೋಂಡಿದ್ರೀ. ಒಟ್ನ್ಯಾಗ ಮಂದೆಲ್ಲ ಮಸ್ತ್‌ ಸಂತೋಷ ಪಟ್ರು. 

ಈ ಸುಗ್ಗಿ ಸಂಕ್ರಮಣದ್‌ ಐಡಿಯಾ ಮಾಡಿದ್ದು ನಮ್‌ ಗೆಳೆಯ ಪ್ರಭಾತ ಜೋಶಿ ರೀ. ಅವರ ಕೂಡ ಶಿಲ್ಪಾ ದೇಸಾಯಿ, ಪ್ರತೀಕ್ಷ ಕುಲಕರ್ಣಿ, ಮಧುಸೂದನ, ಸೀಮಾ, ಭೀಮಸೇನ, ಭಾಗ್ಯಶ್ರೀ, ರಶ್ಮಿ ಕುಲಕರ್ಣಿ, ಜಯಂತ ಮತ್ತು ಶ್ವೇತ ಇವರೆಲ್ಲ ಸೇರ್ಕೊಂಡಿದ್ರು ನೋಡ್ರಿ. ಹ್ಹ. ಅಂದ್ಹಾಂಗ ಬಂದಿದ್‌ ಮಂದೆಲ್ಲ ಮನಿಗ್ಹೋಗೋ ಮುಂದ, ಹೇ ತಡ್ರಿಪ ಒಂದ್‌ ಗ್ರೂಪ್‌ ಫೋಟೋ ಇರ್ಲಿಕ್ಕಂದ್ರೆ ಕಾರ್ಯಕ್ರಮ ಬರೋಬರ ಆಗ್ಯಾದ ಅಂತ ಬ್ಯಾರೆ ಮಂದಿಗ್‌ ತಿಳಿಸೋದಾದ್ರೂ ಹೆಂಗ ಅಂತಿಕ್ಕೊಂಡ್‌ ಒಂದ ಪಟನೂ ಹಿಡಿಸಿದ್ರ ನೋಡ್ರಿ. ಅಂತೂ ಸುಗ್ಗಿ ಸಂಕ್ರಮಣ ಸಂಪನ್ನ ಆತು. ನೀವೂ ಹಿಂಗ ಮಾಡಿ ನೋಡ್ರಿ ಮಸ್ತ್‌ ಮಜ ಬರ್ತದ. 

ಬರಹ: ಅನಿಲ್‌ ಭಾರದ್ವಾಜ್, ಫೀನಿಕ್ಸ್‌, ಯುಎಸ್‌ಎ

click me!